Israel hamas war: ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಇಸ್ರೇಲ್ ಗಾಝಾ ಮೇಲೆ ದಾಳಿ ನಡೆಸಿದೆ. ಪ್ರಧಾನಿ ನೇತನ್ಯಾಹು ಆದೇಶದ ನಂತರ ಇಸ್ರೇಲಿ ಪಡೆಗಳು ಈ ಕ್ರಮ ಕೈಗೊಂಡಿವೆ. ಅದೇ ಸಮಯದಲ್ಲಿ, ಈ ದಾಳಿಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಕದನ ವಿರಾಮದ ನಿಯಮ ಪಾಲಿಸುತ್ತಿರುವುದಾಗಿ ಹಮಾಸ್ ಹೇಳಿದೆ. 

ಇಸ್ರೇಲ್-ಹಮಾಸ್ ಯುದ್ಧದ ಇತ್ತೀಚಿನ ಸುದ್ದಿ: ಹಮಾಸ್ ಕದನ ವಿರಾಮ ಉಲ್ಲಂಘಿಸಿದ ವರದಿಗಳ ನಡುವೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಝಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ನೇತನ್ಯಾಹು ಅವರ ಆದೇಶದ ನಂತರ, ಇಸ್ರೇಲಿ ಭದ್ರತಾ ಪಡೆಗಳು ದಕ್ಷಿಣ ಗಾಝಾದ ಮೇಲೆ ದಾಳಿ ನಡೆಸಿವೆ. ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹಮಾಸ್ ಕದನ ವಿರಾಮ ಉಲ್ಲಂಘಿಸಿದ ನಂತರ ತುರ್ತು ಸಭೆ ಕರೆಯಲಾಗಿದೆ ಎಂದು ನೇತನ್ಯಾಹು ಕಚೇರಿ ತಿಳಿಸಿದೆ.

ಕದನ ವಿರಾಮ ಮುರಿದ ಹಮಾಸ್, ಇಸ್ರೇಲ್ ಆರೋಪ

ಇಸ್ರೇಲಿ ಸೇನೆಯ ಪ್ರಕಾರ, ಹಮಾಸ್ ಕದನ ವಿರಾಮವನ್ನು ಬಹಿರಂಗವಾಗಿ ಉಲ್ಲಂಘಿಸಿದೆ. ಹಮಾಸ್ ಉಗ್ರರು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಾಯುಪಡೆಯ ಯುದ್ಧ ವಿಮಾನಗಳು ಗಾಝಾದ ರಫಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿವೆ.

ಕದನ ವಿರಾಮ ಉಲ್ಲಂಘನೆಗೆ ಹಮಾಸ್ ಪ್ರತಿಕ್ರಿಯೆ ಏನು?

ಈ ಮಧ್ಯೆ, ಹಮಾಸ್‌ನ ಮಿಲಿಟರಿ ವಿಭಾಗವು ತಮ್ಮ ಗುಂಪು ಇಸ್ರೇಲ್‌ನೊಂದಿಗಿನ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿದೆ ಮತ್ತು ರಫಾದಲ್ಲಿ ಯಾವುದೇ ಘರ್ಷಣೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದೆ. ಎಜೆದಿನ್ ಅಲ್-ಕಸ್ಸಮ್ ಬ್ರಿಗೇಡ್‌ಗಳು ಹೇಳಿಕೆಯಲ್ಲಿ, ಒಪ್ಪಂದಂತೆ ಎಲ್ಲಾ ವಿಷಯಗಳನ್ನು ಜಾರಿಗೆ ತರಲು ನಾವು ನಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಇದರಲ್ಲಿ ಗಾಝಾ ಪಟ್ಟಿಯ ಎಲ್ಲಾ ಪ್ರದೇಶಗಳಲ್ಲಿ ಕದನ ವಿರಾಮವೂ ಸೇರಿದೆ. ನಮಗೆ ರಫಾ ಪ್ರದೇಶದಲ್ಲಿ ಯಾವುದೇ ಘಟನೆ ಅಥವಾ ಘರ್ಷಣೆಯ ಬಗ್ಗೆ ಮಾಹಿತಿ ಇಲ್ಲ, ಏಕೆಂದರೆ ಅವು ಆಕ್ರಮಿತ ಪ್ರದೇಶದ ನಿಯಂತ್ರಣದಲ್ಲಿರುವ ರೆಡ್ ಜೋನ್‌ಗಳಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಯುದ್ಧ ಪುನರಾರಂಭವಾದಾಗಿನಿಂದ, ಅಲ್ಲಿನ ನಮ್ಮ ಉಳಿದ ಗುಂಪುಗಳೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದಿದ್ದಾರೆ.

ಅಕ್ಟೋಬರ್ 13 ರಂದು ಈಜಿಪ್ಟ್‌ನಲ್ಲಿ ಶಾಂತಿ ಒಪ್ಪಂದ

ಅಕ್ಟೋಬರ್ 13 ರಂದು ಈಜಿಪ್ಟ್‌ನ ಶರ್ಮ್-ಅಲ್-ಶೇಖ್‌ನಲ್ಲಿ ನಡೆದ ಶಾಂತಿ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಗಾಝಾ ಶಾಂತಿ ಶೃಂಗಸಭೆ 2025 ರಲ್ಲಿ ಅಮೆರಿಕದ ಜೊತೆಗೆ ಈಜಿಪ್ಟ್, ಕತಾರ್ ಮತ್ತು ಟರ್ಕಿ ಗ್ಯಾರಂಟರ್‌ಗಳಾಗಿ ಭಾಗವಹಿಸಿದ್ದವು. ಒಪ್ಪಂದದ ಪ್ರಕಾರ, ಇಸ್ರೇಲ್ ತನ್ನ ಸೈನ್ಯವನ್ನು ಗಾಝಾ ಪ್ರದೇಶಗಳಿಂದ ಹಿಂತೆಗೆದುಕೊಂಡಿತ್ತು. ಅಲ್ಲದೆ, ಹಮಾಸ್‌ನ 250 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ, ಹಮಾಸ್ ಅಕ್ಟೋಬರ್ 7, 2023 ರ ದಾಳಿಯಲ್ಲಿ ಸೆರೆಹಿಡಿದಿದ್ದ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಕದನವಿರಾಮ ಉಲ್ಲಂಘನೆಯಾಗಿದೆ ಎಂದು ಇಸ್ರೇಲ್ ಆರೋಪಿಸಿದೆಯಲ್ಲದೇ ಹಮಾಸ್ ಮೇಲೆ ದಾಳಿಗೆ ಆದೇಶ ನೀಡಿದೆ.