ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಮನವಿ!
ಹಮಾಸ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ದಾಳಿಗೆ ಮುಸ್ಲಿಂ ರಾಷ್ಟ್ರಗಳು ಕೆರಳಿ ಕೆಂಡವಾಗಿದೆ. ಇದೀಗ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲು ಸೂಚಿಸಿದೆ.
ಇರಾನ್(ನ.12) ಹಮಾಸ್ ಉಗ್ರರು ಅಕ್ಟೋಬರ್ 7 ರಂದು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್, ಗಾಜಾ ಮೇಲೆ ಯುದ್ಧ ಸಾರಿದೆ. ಹಮಾಸ್ ಉಗ್ರರನ್ನು ಸಂಪೂರ್ಣ ಸಂಹಾರ ಮಾಡುವುದಾಗಿ ಘೋಷಿಸಿದೆ. ಯುದ್ಧ ಆರಂಭಗೊಂಡು ಒಂದು ತಿಂಗಳಾಗಿದೆ. ಗಾಜಾದಲ್ಲಿ ಹಮಾಸ್ ಉಗ್ರರು ಬಳಸುತ್ತಿದ್ದ, ಹಮಾಸ್ ಉಗ್ರರ ಅಧೀನದಲ್ಲಿದ್ದ ಕಟ್ಟಡಗಳೆಲ್ಲಾ ಧ್ವಂಸಗೊಂಡಿದೆ. ಇಷ್ಟಾದರೂ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಲ್ಲ. ಇತ್ತ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಪ್ಯಾಲೆಸ್ತಿನ್ ಅಮಾಯಕರು ಬಲಿಯಾಗುತ್ತಿದ್ದಾರೆ ಅನ್ನೋ ಕೂಗು ಜೋರಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಯುದ್ಧಕ್ಕೆ ಸಜ್ಜಾಗುತ್ತಿದೆ. ಇದೀಗ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಗಾಜಾ ಮೇಲೆ, ಪ್ಯಾಲೆಸ್ತಿನ್ ಜನತೆ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲು ಇರಾನ್ ಮುಸ್ಲಿಂ ರಾಷ್ಟ್ರಗಳಿಗೆ ಮನವಿ ಮಾಡಿದೆ.
ಇಸ್ಲಾಮಿಕ್ ಕೋಆಪರೇಶನ್ ಹಾಗೂ ಅರಬ್ ಲೀಗ್ ನಡೆಸಿದ ತುರ್ತು ಸಭೆಯಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಈ ಮನವಿ ಮಾಡಿದ್ದಾರೆ. ಇಸ್ರೇಲ್ ಸೇನೆ ಅತಿಕ್ರಮ ಪ್ರವೇಶ ಮಾಡುತ್ತಿದೆ. ಪ್ಯಾಲೆಸ್ತಿನ ಜನರ ವಸತಿ ಪ್ರದೇಶಗಳನ್ನು ಕಬ್ಜಾ ಮಾಡುತ್ತಿದೆ. ಅಮಾಯಕ ಜನರ ಮೇಲೆ ದಾಳಿ ಮಾಡುತ್ತಿದೆ. ಮಕ್ಕಳು, ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಪ್ಯಾಲೆಸ್ತಿನ್ ಜನರ ಬದುಕನ್ನೇ ಇಸ್ರೇಲ್ ಸೇನೆ ಕಸಿದುಕೊಂಡಿದೆ. ಇದು ಭಯೋತ್ಪಾದಕ ಕೃತ್ಯ. ಹೀಗಾಗಿ ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಇಸ್ಲಾಂ ರಾಷ್ಟ್ರಗಳು ಗುರುತಿಸಬೇಕು ಎಂದು ಇರಾನ್ ಮನವಿ ಮಾಡಿದೆ.
ಲಿಟಲ್ ಬಾಯ್, ಫ್ಯಾಟ್ ಮ್ಯಾನ್‌ಗಿಂತಾ 24 ಪಟ್ಟು ದೊಡ್ಡ ಬಾಂಬ್! ಬಿ61-13 ರಹಸ್ಯವೇನು..? ಏನಿದರ ಉದ್ದೇಶ..?
ಇದೇ ವೇಳೆ ಇಸ್ಲಾಮಿಕ್ ಸರ್ಕಾರಗಳು, ಇಸ್ರೇಲ್ ಜೊತೆಗಿನ ಎಲ್ಲಾ ವ್ಯವಾಹರ ಬಂದ್ ಮಾಡಬೇಕು. ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು. ಇಸ್ರೇಲ್ ನಮ್ಮ ಇಸ್ಲಾಂ ಸಹೋದರ-ಸಹೋದರಿಯರ ಮೇಲೆ ದಾಳಿ ಮಾಡಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ.
ಯುದ್ಧ ಅಪರಾಧದ ಹಿಂದೆ ಅಮೆರಿಕದ ಸಂಪೂರ್ಣ ಕೈವಾಡವಿದೆ ಎಂದು ಇಬ್ರಾಹಿಂ ರೈಸಿ ಹೇಳಿದ್ದಾರೆ. ಇದೇ ವೇಳೆ ಹಮಾಸ್ ಉಗ್ರರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಇರಾನ್ ಅಧ್ಯಕ್ಷ, ಎಲ್ಲಾ ಹೋರಾಟಕ್ಕೂ ಬೆಂಬಲವಾಗಿ ನಿಲ್ಲೋದಾಗಿ ಹೇಳಿದ್ದಾರೆ. ಇನ್ನು ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿಎತ್ತಬೇಕು. ಇದರ ಜೊತೆಗೆ ಪ್ಯಾಲೆಸ್ತಿನ್ ಜನತೆಗೆ ನೆರವು ನೀಡಬೇಕು ಎಂದು ಇರಾನ್ ಆಗ್ರಹಿಸಿದೆ.
ಇರಾನ್ ಅಧ್ಯಕ್ಷರ ಜೊತೆ ಮೋದಿ ಮಾತುಕತೆ, ಇಸ್ರೇಲ್-ಹಮಾಸ್ ಯುದ್ಧದ ಕುರಿತು ಚರ್ಚೆ!