ಗಾಜಾ ಪಟ್ಟಿಯ ಮೇಲೆ ಭೂದಾಳಿ ಆರಂಭಿಸಿರುವ ಇಸ್ರೇಲ್‌ ಸೇನಾಪಡೆಯನ್ನು ಕಟ್ಟಿಹಾಕಲು ಹಮಾಸ್‌ ಉಗ್ರರು ಸರ್ವಸನ್ನದ್ಧವಾಗಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಉಗ್ರರು ಗಾಜಾಪಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಸುರಂಗ ಜಾಲದಲ್ಲಿ ಅಡಗಿ ದಾಳಿ ಮಾಡಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಗಾಜಾ ಪಟ್ಟಿಯ ಮೇಲೆ ಭೂದಾಳಿ ಆರಂಭಿಸಿರುವ ಇಸ್ರೇಲ್‌ ಸೇನಾಪಡೆಯನ್ನು ಕಟ್ಟಿಹಾಕಲು ಹಮಾಸ್‌ ಉಗ್ರರು ಸರ್ವಸನ್ನದ್ಧವಾಗಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಉಗ್ರರು ಗಾಜಾಪಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಸುರಂಗ ಜಾಲದಲ್ಲಿ ಅಡಗಿ ದಾಳಿ ಮಾಡಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ದಶಕಗಳಿಂದ ಸಂಘರ್ಷ ನಡೆಯುತ್ತಲೇ ಇದೆ. ಅ.7ರಂದು ಹಮಾಸ್‌ ಉಗ್ರರು 2 ಸಾವಿರಕ್ಕೂ ಹೆಚ್ಚು ರಾಕೆಟ್‌ ಮೂಲಕ ದಾಳಿ ನಡೆಸಿದ್ದರು. ಅತ್ಯಂತ ಶಕ್ತಿಶಾಲಿಯಾದ ಇಸ್ರೇಲ್‌ ಸೇನೆಯ ವಿರುದ್ಧ ಗೆಲ್ಲುವುದು ಅಸಾಧ್ಯ ಎಂಬುದು ತಿಳಿದಿದ್ದರೂ ಸಹ ಹಮಾಸ್‌ ಉಗ್ರರು ದಾಳಿ ಮಾಡಿರುವುದನ್ನು ನೋಡಿದರೆ, ಧೀರ್ಘಕಾಲ ನಡೆಯುವ ಈ ಯುದ್ಧಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಅವು ಹೇಳಿವೆ.

ಹಮಾಸ್‌ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್‌, ಕ್ಷಿಪಣಿ ದಾಳಿ

ಅಲ್ಲದೇ ಗಾಜಾ ಪಟ್ಟಿಯಲ್ಲಿ ಗರಿಷ್ಠ 80 ಮೀ. ಆಳ ಇರುವ, ನೂರಾರು ಕಿ.ಮೀ. ದೂರ ಸಾಗುವ ಅನೇಕ ಸುರಂಗಗಳನ್ನು ಹಮಾಸ್‌ ಉಗ್ರರು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಸುಮಾರು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ಸಹ ಸಂಗ್ರಹಿಸಿಡಲಾಗಿದೆ. ಜೊತೆಗೆ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಔಷಧಗಳನ್ನು ಉಗ್ರರು ಸಂಗ್ರಹಿಸಿಟ್ಟಿದ್ದಾರೆ. ಹೀಗಾಗಿ ಇಸ್ರೇಲ್‌ ದಾಳಿ ಮಾಡಿದರೂ ಸಹ ಈ ಸುರಂಗದೊಳಗೆ ಉಗ್ರರು ಹಲವು ದಿನಗಳವರೆಗೆ ರಕ್ಷಣೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಸ್ರೇಲ್‌ ಸೇನಾಪಡೆ ಗಾಜಾವನ್ನು ಪ್ರವೇಶಿಸಿದ ಬಳಿಕ ಸುರಂಗದೊಳಗಿಂದ ಅವರ ಮೇಲೆ ದಾಳಿ ಮಾಡಿ, ಇಸ್ರೇಲ್‌ಗೆ ಹೆಚ್ಚಿನ ಸೈನಿಕ ನಷ್ಟವನ್ನು ಉಂಟು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಅವರನ್ನು ಒತ್ತೆಯಾಗಿರಿಸಿಕೊಂಡು ಯುದ್ಧಕೈದಿಗಳನ್ನು ಬಿಡುಗಡೆ ಮಾಡಿಸಿಕೊಳ್ಳುವ ಯೋಜನೆ ರೂಪಿಸಿದ್ದಾರೆ ಎಂದು ಹಮಾಸ್‌ ಸಂಘಟನೆಯ ಜೊತೆಗೆ ಸಂಪರ್ಕ ಇರುವವರು ಹೇಳಿದ್ದಾರೆ.

ಗಾಜಾ ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ಬಾಂಬ್ ದಾಳಿ: ಸಂತ್ರಸ್ತರಿಗಾಗಿ ಮೊದಲ ಬಾರಿ ರಾಫಾ ಗಡಿ ತೆರೆಯಲೊಪ್ಪಿದ ಈಜಿಫ್ಟ್‌

ಗಾಜಾಪಟ್ಟಿಯಲ್ಲಿ ಈಗಾಗಲೇ ಸಾಕಷ್ಟು ಜನ ಸಾವಿಗೀಡಾಗಿರುವುದರಿಂದ ಯುದ್ಧ ನಿಲ್ಲಿಸುವಂತೆ ಜಾಗತಿಕವಾಗಿ ಇಸ್ರೇಲ್‌ ಮೇಲೆ ಒತ್ತಡ ನಿರ್ಮಾಣವಾಗಲಿದೆ. ಯುದ್ಧ ವಿರಾಮ ಘೋಷಿಸುವಂತೆ ಸೂಚಿಸಲಾಗುತ್ತದೆ. ಈ ಸಮಯದಲ್ಲಿ ಒತ್ತೆಯಾಳುಗಳಿಗೆ ಬದಲಾಗಿ ಯುದ್ಧಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಹಮಾಸ್‌ ಉಗ್ರರು ಯೋಜಿಸಿದ್ದಾರೆ ಎಂದು ಅವರು ಹೇಳಿದ್ದಾರೆ.