Asianet Suvarna News Asianet Suvarna News

ಗಾಜಾದ ಆಸ್ಪತ್ರೆ ಮೇಲೆ ದಾಳಿ: ಇಸ್ರೇಲ್ ಆರೋಪಿಸುತ್ತಿರುವ ಈ ಇಸ್ಲಾಮಿಕ್‌ ಜಿಹಾದ್‌ ಸಂಘಟನೆ ಯಾವುದು?

ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಯ ಮೇಲೆ ನಡೆದಿರುವ ದಾಳಿಗೆ ಕಾರಣ ಎಂದು ಹೇಳಲಾಗುತ್ತಿರುವ ಇಸ್ಲಾಮಿಕ್‌ ಜಿಹಾದ್‌ ಸಂಘಟನೆ ಗಾಜಾಪಟ್ಟಿಯಲ್ಲಿರುವ ಮತ್ತೊಂದು ಉಗ್ರ ಸಂಘಟನೆಯಾಗಿದೆ. ಈ ಸಂಘಟನೆ ಹಾರಿಸಿದ ರಾಕೆಟ್‌ ಆಸ್ಪತ್ರೆಯ ಮೇಲೆ ಬಿದ್ದು, ಅನಾಹುತ ಸಂಭವಿಸಿದೆ ಎಂದು ಇಸ್ರೇಲ್‌ ಸೇನಾಪಡೆ ಹೇಳಿದೆ.

Israel hamas conflict Islamic Jihad Organization Is bihind Gaza Hospital Attack Israel accusing akb
Author
First Published Oct 19, 2023, 6:47 AM IST

ಖಾನ್‌ ಯೂನಿಸ್‌: ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಯ ಮೇಲೆ ನಡೆದಿರುವ ದಾಳಿಗೆ ಕಾರಣ ಎಂದು ಹೇಳಲಾಗುತ್ತಿರುವ ಇಸ್ಲಾಮಿಕ್‌ ಜಿಹಾದ್‌ ಸಂಘಟನೆ ಗಾಜಾಪಟ್ಟಿಯಲ್ಲಿರುವ ಮತ್ತೊಂದು ಉಗ್ರ ಸಂಘಟನೆಯಾಗಿದೆ. ಈ ಸಂಘಟನೆ ಹಾರಿಸಿದ ರಾಕೆಟ್‌ ಆಸ್ಪತ್ರೆಯ ಮೇಲೆ ಬಿದ್ದು, ಅನಾಹುತ ಸಂಭವಿಸಿದೆ ಎಂದು ಇಸ್ರೇಲ್‌ ಸೇನಾಪಡೆ ಹೇಳಿದೆ. ಇಸ್ಲಾಮಿಕ್‌ ಜಿಹಾದ್‌ ಸಂಘಟನೆಯನ್ನು ಪ್ಯಾಲೆಸ್ತೀನ್‌ ಇಸ್ಲಾಮಿಕ್‌ ಜಿಹಾದ್‌ (ಪಿಐಜೆ) ಎಂದು ಗುರುತಿಸಲಾಗುತ್ತದೆ. ಇದು ಸುನ್ನಿ ಇಸ್ಲಾಂ ಉಗ್ರರ ಸಂಘಟನೆಯಾಗಿದ್ದು, ಪ್ಯಾಲೆಸ್ತೀನ್‌ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್‌ ವಿರುದ್ಧ ಹೋರಾಡಲು ಇದನ್ನು 1970ರಲ್ಲಿ ರಚನೆ ಮಾಡಲಾಯಿತು.

ಪ್ಯಾಲೆಸ್ತೀನ್‌ನಲ್ಲಿರುವ ಶಸ್ತ್ರಾಸ್ತ್ರ ಸಂಘಟನೆಗಳಲ್ಲೇ ಇದನ್ನು ತೀವ್ರಗಾಮಿ ಎಂದು ಗುರುತಿಸಲಾಗುತ್ತದೆ. ಜಿಯಾದ್‌ ಅಲ್‌ ನಖಾಲ್ಲಾಹ್‌ ನೇತೃತ್ವದ ಈ ಸಂಘಟನೆ ಹಮಾಸ್‌ ನಂತರದ ಅತಿದೊಡ್ಡ ಉಗ್ರ ಸಂಘಟನೆಯಾಗಿದೆ. ಇದು ಸಹ ಹಮಾಸ್‌ನಂತೆ ಸ್ವತಂತ್ರ ಪ್ಯಾಲೆಸ್ತೀನ್‌ ನಿರ್ಮಾಣ ಮಾಡುವ ಗುರಿ ಹೊಂದಿದೆ. 1997ರಲ್ಲಿ ಅಮೆರಿಕ ಈ ಸಂಘಟನೆಯನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಗುರುತಿಸಿದೆ. ಈ ನಡುವೆ ಅಲ್‌ ಅಹ್ಲಿ ಆಸ್ಪತ್ರೆ ಸ್ಪೋಟದಲ್ಲಿ ತನ್ನ ಪಾತ್ರವಿದೆ ಎಂಬ ಆರೋಪವನ್ನು ಇಸ್ಲಾಮಿಕ್‌ ಜಿಹಾದ್‌ ಸಂಘಟನೆ ತಿರಸ್ಕರಿಸಿದೆ.

ಹಮಾಸ್‌ ಉಗ್ರರಿಂದ ಇಸ್ರೇಲಿಗರ ರಕ್ಷಿಸಿದ ಕೇರಳದ ಕೇರ್‌ ಟೇಕರ್ಸ್‌: ಧನ್ಯವಾದ ಹೇಳಿದ ಇಸ್ರೇಲ್ ರಾಯಭಾರಿ

ಹಮಾಸ್‌ ನಿಯಂತ್ರಿತ ಗಾಜಾ ಪಟ್ಟಿಯ ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆಯ ಮೇಲೆ ಮಂಗಳವಾರ ರಾತ್ರಿ ನಡೆದ ದಾಳಿಯಲ್ಲಿ ಅಂದಾಜು 500 ಜನರು ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ರೋಗಿಗಳು, ವಿವಿಧ ದಾಳಿಯಲ್ಲಿ ಗಾಯಗೊಂಡವರ ಜೊತೆಗೆ ಆಸ್ಪತ್ರೆ ಆವರಣದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ಕೂಡ ಸೇರಿದ್ದಾರೆ. ಈ ನಡುವೆ ದಾಳಿ ನಡೆಸಿದವರು ಯಾರು ಎಂಬ ಬಗ್ಗೆ ಇಸ್ರೇಲ್ ಮತ್ತು ಹಮಾಸ್‌ ಉಗ್ರರ ನಡುವೆ ವಾಕ್ಸಮರ ನಡೆದಿದೆ.

ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 500 ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಸರ್ಕಾರ ಆರೋಪಿಸಿದ್ದರೆ, ಈ ಆರೋಪಗಳನ್ನು ಇಸ್ರೇಲ್‌ ಸೇನೆ ಸಂಪೂರ್ಣ ತಳ್ಳಿಹಾಕಿದೆ. ‘ಹಮಾಸ್‌ ರೀತಿಯದ್ದೇ ಆದ ‘ಇಸ್ಲಾಮಿಕ್‌ ಜಿಹಾದ್‌’ ಎಂಬ ಇನ್ನೊಂದು ಸಂಘಟನೆಯ ಉಗ್ರರು ಹಾರಿಸಿದ ರಾಕೆಟ್‌ ಇದಾಗಿದ್ದು ಮಿಸ್‌ಫೈರ್‌ ಆಗಿ ದಿಕ್ಕು ತಪ್ಪಿ, ಆಸ್ಪತ್ರೆ ಮೇಲೆ ಬಿದ್ದಿದೆ ಹಾಗೂ ಇಷ್ಟೊಂದು ಸಾವು-ನೋವಿಗೆ ಕಾರಣವಾಗಿದೆ. ಈ ದಾಳಿಯ ಹಿಂದೆ ನಾವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಇಸ್ರೇಲ್ ಬಳಿಕ ಹೆಚ್ಚು ಯಹೂದಿಗಳಿರುವ ಫ್ರಾನ್ಸ್ ಮೇಲೆ ಬಾಂಬ್ ದಾಳಿ ಬೆದರಿಕೆ, 6 ವಿಮಾನ ನಿಲ್ದಾಣ ಟಾರ್ಗೆಟ್!

ಇದಲ್ಲದೆ, ತನ್ನ ಹೇಳಿಕೆಗೆ ಸಾಕ್ಷ್ಯವಾಗಿ ರಾಕೆಟ್‌ ಉಡಾವಣೆಯಾಗಿ ಕೆಲವೇ ನಿಮಿಷದಲ್ಲಿ ಆಸ್ಪತ್ರೆ ಮೇಲೆ ಬೀಳುವ ವಿಡಿಯೋ ಹಾಗೂ ಉಗ್ರರು ರಾಕೆಟ್‌ ಮಿಸ್‌ಫೈರ್‌ ಆಗಿದೆ ಎಂದು ಮಾತನಾಡಿಕೊಳ್ಳುವ ಫೋನ್‌ ಕದ್ದಾಲಿಕೆಯ ಆಡಿಯೋ ಇದೆ ಎಂದು ಇಸ್ರೇಲ್‌ ಹೇಳಿದೆ. ಅಲ್ಲದೆ, ಉಗ್ರ ಕೈವಾಡದ ಬಗ್ಗೆ ಗುಪ್ತಚರ ಮಾಹಿತಿ ಕೂಡ ಇದೆ ಎಂದು ಅದು ಹೇಳಿಕೊಂಡಿದೆ. ಈ ನಡುವೆ 500 ಅಮಾಯಕರ ಸಾವಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಹಲವು ದೇಶಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿವೆ.

ಆಗಿದ್ದೇನು?:

ಇಸ್ರೇಲ್‌ ನಡೆಸಿದ ಭಾರಿ ವಾಯುದಾಳಿಯಿಂದಾಗಿ ದಕ್ಷಿಣ ಗಾಜಾದ ಅಲ್‌ ಅಹ್ಲಿ ಎಂಬ ಆಸ್ಪತ್ರೆಯೊಂದರಲ್ಲಿದ್ದ 500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಂಗಳವಾರ ರಾತ್ರಿ ಹೇಳಿಕೊಂಡಿತ್ತು. ಇಸ್ರೇಲ್‌- ಹಮಾಸ್‌ ಮಧ್ಯೆ ಯುದ್ಧ ಆರಂಭವಾದ ಬಳಿಕ ಒಂದೇ ಸ್ಥಳದಲ್ಲಿ ದಾಖಲಾದ ಅತಿ ಹೆಚ್ಚು ಸಾವು ಇದಾಗಿದೆ ಎಂದೂ ಹೇಳಲಾಗಿತ್ತು.

ಆದರೆ ಇಸ್ರೇಲ್‌ ಮಿಲಿಟರಿ ವಕ್ತಾರ, ರಿಯರ್‌ ಅಡ್ಮಿರಲ್‌ ಡೇನಿಯಲ್‌ ಹ್ಯಾಗರಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಇದನ್ನು ನಿರಾಕರಿಸಿದ್ದಾರೆ. ‘500 ಜನರನ್ನು ಕೊಂದ ಗಾಜಾ ಆಸ್ಪತ್ರೆಯ ಬಾಂಬ್ ದಾಳಿಯಲ್ಲಿ ನಾವು ಭಾಗಿಯಾಗಿಲ್ಲ. ಈ ದಾಳಿ ನಡೆಸಿದ್ದು ಇಸ್ರೇಲ್‌ ಎಂಬುದಕ್ಕೆ ಪುರಾವೆಗಳಿಲ್ಲ’ ಎಂದಿದ್ದಾರೆ. ಅಲ್ಲದೆ, ಹಮಾಸ್ ಭಯೋತ್ಪಾದಕರು ಇಸ್ಲಾಮಿಕ್ ಜಿಹಾದ್‌ನಿಂದ ರಾಕೆಟ್ ಮಿಸ್‌ಫೈರಿಂಗ್ ಬಗ್ಗೆ ಚರ್ಚಿಸುತ್ತಿದ್ದಾರೆ ಎನ್ನಲಾದ ಆಡಿಯೊ ರೆಕಾರ್ಡಿಂಗ್ ಅನ್ನು ಬಹಿರಂಗಪಡಿಸಿದ್ದಾರೆ.

 

ಇಸ್ರೇಲ್ ಕಡೆಗೆ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಉಗ್ರಗಾಮಿಗಳು ಹಾರಿಸಿದ ರಾಕೆಟ್‌ಗಳು ಉಡಾವಣೆಯಾದ ನಂತರ ವಿಫಲಗೊಂಡು ಆಸ್ಪತ್ರೆಗೆ ಅಪ್ಪಳಿಸಿವೆ ಎಂದಿದ್ದಾರೆ. ‘ಇಸ್ಲಾಮಿಕ್ ಜಿಹಾದ್’ ಎಂಬುದು ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡರಲ್ಲೂ ಕಾರ್ಯನಿರ್ವಹಿಸುತ್ತಿರುವ ಹಮಾಸ್‌ ರೀತಿಯ ಮತ್ತೊಂದು ಪ್ಯಾಲೇಸ್ತೇನಿಯನ್ ಭಯೋತ್ಪಾದಕ ಸಂಘಟನೆಯಾಗಿದೆ.

ಇಸ್ರೇಲ್‌ ರಾಕೆಟ್‌ಗಳು ಭಾರಿ ಶಕ್ತಿಶಾಲಿಯಾಗಿದ್ದು, ಅವುಗಳು ನೆಲಕ್ಕೆ ಅಪ್ಪಳಿಸಿದರೆ ದೊಡ್ಡ ಪ್ರಪಾತವೇ ಸೃಷ್ಟಿಯಾಗುತ್ತದೆ. ಆದರೆ ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆಯ ಸುತ್ತಲಿನ ಕಟ್ಟಡಗಳಿಗೆ ಯಾವುದೇ ರಚನಾತ್ಮಕ ಹಾನಿಯಾಗಿಲ್ಲ ಮತ್ತು ವೈಮಾನಿಕ ದಾಳಿಗೆ ಅನುಗುಣವಾಗಿ ಯಾವುದೇ ಪ್ರಪಾತಗಳು ಸೃಷ್ಟಿಯಾಗಿಲ್ಲ. ಬದಲಾಗಿ ಅಲ್ಪ ಪ್ರಮಾಣದ ಹಾನಿಯಾಗಿದೆ. ಹೀಗಾಗಿ ಇದು ಇಸ್ರೇಲ್‌ ರಾಕೆಟ್‌ ಅಲ್ಲ, ಉಗ್ರರೇ ಹಾರಿಸಿದ ರಾಕೆಟ್‌ ಮಿಸ್‌ಫೈರ್ ಆಗಿ ಸ್ಫೋಟಗೊಂಡಿದ್ದಕ್ಕೆ ಸ್ಪಷ್ಟ ನಿದರ್ಶನ ಎಂದು ಸೇನಾ ವಕ್ತಾರ ಹೇಳಿದರು. ಆಸ್ಪತ್ರೆಗೆ ಆದ ಹಾನಿಯ ಬಹುಪಾಲು ರಾಕೆಟ್‌ನ ಪ್ರೊಪೆಲ್ಲೆಂಟ್‌ನಿಂದ (ನೋದಕದಿಂದ) ಮಾಡಲ್ಪಟ್ಟಿದೆ. ಸಿಡಿತಲೆಯಿಂದ ಆಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್‌ ಮಹಿಳಾ ಯೋಧೆಯ ಕಿಡಿನುಡಿ

ಸಾಮಾನ್ಯವಾಗಿ ಆಸ್ಪತ್ರೆಗಳ ಸುತ್ತ ಇಸ್ರೇಲ್‌ ವಾಯುದಾಳಿ ನಡೆಸುವುದಿಲ್ಲ. ಉಗ್ರರು ಇದನ್ನೇ ದುರ್ಬಳಕೆ ಮಾಡಿಕೊಂಡು ಆಸ್ಪತ್ರೆ ಸನಿಹ ರಾಕೆಟ್‌ಗಳನ್ನು ಜಮಾವಣೆ ಮಾಡಿಕೊಂಡಿದ್ದಾರೆ. ಮೊದಲು ಮಂಗಳವಾರ ಸಂಜೆ 6.15ಕ್ಕೆ ಇಸ್ರೇಲ್‌ನತ್ತ ಹಮಾಸ್‌ನಿಂದ ರಾಕೆಟ್‌ಗಳ ಸುರಿಮಳೆಯಾಗಿದೆ. ನಂತರ ಸಂಜೆ 6.59ಕ್ಕೆ ಸುಮಾರು 10 ರಾಕೆಟ್‌ಗಳ ಸುರಿಮಳೆಯಾಗಿದ್ದು, ಈ ರಾಕೆಟ್‌ಗಳನ್ನು ಇಸ್ಲಾಮಿಕ್ ಜಿಹಾದ್ ಸಂಘಟನೆ ಆಸ್ಪತ್ರೆ ಸುತ್ತಲ ಪ್ರದೇಶಗಳಿಂದ ಹಾರಿಸಿದೆ. ಅದೇ ಸಮಯದಲ್ಲಿ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದೆ’ ಎಂದು ಇಸ್ರೇಲಿ ಸೇನಾ ವಕ್ತಾರರು ಹೇಳಿದ್ದಾರೆ. ಇದಕ್ಕೆ ಪೂರಕವಾದ ವಿಡಿಯೋವನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಆಸ್ಪತ್ರೆ ಮೇಲೆ ದಾಳಿಗೆ 500 ಬಲಿ: ಇಸ್ರೇಲ್ ಪ್ರಧಾನಿ ಮಹಾ ಸುಳ್ಳುಗಾರ: ಪ್ಯಾಲೇಸ್ತೇನ್ ರಾಯಭಾರಿ ಆಕ್ರೋಶ

ನಮ್ಮ ಗುಪ್ತಚರ ಮಾಹಿತಿ ಪ್ರಕಾರ, ಇಸ್ಲಾಮಿಕ್ ಜಿಹಾದ್ ತಪ್ಪಾಗಿ ರಾಕೆಟ್‌ ಹಾರಿಸಿದೆ. ಈ ತಪ್ಪನ್ನು ಮರೆಮಾಚಲು ಇಸ್ರೇಲ್‌ ಮೇಲೆ ಗೂಬೆ ಕೂರಿಸಲು ಯತ್ನಿಸಿದೆ. ಗಾಜಾದಿಂದ ಹಾರಿಸಲಾದ ಸುಮಾರು 450 ರಾಕೆಟ್‌ಗಳು ಕಳೆದ 11 ದಿನಗಳಲ್ಲಿ ಗಾಜಾ ಪಟ್ಟಿಯೊಳಗೇ ಬಿದ್ದಿವೆ ಎಂದು ಇಸ್ರೇಲಿ ಮಿಲಿಟರಿಯ ವಕ್ತಾರರು ಹೇಳಿದರು.

Follow Us:
Download App:
  • android
  • ios