ಬ್ರಿಟನ್‌ನ ಮೆಟ್ರೋದಲ್ಲಿ ಭಾರತೀಯ ಮಹಿಳೆಯೊಬ್ಬರು ಕೈಯಲ್ಲಿ ಊಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅನೇಕರು ಅವರನ್ನು ಟೀಕಿಸಿದ್ದಾರೆ. ಕೆಲವರು ಇದನ್ನು ಸಾಂಸ್ಕೃತಿಕ ಅಭ್ಯಾಸ ಎಂದರೆ ಇನ್ನು ಕೆಲವರು ಅಸಹ್ಯಕರ ಎಂದಿದ್ದಾರೆ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕೈಯಲ್ಲಿ ಆಹಾರ ಸೇವಿಸುವುದು ಸಂಪ್ರದಾಯ, ಸ್ಪೂನ್‌ನಲ್ಲಿ ಆಹಾರ ಸೇವಿಸುವುದು ವಿದೇಶಿಗರ ಬಳುವಳಿ. ಆಧುನಿಕತೆ ಪಾಶ್ಚಿಮಾತ್ಯ ಸಂಸ್ಕೃತೀಯ ಪ್ರಭಾವ ಎಷ್ಟೇ ಪ್ರಭಾವ ಬೀರಿದ್ದರೂ ನಮ್ಮತನವನ್ನು ಯಾರಿಗೂ ಬಿಟ್ಟು ಕೊಡುವುದಕ್ಕೆ ಮನಸ್ಸಿರುವುದಿಲ್ಲ, ಅನೇಕರಿಗೆ ಚಮಚದ ಬದಲು ಕೈನಲ್ಲಿ ಆಹಾರ ಸೇವಿಸಿದರೆ ಅದೇನೋ ಸಮಾಧಾನ. ಅದೇ ರೀತಿ ಬ್ರಿಟನ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ಮೆಟ್ರೋ ಟ್ರೂಬ್‌ನಲ್ಲಿ ಕೈನಿಂದ ಆಹಾರ ಸೇವಿಸಿದ್ದಾರೆ. ಆದರೆ ಇದನ್ನು ರೆಕಾರ್ಡ್ ಮಾಡಿಕೊಂಡು ಅವರನ್ನು ಕೊಳಕು ಗಲೀಜು ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಭಾರತೀಯರು ಈ ವೀಡಿಯೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RIP ಲಂಡನ್ ಎಂದು ಬರೆದು @RadioGenoa ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 15 ಸೆಕೆಂಡ್‌ನ ವೀಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಕೈನಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಯನ್ನು ಕೊಳಕು, ನಾಗರಿಕ ಸಂಸ್ಕೃತಿ ಇಲ್ಲದವರು ಎಂಬಂತೆ ಅವಮಾನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಲಂಡನ್ ಅಂಡರ್‌ಗ್ರೌಂಡ್‌ನಲ್ಲಿ ಸೀಟಿನಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಾ ಮಹಿಳೆಯೊಬ್ಬರು ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಯುಕೆ ಪ್ರಜೆಗಳು ಸೇರಿದಂತೆ ಅನೇಕ ಜನರು ವೀಡಿಯೊದ ಕೆಳಗೆ ನಿಂದನೀಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ..
ಲಂಡನ್ ಟ್ಯೂಬ್‌ನಲ್ಲಿ ಯುವತಿಯೊಬ್ಬಳು ಊಟ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ, ಒಬ್ಬ ವ್ಯಕ್ತಿ ಇದು ಭಾರತವಲ್ಲ, ಇಂಗ್ಲೆಂಡ್ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಯುವತಿಯ ಕೃತ್ಯಗಳು ಅಸಹ್ಯಕರವಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಚಮಚ ಮತ್ತು ಫೋರ್ಕ್ ಬಳಸದೆ ತನ್ನ ಕೈಗಳಿಂದ ಊಟ ಮಾಡುವ ಯುವತಿಯರು ಗಲೀಜುಗಳು ಆ ಕೈ ಎಲ್ಲಿತ್ತೋ ಏನೋ ಎಂಬಂತೆ ಜನಾಂಗೀಯವಾಗಿ ನಿಂದಿಸುವ ಕಾಮೆಂಟ್‌ಗಳನ್ನು ಮಾಡಿಡಿದ್ದಾರೆ.
ಅವರು ಎಷ್ಟು ಕೆಟ್ಟ ದೇಶದಿಂದ ಬಂದಿದ್ದಾರೆ ಮತ್ತು ಅಲ್ಲಿನ ಗುಣಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಮತ್ತೆ ಕೆಲವರು ಈ ವಲಸಿಗರು ಬ್ರಿಟನ್ ಅನ್ನು ಭಾರತದಂತೆಯೇ ಮೂರನೇ ಜಗತ್ತಿನ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಕೈಗಳಿಂದ ಆಹಾರ ಸೇವಿಸುವ ಭಾರತದ ಈ ಸಂಪ್ರದಾಯಕ್ಕೆ ಅಲ್ಲಿನ ಜನ ಅವಮಾನ ಮಾಡುವಂತಹ ಹಲವು ಕಾಮೆಂಟ್ ಮಾಡಿದ್ದಾರೆ.
ಕೆಲವರು ಸ್ಯಾಂಡ್‌ವಿಚ್ ಅಥವಾ ಬರ್ಗರ್ ತಿನ್ನುವುದು ಸರಿ, ಆದರೆ ಕೈಯಿಂದ ಅನ್ನ ತಿನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ. ಯುಕೆಯಲ್ಲಿ ಕಳ್ಳತನ ಅಥವಾ ಹಿಂಸೆಗಿಂತ ಇದು ದೊಡ್ಡ ಸಮಸ್ಯೆಯಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ತಮಾಷೆ ಮಾದ್ದಾರೆ. ಮತ್ತೊಬ್ಬ ವ್ಯಕ್ತಿ ಇದು ಅಡುಗೆಮನೆಯಲ್ಲ, ಸಾರ್ವಜನಿಕ ಸಾರಿಗೆ ಎಂದು ಹೇಳಿದ್ದಾರೆ. ಹಾಗೆಯೇ ಇವರೆಲ್ಲರನ್ನೂ ಮನೆಗೆ ಕಳುಹಿಸುವ ಸಮಯ ಬಂದಿದೆ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಆದರೆ ಆ ಯುವತಿ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನದೇ ಫೋನ್‌ನಲ್ಲಿ ಮಾತನಾಡುತ್ತಾ ಊಟ ಮಾಡುತ್ತಿದ್ದಾಳೆ ಆಕೆಯ ಆದರೆ ಹತ್ತಿರದಲ್ಲಿ ಇತರ ಪ್ರಯಾಣಿಕರು ಇದ್ದಾರೆ. ಮೆಟ್ರೋದಲ್ಲಿ ಇದ್ದವರೇ ಯಾರೋ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೈಗಳಿಂದ ತಿನ್ನುವುದು ಸಾಂಸ್ಕೃತಿಕ ಅಭ್ಯಾಸವಾಗಿದ್ದು, ಅದು ಇತರರಿಗೆ ಹಾನಿಯನ್ನುಂಟುಮಾಡದಿರುವವರೆಗೆ ಅದರ ಬಗ್ಗೆ ಅದೂ ಹೀಗೆ ಹಾಗೆ ಎಂದು ತೀರ್ಪು ನೀಡಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರವೂ ಜನರ ಸಾಂಸ್ಕೃತಿಕ ರೂಢಿಗಳು, ವೈಯಕ್ತಿಕ ಸ್ಥಳ ಮತ್ತು ವೈಯಕ್ತಿಕ ಆಯ್ಕೆಗಳಿಗೆ ಗೌರವದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
