ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ, ಮೋಸ್ಟ್ ವಾಂಟೆಡ್ ಉಗ್ರ ಸಾವು ಎಂಬ ಗುಸುಗುಸು: ಛೋಟಾ ಶಕೀಲ್ ಹೇಳಿದ್ದೇನು?
ಭಾನುವಾರ ದಿಢೀರನೆ ಪಾಕಿಸ್ತಾನದಾದ್ಯಂತ ಏಕಾಏಕಿ ಅಂತರ್ಜಾಲ ಸೇವೆ ಕಡಿತಗೊಳಿಸಲಾಗಿತ್ತು. ಜೊತೆಗೆ ದಾವೂದ್‌ನ ಹತ್ತಿರದ ಬಂಧು, ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕುಟುಂಬವನ್ನು ಪಾಕ್ ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸಿದೆ ಎಂದು ವರದಿಗಳು ಹೇಳಿವೆ.
ಇಸ್ಲಾಮಾಬಾದ್ (ಡಿಸೆಂಬರ್ 19, 2023): ಭಾರತಕ್ಕೆ ಬೇಕಾದ 20 ಉಗ್ರರು ವಿದೇಶಗಳಲ್ಲಿ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ, ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ, 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ಎನ್ನಲಾದ ದಾವೂದ್ ಇಬ್ರಾಹಿಂ ಸಾವಿಗೀಡಾಗಿದ್ದಾನೆ ಎಂಬ ವದಂತಿಗಳು ಎಲ್ಲೆಡೆ ಹಬ್ಬಿವೆ. ನಿಗೂಢ ವ್ಯಕ್ತಿಯೊಬ್ಬರಿಂದ ವಿಷಪ್ರಾಶನಕ್ಕೆ ಒಳಗಾದ ದಾವೂದ್, ಭಾನುವಾರ ರಾತ್ರಿ 8-9 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಸುದ್ದಿಹಬ್ಬಿದೆ.
ಈ ಸುದ್ದಿಗೆ ಪೂರಕವೆಂಬಂತೆ ಭಾನುವಾರ ದಿಢೀರನೆ ಪಾಕಿಸ್ತಾನದಾದ್ಯಂತ ಏಕಾಏಕಿ ಅಂತರ್ಜಾಲ ಸೇವೆ ಕಡಿತಗೊಳಿಸಲಾಗಿತ್ತು. ಜೊತೆಗೆ ದಾವೂದ್‌ನ ಹತ್ತಿರದ ಬಂಧು, ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕುಟುಂಬವನ್ನು ಪಾಕ್ ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸಿದೆ ಎಂದು ವರದಿಗಳು ಹೇಳಿವೆ.
ಇದನ್ನು ಓದಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್ ಆಸ್ಪತ್ರೆಗೆ ದಾಖಲು!
ಆದರೆ ಇಡೀ ಘಟನೆಯ ಕುರಿತು ಈವರೆಗೆ ಪಾಕಿಸ್ತಾನದ ಪ್ರಮುಖ ಮಾಧ್ಯಮ ಸಂಸ್ಥೆಗಳಾಗಲೀ, ಪಾಕ್ ಸರ್ಕಾರವಾಗಲೀ ತುಟಿಕ್‌ಪಿಟಿಕ್ ಎಂದಿಲ್ಲ. ಇನ್ನೊಂದೆಡೆ ಭಾರತ ಸರ್ಕಾರ ಕೂಡಾ ಈವರೆಗೂ ಈ ನಾಟಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ವಿಷಪ್ರಾಶನ:
ಅನಾಮಿಕ ವ್ಯಕ್ತಿಗಳ ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ದಾವೂದ್‌ನನ್ನು ಭಾನುವಾರ ಸಂಜೆ ಕರಾಚಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಆತನನ್ನು ದಾಖಲಿಸಿದ್ದ ಆಸ್ಪತ್ರೆಯ ಇಡೀ ಮಹಡಿಯ ಎಲ್ಲಾ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅತ್ಯಂತ ರಹಸ್ಯ ರೀತಿಯಲ್ಲಿ ಆತನಿಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ 8-9ರ ಅವಧಿಯಲ್ಲಿ ದಾವೂದ್ ಮೃತಪಟ್ಟಿದ್ದಾನೆ. ಬಳಿಕ ಆತನ ಶವನನ್ನು ಅಲ್ಲಿಂದ ರಹಸ್ಯವಾಗಿ ಕೊಂಡೊಯ್ಯಲಾಯಿತು ಎಂದು ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ಇದನ್ನು ಓದಿ: ಉಗ್ರ ದಾವುದ್ ಇಬ್ರಾಹಿಂ ನಿಧನ ಸುದ್ದಿ, ಪಾಕಿಸ್ತಾನದಲ್ಲಿ ಇಂಟರ್ನೆಟ್, ಸೋಶಿಯಲ್ ಮೀಡಿಯಾ ಬಂದ್!
ಪಾಕಿಸ್ತಾನದ ಖ್ಯಾತ ಪತ್ರಕರ್ತ ಆರ್ಜೂ, ‘ಸರ್ಕಾರ ಟ್ವೀಟರ್, ಗೂಗಲ್, ಯುಟ್ಯೂಬ್ ಸೇವೆಗಳನ್ನು ವ್ಯತ್ಯಯ ಮಾಡುವ ಮೂಲಕ ಯಾವುದೇ ಬೃಹತ್ ಘಟನೆಯನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ’ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಗೃಹಬಂಧನ:
ಈ ನಡುವೆ ದಾವೂದ್ ಪುತ್ರನಿಗೆ ತನ್ನ ಪುತ್ರಿಯನ್ನು ಮದುವೆ ಮಾಡಿಕೊಟ್ಟಿರುವ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್‌ರ ಇಡೀ ಕುಟುಂಬವನ್ನು ಪಾಕ್ ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸಿದೆ ಎಂದು ಹಲವು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಭಾರತದ ಮಾಧ್ಯಮವೊಂದು ಜಾವೇದ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ತಮ್ಮ ಕುಟುಂಬವನ್ನು ಗೃಹಬಂಧನಕ್ಕೆ ಒಳಪಡಿಸಿದ ವರದಿಗಳು ಸುಳ್ಳು ಎಂದಿದ್ದಾರೆ. ಆದರೆ ದಾವೂದ್ ಸಾವಿನ ಕುರಿತು ಸ್ಪಷ್ಟನೆ ಬಯಸಿದಾಗ, ಅವರ ಕುರಿತು ಪಾಕಿಸ್ತಾನ ಸರ್ಕಾರ ಏನು ಹೇಳಬೇಕೋ ಅದನ್ನು ಹೇಳುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ವಿಷವುಣಿಸಿ ಮೋಸ್ಟ್ ವಾಂಟೆಡ್ ಉಗ್ರ ದಾವುಡ್ ಇಬ್ರಾಹಿಂ ಹತ್ಯೆ, ಸುದ್ದಿ ಖಚಿತಪಡಿಸಿದ ಪಾಕ್ ಮಾಧ್ಯಮ!
ಸಾವಿನ ‘ಸುದ್ದಿ’ ಇದೇ ಮೊದಲಲ್ಲ
ದಾವೂದ್ ಸಾವಿನ ಕುರಿತ ಸುದ್ದಿಗಳು ಹಬ್ಬಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ದಾವೂಡ್ ಏಡ್ಸ್, ಕಾಲರಾ, ಟೈಫಾಯ್ಡ್, ಕೋವಿಡ್‌ನಿಂದ ಸಾವಿಗೀಡಾಗಿದೆ ಎಂದು ವದಂತಿಗಳು ಹಬ್ಬಿದ್ದವು. ಆದರೆ ಭೂಗತ ಪಾತಕಿ ತನ್ನ ದೇಶದಲ್ಲಿ ಇದ್ದಾನೆ ಎಂದು ಇದುವರೆಗೂ ಒಪ್ಪಿಕೊಳ್ಳದ ಪಾಕಿಸ್ತಾನ ಈ ಬೆಳವಣಿಗಳ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ.
ದಾವೂದ್ ಬದುಕಿದ್ದಾನೆ: ಛೋಟಾ ಶಕೀಲ್
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬದುಕಿದ್ದಾನೆ, ಆರೋಗ್ಯವಾಗಿದ್ದಾನೆ. ಆತನ ಸಾವಿನ ಕುರಿತಾದ ಸುದ್ದಿಗಳೆಲ್ಲವೂ ಸುಳ್ಳು ಎಂದು ಆತನ ಆಪ್ತ ಛೋಟಾ ಶಕೀಲ್, ಭಾರತದ ಟಿವಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾನೆ. ‘ದಾವೂದ್ ಸಾವಿನ ಕುರಿತಾದ ಸುದ್ದಿಗಳನ್ನು ನೋಡಿ ನಾನು ಆಶ್ಚರ್ಯಗೊಂಡಿದ್ದೇನೆ. ನಾನು ನಿನ್ನೆ ಹಲವು ಬಾರಿ ಆತನನ್ನು ಭೇಟಿ ಮಾಡಿದ್ದೇನೆ’ ಎಂದು ಶಕೀಲ್ ಹೇಳಿದ್ದಾನೆ.