ದೊಡ್ಡದಾದ ವಿದ್ಯುತ್ ಘಟಕಗಳನ್ನು ನಾಶಪಡಿಸುವುದು ಸುಲಭವಲ್ಲ. ದಮಾವಂದ್ ನಂತಹ ವಿದ್ಯುತ್ ಘಟಕ ಬಹಳಷ್ಟು ತಂಪಾಗಿಸುವ ಟವರ್‌ಗಳನ್ನು ಹೊಂದಿದ್ದು, 494 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿವೆ.

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಒಂದು ವೇಳೆ ಹೊರ್ಮುಸ್ ಜಲಸಂಧಿಯ ತೊಂದರೆಗಳು ಮುಂದುವರಿದರೆ, ಇರಾನಿನ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಬೇಕಾಗಿ ಬರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ, ಒಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದೇನೆಂದರೆ, ಇರಾನಿನ ವಿದ್ಯುತ್ ವ್ಯವಸ್ಥೆ ನಿಜಕ್ಕೂ ಎಷ್ಟು ದುರ್ಬಲ ಅಥವಾ ಸುಲಭದ ಗುರಿಯಾಗಿದೆ? ಇದಕ್ಕೆ ಇರುವ ಸರಳ ಉತ್ತರವೆಂದರೆ, ಇರಾನಿನ ವಿದ್ಯುತ್ ವ್ಯವಸ್ಥೆ ಅತ್ಯಂತ ದೊಡ್ಡದಾಗಿದ್ದು, ಬಹುತೇಕ ಉಷ್ಣ ವಿದ್ಯುತ್ ಸ್ಥಾವರಗಳ ಆಧಾರದಲ್ಲಿ ಕಾರ್ಯಾಚರಿಸುತ್ತದೆ. ಇದು ಹಲವಾರು ಸ್ಥಳಗಳಲ್ಲಿ ವ್ಯಾಪಿಸಿದ್ದು, ಕೆಲವು ಮಿಲಿಟರಿ ದಾಳಿಗಳ ಮೂಲಕ ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅತ್ಯಂತ ಕಷ್ಟಕರವಾಗಿದೆ.

ಉಷ್ಣ ವಿದ್ಯುತ್ ಆಧಾರದಲ್ಲಿ ನಿರ್ಮಿತವಾದ ವ್ಯವಸ್ಥೆ

ಇರಾನಿನ ಇಂಧನ ಸಚಿವಾಲಯದ ಮಾಹಿತಿಯ ಪ್ರಕಾರ, ಇರಾನ್ 40.6 ಮಿಲಿಯನ್ ವಿದ್ಯುತ್ ಬಳಕೆದಾರರನ್ನು ಹೊಂದಿದ್ದು, ಅವರ ಪೈಕಿ 32.3 ಮಿಲಿಯನ್ ಗೃಹ ಬಳಕೆಯ ಗ್ರಾಹಕರಾಗಿದ್ದಾರೆ. ಅಧಿಕೃತ ಅಂಕಿ ಅಂಶಗಳು ಜಲ ವಿದ್ಯುತ್ ದೇಶದ ವಿದ್ಯುತ್ ಸಾಮರ್ಥ್ಯದ 13.4% ಪಾಲು ಹೊಂದಿದೆ ಎಂದರೂ, ವಾಸ್ತವವಾಗಿ ಜಲ ವಿದ್ಯುತ್ 5%ಕ್ಕೂ ಕಡಿಮೆ ಕೊಡುಗೆ ನೀಡುತ್ತದೆ. ಇದಕ್ಕೆ ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟ ಪ್ರಮುಖ ಕಾರಣವಾಗಿದೆ.

ಆದ್ದರಿಂದ ಇರಾನ್ ಮುಖ್ಯವಾಗಿ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆಯೇ ಹೆಚ್ಚಿನ ಅವಲಂಬನೆ ಹೊಂದಿದ್ದು, ಅವು ದೇಶದ 95% ವಿದ್ಯುತ್ ಉತ್ಪಾದಿಸುತ್ತವೆ. ಇರಾನಿನಲ್ಲಿ ಒಟ್ಟು 130 ಉಷ್ಣ ವಿದ್ಯುತ್ ಘಟಕಗಳಿದ್ದು, ಒಟ್ಟಾರೆ 78,000 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿವೆ. ಇವುಗಳ ಪೈಕಿ ಅಂದಾಜು 20 ಸ್ಥಾವರಗಳು 1,000 ಮೆಗಾವ್ಯಾಟ್‌ಗಿಂತಲೂ ದೊಡ್ಡದಾಗಿವೆ. 3 ಉಷ್ಣ ವಿದ್ಯುತ್ ಘಟಕಗಳು 2,000 ಮೆಗಾವ್ಯಾಟ್‌ಗೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ.

ವಿದ್ಯುತ್ ಉತ್ಪಾದನೆ ಎಲ್ಲಾಗುತ್ತದೆ?

ಇರಾನಿನ ಬಹುದೊಡ್ಡ ವಿದ್ಯುತ್ ಉತ್ಪಾದನಾ ಘಟಕ ದಮಾವಂದ್ ವಿದ್ಯುತ್ ಸ್ಥಾವರವಾಗಿದ್ದು, ಇದು ಅಂದಾಜು 2,900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಪಾಕ್‌ದಶ್ತ್ ಪ್ಲ್ಯಾಂಟ್ ಎಂಬ ಹೆಸರನ್ನೂ ಹೊಂದಿರುವ ಈ ನೆಲೆ 200 ಹೆಕ್ಟೇರಿಗೂ (ಅಂದಾಜು 494 ಎಕರೆ) ಹೆಚ್ಚಿನ ಜಾಗದಲ್ಲಿ ವ್ಯಾಪಿಸಿದ್ದು, ಟೆಹರಾನಿನಿಂದ 50 ಕಿಲೋಮೀಟರ್ ದೂರದಲ್ಲಿ, ಖಾವರನ್ ರಸ್ತೆಯಲ್ಲಿದೆ. ಇದನ್ನು ನಿರ್ಮಿಸಲು ಬಹುತೇಕ 2 ಬಿಲಿಯನ್ ಯೂರೋ ವೆಚ್ಚವಾಗಿತ್ತು.

ನೇಕಾ (ಬೆಹ್‌ಶಾರ್) ವಿದ್ಯುತ್ ಘಟಕವೂ 200 ಹೆಕ್ಟೇರಿಗಿಂತ (ಅಂದಾಜು 494 ಎಕರೆ) ಹೆಚ್ಚು ವಿಶಾಲವಾಗಿದ್ದು, ಇದು ಮಜ಼ಂದರನ್ ಪ್ರಾಂತ್ಯದಲ್ಲಿ ಕ್ಯಾಸ್ಪಿಯನ್ ಸಮುದ್ರದ ಬಳಿಯಲ್ಲಿದೆ. ಇದು ಅಂದಾಜು 2,200 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಕರಾಜ಼್ - ಕಜ಼್ವಿನ್ ರಸ್ತೆಯಲ್ಲಿರುವ ರಜಾಯೀ ವಿದ್ಯುತ್ ಘಟಕವೂ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದೂ ಬಹುತೇಕ 350 ಹೆಕ್ಟೇರ್ (865 ಎಕರೆ) ಪ್ರದೇಶದಲ್ಲಿ ವ್ಯಾಪಿಸಿದೆ.

ಟೆಹರಾನ್ ಸುತ್ತಮತ್ತಲೂ ದಮಾವಂದ್, ರಜಾಯೀ, ಮೊಂತಾಜೆರ್ ಘಾಯೆಮ್, ರೌಡ್‌ಶೌರ್ ಮತ್ತು ಮೊಫತ್ತೆ ಎನ್ನುವ ಐದು ಪ್ರಮುಖ ವಿದ್ಯುತ್ ಘಟಕಗಳಿದ್ದು, ಇರಾನಿನ ವಿದ್ಯುತ್ ಪೂರೈಕೆಯಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ರಾಜಧಾನಿಯ ಒಳಗೆ ಬೆಸತ್, ರೇ, ತರಶ್ತ್, ಮತ್ತು ಪರಂದ್‌ನಂತಹ ಸಣ್ಣ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿಯೇ ದೊಡ್ಡದಾದ ಪರಂದ್ ಅಂದಾಜು 950 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದರೆ, ಬೆಸತ್ 250 ಮೆಗಾವ್ಯಾಟ್ ಮತ್ತು ತರಶ್ತ್ ಕೇವಲ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ.

ಕಠಿಣ ಗುರಿ, ಕನಿಷ್ಠ ಪರಿಣಾಮ

ದೊಡ್ಡದಾದ ವಿದ್ಯುತ್ ಘಟಕಗಳನ್ನು ನಾಶಪಡಿಸುವುದು ಸುಲಭವಲ್ಲ. ದಮಾವಂದ್ ನಂತಹ ವಿದ್ಯುತ್ ಘಟಕ ಬಹಳಷ್ಟು ತಂಪಾಗಿಸುವ ಟವರ್‌ಗಳನ್ನು ಹೊಂದಿದ್ದು, 494 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿವೆ. ಇವು ಟೆಹರಾನಿನ ಆಜಾದಿ ಚೌಕಕ್ಕಿಂತಲೂ 30 ಪಟ್ಟು ಹೆಚ್ಚು ದೊಡ್ಡದಾಗಿವೆ. ಇವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಬೃಹತ್ತಾದ, ಸಮನ್ವಯಗೊಳಿಸಿದ ದಾಳಿಯ ಅಗತ್ಯವಿದೆ.

ಒಂದು ವೇಳೆ ಹಾಗಾದರೂ, ರಾಷ್ಟ್ರೀಯ ವಿದ್ಯುತ್ ಪೂರೈಕೆಯಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಯವೇನೂ ಉಂಟಾಗುವ ಸಾಧ್ಯತೆಗಳಿಲ್ಲ. ಒಂದು ವೇಳೆ ದಮಾವಂದ್ ಘಟಕ ಸಂಪೂರ್ಣವಾಗಿ ನಾಶವಾದರೆ, ಅದರಿಂದ ಇರಾನಿನ ಒಟ್ಟು ವಿದ್ಯುತ್ ಸಾಮರ್ಥ್ಯದ 3.7% ವಿದ್ಯುತ್ ಪ್ರಮಾಣ ಕಡಿಮೆಯಾಗಬಹುದಷ್ಟೇ. ಅಂದಾಜು 400 ಮೆಗಾವ್ಯಾಟ್ ವಿದ್ಯುತ್ ರಫ್ತನ್ನು ನಿಲುಗಡೆಗೊಳಿಸಿದರೆ ಈ ಕೊರತೆಯನ್ನು ಇರಾನ್ ನೀಗಿಸಿಕೊಳ್ಳಬಹುದು.

ವಿಕೇಂದ್ರೀಕೃತ ಗ್ರಿಡ್

ಇರಾನಿನ ವಿದ್ಯುತ್ ವ್ಯವಸ್ಥೆ ಕೇವಲ ಕೆಲವು ಸ್ಥಳಗಳಿಗೆ ಮಾತ್ರ ಸೀಮಿತವಾಗಿಲ್ಲ. ಇರಾನಿನ ಮುಖ್ಯ ವಿದ್ಯುತ್ ಸರಬರಾಜು ಜಾಲ ಅಂದಾಜು 1,33,000 ಕಿಲೋಮೀಟರ್ ಉದ್ದವಿದ್ದು, ನಗರ ಮತ್ತು ಗ್ರಾಮೀಣ ಲೈನುಗಳನ್ನು ಸೇರಿಸಿದಾಗ ಇದು 1.3 ಮಿಲಿಯನ್ ಕಿಲೋಮೀಟರ್‌ಗೂ ಹೆಚ್ಚು ವಿಸ್ತರಿಸುತ್ತದೆ. ಈ ವ್ಯವಸ್ಥೆಗೆ ಬೆಂಬಲ ನೀಡಲು ಅಂದಾಜು 8,57,000 ಟ್ರಾನ್ಸ್‌ಫಾರ್ಮರ್‌ಗಳಿದ್ದು, ದೇಶಾದ್ಯಂತ ಅಂದಾಜು 2,000ದಿಂದ 5,000 ದೊಡ್ಡ ಮತ್ತು ಮಧ್ಯಮ ಉಪ ಕೇಂದ್ರಗಳಿವೆ.

ಇಂತಹ ವಿದ್ಯುತ್ ಉಪ ಕೇಂದ್ರಗಳ ಮೇಲೆ ದಾಳಿಯಾದರೆ, ಅದರಿಂದ ಸ್ಥಳೀಯವಾಗಿ ತಾತ್ಕಾಲಿಕ ವಿದ್ಯುತ್ ಕಡಿತ ಉಂಟಾಗಬಹುದು. ಆದರೆ, ಅವುಗಳನ್ನು ಬಹಳ ಬೇಗನೆ ಸರಿಪಡಿಸಲು ಸಾಧ್ಯವಿದೆ. ಉದಾಹರಣೆಗೆ, ವಿದ್ಯುತ್ ಉಪ ಕೇಂದ್ರಗಳಲ್ಲಿ ಉಂಟಾದ ಸ್ಫೋಟದ ಪರಿಣಾಮವಾಗಿ ಪಶ್ಚಿಮ ಟೆಹರಾನ್ ಆಗಸದಲ್ಲಿ ನೀಲಿ ಬೆಳಕು ಕಂಡುಬಂದು, ಪಶ್ಚಿಮ ಟೆಹರಾನ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಆದರೆ ಅದನ್ನು ಬಲುಬೇಗನೆ ಸರಿಪಡಿಸಲಾಗಿತ್ತು.

ಇರಾನನ್ನು ಕತ್ತಲೆಗೆ ತಳ್ಳಲು ಸಾಧ್ಯವೇ?

ಇರಾನಿನ ವಿದ್ಯುತ್ ವ್ಯವಸ್ಥೆ ವಿಪರೀತ ದೊಡ್ಡದು ಮತ್ತು ವಿಸ್ತಾರವಾಗಿ ಹರಡಿರುವುದರಿಂದ, ಒಂದು ಅಥವಾ ಕೆಲವು ವಿದ್ಯುತ್ ಘಟಕಗಳ ಮೇಲೆ ದಾಳಿ ಮಾಡುವುದರಿಂದ ದೇಶಾದ್ಯಂತ ವಿದ್ಯುತ್ ಇಲ್ಲವಾಗಿಸಲು ಸಾಧ್ಯವಿಲ್ಲ. ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾದರೂ, ದೊಡ್ಡದಾದ ವಿದ್ಯುತ್ ಜಾಲ ಅದನ್ನು ನಿಭಾಯಿಸಬಲ್ಲದು. ಅಂತಹ ಹಾನಿಯ ಪರಿಣಾಮ ಕೇವಲ ಒಂದಷ್ಟು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಬಹುದು. ಮತ್ತು ಅದನ್ನು ಬಹಳ ಬೇಗನೆ ಸರಿಪಡಿಸಲು ಸಾಧ್ಯವಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)