ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಕುವೈತ್ ಮತ್ತು ಯುಎಇಯಲ್ಲೂ ಸ್ಫೋಟಗಳು ಸಂಭವಿಸಿವೆ.

ನವದೆಹಲಿ (ಫೆ.28): ಇರಾನ್‌ ಮೇಲೆ ಇಂದು ಮಂಜಾನೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಯುದ್ಧ ಕಾರ್ಯಾಚರಣೆಗೆ ಇಳಿದು ದಾಳಿ ಆರಂಭ ಮಾಡುತ್ತಿದ್ದಂತೆ ಇರಾನ್‌ ಕೂಡ ಬಲ ಪ್ರದರ್ಶನ ಮಾಡಿದೆ. ಮಧ್ಯಪ್ರಾಚ್ಯದಲ್ಲಿ (Middle East) ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಮತ್ತು ಅದರ ಮಿತ್ರ ರಾಷ್ಟ್ರಗಳು ಯುದ್ಧದ ಜ್ವಾಲೆಯನ್ನು ಹರಡುತ್ತಿವೆ. ಹಾಗೇನಾದರೂ ಅಮೆರಿಕ ದಾಳಿ ಮಾಡಿದಲ್ಲಿ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳೇ ತಮ್ಮ ಮೊದಲ ಟಾರ್ಗೆಟ್‌ ಎಂದಿದ್ದ ಇರಾನ್‌ ಈಗ ಅದನ್ನೇ ಮಾಡಿ ತೋರಿಸಿದೆ. ಬಹರೇನ್‌ನಲ್ಲಿದ್ದ ಅಮೆರಿಕದ ನೌಕಾ ಸೇನಾ ನೆಲೆಯನ್ನು ಬಾಂಬ್‌ ಹಾಕಿ ಉಡಾಯಿಸಿದೆ.

Add Asianetnews Kannada as a Preferred SourcegooglePreferred

ಇಸ್ರೇಲ್ ಮತ್ತು ಅಮೆರಿಕದ ಜಂಟಿ ಕಾರ್ಯಾಚರಣೆಯ ಬೆನ್ನಲ್ಲೇ ಮಧ್ಯಪ್ರಾಚ್ಯದಾದ್ಯಂತ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಗಲ್ಫ್ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದುಗಳು ಕೇಳಿಬರುತ್ತಿವೆ.

ಎಲ್ಲೆಲ್ಲಿ ಸ್ಫೋಟ ಸಂಭವಿಸಿದೆ?

ಅಬುಧಾಬಿ (ಯುಎಇ): ಯುಎಇ ರಾಜಧಾನಿ ಅಬುಧಾಬಿಯಲ್ಲಿ ಭೀಕರ ಸ್ಫೋಟ ಸಂಭವಿಸಿರುವುದಾಗಿ ರಾಯಿಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕುವೈತ್: ಕುವೈತ್‌ನಾದ್ಯಂತ ಸ್ಫೋಟದ ಸದ್ದುಗಳು ಕೇಳಿಬಂದಿದ್ದು, ತುರ್ತು ಸೈರನ್‌ಗಳನ್ನು ಮೊಳಗಿಸಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಬಹ್ರೇನ್: ಬಹ್ರೇನ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ (5th Fleet) ಕೇಂದ್ರ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ಖಚಿತಪಡಿಸಿದೆ. ಜುಫೈರ್ ಪ್ರದೇಶದಲ್ಲಿರುವ ಅಮೆರಿಕ ನೌಕಾ ನೆಲೆ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದೆ.

ವಾಯುಪ್ರದೇಶ ಬಂದ್ ಮತ್ತು ಕಟ್ಟೆಚ್ಚರ

ಯುದ್ಧದ ಭೀತಿಯಿಂದಾಗಿ ಕತಾರ್, ಕುವೈತ್ ಮತ್ತು ಯುಎಇ ತಮ್ಮ ವಾಯುಪ್ರದೇಶವನ್ನು (Airspace) ಸಂಪೂರ್ಣವಾಗಿ ಮುಚ್ಚಿವೆ. ಕತಾರ್‌ನ ಡಿಫೆನ್ಸ್ ಸಚಿವಾಲಯದ ಪ್ರಕಾರ, ಇರಾನ್ ಉಡಾಯಿಸಿದ್ದ ಕ್ಷಿಪಣಿಯೊಂದನ್ನು 'ಪೇಟ್ರಿಯಾಟ್ ಡಿಫೆನ್ಸ್ ಸಿಸ್ಟಮ್' ಮೂಲಕ ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಮಿಲಿಟರಿ ನೆಲೆಗಳಿಂದ ದೂರವಿರುವಂತೆ ಮತ್ತು ಮನೆಯೊಳಗೇ ಸುರಕ್ಷಿತವಾಗಿರುವಂತೆ ಕತಾರ್ ಮತ್ತು ಬಹ್ರೇನ್ ಸರ್ಕಾರಗಳು ತನ್ನ ನಾಗರಿಕರಿಗೆ ಮೊಬೈಲ್ ಮೂಲಕ ತುರ್ತು ಸಂದೇಶ ರವಾನಿಸಿವೆ.

ಇರಾನ್‌ನಿಂದ ನೇರ ಎಚ್ಚರಿಕೆ: "ಯಾವುದೇ ರೆಡ್ ಲೈನ್ ಇಲ್ಲ"

ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಅಲ್ ಜಜೀರಾ ಜೊತೆ ಮಾತನಾಡುತ್ತಾ ಪ್ರಮುಖ ಎಚ್ಚರಿಕೆ ನೀಡಿದ್ದಾರೆ. "ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಆರಂಭಿಸಿವೆ, ಇದಕ್ಕೆ ದೀರ್ಘಕಾಲದ ಪರಿಣಾಮ ಎದುರಿಸಬೇಕಾಗುತ್ತದೆ. ಈಗ ನಮಗೆ ಯಾವುದೇ 'ರೆಡ್ ಲೈನ್' (ಮಿತಿ) ಇಲ್ಲ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಮತ್ತು ಇಸ್ರೇಲ್‌ನ ಎಲ್ಲಾ ಆಸ್ತಿಗಳು ಹಾಗೂ ಹಿತಾಸಕ್ತಿಗಳು ನಮಗೆ ಈಗ ಸುಲಭದ ಗುರಿ (Legitimate Target). ನಮ್ಮ ಪ್ರತಿಕ್ರಿಯೆ ಬಹಿರಂಗವಾಗಿರುತ್ತದೆ ಮತ್ತು ಇದಕ್ಕೆ ಯಾವುದೇ ಸಮಯದ ಮಿತಿಯಿಲ್ಲ." ಸಂಯಮ ವಹಿಸುವಂತೆ ಬರುತ್ತಿರುವ ಕರೆಗಳು ಕೇವಲ "ಹಗಲುಗನಸು" ಎಂದು ಇರಾನ್ ಕಿಡಿಕಾರಿದೆ.