ರಷ್ಯಾದ ಮೇಲೆ ಪರಿಣಾಮ ಬೀರಲು ಆರಂಭಿಸಿದ ಪಾಶ್ಚಿಮಾತ್ಯ ನಿರ್ಬಂಧ, ಕೆಲಸ ಕಳೆದುಕೊಂಡ 2 ಲಕ್ಷ ಜನ!
ರಷ್ಯಾದ ವಿರುದ್ಧ ಆರ್ಥಿಕ ನಿರ್ಬಂಧಗಳ ಸುರಿಮಳೆಯಿಂದಾಗಿ ದೇಶದ ಆರ್ಥಿಕತೆಯು ದುಸ್ಥಿತಿಗೆ ತಲುಪಿದೆ. ವಿದೇಶಿ ಕಂಪನಿಗಳು ಮುಚ್ಚಿದ್ದರಿಂದ ಲಕ್ಷಾಂತರ ಜನರು ನಿರೊದ್ಯೋಗಿಗಳಾಗಿದ್ದಾರೆ. ಹಾಲು, ತರಕಾರಿ, ಸಕ್ಕರೆ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅನೇಕ ಬಹುರಾಷ್ಟ್ರೀಯ ಬ್ರಾಂಡ್‌ಗಳು ತಮ್ಮ ವ್ಯಾಪಾರವನ್ನು ಮುಚ್ಚಿವೆ. ಇದರ ಹೊರತಾಗಿಯೂ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧದ ದಾಳಿಯನ್ನು ನಿಲ್ಲಿಸುವ ಯೋಚನೆ ಹೊಂದಿಲ್ಲ.
ನವದೆಹಲಿ (ಏ.24): ರಷ್ಯಾ-ಉಕ್ರೇನ್ ಯುದ್ಧ (Russia and Ukraine war) ಆರಂಭವಾಗಿ ಸುಮಾರು ಎರಡು ತಿಂಗಳಾಗಿದೆ. ರಷ್ಯಾದ (Russia) ಆಕ್ರಮಣಕಾರಿ ವರ್ತನೆಯ ದೃಷ್ಟಿಯಿಂದ, ಅಮೆರಿಕ (US), ಯುರೋಪಿಯನ್ ಯೂನಿಯನ್ (EU) ಸೇರಿದಂತೆ ಹಲವು ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಹೇರಿವೆ. ಆ ನಂತರ ರಷ್ಯಾ ಕೂಡ, ನಿರ್ಬಂಧಗಳನ್ನು ಎದುರಿಸುವ ನಿಟ್ಟಿನಲ್ಲಿ ಹಾಗೂ ಅದರ ಪರಿಣಾಮವನ್ನು ಆದಷ್ಟು ಕಡಿಮೆ ಮಾಡಲು ಪ್ರಮುಖ ಕ್ರಮಗಳನ್ನೂ ಕೈಗೊಂಡಿತ್ತು.
ಪಾಶ್ಚಿಮಾತ್ಯ ನಿರ್ಬಂಧಗಳ (Western Sanctions) ಸಂಪೂರ್ಣ ಪರಿಣಾಮವು ನೈಜ ರೀತಿಯಲ್ಲಿ ಕಾಣಲು ಆರಂಭಿಸಿರುವ ಹೊತ್ತಿನಲ್ಲಿ, ರಷ್ಯಾ ಇದರ ಪರಿಣಾಮ ಆಗೇ ಇಲ್ಲ ಇಲ್ಲ ಎನ್ನುವಂತೆ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದೆ.
ಪಾಶ್ಚಿಮಾತ್ಯ ದೇಶಗಳು ತನ್ನ ವಿದೇಶಿ ವಿನಿಮಯ ಮೀಸಲುಗಳಿಗೆ (Foreign Exchange Reserves) ರಷ್ಯಾದ ಪ್ರವೇಶವನ್ನು ನಿರ್ಬಂಧಿಸಿದೆ. ಪ್ರಮುಖ ತಂತ್ರಜ್ಞಾನಗಳ ಆಮದು ಮತ್ತು ಇತರ ನಿರ್ಬಂಧಿತ ಕ್ರಮಗಳನ್ನು ನಿರ್ಬಂಧಿಸಿವೆ. ಅದೇ ಸಮಯದಲ್ಲಿ, ರಷ್ಯಾದ ಆರ್ಥಿಕತೆಯನ್ನು ಉಳಿಸಲು ಕ್ರೆಮ್ಲಿನ್ ಕೆಲವು ದೊಡ್ಡ ಕ್ರಮಗಳನ್ನು ತೆಗೆದುಕೊಂಡಿದೆ. ಬಡ್ಡಿದರವನ್ನು 20 ಪ್ರತಿಶತಕ್ಕೆ ಹೆಚ್ಚಿಸುವುದು, ಬಂಡವಾಳವನ್ನು ನಿಯಂತ್ರಿಸುವುದು ಮತ್ತು ರಷ್ಯಾದ ವ್ಯವಹಾರಗಳು ತಮ್ಮ ಲಾಭವನ್ನು ರುಬೆಲ್ ಗೆ (Rubel) ಪರಿವರ್ತಿಸಲು ಒತ್ತಾಯಿಸಿದೆ.
ರುಬೆಲ್ ಮೌಲ್ಯವು ಆರಂಭದಲ್ಲಿ ದುರ್ಬಲಗೊಂಡ ನಂತರ ಚೇತರಿಸಿಕೊಂಡಿದೆ ಮತ್ತು ಕೇಂದ್ರ ಬ್ಯಾಂಕ್ ಕಳೆದ ವಾರ ತನ್ನ ಬಡ್ಡಿದರ ಹೆಚ್ಚಳವನ್ನು ಭಾಗಶಃ ಕಡಿತಗೊಳಿಸಿತು. ಪಾಶ್ಚಿಮಾತ್ಯ ನಿರ್ಬಂಧಗಳನ್ನು ಎದುರಿಸಲು ದೇಶವು ಸಿದ್ಧವಾಗಿದೆ ಎಂದು ಘೋಷಿಸಲು ಇದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉತ್ತೇಜಿಸಿತು.
ಇಂಡಿಯಾನಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮೈಕೆಲ್ ಅಲೆಕ್ಸೀವ್ ಅವರು ರಷ್ಯಾ ಸರ್ಕಾರವು ಪರಿಸ್ಥಿತಿಯು ನಿಜವಾಗಿಯೂ ಇರುವಷ್ಟು ಕೆಟ್ಟದಾಗಿಲ್ಲ ಎಂದು ತೋರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಆದಾಗ್ಯೂ, ಹತ್ತಿರದ ಅವಲೋಕನದಲ್ಲಿ ನಿರ್ಬಂಧಗಳು ರಷ್ಯಾದ ಆರ್ಥಿಕತೆಯಿಂದ ಬಂಡವಾಳದ ಹೊರಹರಿವಿಗೆ ಕಾರಣವಾಗಿದೆ ಎನ್ನುವುದನ್ನು ತೋರಿಸಿದೆ.
* ದೇಶವು ಎರಡು ದಶಕಗಳಲ್ಲೇ ಅತ್ಯಂತ ಕೆಟ್ಟ ಹಣದುಬ್ಬರವನ್ನು ಎದುರಿಸುತ್ತಿದೆ. ದೇಶದ ಆರ್ಥಿಕ ಅಂಕಿಅಂಶಗಳ ಸಂಸ್ಥೆಯಾದ ರೋಸ್‌ಸ್ಟಾಟ್, ಹಣದುಬ್ಬರವು ಕಳೆದ ವಾರ 17.3 ಶೇಕಡಾವನ್ನು ಮುಟ್ಟಿದೆ, ಇದು 2002 ರಿಂದ ಅತ್ಯಧಿಕ ಮಟ್ಟವಾಗಿದೆ.
* ಕೆಲವು ರಷ್ಯಾದ ಕಂಪನಿಗಳು ನಿರ್ಬಂಧದ ಪರಿಣಾಮವಾಗಿ ಮುಚ್ಚಲ್ಪಟ್ಟಿದೆ. ಭಾಗಗಳ ಕೊರತೆಯಿಂದಾಗಿ ಟ್ಯಾಂಕ್ ತಯಾರಕರು ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು ಎಂದು ಹಲವಾರು ವರದಿಗಳು ಹೇಳಿವೆ. ಲಾಡಾ ಆಟೋ ಪ್ಲಾಂಟ್ ಕೂಡ ಮುಚ್ಚಲಾಗಿದೆ. ರಷ್ಯಾದ ಕಂಪನಿಯ ಅವ್ಟೋವಾಜ್ನ ಬ್ರ್ಯಾಂಡ್ ಫ್ರೆಂಚ್ ವಾಹನ ತಯಾರಕ ರೆನಾಲ್ಟ್ ನಲ್ಲಿ ಬಹುಪಾಲು ಮಾಲೀಕತ್ವವನ್ನು ಹೊಂದಿದೆ.
* ನಗರದಲ್ಲಿ ವಿದೇಶಿ ಕಂಪನಿಗಳ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಸುಮಾರು ಎರಡು ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮಾಸ್ಕೋದ ಮೇಯರ್ ಹೇಳಿದ್ದಾರೆ.
ಯುದ್ಧದ ನಡುವೆ ಮಾರಕ ಕ್ಷಿಪಣಿ ಪ್ರಯೋಗಿಸಿದ ರಷ್ಯಾ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಕ್ಷಿಪಣಿ!
ಅರ್ಥಶಾಸ್ತ್ರಜ್ಞರಾದ ಬೆಂಜಮಿನ್ ಹಿಲ್ಜೆನ್‌ಸ್ಟಾಕ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಫೈನಾನ್ಸ್‌ನ ಅಲೀನಾ ರಿಬಕೋವಾ ಅವರು ಕಳೆದ ತಿಂಗಳು ಬಿಡುಗಡೆ ಮಾಡಿದ ವರದಿಯಲ್ಲಿ ಯುರೋಪಿಯನ್ ಯೂನಿಯನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ನಿರ್ಬಂಧಗಳನ್ನು ಹೇರಿದರೆ, ರಷ್ಯಾದ ಆರ್ಥಿಕತೆಯು 20 ಕ್ಕಿಂತ ಹೆಚ್ಚು ಕುಗ್ಗಬಹುದು ಎಂದು ಅಂದಾಜಿಸಿದ್ದಾರೆ. ಇದೇ ವೇಳೆ ಸರಕುಗಳ ಬೆಲೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
India Russia ವೈದ್ಯಕೀಯ ನೆರವು ನೀಡುವಂತೆ ಭಾರತಕ್ಕೆ ಮನವಿ ಮಾಡಿದ ರಷ್ಯಾ!
ಮಾಸ್ಕೋ ಉಪನಗರದ ನಿವಾಸಿಗಳು 19-ಲೀಟರ್ ಕುಡಿಯುವ ನೀರು ಮೊದಲಿಗಿಂತ 35 ಪ್ರತಿಶತ ಹೆಚ್ಚು ದುಬಾರಿಯಾಗಿದೆ ಎಂದು ಹೇಳಿದರು. ಈ ಭಾಗದ ಸೂಪರ್ ಮಾರ್ಕೆಟ್ ಮತ್ತು ಅಂಗಡಿಗಳಲ್ಲಿ ಒಂದು ಕೆಜಿ ಸಕ್ಕರೆ ಬೆಲೆ ಶೇ.77ರಷ್ಟು ಏರಿಕೆಯಾಗಿದ್ದು, ಕೆಲವು ತರಕಾರಿಗಳು ಶೇ.30ರಿಂದ ಶೇ.50ರಷ್ಟು ಏರಿಕೆಯಾಗಿದೆ. ಸ್ಟಾರ್ ಬಕ್ಸ್, ಮೆಕ್ ಡೊನಾಲ್ಡ್ ಹಾಗೂ ಆಪಲ್ ನಂಥ ಕಂಪನಿಗಳು ತನ್ನ ಮಳಿಗೆಗಳನ್ನು ರಷ್ಯಾದಲ್ಲಿ ಸಂಪೂರ್ಣವಾಗಿ ಮುಚ್ಚಿದೆ.