ಯುದ್ಧದ ನಡುವೆ ಮಾರಕ ಕ್ಷಿಪಣಿ ಪ್ರಯೋಗಿಸಿದ ರಷ್ಯಾ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಕ್ಷಿಪಣಿ!
* ಉಕ್ರೇನ್ ಜೊತೆಗಿನ ಯುದ್ಧ ಮತ್ತು ಅದಕ್ಕೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳ ಬೆಂಬಲ
* ಭೂಮಿಯ ಯಾವುದೇ ಭಾಗ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಸಮ್ರ್ಯಾಟ್ ಪ್ರಯೋಗ
* ಮಾರಕ ಕ್ಷಿಪಣಿ ಪ್ರಯೋಗಿಸಿದ ರಷ್ಯಾ
ಮಾಸ್ಕೋ(ಏ.21): ಉಕ್ರೇನ್ ಜೊತೆಗಿನ ಯುದ್ಧ ಮತ್ತು ಅದಕ್ಕೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳ ಬೆಂಬಲದ ನಡುವೆಯೇ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಸಮ್ರ್ಯಾಟ್ ಎಂಬ ಭಾರೀ ಶಕ್ತಿಶಾಲಿ ಕ್ಷಿಪಣಿಯನ್ನು ರಷ್ಯಾ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಮ್ಮ ದೇಶದ ಮೇಲೆ ಪರಮಾಣು ಪ್ರಯೋಗದ ಬೆದರಿಕೆ ಹಾಕುವ ಶತ್ರು ರಾಷ್ಟ್ರಗಳು ಎರಡೆರಡು ಬಾರಿ ಯೋಚನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
200 ಟನ್ ತೂಕದ ಈ ಕ್ಷಿಪಣಿಯು ಅಸಂಖ್ಯಾತ ಸಿಡಿತಲೆಗಳನ್ನು ಹೊತ್ತೊಯ್ಯುವ ಮತ್ತು ಭೂಮಿಯ ಮೇಲಿನ ಯಾವುದೇ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ದಾಳಿ ತೀವ್ರ: ಈ ನಡುವೆ ಕಲ್ಲಿದ್ದಲು ಗಣಿಗಳು ಮತ್ತು ಕಾರ್ಖಾನೆಗಳನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಉಕ್ರೇನಿನ ನಗರಗಳು ಮತ್ತು ಸೇನಾನೆಲೆಗಳ ಮೇಲಿನ ದಾಳಿಯನ್ನು ರಷ್ಯಾ ಇನ್ನಷ್ಟುತೀವ್ರಗೊಳಿಸಿದೆ. ಜೊತೆಗೆ ತನ್ನ ಮಿಲಿಟರಿ ಶಕ್ತಿಯನ್ನು ದ್ವಿಗುಣಗೊಳಿಸಿ ನಗರಗಳ ಸರ್ವನಾಶಕ್ಕೆ ಪಣತೊಟ್ಟಿದೆ. ಒಂದೊಮ್ಮೆ ಡೋನ್ಬಾಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರೆ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯುವಲ್ಲಿ ವಿಫಲವಾಗಿರುವ ರಷ್ಯಾ ಪಡೆಗಳಿಗೆ ಮಹತ್ವದ ವಿಜಯ ಲಭಿಸಿದಂತಾಗಲಿದೆ. ಅಲ್ಲಿನ ಗಣಿಗಳು, ಲೋಹಗಳು ಮತ್ತು ಭಾರೀ ಉಪಕರಣಗಳ ಕಾರ್ಖಾನೆಗಳು ರಷ್ಯಾ ಕೈವಶವಾಗಲಿವೆ.
ಇನ್ನು ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾ ಪಡೆಗಳು ಬಹುತೇಕ ಹಿಡಿತ ಸಾಧಿಸಿದ್ದು, ಉಕ್ಕಿನ ಸ್ಥಾವರದ ಮೇಲೆ ರಷ್ಯಾ ಪಡೆಗಳು ಭಾರೀ ಬಾಂಬ್ ದಾಳಿ ನಡೆಸಿವೆ.