ವಿದೇಶಕ್ಕೆ ಹೋಗಿದ್ದ ವ್ಯಕ್ತಿಗೆ ಅಲ್ಲಿ ಕೇವಲ ಜ್ವರ ಬಂದ ಕಾರಣಕ್ಕೆ 88 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಭರಿಸಬೇಕಾದಂತಹ ಸ್ಥಿತಿ ನಿರ್ಮಾಣವಾದಂತಹ ಘಟನೆ ನಡೆದಿದೆ.
ಸಾಮಾನ್ಯವಾಗಿ ವಿದೇಶಗಳಿಗೆ ಭೇಟಿ ನೀಡುವ ವೇಳೆ ನಾವು ಅಲ್ಲಿನ ನೀತಿ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಇಲ್ಲದೇ ಹೋದಲ್ಲಿ ಲಕ್ಷಾಂತರ ರುಪಾಯಿಗಳ ಆರ್ಥಿಕ ನಷ್ಟಕ್ಕೆ ಒಳಗಾಗುವಂತಹ ಸ್ಥಿತಿ ಬರಬಹುದು, ಜೊತೆಗೆ ಜೀವಕ್ಕೂ ಹಾನಿಯಾಗುವಂತಹ ಸಾಧ್ಯತೆಗಳಿವೆ. ಅದೇ ರೀತಿ ಇಲ್ಲೊಂದು ಕಡೆ ಇಳಿವಯಸ್ಸಿನಲ್ಲಿ ಮಕ್ಕಳನ್ನು ನೋಡುವುದಕ್ಕಾಗಿ ವಿದೇಶಕ್ಕೆ ಹೋಗಿದ್ದ ವ್ಯಕ್ತಿಗೆ ಅಲ್ಲಿ ಕೇವಲ ಜ್ವರ ಬಂದ ಕಾರಣಕ್ಕೆ 88 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಭರಿಸಬೇಕಾದಂತಹ ಸ್ಥಿತಿ ನಿರ್ಮಾಣವಾದಂತಹ ಘಟನೆ ನಡೆದಿದೆ.
ಕೆನಡಾದ ಒಂಟಾರಿಯೊದ ಬ್ರಾಂಪ್ಟನ್, ಹ್ಯಾಮಿಲ್ಟನ್ ನಗರಗಳಲ್ಲಿ ವಾಸಿಸುತ್ತಿರುವ ತನ್ನ ಮಕ್ಕಳನ್ನು ನೋಡಲು ಭಾರತದಿಂದ 88 ವರ್ಷದ ಆಲಿಸ್ ಜಾನ್ ಎಂಬುವವರು ಅಲ್ಲಿಗೆ ಪ್ರಯಾಣ ಬೆಳೆಸಿದ್ದರು. ದುರಾದೃಷ್ಟವಶಾತ್ ಅಲ್ಲಿಗೆ ತಲುಪಿದ ಕೆಲವೇ ದಿನಗಳಲ್ಲಿ ಆಲಿಸ್ ಜಾನ್ ಅವರಿಗೆ ಅನಾರೋಗ್ಯ ಕಾಡಿದೆ. ಹಾಗಂತ ಅದೇನು ಮಾರಕ ಕಾಯಿಲೆ ಅಲ್ಲ,ಕೇವಲ ಜ್ವರ. ಆದರೆ ಇಳಿವಯಸ್ಸಾಗಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಕೇವಲ ಜ್ವರಕ್ಕೆ ನೀಡಿದ ಚಿಕಿತ್ಸೆ ಬರೋಬ್ಬರಿ 96,000 ಡಾಲರ್ ಬಿಲ್ ಎಂದರೆ ಸುಮಾರು 82 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಕೆನಡಾದ ಸಿಟಿವಿ ನ್ಯೂಸ್ ವರದಿ ಮಾಡಿದೆ.
ಕೆನಡಾದ ನಾಗರಿಕರ ಪೋಷಕರು ಮತ್ತು ಅಜ್ಜ-ಅಜ್ಜಿಯಂದಿರು ಒಂದೇ ಬಾರಿಗೆ ಎರಡು ವರ್ಷಗಳವರೆಗೆ ದೇಶದಲ್ಲಿ ವಾಸಿಸಲು ಅನುಮತಿ ನೀಡುವ ಸೂಪರ್ ವೀಸಾದಲ್ಲಿ ಆಲಿಸ್ ಜಾನ್ ಭಾರತದಿಂದ ಕೆನಡಾಕ್ಕೆ ಬಂದಿದ್ದರು. ಈ ವೀಸಾದ ಸಿಂಧುತ್ವ 10 ವರ್ಷಗಳವರೆಗೆ ಇರುತ್ತದೆ. ಅದೇ ಸಮಯದಲ್ಲಿ, ಈ ವೀಸಾದಲ್ಲಿ ಕೆನಡಾಕ್ಕೆ ಬರುವವರು ತಮ್ಮ ವಾಸ್ತವ್ಯದ ಅವಧಿಯಲ್ಲಿ ಖಾಸಗಿ ವೈದ್ಯಕೀಯ ವಿಮೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮಿದೆ.
ಮುದ್ದಿನ ಮಗಳ ಕೊಂದ ಪಾಪಿಗೆ ಗುಂಡಿಕ್ಕಿ ಕೊಂದು ಸುದ್ದಿಯಾಗಿದ್ದ ಕೇರಳದ ಶಂಕರನಾರಾಯಣನ್ ನಿಧನ
ಭಾರತದ ಆಲಿಸ್ ಜಾನ್ 2024 ರ ಜನವರಿಯಲ್ಲಿ ಕೆನಡಾಕ್ಕೆ ಬಂದಿದ್ದರು. ಹವಾಮಾನ ಬದಲಾದ ಕಾರಣ ಆಲಿಸ್‌ಗೆ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಮಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಲಿಸ್ ತನ್ನ ಮಗಳನ್ನು ನೋಡಲು ಹ್ಯಾಮಿಲ್ಟನ್‌ಗೆ ಹೋಗಿದ್ದರು ಎಂದು ಆಲಿಸ್ ಮಗ ಜೋಸೆಫ್ ಕ್ರಿಸ್ಟಿ ಹೇಳಿದ್ದಾರೆ. ಆದರೆ ಅಲ್ಲಿ ಅವರಿಗೂ ಅನಾರೋಗ್ಯ ಕಾಡಿದ್ದು, ಆಲಿಸ್‌ನನ್ನು ಹ್ಯಾಮಿಲ್ಟನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹೀಗಾಗಿ ಸುಮಾರು ಮೂರು ವಾರಗಳ ಕಾಲ ಆಲಿಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಮತ್ತು ವೆಂಟಿಲೇಟರ್‌ನಲ್ಲಿ ಇದ್ದರು. ಇತ್ತ ಮನೆಯವರು ಈಗಾಗಲೇ ಆಲಿಸ್‌ಗಾಗಿ ಅಲ್ಲಿನ ಮನುಲೈಫ್ ವಿಮಾ ಸಂಸ್ಥೆಯಿಂದ ಸುಮಾರು ಒಂದು ಲಕ್ಷ ಡಾಲರ್ (85.6 ಲಕ್ಷ ರೂಪಾಯಿ) ವಿಮೆ ಮಾಡಿಸಿದ್ದರು. ಆದರೆ, ಆಲಿಸ್‌ಗೆ ಮೊದಲೇ ಉಸಿರಾಟದ ಸಮಸ್ಯೆಗಳಿದ್ದವು ಎಂದು ವಿಮಾ ಕಂಪನಿ ವಾದಿಸಿದ್ದರಿಂದ ಅವರಿಗೆ ಆಸ್ಪತ್ರೆ ಬಿಲ್ ಕ್ಲೈಮ್ ಮಾಡಲು ಸಾಧ್ಯವಾಗಲಿಲ್ಲವಂತೆ
ದೇಶದಾದ್ಯಂತ ಶೀಘ್ರ ಗ್ಯಾಸ್ ಬೆಲೆ ₹500ಕ್ಕೆ ಇಳಿಕೆ; ಮಾಜಿ ಸಂಸದ ಪ್ರತಾಪ್ ಸಿಂಹ
ಕಂಜಸ್ಟೀವ್ ಹಾರ್ಟ್ ಫೇಲ್ಯೂರ್ ಇರುವ ರೋಗಿಗಳಿಗೆ ಈ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತ ಸಿಗುವುದಿಲ್ಲ. ಆದರೆ, ಆಲಿಸ್‌ನ ಮೂರು ವರ್ಷಗಳ ಹಿಂದಿನ ಆಸ್ಪತ್ರೆ ದಾಖಲೆಗಳಲ್ಲಿ ಕಂಜಸ್ಟೀವ್ ಹಾರ್ಟ್ ಫೇಲ್ಯೂರ್ ಪತ್ತೆಯಾದ ಬಗ್ಗೆ ದಾಖಲಾಗಿಲ್ಲ ಎಂದು ಜೋಸೆಫ್ ಕ್ರಿಸ್ಟಿ ಹೇಳಿದರೂ ಕೂಡ ವಿಮಾ ಕಂಪನಿ ಅದನ್ನು ಪರಿಗಣಿಸಲಿಲ್ಲ ಎಂದು ವರದಿಗಳು ಹೇಳುತ್ತವೆ. ಇದರಿಂದಾಗಿ ಕುಟುಂಬವು 82 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ವೈದ್ಯಕೀಯ ಬಿಲ್ ರೂಪದಲ್ಲಿ ಖರ್ಚು ಮಾಡಬೇಕಾಯಿತು. ಈ ವಿಷಯ ಮಾಧ್ಯಮಗಳ ಗಮನಕ್ಕೆ ಬರುತ್ತಿದ್ದಂತೆ ಮನುಲೈಫ್ ತನ್ನ ವಿಮಾ ಪಾಲಿಸಿಯನ್ನು ವಿಶ್ಲೇಷಿಸಿ ಆಲಿಸ್ ಜಾನ್‌ಗೆ ಕ್ಲೈಮ್ ನೀಡಲು ಒಪ್ಪಿಕೊಂಡಿತು. ಆದರೆ ಬಿಲ್ ಮರುಪಾವತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಮನುಲೈಫ್ ವಿಮಾ ಕಂಪನಿ ಆಲಿಸ್ ಕುಟುಂಬಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.
