ಮಾಜಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸಿದೆ ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಹೇಳಿಕೆ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಕೊನೆಗೆ, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊನ್ನಣ್ಣ ಅವರ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.

ಮೈಸೂರು (ಏ.08): ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಹೆಸರು ಹೇಳಿಕೊಂಡು ಎಲ್ಲ ವಸ್ತುಗಳ ಬೆಲೆಯನ್ನೂ ಹೆಚ್ಚಳ ಮಾಡಿದ್ದಾರೆ. ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇದೀಗ 50 ರೂ. ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ಪೈಪ್ ಡು ಗ್ಯಾಸ್ ಬಂದರೆ ಅದರ ಗ್ಯಾಸ್ ಬೆಲೆ 450 ರಿಂದ 500 ರೂ.ಗೆ ಇಳಿಕೆಯಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗ್ಯಾಸ್ ಸಿಲಿಂಡರ್ ಬೆಲೆ 1,200ಗೆ ಏರಿಕೆಯಾಗಿತ್ತು. ಅದನ್ನು ಹಂತ ಹಂತವಾಗಿ 800 ರೂ.ಗೆ ಇಳಕೆ ಮಾಡಲಾಗಿತ್ತು. ಇದೀಗ ಪುನಃ 50 ರೂ. ಹೆಚ್ಚಳ ಮಾಡಿದ್ದರಿಂದ 850ಗೆ ದರ ನಿಗದಿ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಏನೆಲ್ಲಾ ಬೆಲೆ ಹೆಚ್ಚಾಗಿದೆ ಎಂಬುದರ ಅರಿವಿದೆಯಾ? ಗ್ಯಾರಂಟಿ ಎಂದು ಹೇಳುತ್ತಾರಲ್ಲ, ಗೃಹಲಕ್ಷ್ಮಿ ಹಣ ಬಂತಾ? ಯುವನಿಧಿ ಹಣ ಬಂತಾ? ಜನರನ್ನು ಕೇಳಿ ನೋಡಿ. ಗ್ಯಾರಂಟಿ ಹೆಸರಿನಲ್ಲಿ ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಜನರಿಗೆ ಒಂದಾದರೂ ಕಡಮೆ ದರದಲ್ಲಿ ಸಿಗುವಂತೆ ಸಿದ್ದರಾಮಯ್ಯ ಮಾಡಿದ್ದಾರಾ? ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರಕಾರ ಲೂಟಿ ಹೊಡೆಯುತ್ತಾ ಎಲ್ಲದರಲ್ಲೂ ಸುಲಿಗೆ ಮಾಡುತ್ತಿದೆ. ಪೈಪ್ ಡು ಗ್ಯಾಸ್ ಕೊಡುವ ಮೂಲಕ ಗ್ಯಾಸ್ ಬೆಲೆಯನ್ನು ನಿಯಂತ್ರಣ ಮಾಡ್ತಿವಿ. ಡಿಕೆ ಶಿವಕುಮಾರ್ ಅವರೇ ಬ್ರ್ರಾಂಡ್ ಬೆಂಗಳೂರು ಮಾಡ್ತಿನಿ ಅಂತಾ ಗುಂಡಿ ಬೆಂಗಳೂರು ಮಾಡಿದ್ದಿರಿ. ತಮಿಳುನಾಡಿನ ಸ್ಟ್ಯಾಲಿನ್ ಹತ್ತಿರ ಹೋದಾಗ ಮೇಕೆದಾಟು ಬಗ್ಗೆ ಯಾಕೆ ಮಾತಾಡಲಿಲ್ಲ ಡಿಕೆ ಶಿವಕುಮಾರ್ ಅವರೇ? ಬಿಜೆಪಿ ಸರಿ ಇಲ್ಲ ಅಂತಾ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದುಕೊಳ್ಳಿ. ಈಗ ನಿಮ್ಮನ್ನು ಛೀ ಥೂ ಅಂತಾ ನಿಮ್ಮನ್ನು ಉಗಿಯುತ್ತಿದ್ದಾರೆ. ಮೊದಲು ನಿಮ್ಮ ಮುಖ ಒರೆಸಿಕೊಳ್ಳಿ. ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಸವಾಲೆಸೆದರು.

ಇದನ್ನೂ ಓದಿ: Breaking: ಗೃಹಬಳಕೆಯ ಸಿಲಿಂಡರ್‌ ದರ 50 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ, ಮಧ್ಯರಾತ್ರಿಯಿಂದ ಜಾರಿ

ಮೈಸೂರಿನ ಕ್ಯಾತಮಾರನಹಳ್ಳಿ ಯ ವಿವಾದಿತ ಜಾಗದಲ್ಲಿ ಅರೇಬಿಕ್ ಶಾಲೆ ತೆರೆಯುವ ಡಿಸಿ ಆದೇಶ ವಿಚಾರದ ಬಗ್ಗೆ ಮಾತನಾಡಿ, ಪೊಲೀಸ್ ಆಯುಕ್ತರು ಕೋಮು ಸಂಘರ್ಷ ಆಗುತ್ತೆ ಅಂತಾ ವರದಿ ಕೊಟ್ಟ ಮೇಲೆ ಡಿಸಿ ಹೇಗೆ ಆದೇಶ ಮಾಡಿದರು? ಮದರಾಸದಲ್ಲಿ ಏನೂ ಗಣಿತ, ವಿಜ್ಞಾನ ಕಲಿಸುತ್ತಾರಾ? ಕಲ್ಲು ಹೊಡೆಯುವುದು ಕಲಿಸುತ್ತಾರೆ. ಅಲ್ಲಿ 5 ಮುಸ್ಲಿಂ ಮನೆಗಳಿಗೆ ಅದಕ್ಕೆ ಒಂದು ಮದರಾಸ ಬೇಕಾ? ಜಿಲ್ಲಾಧಿಕಾರಿ ಯಾರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೈಸೂರಿನ ಶಾಂತಿ ಸುವ್ಯವಸ್ಥೆ ಡಿಸಿಗೆ ಬೇಡ್ವಾ? ಸಿದ್ದರಾಮಯ್ಯ ಹೇಳಿದಂತೆ ಡಿಸಿ ನಡೆದು ಕೊಂಡಿದ್ದಾರೆ. ಕ್ಯಾತಮಾರನಹಳ್ಳಿ ಯಲ್ಲಿ ಏನಾದರೂ ಗಲಾಟೆ ನಡೆದರೆ ಅದಕ್ಕೆ ಡಿಸಿ ಹೊಣೆ ಆಗುತ್ತಾರೆ. ಡಿಸಿ ಮಾಡಿರೋದು ಅಕ್ಷಮ್ಯ ಕೆಲಸ. ಸಿದ್ದರಾಮಯ್ಯ ಜಮೀರ್ ಅಹಮದ್ ಖಾನ್ ಬರೆದ ಕೊಟ್ಟ ಆದೇಶಕ್ಕೆ ಡಿಸಿ ಸಹಿ ಹಾಕಿದ್ದಾರೆ ಅಷ್ಟೆ. ನ್ಯಾಯಾಲಯಕ್ಕೆ ವಾಸ್ತವ ತಿಳಿಸಿ, ಜಿಲ್ಲಾಧಿಕಾರಿ ತಮ್ಮ ಆದೇಶ ವಾಪಾಸ್ ಪಡೆಯಲಿ ಎಂದು ಆಗ್ರಹಿಸಿದರು.

ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ದೂರಿನ ಆಧಾರದಲ್ಲಿ ಶಾಸಕರಾದ ಪೊನ್ನಣ್ಣ, ಮಂಥರಗೌಡ ಮೇಲೆ ಎಫ್ ಐ ಆರ್ ಆಗಬೇಕಿತ್ತು. ಹೈಕೋರ್ಟ್ ನಲ್ಲಿ ಇಂದು ರಿಟ್ ಪಿಟೀಷಿಯನ್ ಹಾಕಲಿದ್ದೇವೆ. ಪೊನ್ನಣ್ಣ, ಮಂಥರಗೌಡ ಹೆಸರು ಎಫ್ ಐ ಅರ್ ಸೇರಿಸಲು ಹೈಕೋರ್ಟ್ ನಲ್ಲಿ ಅರ್ಜಿ ಹಾಕುತ್ತಿದ್ದೇವೆ. ಇವತ್ತು ಮಧ್ಯಾಹ್ನ ಮಡಿಕೇರಿಗೆ ಹೋಗುತ್ತೇನೆ. ಅದು ಯಾರು ಯಾರು ವೀರಾಧಿ ವೀರರು ನನ್ನ ವಿರುದ್ದ ಬರುತ್ತಾರಾ ನೋಡ್ತಿನಿ. ಪೊನ್ನಣ್ಣ ನನ್ನ ವಿರುದ್ದ ಮಾತನಾಡಿರುವುದಕ್ಕೆ ಮಡಿಕೇರಿಯಲ್ಲೆ ಉತ್ತರ ಕೊಡ್ತಿನಿ. ವಿನಯ್ ಸೋಮಯ್ಯನನ್ನು ಕೊಂದಿದ್ದು ಪೊನ್ನಣ್ಣ. ಕೊಲೆಗಡುಕ ಪೊನ್ನಣ್ಣ ಬಾಯಿಯಲ್ಲಿ ಸಾವಿನ ರಾಜಕಾರಣದ ಮಾತು ಬರುತ್ತಿದೆ. ಅದಕ್ಕೆ ಮಡಿಕೇರಿಯಲ್ಲೆ ಉತ್ತರ ಕೊಡ್ತಿನಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ: ಮಹಿಳೆಯರ ಆತಂಕಕ್ಕೆ ಕಾರಣವಾದ ಮೆಸೇಜ್; LPG ಸಿಲಿಂಡರ್ ಸಿಗಲ್ವಾ?