ವಾಷಿಂಗ್ಟನ್(ಜ.11):  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವೀಟರ್‌ ಖಾತೆಯನ್ನು ರದ್ದು ಮಾಡಿದ್ದು ವಿಶ್ವದೆಲ್ಲೆಡೆ ಚರ್ಚೆ ಆಗುತ್ತಿದೆ. ಕುತೂಹಲಕ ಸಂಗತಿಯೆಂದರೆ ಟ್ಟಿಟರ್‌ ಸಂಸ್ಥೆ ಟ್ರಂಪ್‌ ಅವರ ಖಾತೆಯನ್ನು ರದ್ದು ಮಾಡುವ ನಿರ್ಧಾರವನ್ನ ಪ್ರಕಟಿಸಿದ್ದು ಭಾರತೀಯ ಮೂಲದ ವಿಜಯಾ ಗಡ್ಡೆ.

ಟ್ವೀಟರ್‌ನ ಕಾನೂನು, ಯೋಜನೆಗಳು ಮತ್ತು ಸುರಕ್ಷತೆ ವಿಷಯಗಳ ಮುಖ್ಯಸ್ಥೆ ಆಗಿರುವ ವಿಜಯಾ ಗಡ್ಡೆ, ಜ.9ರಂದು ಟ್ವೀಟ್‌ ಮಾಡಿ, ‘ಸಂಸತ್ತಿನ ಹಿಂಸಾಚಾರ ಮತ್ತಷ್ಟುಬಿಗಡಾಯಿಸುವ ಅಪಾಯದ ಹಿನ್ನೆಲ್ಲೆಯಲ್ಲಿ ಟ್ರಂಪ್‌ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗುತ್ತಿದೆ. ನಮ್ಮ ನಿಯಮಾವಳಿಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೀಡಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದರು.

ಹೈದರಾಬಾದ್‌ನಲ್ಲಿ ಜನಿಸಿದ ವಿಜಯಾ ಗಡ್ಡೆ ಕುಟುಂಬ ಟೆಕ್ಸಾಸ್‌ಗೆ ವಲಸೆ ಹೋಗಿ ಅಲ್ಲೇ ನೆಲೆಸಿದೆ. ದಶಕಗಳ ಕಾಲ ಕಾನೂನು ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಇರುವ ವಿಜಯಾ 2011ರಲ್ಲಿ ಟ್ವೀಟರ್‌ಗೆ ಸೇರಿದ್ದರು.