ಹಮ್ ಅಲ್‌ರೆಡಿ ಚಾಂದ್ ಪೇ ಹೈ: ತನ್ನ ದೇಶವ ಅಣಕಿಸುತ್ತ ಎಲ್ಲರ ನಕ್ಕು ನಗಿಸಿದ ಪಾಕಿಸ್ತಾನಿ ಯುವಕ
ಭಾರತದ ಸಾಧನೆಯ ಜೊತೆ ತನ್ನ ದೇಶವನ್ನು ಅಣಕಿಸುತ್ತಲೇ ಪಾಕಿಸ್ತಾನಿ ಯುವಕನೋರ್ವ ಆಡಿದ ಮಾತು ಇಂಟರ್‌ನೆಟ್‌ನಲ್ಲಿ ನಗು ಉಕ್ಕಿಸುತ್ತಿದ್ದು, ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.

ಕರಾಚಿ: ಭಾರತ ಚಂದ್ರನ ದಕ್ಷಿಣ ಧ್ರುವ ಮೇಲೆ ಕಾಲಿರಿಸಿ ಐತಿಹಾಸಿಕ ದಾಖಲೆ ಬರೆದಿರುವುದು ಈಗ ಇತಿಹಾಸ, ಭಾರತದ ಈ ಸಾಧನೆಗೆ ಪ್ರಪಂಚದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ನೆರೆಯ ರಾಷ್ಟ್ರ ಪಾಕಿಸ್ತಾನದ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲೂ ಇಸ್ರೋ ಹಾಗೂ ಭಾರತದ ಸಾಧನೆಯ ಬಗ್ಗೆ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಭಾರತದ ಸಾಧನೆಯ ಜೊತೆ ತನ್ನ ದೇಶವನ್ನು ಅಣಕಿಸುತ್ತಲೇ ಪಾಕಿಸ್ತಾನಿ ಯುವಕನೋರ್ವ ಆಡಿದ ಮಾತು ಇಂಟರ್‌ನೆಟ್‌ನಲ್ಲಿ ನಗು ಉಕ್ಕಿಸುತ್ತಿದ್ದು, ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.
ವೀಡಿಯೋದಲ್ಲೇನಿದೆ?
@Joydas ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು ಮೂಲತಃ ಪಾಕಿಸ್ತಾನಿ ಯೂಟ್ಯೂಬರ್ (Pakistan Youtuber) ಶೋಯೆಬ್ ಚೌಧರಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಯೂಟ್ಯೂಬರ್ ಯುವಕನ ಬಳಿ ಭಾರತದ ಚಂದ್ರಯಾನ-3 (Chandryaan 3)ಯಶಸ್ವಿಯಾದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಆತ ನೀಡಿದ ಉತ್ತರ ಮಾತ್ರ ಪಾಕಿಸ್ತಾನ ಜನ ಎಂಥ ಸಂದರ್ಭದಲ್ಲೂ ನಗೆಯುಕ್ಕಿಸುತ್ತಾರೆ ಎಂಬುದನ್ನು ಸಾಬೀತು ಪಡಿಸಿದೆ.
ಆತ ಹೇಳಿದ್ದೇನು?
ಅವರು ದುಡ್ಡು ವೆಚ್ಚ ಮಾಡಿ ಚಂದ್ರಯಾನ ಮಾಡುತ್ತಿದ್ದಾರೆ. ಆದರೆ ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ ನಿಮಗೆ ಈ ವಿಚಾರ ಗೊತ್ತಿಲ್ವಾ ಎಂದು ಪಾಕಿಸ್ತಾನದ ಯುವಕ ಯೂಟ್ಯೂಬರ್‌ನನ್ನೇ (Youtuber) ಮರು ಪ್ರಶ್ನಿಸಿದ್ದಾನೆ. ಈತನ ಮಾತಿಗೆ ಯೂಟ್ಯೂಬರ್ ಕುತೂಹಲದಿಂದ ಅದು ಹೇಗೆ ಎಂದು ಕೇಳಿದ್ದಾರೆ. ಆಗ ಆತ ಚಂದ್ರನ ಮೇಲೆ ನೀರಿದೆಯೇ ಎಂದು ಕೇಳಿದ್ದಾನೆ. ಯೂಟ್ಯೂಬರ್ ಇಲ್ಲ ಎನ್ನುತ್ತಾನೆ. ಹಾಗೆಯೇ ನೋಡಿ ಇಲ್ಲೂ ನೀರಿಲ್ಲ, ಅಲ್ಲಿ ಗ್ಯಾಸ್ ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ ಇಲ್ವಲ್ಲಾ ಎಂದು ಯೂಟ್ಯೂಬರ್ ಹೇಳುತ್ತಾನೆ. ಇಲ್ಲೂ ಇಲ್ಲ ನೋಡಿ ಅಂತಾನೆ ಯುವಕ, ಅಲ್ಲಿ ವಿದ್ಯುತ್ (Power) ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ. ಇಲ್ಲ ಎಂದ ಯುಟ್ಯೂಬರ್‌ಗೆ ನೋಡಿ ಇಲ್ಲಿ ಕೂಡ ಇಲ್ಲ ಎಂದು ಯುವಕ ಹಾಸ್ಯಮಯವಾಗಿ ಉತ್ತರಿಸುತ್ತ ಪಾಕಿಸ್ತಾನವನ್ನು ಚಂದ್ರನಿಗೆ ಹೋಲಿಸಿದ್ದಾನೆ ಈ ಯುವಕ. ಯುವಕನ ಈ ಹಾಸ್ಯಮಯ ಮಾತು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಪಾಕಿಸ್ತಾನ ಹಾಗೂ ಚಂದ್ರ ಎರಡೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ ಎಂಬುದರ ಮೂಲಕ ಪಾಕಿಸ್ತಾನದ ವಾಸ್ತವತೆಯನ್ನು ಹಾಸಯದ ಮೂಲಕ ತೋರಿಸಿದ್ದಾನೆ ಈ ಯುವಕ. ತನ್ನ ಚಂದ್ರಯಾನ3 ಮಿಷನ್ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಮೊದಲ ದೇಶವಾಗಿ ಭಾರತ ನಿನ್ನೆ ಐತಿಹಾಸಿಕ ದಾಖಲೆ ಬರೆದಿದೆ. ನೆರೆಯ ಪಾಕಿಸ್ತಾನದ ಜನರು ಕೂಡ ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಪಾಕಿಸ್ತಾನದ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಮಾಜಿ ಸಚಿವ ಫಹಾದ್ ಚೌಧರಿ ನಿನ್ನೆ ಪಾಕಿಸ್ತಾನ ಸರ್ಕಾರಕ್ಕೆ ಭಾರತದ ಚಂದ್ರಯಾನ 3 ಕಾರ್ಯಕ್ರಮವನ್ನು ನ್ಯಾಷನಲ್ ಚಾನೆಲ್‌ನಲ್ಲಿ (National Channel) ನೇರ ಪ್ರಸಾರ ಮಾಡುವಂತೆ ಮನವಿ ಮಾಡಿದ್ದರು. ಇದು ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಸೃಷ್ಟಿಸಿತ್ತು. ಹೀಗಾಗಿ ಅಲ್ಲಿನ ಕೆಲ ಯೂಟ್ಯೂಬರ್‌ಗಳು ಬೀದಿಗಿಳಿದು ಜನರ ಅಭಿಪ್ರಾಯ ಕೇಳಲು ಶುರು ಮಾಡಿದ್ದರು. ಈ ವೇಳೆ ಕೆಲವರು ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ನಗೆಯುಕ್ಕಿಸಿವೆ.
ಪಾಕಿಸ್ತಾನ ಹಾಗೂ ಚಂದ್ರನಲ್ಲಿ ಮೂಲಭೂತ ಸೌಕರ್ಯವಿಲ್ಲ, ಹೀಗಾಗಿ ಪಾಕಿಸ್ತಾನ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂದು ಅಲ್ಲಿನ ಜನ ವಿಬಂಡನೆ ಮಾಡಿದ್ದಾರೆ. ವೀಡಿಯೋ ನೋಡಿದ ಅನೇಕರು ಪಾಕಿಸ್ತಾನಿಯರು ಕಷ್ಟದ ಸಮಯದಲ್ಲೂ ಹಾಸ್ಯ ಮಾಡುವುದನ್ನು ಮಾತ್ರ ಮರೆತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪಾಕಿಸ್ತಾನಿ ಹುಡುಗ ಸ್ಟ್ಯಾಂಡ್‌ಪ್ ಕಾಮಿಡಿಯನ್ ಆಗಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.