Asianet Suvarna News Asianet Suvarna News

ಇರಾನ್-ಇಸ್ರೇಲ್ ಕದನ ತೀವ್ರತೆಯ ನಡುವೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆಯಲ್ಲಿ ಭಾರತ

ಭಾರತದ ವಾಣಿಜ್ಯ ಸಚಿವಾಲಯ ಇಸ್ರೇಲ್ - ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ತಕ್ಷಣವೇ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧಿರಿಸಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

India is Forced to take Tough Decision Amid Iran Israel War grg
Author
First Published Apr 20, 2024, 10:15 AM IST

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬೆಂಗಳೂರು(ಏ.20):  ಭಾರತ ಶುಕ್ರವಾರ, ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡುತ್ತಿರುವಂತೆಯೇ, ನವದೆಹಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಕದನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ತಲೆದೋರುತ್ತಿರುವ ಪರಿಸ್ಥಿತಿ ಜಗತ್ತಿನ ಇಂಧನ, ಭದ್ರತೆ, ಮತ್ತು ವ್ಯಾಪಾರಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದರ ಗಂಭೀರ ಪರಿಣಾಮ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಭಾರತದ ಮೇಲೂ ಬೀರಬಹುದು.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಉಪಾಧ್ಯಕ್ಷರಾದ ಹರ್ಷ್.ವಿ. ಪಂತ್ ಅವರು ಈ ಕುರಿತು ಮಾತನಾಡುತ್ತಾ, ಯುದ್ಧದ ಪರಿಸ್ಥಿತಿ ಹೇಗೆ ಬೆಳವಣಿಗೆ ಹೊಂದುತ್ತದೆ ಎನ್ನುವುದರ ಆಧಾರದಲ್ಲಿ, ಭಾರತದ ಮೇಲೆ ಪರಿಣಾಮಗಳು ಉಂಟಾಗುತ್ತವೆ ಎಂದಿದ್ದು, ಭಾರತ ಒಂದಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಾದೇಶಿಕ ಸ್ಥಿರತೆ ಮತ್ತು ಜನಾಭಿಪ್ರಾಯದ ನಡುವಿನ ಕಾರ್ಯತಂತ್ರದ ಕುಣಿಕೆಯಲ್ಲಿ ಪಾಕಿಸ್ತಾನ: ಗಿರೀಶ್ ಲಿಂಗಣ್ಣ

ಹರ್ಷ್.ವಿ. ಪಂತ್ ಅವರು ವ್ಯಾಪಾರ ಮತ್ತು ಇಂಧನ ಭದ್ರತೆ ಅತ್ಯಂತ ಮುಖ್ಯ ಕಳವಳದ ಅಂಶಗಳಾಗಿವೆ ಎಂದಿದ್ದಾರೆ. ಒಂದು ವೇಳೆ ಯುದ್ಧದ ಪರಿಸ್ಥಿತಿ ಏನಾದರೂ ತೀವ್ರಗೊಂಡರೆ, ಅದು ಭಾರತೀಯರ ಕ್ಷೇಮ ಮತ್ತು ಆರ್ಥಿಕ ಸ್ಥಿರತೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಟೆಹರಾನ್ ಏಪ್ರಿಲ್ 12ರಂದು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಇಸ್ರೇಲ್ ಶುಕ್ರವಾರ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕಾದ ಅಧಿಕಾರಿಗಳು ವರದಿ ಮಾಡಿದ್ದಾರೆ. ಸಿರಿಯಾದಲ್ಲಿನ ಇರಾನ್ ರಾಯಭಾರ ಸಂಕೀರ್ಣದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಡ್ರೋನ್ ದಾಳಿ ನಡೆಸಿತ್ತು.

ಡ್ರೋನ್ ದಾಳಿ ನಡೆದ ತಕ್ಷಣವೇ ಭಾರತ ಶಾಂತಿ ಕಾಪಾಡಿಕೊಳ್ಳಲು ಆಗ್ರಹಿಸಿದ್ದು, ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಇರಾನ್ ಮತ್ತು ಇಸ್ರೇಲ್ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿರುವುದು ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಎಷ್ಟರಮಟ್ಟಿನ ಕಳವಳ ಹೊಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಏಪ್ರಿಲ್ 15, ಸೋಮವಾರದಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಜೈಶಂಕರ್ ಅವರು ಭಾರತ ಸರ್ಕಾರ 'ಅತ್ಯಂತ ಸೂಕ್ಷ್ಮವಾದ ಪ್ರದೇಶದ' ಕುರಿತು ಕಳವಳ ಹೊಂದಿದೆ ಎಂದಿದ್ದು, ಶಾಂತಿ ಸ್ಥಾಪನೆಗಾಗಿ ಕರೆ ನೀಡಿದ್ದಾರೆ. "ಸಂಪೂರ್ಣ ಜಗತ್ತಿಗಾಗಿ, ಅದರಲ್ಲೂ ನಮ್ಮ ಭಾರತಕ್ಕಾಗಿ, ನಾವು ಈ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

ಭಾರತ ಜಾಗತಿಕವಾಗಿ ಮೂರನೇ ಅತ್ಯಧಿಕ ತೈಲ ಬಳಕೆದಾರ ರಾಷ್ಟ್ರ

140 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತ, ಜಾಗತಿಕವಾಗಿ ಮೂರನೇ ಅತ್ಯಧಿಕ ತೈಲ ಬಳಕೆದಾರ ರಾಷ್ಟ್ರವಾಗಿದೆ. ಭಾರತ ತನ್ನ ದೇಶೀಯ ಬಳಕೆಗೆ ಅವಶ್ಯಕವಾದ ಇಂಧನದ 80%ಕ್ಕೂ ಹೆಚ್ಚು ತೈಲವನ್ನು ಮಧ್ಯ ಪೂರ್ವ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಕಾರ್ಯತಂತ್ರದ ಉದ್ದೇಶದ ತೈಲ ಸಂಗ್ರಹ ಕೇವಲ ಒಂದರಿಂದ ಮೂರು ತಿಂಗಳ ಮಟ್ಟಿಗೆ ಸಾಕಾಗುವಷ್ಟಿದ್ದು, ಭಾರತದ ಇಂಧನ ಆಮದು ಅತ್ಯಂತ ಮುಖ್ಯವೂ, ತುರ್ತಿನದೂ ಆಗಿದೆ.

ಭಾರತ ತನ್ನ ಶಕ್ತಿ ಸಂಪನ್ಮೂಲಗಳ ಪೂರೈಕೆಗಾಗಿ, ಅದರಲ್ಲೂ ವಿಶೇಷವಾಗಿ ತೈಲ ಮತ್ತು ನೈಸರ್ಗಿಕ ಅನಿಲಗಳಿಗಾಗಿ ಮಧ್ಯ ಪೂರ್ವದ ಮೇಲೆ ಅಪಾರ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಸಂಪನ್ಮೂಲಗಳು ಭಾರತದ ವಾಹನಗಳು ಚಲಿಸಲು, ವಿದ್ಯುತ್ ಉತ್ಪಾದಿಸಲು, ಮತ್ತು ವಿವಿಧ ಉದ್ಯಮಗಳಿಗೆ ಇಂಧನ ಒದಗಿಸಲು ಅತ್ಯವಶ್ಯಕವಾಗಿವೆ. ಮಧ್ಯ ಪೂರ್ವ ಪ್ರದೇಶ ಅಪಾರ ಪ್ರಮಾಣದ ಇಂಧನ ಸಂಗ್ರಹ ಹೊಂದಿರುವುದರಿಂದ, ಪ್ರಮುಖ ಇಂಧನ ಪೂರೈಕೆದಾರನಾಗಿದೆ. ಆದ್ದರಿಂದ ತನ್ನ ಇಂಧನ ಭದ್ರತೆಯನ್ನು ಖಾತ್ರಿಪಡಿಸಲು ಭಾರತ ಮಧ್ಯ ಪೂರ್ವ ಪ್ರದೇಶದ ದೇಶಗಳೊಡನೆ ಉತ್ತಮ ಸಂಬಂಧ ಹೊಂದುವುದು ಅನಿವಾರ್ಯವಾಗಿದೆ.

ನೈಸರ್ಗಿಕ ಅನಿಲ ಒಂದು ರೀತಿಯ ಪಳೆಯುಳಿಕೆ ಇಂಧನವಾಗಿದ್ದು, ಮೂಲತಃ ಮಿಥೇನ್ ಅನ್ನು ಮುಖ್ಯ ಘಟಕವಾಗಿ ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಭೂಮಿಯಾಳದಲ್ಲಿ ಲಭಿಸುವ ಇಂಧನವಾಗಿದ್ದು, ಬಿಸಿ ಮಾಡಲು, ಅಡುಗೆ ಮಾಡಲು, ವಿದ್ಯುತ್ ಶಕ್ತಿ ಉತ್ಪಾದಿಸಲು ಬಳಕೆಯಾಗುತ್ತದೆ. ಇದನ್ನು ವಾಹನಗಳಿಗೆ ಇಂಧನವಾಗಿಯೂ, ಪ್ಲಾಸ್ಟಿಕ್ ಮತ್ತು ಇತರ ವಾಣಿಜ್ಯಿಕವಾಗಿ ಮುಖ್ಯವಾದ ರಾಸಾಯನಿಕಗಳ ಉತ್ಪಾದನೆಯಲ್ಲಿ ಕಚ್ಚಾ ವಸ್ತುವಾಗಿಯೂ ಬಳಸಲಾಗುತ್ತದೆ. ಇತರ ಜೈವಿಕ ಇಂಧನಗಳಿಗೆ ಹೋಲಿಸಿದರೆ, ನೈಸರ್ಗಿಕ ಅನಿಲ ತನ್ನ ದಕ್ಷತೆ ಮತ್ತು ಶುದ್ಧ ಉರಿಯುವಿಕೆಯಿಂದಾಗಿ ಹೆಚ್ಚಿನ ಮೌಲ್ಯ ಹೊಂದಿದೆ. ನೈಸರ್ಗಿಕ ಅನಿಲ ಕಡಿಮೆ ಮಾಲಿನ್ಯಕಾರಕಗಳು ಮತ್ತು ಹಸಿರುಮನೆ ಅನಿಲಗಳನ್ನು ಹೊರಸೂಸುತ್ತದೆ.

ಭಾರತದ ವಾಣಿಜ್ಯ ಸಚಿವಾಲಯ ಇಸ್ರೇಲ್ - ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ತಕ್ಷಣವೇ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧಿರಿಸಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಭಾರತದ ಹಿತಾಸಕ್ತಿಗೂ ತೊಂದರೆ ಉಂಟಾಗುವ ಸಾಧ್ಯತೆ 

ಒಂದು ವೇಳೆ ಈ ಉದ್ವಿಗ್ನ ಪರಿಸ್ಥಿತಿ ಏನಾದರೂ ಇನ್ನಷ್ಟು ಉಲ್ಬಣಗೊಂಡರೆ, ಅದರಿಂದ ಕೆಂಪು ಸಮುದ್ರ ಪ್ರದೇಶದಲ್ಲೂ ಅಸ್ಥಿರತೆ ತಲೆದೋರಿ, ಭಾರತದ ಹಿತಾಸಕ್ತಿಗಳಿಗೂ ತೊಂದರೆ ಉಂಟಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಪ್ರಿಲ್ 13ರಂದು ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಭಾರತೀಯ ನಾವಿಕರಿದ್ದ ಸಾಗಾಣಿಕಾ ಹಡಗನ್ನು ಹೊರ್ಮುಸ್ ಜಲಸಂಧಿಯ ಬಳಿ ಸೆರೆಹಿಡಿದಿದ್ದು, ಈ ಯುದ್ಧ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳಿಗೆ ಉದಾಹರಣೆಯಾಗಿದೆ.

ಇರಾನಿಯನ್ ಪಡೆಗಳು ಆ್ಯನ್ ಟೆಸ್ಸಾ ಜೋಸೆಫ್ ಎಂಬ ಮಹಿಳಾ ಸಿಬ್ಬಂದಿಯೊಬ್ಬರನ್ನು ಬಿಡುಗಡೆಗೊಳಿಸಿದ್ದು, ಆಕೆ ಗುರುವಾರ ಮನೆಗೆ ಮರಳಿದ್ದಾರೆ. ಹಡಗಿನ ಇತರ 16 ಮಂದಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ.

ಇಸ್ರೇಲ್‌ನಲ್ಲಿ ಬಹುತೇಕ 1 ಲಕ್ಷ ಭಾರತೀಯರು ವಾಸವಾಗಿದ್ದು, ಇರಾನ್‌ನಲ್ಲಿ ಅಂದಾಜು 4,000 ಭಾರತೀಯ ಪ್ರಜೆಗಳಿದ್ದಾರೆ. ಭಾರತೀಯ ನಿರ್ಮಾಣ ಕಾರ್ಮಿಕರು ಇಸ್ರೇಲ್‌ಗೆ ತೆರಳುವುದು ಸುಲಭವಾಗುವಂತೆ ಕೈಗೊಳ್ಳಲಾದ ಇತ್ತೀಚಿನ ಒಪ್ಪಂದ ಈಗ ಅಸ್ಪಷ್ಟವಾಗಿದೆ. ಭಾರತೀಯ ಕಾರ್ಮಿಕರ ಮೊದಲ ತಂಡ ಎಪ್ರಿಲ್ ತಿಂಗಳ ಆರಂಭದಲ್ಲಿ ಇಸ್ರೇಲ್‌ಗೆ ತೆರಳಿತ್ತು.

ಇಸ್ರೇಲ್-ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳಿಲ್ಲ 

ಪಶ್ಚಿಮ ಏಷ್ಯಾದಲ್ಲಿ ಅಪಾರ ಅನುಭವ ಹೊಂದಿರುವ ತಲ್ಮಿಜ಼್ ಅಹ್ಮದ್ ಎಂಬ ಮಾಜಿ ಭಾರತೀಯ ರಾಜತಾಂತ್ರಿಕರು ಇಂದಿಗೂ ಇಸ್ರೇಲ್ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳಿಲ್ಲ ಎಂದೇ ಅಭಿಪ್ರಾಯ ಪಟ್ಟಿದ್ದಾರೆ.

ಒಂದು ವೇಳೆ ಪೂರ್ಣ ಪ್ರಮಾಣದ‌ ಯುದ್ಧವೇನಾದರೂ ಜರುಗಿದ್ದೇ ಆದರೆ, ಅದರ ಗಂಭೀರ ಪರಿಣಾಮ ಭಾರತದ ಮೇಲಷ್ಟೇ ಅಲ್ಲದೆ, ಸಂಪೂರ್ಣ ಜಗತ್ತಿನ ಮೇಲೆ ಉಂಟಾಗಲಿದೆ ಎಂದು ಈ ಹಿಂದೆ ಸೌದಿ ಅರೇಬಿಯಾ, ಒಮಾನ್ ಮತ್ತು ಯುಎಇಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ತಲ್ಮಿಜ಼್ ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ನಡೆದ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ತಲ್ಮಿಜ಼್ ಅಹ್ಮದ್ ಅವರು ಇಸ್ರೇಲ್‌ನ ಪ್ರತಿಕ್ರಿಯೆ ಕ್ಷಿಪ್ರವೂ, ಪ್ರಬಲವೂ ಆಗಿದ್ದು, ತನ್ನ ಹಿತಾಸಕ್ತಿಗಳು ಮತ್ತು ಸ್ಥಾನಮಾನ ಉಳಿಸಿಕೊಳ್ಳುವ ಗುರಿ ಹೊಂದಿತ್ತು ಎಂದಿದ್ದಾರೆ. ಈ ಕ್ರಮಗಳ ಹೆಚ್ಚಿನ ಪರಿಣಾಮ ಇರಾನ್ ಮತ್ತು ಇಸ್ರೇಲ್‌ಗಳನ್ನು ಹೊರತುಪಡಿಸಿ, ಬೇರೆ‌ ದೇಶಗಳ ಮೇಲೆ ಬೀರದು ಎಂದು ಅವರು ಹೇಳಿದ್ದಾರೆ. ಈ ಯುದ್ಧವೇನಾದರೂ ಸಂಪೂರ್ಣ ಮಧ್ಯಪ್ರಾಚ್ಯಕ್ಕೆ ವ್ಯಾಪಿಸಬಹುದೇ ಎನ್ನುವುದು ಭಾರತದ ಮುಖ್ಯ ಆತಂಕವಾಗಿದೆ. ಆದರೆ, ಈ ಕದನ ಇರಾನ್ ಮತ್ತು ಇಸ್ರೇಲ್‌ಗಳಿಗೆ ಮಾತ್ರವೇ ಸೀಮಿತವಾದರೆ, ಕದನ ಸಣ್ಣ ಪ್ರಮಾಣದ ಕದನವಾಗೇ ಇರಲಿದೆ.

ಮೋದಿ ನಾಯಕತ್ವದಲ್ಲಿ ಭಾರತ ಇಸ್ರೇಲ್ ಬಾಂಧವ್ಯ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತ ಇಸ್ರೇಲ್ ಜೊತೆಗೆ ರಕ್ಷಣೆ, ಕೃಷಿ, ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯತಂತ್ರದ ಬಾಂಧವ್ಯ ಸಾಧಿಸಿದೆ. 2017ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಐತಿಹಾಸಿಕ ಭೇಟಿ ನೀಡಿದರು. ಈ ಭೇಟಿ, ಇಸ್ರೇಲ್‌ಗೆ ಭಾರತೀಯ ಪ್ರಧಾನಿಯೊಬ್ಬರ ಪ್ರಥಮ ಭೇಟಿಯಾಗಿತ್ತು. ಮೋದಿಯವರ ಭೇಟಿ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರದಲ್ಲಿ ಭಾರೀ ಹೆಚ್ಚಳ ಉಂಟುಮಾಡಲು ವೇದಿಕೆ ಸಿದ್ಧಗೊಳಿಸಿತ್ತು. 2018-19ರಲ್ಲಿ 5.56 ಬಿಲಿಯನ್ ಡಾಲರ್ ಇದ್ದ ದ್ವಿಪಕ್ಷೀಯ ವ್ಯಾಪಾರ, 2022-23ರ ವೇಳೆಗೆ 10.7 ಬಿಲಿಯನ್ ಡಾಲರ್ ತಲುಪಿತ್ತು.

ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್‌ನ ಹಿರಿಯ ಉಪಾಧ್ಯಕ್ಷರು ಮತ್ತು ಮಿಡಲ್ ಈಸ್ಟ್ ಪ್ರೋಗ್ರಾಮ್ ನಿರ್ದೇಶಕರಾದ ಜಾನ್ ಆಲ್ಟರ್‌ಮ್ಯಾನ್ ಅವರು ಕಳೆದ ದಶಕದಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾಪಾರ ಬಹಳಷ್ಟು ಹೆಚ್ಚಳ ಕಂಡಿದೆ ಎಂದು ವಿವರಿಸಿದ್ದಾರೆ. ಇರಾನ್ ಭಾರತಕ್ಕೆ ಪ್ರಮುಖ ಕಚ್ಚಾ ತೈಲ ಪೂರೈಕೆದಾರನಾಗಿದ್ದ ಅವಧಿಯಲ್ಲಿ ಇದ್ದುದಕ್ಕಿಂತ ಈಗ ಇರಾನ್ ಜೊತೆಗಿನ ಸಂಬಂಧ ಕಡಿಮೆ ಕಾರ್ಯತಂತ್ರದ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Iran Israel Conflict: ಇಸ್ರೇಲ್ ಮೇಲೆ ಇರಾನ್ ದಾಳಿಯ ಪರಿಣಾಮಗಳು: ಗಿರೀಶ್ ಲಿಂಗಣ್ಣ

ಮಧ್ಯ ಪೂರ್ವದ ವಿವಿಧ ದೇಶಗಳಲ್ಲಿ 90 ಲಕ್ಷಕ್ಕೂ ಹೆಚ್ಚಿನ ಭಾರತೀಯರು ವಾಸವಾಗಿದ್ದಾರೆ. ಭಾರತ ಇಸ್ರೇಲ್ ಮತ್ತು ಇರಾನ್ ಜೊತೆಗಿನ ತನ್ನ ಸಂಬಂಧದಲ್ಲಿ ಜಾಗರೂಕವಾಗಿ ಸಮತೋಲನ ಸಾಧಿಸಿದೆ. ಹಲವು ವರ್ಷಗಳ ಕಾಲ ಇವೆರಡರ ಜೊತೆ ಸಂಬಂಧ ಹೊಂದಿದ್ದರೂ, ತಾನು ಯಾವುದಾದರೂ ಒಂದು ರಾಷ್ಟ್ರದ ಪರ ಎಂಬ ಧೋರಣೆಯನ್ನು ಭಾರತ ಅನುಸರಿಸಿಲ್ಲ.

ಆಲ್ಟರ್‌ಮ್ಯಾನ್ ಅವರ ಪ್ರಕಾರ, ಮಧ್ಯ ಪೂರ್ವ ಪ್ರದೇಶದಲ್ಲಿ ಸಂಭವಿಸುವ ಯಾವುದೇ ಪ್ರಮುಖ ಯುದ್ಧ ಅಲ್ಲಿ ಜೀವಿಸುತ್ತಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಗೆ ಸವಾಲಾಗಿ, ಭಾರತದ ವ್ಯಾಪಾರವನ್ನೂ ಹಾಳುಗೆಡವಬಲ್ಲದು.
ಭಾರತ ಪ್ರಸ್ತುತ ತನ್ನ ಜಾಗತಿಕ ಸ್ಥಾನಮಾನದ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಆಲ್ಟರ್‌ಮ್ಯಾನ್ ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖ ಜಾಗತಿಕ ಶಕ್ತಿಗಳು ಸ್ಪರ್ಧೆಯಲ್ಲಿ ತೊಡಗುವುದರಿಂದ, ಭಾರತ ತನ್ನ ಹೊಂದಿಕೊಳ್ಳುವಿಕೆಯನ್ನು ನಿರ್ವಹಿಸುತ್ತಾ, ತನ್ನ ಜಾಗತಿಕ ಸ್ಥಾನವನ್ನು ಉಳಿಸಿಕೊಳ್ಳುವುದು ಹೆಚ್ಚು ಸಂಕೀರ್ಣವಾಗಲಿದೆ.

Follow Us:
Download App:
  • android
  • ios