ಪ್ರಾದೇಶಿಕ ಸ್ಥಿರತೆ ಮತ್ತು ಜನಾಭಿಪ್ರಾಯದ ನಡುವಿನ ಕಾರ್ಯತಂತ್ರದ ಕುಣಿಕೆಯಲ್ಲಿ ಪಾಕಿಸ್ತಾನ: ಗಿರೀಶ್ ಲಿಂಗಣ್ಣ
ಒಂದು ವೇಳೆ ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಯುದ್ಧವೇನಾದರೂ ಸಂಭವಿಸಿದರೆ, ಅದರಿಂದಾಗಿ ಪಾಕಿಸ್ತಾನದ ಮೇಲೆ ತೀವ್ರ ಆರ್ಥಿಕ ಪರಿಣಾಮ ಉಂಟಾಗಲಿದೆ ಎಂದು ಅಧಿಕಾರಿಗಳ ವಲಯವೂ ಒಪ್ಪಿಕೊಂಡಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬೆಂಗಳೂರು(ಏ.17): ಪಾಕಿಸ್ತಾನದ ಇಸ್ಲಾಮಾಬಾದಿನ ದ ಫ್ರೈಡೇ ಟೈಮ್ಸ್ ಪತ್ರಿಕೆ ತನ್ನ ವರದಿಯಲ್ಲಿ ಮಧ್ಯ ಪೂರ್ವ ಪ್ರದೇಶದಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ರಾಜಕೀಯ ಆಯಾಮಗಳ ಕಾರಣದಿಂದ, ಇನ್ನಷ್ಟು ವ್ಯಾಪಕವಾದ ಚಕಮಕಿಗಳು ತಲೆದೋರಲಿವೆ ಎಂದು ಅಭಿಪ್ರಾಯ ಪಟ್ಟಿದೆ. ಪ್ರಸ್ತುತ ಪರಿಸ್ಥಿತಿ, ಪಾಕಿಸ್ತಾನದ ಮಿಲಿಟರಿ ಮತ್ತು ಕಾರ್ಯತಂತ್ರದ ನಿರ್ಣಾಯಕರಿಗೆ ಮುಖ್ಯವಾದ ಪಾಠಗಳನ್ನು ಬೋಧಿಸುತ್ತಿದೆ. ಅದೇನೆಂದರೆ, ರಾಷ್ಟ್ರಗಳು ತಮ್ಮ ಸ್ವಂತ ಭದ್ರತೆಯ ಕುರಿತಂತೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿರುವ ಅಸ್ಥಿರತೆಗಳ ಕಾರಣದಿಂದ, ಯಾವುದೇ ರಾಷ್ಟ್ರವೂ ತನ್ನ ರಕ್ಷಣೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ.
ಇನ್ನೊಂದು ದೇಶದಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿರುವ ಆರಂಭಿಕ ದಾಳಿ ಕೊನೆಯದೂ ಆಗಿರಲಿದೆ ಎಂಬ ಯಾವ ನಂಬಿಕೆಯೂ ಇರಾನ್‌ಗೆ ಇರಲಿಲ್ಲ. ಆದ್ದರಿಂದ, ಇರಾನ್‌ಗೆ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಇಸ್ರೇಲ್ ಇನ್ನು ಮುಂದೆ ಇಂತಹ ದಾಳಿ ನಡೆಸದಂತೆ ತಡೆಯಲು ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುವುದು ಅತ್ಯಂತ ಮುಖ್ಯವಾಗಿತ್ತು. ಬೇರೆ ಯಾವುದೇ ರಾಷ್ಟ್ರ ತನ್ನ ನೆರವಿಗೆ ಬರುವ ಸಾಧ್ಯತೆ ಇಲ್ಲದಿರುವುದರಿಂದ, ಈ ಪರಿಸ್ಥಿತಿಯನ್ನು ತಾನು ಏಕಾಂಗಿಯಾಗಿ ನಿಭಾಯಿಸಬೇಕು ಎನ್ನುವುದು ಇರಾನ್ ಅರಿವಿಗೆ ಬಂದಿತ್ತು.
ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ
ದೇಶಗಳ ಆಕ್ರಮಣಕಾರಿ ನೀತಿ ತಗ್ಗಿಸಬಹುದು
ಶೀತಲ ಸಮರದ ಸಂದರ್ಭದಲ್ಲಿ ಇದ್ದಂತೆ, ಜಾಗತಿಕ ಶಕ್ತಿಗಳು ತಮ್ಮ ಮಿತ್ರ ರಾಷ್ಟ್ರಗಳ ಮೇಲೆ ಆಕ್ರಮಣಗಳಾದಾಗ ನೆರವಿಗೆ ಧಾವಿಸುವ ಕಾಲ ಈಗ ಕಳೆದು ಹೋಗಿದೆ. ಇಸ್ರೇಲ್ ಸ್ಪಷ್ಟವಾಗಿ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದ್ದು, ಅದು ತನ್ನ ಉದ್ದೇಶಗಳ ಕುರಿತಂತೆ ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳನ್ನು ಹೊಂದಿಲ್ಲ ಎನ್ನುವುದನ್ನು ಸಾಬೀತುಪಡಿಸುತ್ತಿದೆ. ಪ್ರಸ್ತುತ ಕಾಲಮಾನದಲ್ಲಿ ಬಲವಾದ ಮಿಲಿಟರಿ ಹೊಂದಿರುವ ದೇಶಗಳು ದುರ್ಬಲ ದೇಶಗಳನ್ನು ಒತ್ತಡ ಹೇರಿ, ಸೋಲೊಪ್ಪುವಂತೆ ಮಾಡಬಹುದು. ಆದ್ದರಿಂದ, ಉದಾರವಾದಿ ಮೌಲ್ಯಗಳು ಶಕ್ತಿಶಾಲಿಯಾದ, ಅತ್ಯುನ್ನತ ಆಯುಧಗಳನ್ನು ಹೊಂದಿರುವ ದೇಶಗಳ ಆಕ್ರಮಣಕಾರಿ ನೀತಿಯನ್ನು ತಗ್ಗಿಸಬಹುದು ಎಂಬ ಆಲೋಚನೆ ಈಗ ಬೆಲೆ ಕಳೆದುಕೊಳ್ಳುತ್ತಿದೆ. ವಾಸ್ತವವಾಗಿ ನೋಡಿದರೆ, ಮಾನವ ಹಕ್ಕುಗಳು, ಶಾಂತಿ, ಮತ್ತು ಅಹಿಂಸೆಯಂತಹ ವಿಚಾರಗಳು ಅಮೆರಿಕಾದ ರಾಜತಾಂತ್ರಿಕ ಪ್ರಯತ್ನಗಳ ಭಾಗವಾಗಿ ಕಾಣುತ್ತಿವೆಯೇ ಹೊರತು, ಅದರ ವಾಸ್ತವ ಆದ್ಯತೆಗಳಂತೆ ಕಾಣುತ್ತಿಲ್ಲ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಚಾರಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನಕ್ಕೂ ಇದೇ ಮಾತು ಅನ್ವಯಿಸುತ್ತದೆ ಎಂದು ಮಾಧ್ಯಮ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಎರಡೂ ದೇಶಗಳು ಸಾಕಷ್ಟು ದೂರದಲ್ಲಿದ್ದು, ಪಾಕಿಸ್ತಾನದ ಪಾಲಿಗೆ ಕಾರ್ಯತಂತ್ರದ ಮಹತ್ವವನ್ನಾಗಲಿ, ಯಾವುದೇ ರೀತಿಯ ಅಪಾಯ ಒಡ್ಡುವ ಸಾಧ್ಯತೆಯನ್ನಾಗಲಿ ಹೊಂದಿಲ್ಲ. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಗಳು ಹೆಚ್ಚುತ್ತಿರುವಂತೆ, ಪಾಕಿಸ್ತಾನ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಕಾಳಜಿ ಹೊಂದಬೇಕು. ಮೊದಲನೆಯದಾಗಿ, ಇರಾನ್ ಆರ್ಥಿಕ ದುರವಸ್ಥೆ ಮತ್ತು ಮಿಲಿಟರಿ ವಿನಾಶದಿಂದ ನರಳುವುದು ಪಾಕಿಸ್ತಾನದ ಹಿತಾಸಕ್ತಿಗಳಿಗೆ ಪೂರಕವಾಗೇನೂ ಇಲ್ಲ. ಒಂದು ವೇಳೆ ಇರಾನ್ ಸರ್ಕಾರ ಮತ್ತು ಸಮಾಜ ಪಾಶ್ಚಾತ್ಯ ರಾಜಕೀಯ ಬಣಗಳು ಮತ್ತು ಅದರ ಇಸ್ರೇಲಿ ಸಹಯೋಗಗಳಿಂದ ನಾಶಗೊಂಡರೆ, ಅದು ಪಾಕಿಸ್ತಾನಕ್ಕೂ ಹಾನಿಕರ ಬೆಳವಣಿಗೆ ಎಂದು ದ ಫ್ರೈಡೇ ಟೈಮ್ಸ್ ವಿವರಿಸಿದೆ. ಆ ರೀತಿ ಏನಾದರೂ ಸಂಭವಿಸಿದರೆ, ಇನ್ನೊಂದು ಸುತ್ತಿನ ನಿರಾಶ್ರಿತರ ಸಮಸ್ಯೆ ಮತ್ತು ನೆರೆಹೊರೆಯಲ್ಲಿನ ಯುದ್ಧ ಪರಿಸ್ಥಿತಿ ಪಾಕಿಸ್ತಾನದ ಆರ್ಥಿಕ ಸಾಮರ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರಬಹುದು. ಒಂದು ವೇಳೆ ಇರಾನ್ ಸರ್ಕಾರವೇನಾದರೂ ಕುಸಿದರೆ, ಅದರ ಪರಿಣಾಮವಾಗಿ ತೈಲ ಬೆಲೆ ಏರಿಕೆ ಕಂಡು, ಪಾಕಿಸ್ತಾನಕ್ಕೂ ಭದ್ರತಾ ಅಪಾಯ ಒಡ್ಡುವ ಸಂಭವವಿದೆ.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಇಸ್ರೇಲ್ ವಿರುದ್ಧ ಇರಾನ್ ದಾಳಿ ನಡೆಸುವ ಕೇವಲ ಮೂರು ದಿನಗಳ ಹಿಂದೆ ಇರಾನ್ ಅಧ್ಯಕ್ಷರೊಡನೆ ದೂರವಾಣಿ ಕರೆ ಮಾಡಿ ಮಾತನಾಡುವ ಅವಶ್ಯಕತೆ ಏನಿತ್ತು ಎಂದು ಮಾಧ್ಯಮ ಸಂಸ್ಥೆ ಪ್ರಶ್ನೆ ಮಾಡಿದೆ. ಈದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ರಾಷ್ಟ್ರಗಳ ನಾಯಕರು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಹಜವಾದರೂ, ಇಬ್ಬರು ನಾಯಕರು ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ದಾಳಿ ನಡೆಸಿದ ಕುರಿತು ಚರ್ಚೆ ನಡೆಸಿದ್ದಾರೆಯೇ ಎಂಬ ಅಭಿಪ್ರಾಯಗಳೂ ಹರಡಿವೆ.
ಪಾಕಿಸ್ತಾನದ ಮಾಹಿತಿ ಸಚಿವಾಲಯದ ಅಧಿಕೃತ ಮಾಧ್ಯಮ ಹೇಳಿಕೆಯ ಪ್ರಕಾರ, ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಡಮಾಸ್ಕಸ್‌ನ ರಾಯಭಾರ ಕಚೇರಿಯ ಮೇಲಿನ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಮತ್ತು ಇರಾನಿನ ನಾಯಕತ್ವಕ್ಕೆ ಸಂತಾಪ ತಿಳಿಸಿದ್ದಾರೆ ಎಂದಿದೆ. ಅಧ್ಯಕ್ಷ ಜರ್ದಾರಿ ಅವರು ರಾಜತಾಂತ್ರಿಕತೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಪತ್ರಿಕಾ ಹೇಳಿಕೆಯಲ್ಲಿ ನೀಡಿರುವ ಮಾಹಿತಿಗಳೂ ಅವರು ತನ್ನ ಹೇಳಿಕೆ ಹೊಂದಿರುವ ಮಹತ್ವವನ್ನು ಮನಗಂಡಿದ್ದಾರೆ ಎಂದು ಸೂಚಿಸುತ್ತದೆ. ಅವರು ಮಕ್ಕಳೂ ಸಹ ಇರಾನಿನ ಸಂಭಾವ್ಯ ಪ್ರತಿದಾಳಿಯ ಕುರಿತು ಚರ್ಚಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪಾಕಿಸ್ತಾನದ ಶಕ್ತಿಶಾಲಿ ಕ್ಷಿಪಣಿಗಳು ಮತ್ತು ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಇಸ್ರೇಲ್ ಹೊಂದಿದ್ದ ಕಳವಳಗಳು ಈಗಾಗಲೇ ದೂರಾಗಿವೆ. ಪಾಕಿಸ್ತಾನ ನಿರಂತರವಾಗಿ ತನ್ನ ಕಾರ್ಯತಂತ್ರದ ಯೋಜನೆಗಳೆಲ್ಲವೂ ಭಾರತ ಕೇಂದ್ರಿತವಾದವು ಎಂದು ಹೇಳುತ್ತಾ ಬಂದಿದ್ದು, ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ರೇಲಿ ರಾಜತಂತ್ರಜ್ಞರೊಡನೆ ಸಮಾಲೋಚನೆ ನಡೆಸಿದೆ. ಈ ಎಲ್ಲ ಪ್ರಯತ್ನಗಳು ಪಾಕಿಸ್ತಾನದ ಆಯುಧ ಯೋಜನೆಗಳ ಕುರಿತಾಗಿ ಇಸ್ರೇಲ್ ಹೊಂದಿದ್ದ ಅನುಮಾನಗಳನ್ನು ದೂರ ಮಾಡಲು ಯಶಸ್ವಿಯಾಗಿವೆ ಎಂದು ಫ್ರೈಡೇ ಟೈಮ್ಸ್ ವರದಿ ಮಾಡಿದೆ. ಈ ಸಂಸ್ಥೆಯ ಪ್ರಕಾರ, ಪಾಕಿಸ್ತಾನದ ಅಧಿಕೃತ ಮಾತುಕತೆಗಳಲ್ಲೂ ತನ್ನ ಕ್ಷಿಪಣಿ ಸಾಮರ್ಥ್ಯಗಳು ಮೂಲತಃ ಭಾರತವನ್ನು ಗುರಿಯಾಗಿಸಿವೆ ಎಂದೇ ಹೇಳಲಾಗಿದೆ. ಇಂತಹ ಮಾತುಕತೆಗಳಲ್ಲಿ ಇಸ್ರೇಲ್ ಹೆಸರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದ್ದು, ಆ ಮೂಲಕ ಇಸ್ರೇಲ್ ಪಾಕಿಸ್ತಾನದ ಅಣ್ವಸ್ತ್ರ ಪ್ರಯೋಗ ವ್ಯಾಪ್ತಿಯ ಕುರಿತು ಆತಂಕ ಹೊಂದುವುದನ್ನು ತಪ್ಪಿಸಲು ಪ್ರಯತ್ನಿಸಲಾಗಿದೆ.
ಒಂದು ವೇಳೆ ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಯುದ್ಧವೇನಾದರೂ ಸಂಭವಿಸಿದರೆ, ಅದರಿಂದಾಗಿ ಪಾಕಿಸ್ತಾನದ ಮೇಲೆ ತೀವ್ರ ಆರ್ಥಿಕ ಪರಿಣಾಮ ಉಂಟಾಗಲಿದೆ ಎಂದು ಅಧಿಕಾರಿಗಳ ವಲಯವೂ ಒಪ್ಪಿಕೊಂಡಿದೆ. ಫ್ರೈಡೇ ಟೈಮ್ಸ್ ಪ್ರಕಾರ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಉಂಟಾದ ತೈಲ ಬೆಲೆ ಏರಿಕೆಯ ಹೊಡೆತದಿಂದ ಪಾಕಿಸ್ತಾನ ಈಗಷ್ಟೇ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಈಗ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆದರೆ, ಅದು ಪಾಕಿಸ್ತಾನಕ್ಕೆ ಅತ್ಯಂತ ಸನಿಹದಲ್ಲಿ ನಡೆಯಲಿದೆ. ಒಂದೊಮ್ಮೆ ಯುದ್ಧ ನಡೆದರೂ, ಅದು ಕೇವಲ ಇರಾನ್ - ಇಸ್ರೇಲ್ ನಡುವಿನ ಘರ್ಷಣೆಯಾಗಿರಲಿದೆಯೇ ಅಥವಾ ಅಮೆರಿಕಾ ಏನಾದರೂ ಸಕ್ರಿಯವಾಗಿ ಇಸ್ರೇಲ್‌ಗೆ ಬೆಂಬಲ ನೀಡಬಹುದೇ ಎಂದು ಆಗಲೇ ಹೇಳಲು ಸಾಧ್ಯವಿಲ್ಲ.
ಅರಬ್ ರಾಷ್ಟ್ರಗಳ ಪ್ರತಿಕ್ರಿಯೆಯೂ ಇಲ್ಲಿ ಒಂದು ಗಮನಾರ್ಹ ಅಂಶವಾಗಿದೆ. ಒಂದು ವೇಳೆ ಇಸ್ರೇಲ್ ಮತ್ತು ಇರಾನ್‌ಗಳು ಯುದ್ಧಕ್ಕಿಳಿದರೆ, ಆಗ ಅವುಗಳ ನೆರೆ ರಾಷ್ಟ್ರಗಳಾದ ಇರಾಕ್, ಜೋರ್ಡಾನ್, ಈಜಿಪ್ಟ್, ಸಿರಿಯಾ ಮತ್ತು ಬಹುಶಃ ಸೌದಿ ಅರೇಬಿಯಾಗಳು ಅನಿವಾರ್ಯವಾಗಿ ಯುದ್ಧ ಪರಿಸ್ಥಿತಿಗೆ ಎಳೆಯಲ್ಪಡಬಹುದು. ಇಸ್ರೇಲ್ ಅಥವಾ ಇರಾನನ್ನು ಗುರಿಯಾಗಿಸಿ ನಡೆಯುವ ಯಾವುದೇ ಉಡಾವಣೆ ಈ ದೇಶಗಳ ಮೇಲೆಯೇ ಹಾದು ಹೋಗಬೇಕಾಗುತ್ತದೆ.
ಮಧ್ಯ ಪೂರ್ವದ ಸಂಘರ್ಷದಲ್ಲಿ ವಾಷಿಂಗ್ಟನ್ ಏನಾದರೂ ಮಿಲಿಟರಿ ರೂಪದಲ್ಲೂ ಪಾಲ್ಗೊಂಡರೆ, ಅದು ಇರಾನಿನ ಸರ್ಕಾರ ಮತ್ತು ಸಮಾಜದ ಪತನಕ್ಕೆ ಹಾದಿಯಾಗಬಹುದು. ಇದರ ಗಂಭೀರ ಪರಿಣಾಮಗಳು ಪಾಕಿಸ್ತಾನದ ಮೇಲೆ ಬೀರಲಿವೆ. ಮೊದಲನೆಯದಾಗಿ, ಆರ್ಥಿಕತೆಯ ಪತನ ಮತ್ತು ಮಿಲಿಟರಿ ಮೂಲಭೂತ ವ್ಯವಸ್ಥೆಗಳ ವಿನಾಶದ ಪರಿಣಾಮವಾಗಿ ಉಂಟಾಗುವ ಪ್ರಕ್ಷುಬ್ಧ ಪರಿಸ್ಥಿತಿ ಇರಾನನ್ನೂ ಮೀರಿ ವ್ಯಾಪಿಸಿ, ವಿಶಾಲ ಪ್ರದೇಶಗಳನ್ನು ಬಾಧಿಸಲಿದೆ. ಗಮನಾರ್ಹ ಅಂಶವೆಂದರೆ, ಇರಾನಿಯನ್ನರು ಪ್ರಬಲವಾಗಿ ದಾಳಿಯನ್ನು ಪ್ರತಿರೋಧಿಸಲಿದ್ದು, ಆ ಮೂಲಕ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳಬಹುದು. ಇನ್ನು ಮುಸ್ಲಿಂ ಸಮುದಾಯದ ಸಾರ್ವಜನಿಕ ಅಭಿಪ್ರಾಯವಂತೂ ಗಾಜಾ ದಾಳಿಯ ಸಂದರ್ಭಕ್ಕಿಂತಲೂ ಹೆಚ್ಚು ತೀವ್ರಗೊಳ್ಳಬಹುದು ಎಂದು ಫ್ರೈಡೇ ಟೈಮ್ಸ್ ವರದಿ ಮಾಡಿದೆ. ಇರಾನ್ ಹೆಚ್ಚಿನ ಜನಸಂಖ್ಯೆ ಹೊಂದಿರುವ, ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಿದ್ದು, ಅಪಾರ ಪ್ರಮಾಣದ ಪ್ರಭಾವ ಹೊಂದಿದೆ. ಹೊರ್ಮುಸ್ ಜಲಸಂಧಿಯ ಮೂಲಕ ಹೆಚ್ಚಿನ ಪ್ರಮಾಣದ ತೈಲ ಸಾಗಾಣಿಕೆ ನಡೆಯುವುದರಿಂದ, ಒಂದು ವೇಳೆ ಯುದ್ಧ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡರೆ ತೈಲ ಬೆಲೆ ಭಾರೀ ಹೆಚ್ಚಳ ಕಾಣಬಹುದು. ಇದರಿಂದಾಗಿ ಪಾಕಿಸ್ತಾನದಲ್ಲಿ ನಿರಾಶ್ರಿತರ ಸಮಸ್ಯೆ ಎದುರಾಗಬಹುದು ಮತ್ತು ಪಾಕಿಸ್ತಾನ - ಇರಾನ್ ಗಡಿಯಲ್ಲಿ ನೆಲೆಸಿರುವ ಬಲೂಚ್ ಉಗ್ರಗಾಮಿ ಪಡೆಗಳಿಗೆ ಅಸ್ಥಿರಗೊಂಡ ಇರಾನ್ ಉತ್ತಮ ತಾಣವಾಗಬಹುದು.
ಪಾಕಿಸ್ತಾನಿ ಸೇನೆ ಇರಾನಿನ ಸೇನಾ ಅಧಿಕಾರಿಗಳು ಮತ್ತು ರಾಜಕೀಯ ಮುಖ್ಯಸ್ಥರೊಡನೆ ಅತ್ಯುತ್ತಮ ಸಂಬಂಧ ಹೊಂದಿದೆ. ಎರಡೂ ದೇಶಗಳ ಸೇನಾಧಿಕಾರಿಗಳ ನಡುವೆ ಆಗಾಗ ನಡೆಯುವ ಭೇಟಿ, ಮಾತುಕತೆ ಇದಕ್ಕೆ ಸಾಕ್ಷಿಯಾಗಿದೆ. ಗಾಜಾದಲ್ಲಿ ಇಸ್ರೇಲ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರೂ, ಪಾಕಿಸ್ತಾನಿ ಮಿಲಿಟರಿ ಮತ್ತು ರಾಜಕೀಯ ವ್ಯವಸ್ಥೆ ಸಾರ್ವಜನಿಕ ಅಭಿಪ್ರಾಯಕ್ಕೆ ಮಣೆ ಹಾಕಲು ಮುಂದಾಗಿರಲಿಲ್ಲ.
ಪಾಕಿಸ್ತಾನಿ ಆಡಳಿತ ಸಾರ್ವಜನಿಕರ ಆಕ್ರೋಶ ಮೂಲೆಗುಂಪು ಮಾಡಿತು
ಪಾಕಿಸ್ತಾನಿ ಆಡಳಿತ ಸಾರ್ವಜನಿಕರ ಆಕ್ರೋಶವನ್ನು ಮೂಲೆಗುಂಪು ಮಾಡಿತು ಎನ್ನಲು ಎರಡು ಸ್ಪಷ್ಟ ನಿದರ್ಶನಗಳು ಲಭಿಸಿವೆ ಎಂದು ಫ್ರೈಡೇ ಟೈಮ್ಸ್ ಹೇಳಿದೆ. ಮೊದಲನೆಯದಾಗಿ, ಸಿಒಎಸ್ ಜನರಲ್ ಆಸಿಮ್ ಮುನೀರ್ ಅವರು ವಾಷಿಂಗ್ಟನ್‌ಗೆ ತೆರಳಿ, ಅಮೆರಿಕಾದ ರಕ್ಷಣಾ ಅಧಿಕಾರಿಗಳೊಡನೆ ಸ್ನೇಹದ ಮಾತುಕತೆ ನಡೆಸಿದ್ದರು. ಈ ಸಮಯದಲ್ಲಿ ಅದೇ ಅಮೆರಿಕನ್ ಅಧಿಕಾರಿಗಳು ಗಾಜಾ ಕಾರ್ಯಾಚರಣೆಗಾಗಿ ಇಸ್ರೇಲ್ ಸೇನೆಗೆ ಅತ್ಯಾಧುನಿಕ ಆಯುಧಗಳನ್ನು ನೀಡಿ, ಗಾಜಾದಲ್ಲಿ ನಾಗರಿಕರ ಸಾವುನೋವುಗಳಿಗೆ ಕಾರಣರಾಗಿದ್ದರು ಎಂದು ಪಾಕಿಸ್ತಾನಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಗಾಜಾದಲ್ಲಿನ ಬೆಳವಣಿಗೆಗಳ ಕುರಿತು ಪಾಕಿಸ್ತಾನಿ ಜನತೆ ಆಕ್ರೋಶದಿಂದ ಕುದಿಯುತ್ತಿದ್ದ ವೇಳೆಯಲ್ಲಿ, ಪಾಕಿಸ್ತಾನಿ ರಾಜಕಾರಣಿಗಳು ಅಮೆರಿಕಾ ಮತ್ತು ಬ್ರಿಟಿಷ್ ರಾಜತಂತ್ರಜ್ಞರೊಡನೆ ಸ್ನೇಹಮಯ ಮಾತುಕತೆಯಲ್ಲಿ ನಿರತರಾಗಿದ್ದರು.
ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ
ಪಾಕಿಸ್ತಾನದ ಆರ್ಥಿಕತೆ ಈಗ ಸಾಕಷ್ಟು ದುರ್ಬಲ
ಪಾಕಿಸ್ತಾನದ ಆರ್ಥಿಕತೆ ಈಗ ಸಾಕಷ್ಟು ದುರ್ಬಲವಾಗಿದ್ದು, ಅದು ಉಕ್ರೇನ್‌ನಂತಹ ದೂರದ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳನ್ನೂ ನಿಭಾಯಿಸಲಾಗದೆ ನಲುಗುತ್ತಿದೆ. ಫ್ರೈಡೇ ಟೈಮ್ಸ್, ಪಾಕಿಸ್ತಾನದ ರಾಜಕಾರಣಿಗಳು ಮತ್ತು ಆರ್ಥಿಕ ತಜ್ಞರು ಪಾಕಿಸ್ತಾನದ ನೆರೆಯಲ್ಲಿ ಯುದ್ಧವಾಗುವ ಸಂದರ್ಭ ಬಂದಾಗಲಾದರೂ ಜಾಗರೂಕರಾಗಬೇಕು ಎಂದು ಆಗ್ರಹಿಸಿದೆ.
ಪಾಕಿಸ್ತಾನಿ ಸೇನಾ ವ್ಯವಸ್ಥೆ ಪಾಕಿಸ್ತಾನದ ಸಾರ್ವಜನಿಕರ ಅಭಿಪ್ರಾಯದ ಕುರಿತು ಚಿಂತೆ ಹೊಂದಿದ್ದು, ಒಂದು ವೇಳೆ ಇರಾನ್ ವಿರುದ್ಧ ಅಮೆರಿಕಾ ಏನಾದರೂ ತೀವ್ರ ಕ್ರಮ ಕೈಗೊಂಡರೆ ಜನತೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಯೋಚಿಸುತ್ತಿದೆ. ಸಾರ್ವಜನಿಕ ಅಭಿಪ್ರಾಯ ಮತ್ತು ಅದರಿಂದ ಉಂಟಾಗುವ ನೈತಿಕ ಒತ್ತಡಗಳು ಪಾಕಿಸ್ತಾನಿ ಸರ್ಕಾರಕ್ಕೆ ಈ ವಿಚಾರದಲ್ಲಿ ಸಂಪೂರ್ಣವಾಗಿ ತಟಸ್ಥವಾಗಿರುವುದನ್ನು ಕಷ್ಟಕರವಾಗಿಸಬಹುದು ಎಂದು ಫ್ರೈಡೇ ಟೈಮ್ಸ್ ಅಭಿಪ್ರಾಯ ಪಟ್ಟಿದೆ. ಕನಿಷ್ಠಪಕ್ಷ, ಪಾಕಿಸ್ತಾನಿ ಅಧಿಕಾರಿಗಳು ಇರಾನ್ ಸರ್ಕಾರ ಮತ್ತು ಸಮಾಜದ ಪತನಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಹಂತದಲ್ಲಾದರೂ ಸ್ಪಷ್ಟ ಸಂವಹನ ನಡೆಸುವ ಅನಿವಾರ್ಯತೆ ಇದೆ. ಒಂದು ವೇಳೆ, ಅಮೆರಿಕಾ ಮತ್ತು ಇಸ್ರೇಲ್ ಮೈತ್ರಿ ಇರಾನನ್ನು ಮಿಲಿಟರಿ ಹಂತದಲ್ಲಿ ನಾಶಪಡಿಸುವ ಉದ್ದೇಶ ಹೊಂದಿದ್ದರೆ, ಅದರ ಗಂಭೀರ ಪರಿಣಾಮಗಳು ಪಾಕಿಸ್ತಾನದ ಮೇಲೂ ಬೀರಲಿವೆ. ಹಾಗೇನಾದರೂ ಆದರೆ, ಪಾಕಿಸ್ತಾನ ತನ್ನ ನೆರೆಯಲ್ಲಿ ಅಸ್ಥಿರ ಅಫ್ಘಾನಿಸ್ತಾನದ ಜೊತೆಗೆ, ಅಸ್ಥಿರ ಇರಾನನ್ನೂ ಹೊಂದುವ ಪರಿಸ್ಥಿತಿ ಎದುರಾಗುತ್ತದೆ. ಇದರ ಪರಿಣಾಮ ಪಾಕಿಸ್ತಾನ ಮತ್ತು ಸಂಪೂರ್ಣ ಏಷ್ಯಾದ ಮೇಲೆ ಹೇಗಿರುತ್ತದೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದು ಎಂದು ಫ್ರೈಡೇ ಟೈಮ್ಸ್ ವಿವರಿಸಿದೆ.