* ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಬೇಡ: ಬೈಡೆನ್‌ ಮನವಿ* ಉಗ್ರವಾದದ ವಿರುದ್ಧ ಕ್ರಮ: ಪಾಕ್‌ಗೆ ಭಾರತ, ಅಮೆರಿಕ ತಾಕೀತು* ಉಭಯ ದೇಶಗಳ ಸಚಿವರ ಸಭೆಯಲ್ಲಿ ಪಾಕ್‌ಗೆ ಸೂಚನೆ*ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವುದು ನಾವಲ್ಲ, ಯುರೋಪ್‌

ವಾಷಿಂಗ್ಟನ್‌ (ಏ. 13) ರಷ್ಯಾದಿಂದ (Russia) ತೈಲ (Petrol) ಖರೀದಿಯನ್ನು ಹೆಚ್ಚಿಸುವುದು ಭಾರತದ ಹಿತಾಸಕ್ತಿಗೆ ಒಳ್ಳೆಯದಲ್ಲ. ರಷ್ಯಾದಿಂದ ಹೆಚ್ಚು ಪ್ರಮಾಣದ ತೈಲ ಖರೀದಿ ಬೇಡ. ಭಾರತದ ಹೆಚ್ಚುವರಿ ಇಂಧನ ಅಗತ್ಯವನ್ನು ಪೂರೈಸಲು ಅಮೆರಿಕ(USA) ಸಿದ್ಧವಾಗಿದೆ ಎಂದು ಜೋ ಬೈಡೆನ್‌ (Joe Biden)ತಿಳಿಸಿದ್ದಾರೆ.

ಉಕ್ರೇನಿನ (Ukraine) ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ಅನೇಕ ಪಾಶ್ಚಿಮಾತ್ಯ ದೇಶಗಳು ತೈಲ ಆಮದನ್ನು ಸ್ಥಗಿತಗೊಳಿಸಿವೆ. ರಷ್ಯಾ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ರಫ್ತು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೈಡೆನ್‌ ಕೋರಿಕೆಗೆ ಮಹತ್ವ ಬಂದಿದೆ.

ಭಾರತ ಸದ್ಯ ತನ್ನ ಒಟ್ಟು ಅಗತ್ಯದ ಶೇ.2ರಷ್ಟುತೈಲವನ್ನು ಮಾತ್ರ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಅದಕ್ಕೆ ಹೋಲಿಸಿದರೆ ಶೇ.10ರಷ್ಟುತೈಲವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದೆ.

ಉಗ್ರವಾದದ ವಿರುದ್ಧ ಕ್ರಮ, ಪಾಕ್‌ಗೆ ಭಾರತ, ಅಮೆರಿಕ ತಾಕೀತು: ಪಾಕಿಸ್ತಾನದ ಹಿಡಿತದಲ್ಲಿರುವ ಭೂ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯದಂತೆ ಪಾಕ್‌ ಸರ್ಕಾರ ತ್ವರಿತ, ಬದಲಾಯಿಸಲಾಗದ ಕ್ರಮ ಕೈಗೊಳ್ಳಬೇಕು ಮತ್ತು 26/11ರ ಮುಂಬೈ ದಾಳಿ ಮತ್ತು ಪಠಾಣ್‌ಕೋಠ್‌ ದಾಳಿಗಗಳಿಗೆ ನ್ಯಾಯ ಒದಗಿಸಬೇಕು ಎಂದು ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆ ನೀಡಿವೆ.

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌, ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಅವರು ನಡೆಸಿದ ಸಭೆಯ ಬಳಿಕ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಾರೆ.

ಶೆಹಬಾಜ್‌ ಶರೀಫ್‌ ಅವರು ಪಾಕ್‌ ಪ್ರಧಾನಿಯಾಗಿ ಆಯ್ಕೆಯಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಈ ಸಭೆಯಲ್ಲಿ ಭಯೋತ್ಪಾದನೆಯ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದು, ಉಗ್ರವಾದವನ್ನು ತಡೆಗಟ್ಟುವುದು, ಭಯೋತ್ಪಾದನೆಗೆ ಇಂಟರ್‌ನೆಟ್‌ ಬಳಕೆ ಮಾಡುತ್ತಿರುವುದರ ಕುರಿತಾಗಿ ಚರ್ಚೆ ನಡೆಸಲಾಯಿತು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಭಯೋತ್ಪಾದನೆಗೆ ಸಹಾಯ ಒದಗಿಸುತ್ತಿರುವುದರಿಂದ 2018ರಿಂದಲೂ ಪಾಕಿಸ್ತಾನವನ್ನು ಆರ್ಥಿಕವಾಗಿ ಬೂದು ಪಟ್ಟಿಯಲ್ಲಿ ಇಡಲಾಗಿದೆ.

ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಪರಿಹಾರ: ಮೋದಿ ಬೈಡೆನ್‌ ಚರ್ಚೆ

ನಾವಲ್ಲ, ಅವರು: ಪುಟ್ಟದೇಶ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸದಂತೆ ಒತ್ತಡ ಹೇರುತ್ತಿರುವ ಅಮೆರಿಕಕ್ಕೆ ಭಾರತ ಭರ್ಜರಿ ತಿರುಗೇಟು ಕೊಟ್ಟಿದೆ. ತಿಂಗಳೊಂದರಲ್ಲಿ ರಷ್ಯಾದಿಂದ ಭಾರತ ಖರೀದಿಸುವ ತೈಲದ ಪ್ರಮಾಣ ರಷ್ಯಾದಿಂದ ಯುರೋಪ್‌ ಅರ್ಧದಿನದಲ್ಲಿ ಮಾಡುವ ಖರೀದಿಗಿಂತ ಕಡಿಮೆ ಇದೆ ಎಂದು ಹೇಳುವ ಮೂಲಕ ಬಿಸಿ ಮುಟ್ಟಿಸಿದೆ. ಇದನ್ನು ಬಿಜೆಪಿಯ ವಿರೋಧ ಪಕ್ಷವಾಗಿರುವ ಶಿವಸೇನೆ ಪ್ರಶಂಸಿಸಿದೆ.

ಭಾರತ- ಅಮೆರಿಕ ‘2+2’ ಸಚಿವರ ಸಭೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ವಿಚಾರ ಪ್ರಸ್ತಾಪಿಸಿದರು. ಆಗ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ‘ರಷ್ಯಾದಿಂದ ತೈಲ ಖರೀದಿಸುವ ವಿಚಾರವನ್ನು ನೀವು ಗಮನಿಸುತ್ತಿದ್ದರೆ, ನಿಮಗೆ ನಾನೊಂದು ಹೇಳಬಲ್ಲೆ. ನಿಮ್ಮ ಗಮನವನ್ನು ಯುರೋಪ್‌ ಮೇಲೆ ಕೇಂದ್ರೀಕರಿಸಿ. ನಾವೂ ಇಂಧನ ಖರೀದಿಸುತ್ತೇವೆ ನಿಜ. ನಮ್ಮ ಇಂಧನ ಭದ್ರತೆಗೆ ಅದು ಅವಶ್ಯ. ಆದರೆ ನಾವು ಒಂದು ತಿಂಗಳಲ್ಲಿ ಖರೀದಿಸುವ ತೈಲ ಪ್ರಮಾಣ ಯುರೋಪ್‌ ಅರ್ಧದಿನದಲ್ಲಿ ಮಾಡುವ ಖರೀದಿಗಿಂತ ಕಡಿಮೆ ಇದೆ’ ಎಂದು ಹೇಳಿದರು. ಈ ವೇಳೆ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಅಮೆರಿಕದ ವಿದೇಶಾಂಗ ಸಚಿವ ಟೋನಿ ಬ್ಲಿಂಕೆನ್‌, ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಕೂಡ ಇದ್ದರು.

ಈ ವೇಳೆ, ಭಾರತದ ನಡೆಯನ್ನು ಅಮೆರಿಕ ಕೂಡ ಸಮರ್ಥಿಸಿಕೊಂಡಿತು. ರಷ್ಯಾದಿಂದ ಭಾರತ ಹೆಚ್ಚಿನ ತೈಲ ಖರೀದಿಸುತ್ತಿಲ್ಲ ಎಂದು ಹೇಳಿತು.

ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ವರ್ಚುವಲ್‌ ಸಭೆ ನಡೆಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸದಂತೆ ಹಾಗೂ ಭಾರತದ ಹೆಚ್ಚುವರಿ ತೈಲ ಅಗತ್ಯವನ್ನು ನೀಗಿಸುವ ಭರವಸೆಯನ್ನು ನೀಡಿದ್ದರು.