Pakistan Political Crisis latest news: "ಮಧ್ಯಂತರ ಪ್ರಧಾನಿ ಆಯ್ಕೆಯಾಗುವವರೆಗೂ ಸಂವಿಧಾನದ ಕಾಯ್ದೆ 224 A (4) ಅಡಿಯಲ್ಲಿ ತಿಳಿಸಿದಂತೆ ಮಧ್ಯಂತರ ಪ್ರಧಾನಿ ಆಯ್ಕೆಯಾಗಬೇಕು, ಅಲ್ಲಿಯವರೆಗೂ ಇಮ್ರಾನ್ ಖಾನ್ ಪ್ರಧಾನಮಂತ್ರಿಯಾಗಿ ಮುಂದುವರೆಯಲಿದ್ದಾರೆ," ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ (Imran Khan to continue as Pakistan PM) ಮುಂದುವರೆಯಲಿದ್ದಾರೆ ಎಂದು ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ (Pakistan President Arif Alvi) ತಿಳಿಸಿದ್ದಾರೆ. ಸಂಪುಟ ಕಾರ್ಯದರ್ಶಿ ಇಮ್ರಾನ್ ಖಾನ್‌ರನ್ನು ಪ್ರಧಾನಿ ಸ್ಥಾನದಿಂದ ತೆಗೆದುಹಾಕಿದ ಅಧಿಸೂಚನೆ ಹೊರತಂದ (Imran Khan de-notified as PM) ನಂತರ ಈ ಹೇಳಿಕೆಯನ್ನು ರಾಷ್ಟ್ರಪತಿ ನೀಡಿದ್ದಾರೆ. ಇದಕ್ಕೆ ಕಾರಣವೆಂದರೆ ಪಾಕಿಸ್ತಾನ ಸಂವಿಧಾನದ 224ನೇ ಆರ್ಟಿಕಲ್ (Article 224 of Pakistan Constitution) ಅನ್ವಯ ನೂತನ ಮಧ್ಯಂತರ ಪ್ರಧಾನಿ ಆಯ್ಕೆಯಾಗುವವರೆಗೂ ಈಗಿರುವ ಪ್ರಧಾನಿ ಅಧಿಕಾರ ಮುಂದುವರೆಸಬೇಕು. ಈ ಹಿನ್ನೆಲೆ ಇಮ್ರಾನ್ ಖಾನ್ ಪ್ರಧಾನಿ ಕಚೇರಿಯಲ್ಲೇ ಅಧಿಕಾರ ನಡೆಸಲಿದ್ದಾರೆ.
"ಮಧ್ಯಂತರ ಪ್ರಧಾನಿ ಆಯ್ಕೆಯಾಗುವವರೆಗೂ ಸಂವಿಧಾನದ ಕಾಯ್ದೆ 224 A (4) ಅಡಿಯಲ್ಲಿ ತಿಳಿಸಿದಂತೆ ಮಧ್ಯಂತರ ಪ್ರಧಾನಿ ಆಯ್ಕೆಯಾಗಬೇಕು, ಅಲ್ಲಿಯವರೆಗೂ ಇಮ್ರಾನ್ ಖಾನ್ ಪ್ರಧಾನಮಂತ್ರಿಯಾಗಿ ಮುಂದುವರೆಯಲಿದ್ದಾರೆ," ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.
ಮುಂದಿನ ೧೫ ದಿನಗಳವರೆಗೂ ಇಮ್ರಾನ್ ಖಾನ್ ಪ್ರಧಾನಿಯಾಗಿ ಮುಂದುವರೆಯಬಹುದು. ಅಷ್ಟರೊಳಗೆ ಮಧ್ಯಂತರ ಪ್ರಧಾನಿ ಆಯ್ಕೆಯಾಗಬೇಕು. ಈ ಅವಧಿಯಲ್ಲಿ ಇಮ್ರಾನ್ ಖಾನ್ ಮಹತ್ವದ ತೀರ್ಮಾನಗಳನ್ನು ಸಚಿವಾಲಯದಿಂದ ಮಾಡುವಂತಿಲ್ಲ. ಇದೊಂದು ನಾಮಕಾವಸ್ಥೆ ಪದವಿಯಾಗಿದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿಸರ್ಜನೆಯಾಗಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್‌ರನ್ನು ಪ್ರಧಾನಿ ಸ್ಥಾನದಿಂದ ಸಂಪುಟ ಕಾರ್ಯದರ್ಶಿ ತೆಗೆದುಹಾಕಿದ್ದರು. ಆದರೆ ರಾಷ್ಟ್ರಪತಿಗಳು ಸಂವಿಧಾನದಲ್ಲಿನ ಆಯ್ಕೆಗಳನ್ನು ಮುಂದಿಟ್ಟು, ಇಮ್ರಾನ್ ಖಾನ್‌ರಿಗೆ ೧೫ ದಿನಗಳ ಪ್ರಧಾನಿ ಹುದ್ದೆ ಅನುವುಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Political Crisis ಇಮ್ರಾನ್ ಖಾನ್ ಇನ್ಮುಂದೆ ಪಾಕಿಸ್ತಾನ ಪ್ರಧಾನಿ ಅಲ್ಲ, ಕ್ಯಾಬಿನೆಟ್ ಕಾರ್ಯದರ್ಶಿ!
ಇಮ್ರಾನ್ ಖಾನ್ ಪರ ವಾಸಿಂ ಅಕ್ರಂ ಬ್ಯಾಟಿಂಗ್:
ಇಮ್ರಾನ್ ಖಾನ್‌ರ ಕ್ರಿಕೆಟ್ ದಿನಗಳ ಸ್ನೇಹಿತ, ತಂಡದ ಸದಸ್ಯ ವಾಸಿಂ ಅಕ್ರಂ ಇಮ್ರಾನ್ ಖಾನ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಇನ್ನೂ ಆಟ ಮುಗಿದಿಲ್ಲ, ಇಮ್ರಾನ್ ಖಾನ್ ಗೇಮ್ ಚೇಂಜರ್ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ವೀಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇಮ್ರಾನ್ ಖಾನ್ ಮುಂದಿನ ನಡೆಯ ಬಗ್ಗೆ ವಾಸಿಂ ಅಕ್ರಮ್ ಅವರಿಗೆ ತಿಳಿದಿರಬಹುದೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಶನಿವಾರ ಕೂಡ ವಾಸಿಂ ಅಕ್ರಮ್ ತಮ್ಮ ಬೆಂಬಲವನ್ನು ಇಮ್ರಾನ್ ಖಾನ್ ಪರ ತೋರಿಸಿದ್ದರು. ಇಮ್ರಾನ್ ಖಾನ್ ಹುಟ್ಟಿರುವುದೇ ತಾನು ಪ್ರತಿನಿಧಿಸುವ ವಿಚಾರಗಳನ್ನು ಮುನ್ನಡೆಸುವುದಕ್ಕೆ, ಹೋರಾಡುವುದಕ್ಕೆ ಮತ್ತು ಗೆಲ್ಲುವುದಕ್ಕೆ. ಪದವಿಗೋ, ಅಧಿಕಾರಕ್ಕೋ ಅಥವಾ ಇನ್ನಾವುದಕ್ಕೋ ಇಮ್ರಾನ್ ಖಾನ್ ಹೋರಾಡುತ್ತಿಲ್ಲ. ಹೋರಾಡುವುದೇ ಅವರ ವಿಧಿ. ಮತ್ತು ಆಟ ಇನ್ನೂ ಮುಗಿದಿಲ್ಲ, ಎಂದು ಟ್ವೀಟ್ ಮಾಡಿದ್ದರು.
ಪಾಕಿಸ್ತಾನ ಶಾಸನಸಭೆ ವಿಸರ್ಜನೆಯಾಗಿರುವ ಹಿನ್ನೆಲೆ ಇನ್ನು ಆರು ತಿಂಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಮಿಲಿಟರಿ ಏನಾದರೂ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು.
