ನಾಟಕೀಯ ಬೆಳವಣಿಗೆಯಲ್ಲಿ ತಡರಾತ್ರಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸೋಲು ಕಂಡಿದೆ. ಇದರೊಂದಿಗೆ ಪ್ರಧಾನಿ ಪದವಿಯಿಂದ ಇಮ್ರಾನ್ ಖಾನ್ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಶೆಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದೆ.
ನವದೆಹಲಿ (ಏ.9): ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದ ಇಮ್ರಾನ್ ಖಾನ್ (Imran Khan ) ಸರ್ಕಾರ ಕುಸಿದು ಬಿದ್ದಿದೆ. ಅದರೊಂದಿಗೆ ಪಾಕಿಸ್ತಾನದ (Pakistan ) ಇತಿಹಾಸದಲ್ಲಿ ಈವರೆಗೂ ಯಾರೊಬ್ಬರೂ ಐದು ವರ್ಷಗಳ ಕಾಲ ಪೂರ್ಣ ಅವಧಿಗೆ ಪ್ರಧಾನಿಯಾಗಿ ಉಳಿದ ಇತಿಹಾಸ ಮುಂದುವರಿದಿದೆ.
ತಡರಾತ್ರಿ 12 ಗಂಟೆಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ (National Assmbley) ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮತದಾನ ಆರಂಭವಾಯಿತು. ಈ ವೇಳೆ ಅಸೆಂಬ್ಲಿಯ ಸಭಾಂಗಣದ ಪ್ರವೇಶ ದ್ವಾರದ ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಲಾದ ಎಲ್ಲಾ ಶ್ರಮಗಳನ್ನೂ ಮಾಡಿದ್ದ ಇಮ್ರಾನ್ ಖಾನ್ ಆಟಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿತ್ತು. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚನೆ ನೀಡಿತ್ತು.
ಅದರಂತೆ ಶನಿವಾರ ತಡರಾತ್ರಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಇಮ್ರಾನ್ ಖಾನ್ ನಿರೀಕ್ಷೆಯಂತೆ ಸೋಲು ಕಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮಧ್ಯರಾತ್ರಿಯೊಳಗೆ ಮತದಾನ ನಡೆಯದಿದ್ದರೆ ತಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದ ಬೆನ್ನಲ್ಲಿಯೇ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿಶ್ವಾಸ ಮತ ಯಾಚನೆ ನಡೆದಿದೆ.
Pakistan Imran Khan ಅಸೆಂಬ್ಲಿ ವಿಸರ್ಜಿಸಿದ ಇಮ್ರಾನ್ ಖಾನ್‌ಗೆ ಹಿನ್ನಡೆ, ಏ.9ಕ್ಕೆ ವಿಶ್ವಾಸ ಮತ ಯಾಚನೆ, ಸುಪ್ರೀಂ ಆದೇಶ!
342 ಸದಸ್ಯ ಬಲದ ಪಾಕಿಸ್ತಾನ ಅಸೆಂಬ್ಲಿಯಲ್ಲಿ ಬಹುಮತಕ್ಕೆ 172 ಸದಸ್ಯರ ಮತ ಅಗತ್ಯ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ 142 ಮತಗಳನ್ನು ಪಡೆದುಕೊಂಡರೆ, ಸಂಯುಕ್ತ ವಿರೋಧ ಪಕ್ಷ 199 ಮತಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವುದರೊಂದಿಗೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಕುಸಿದು ಬಿದ್ದಿತು. ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾಗಿ ಅಧಿಕಾರ ಕಳೆದುಕೊಂಡ ಮೊದಲ ಪ್ರಧಾನಿ ಎನ್ನುವ ಕುಖ್ಯಾತಿಯೂ ಇಮ್ರಾನ್ ಖಾನ್ ಹೆಸರಿಗೆ ಸೇರಿದೆ.
