ಪೈಲಟ್ ಪತಿಗೆ ಹೃದಯಾಘಾತ: ತರಬೇತಿ ಇಲ್ಲದಿದ್ರೂ ಸೇಫಾಗಿ ವಿಮಾನ ಲ್ಯಾಂಡ್ ಮಾಡಿದ ಮಹಿಳೆ
ವಿಮಾನಯಾನದ ಯಾವುದೇ ತರಬೇತಿ ಇಲ್ಲದ ಮಹಿಳೆಯೊಬ್ಬರು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದಂತಹ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ.
ವಿಮಾನಯಾನದ ಯಾವುದೇ ತರಬೇತಿ ಇಲ್ಲದ ಮಹಿಳೆಯೊಬ್ಬರು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದಂತಹ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ವಿಮಾನದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಖಾಸಗಿ ವಿಮಾನವನ್ನು ಮಹಿಳೆಯ ಪತಿ ಚಲಾಯಿಸುತ್ತಿದ್ದರು. ವಿಮಾನ ಚಲಾಯಿಸುತ್ತಿದ್ದ ವೇಳೆಯೇ ಪತಿಗೆ ಹೃದಯಾಘಾತವಾಗಿದ್ದು, ಕುಸಿದು ಬಿದ್ದಿದ್ದಾರೆ. ಈ ವೇಳೆ ಮಹಿಳೆ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಬಳಿಕ ಅವರ ಸಹಾಯದ ಮೂಲಕ ವಿಮಾನಯಾನದ ಬಗ್ಗೆ ಗಂಧಗಾಳಿ ಇಲ್ಲದ ಮಹಿಳೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
69 ವರ್ಷದ ವೈವೊನ್ ಕಿನಾನೆ ವೆಲ್ಸ್ ಎಂಬುವವರೇ ಪತಿ ಕುಸಿದು ಬಿದ್ದ ನಂತರ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಮಹಿಳೆ. ವೈವೊನ್ ಕಿನಾನೆ ವೆಲ್ಸ್ ಲಾಸ್ಏಂಜಲೀಸ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಅವರು ತಮ್ಮ ಜೀವನದಲ್ಲಿ ಈ ಹಿಂದೆಂದೂ ವಿಮಾನ ಓಡಿಸಿರಲಿಲ್ಲ, ಆದರೆ ಮಧ್ಯ ಆಗಸದಲ್ಲೇ ಪತಿ ಕುಸಿದು ಬಿದ್ದಿದ್ದರಿಂದ ಅವರಿಗೆ ಬೇರೆ ಆಯ್ಕೆ ಇರಲಿಲ್ಲ.
ಏರ್ ಟ್ರಾಫಿಕ್ ಕಂಟ್ರೋಲ್ ಮಾಡುವ ಅಧಿಕಾರಿಗಳು ವಿಮಾನವನ್ನು ಹೇಗೆ ಸುರಕ್ಷಿತವಾಗಿ ಲ್ಯಾಂಡ್ ಮಾಡುವುದು ಎಂಬ ಬಗ್ಗೆ ಮಹಿಳೆಗೆ ಮಾಹಿತಿ ನೀಡಿದ್ದರು. 5,900 ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ ವೈವೊನ್ ಕಿನಾನೆ ವೆಲ್ಸ್ ಅವರ ಪತಿ ಲಿಯಟ್ ಆಲ್ಪರ್ ಅವರಿಗೆ ಹೃದಯಾಘಾತವಾಗಿದ್ದು, ಅವರು ಪಕ್ಕದ ಸೀಟಿನಲ್ಲಿ ಕುಸಿದು ಬಿದ್ದಿದ್ದರು. ಈ ವೇಳೆ ದಂಪತಿ ಲಾಸ್ ವೇಗಾಸ್‌ನ ಹೆಂಡರ್ಸನ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಿಂದ ಕ್ಯಾಲಿಫೋರ್ನಿಯಾದ ಮಾಂಟೆರೆಗೆ ತೆರಳುತ್ತಿದ್ದರು.
ಸಮೀಪದ ಏರ್ಪೋರ್ಟ್‌ಗೆ ವಿಮಾನವನ್ನು ತಿರುಗಿಸುವ ಸಲಹೆ ನೀಡುವ ಮೊದಲು ಏರ್‌ಪೋರ್ಟ್ ಅಧಿಕಾರಿಗಳು ಆಕೆಗೆ ಧೈರ್ಯ ತುಂಬಿದ್ದು, ನೀವು ಸುರಕ್ಷಿತವಾಘಿ ಲ್ಯಾಂಡ್ ಆಗುವಂತೆ ನಾವು ಮಾಡುತ್ತೇವೆ. ನೀವು ಈಗ ಸೀದಾ ಬೇಕರ್ಸ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಹೋಗುತ್ತೀರಿ ಎಂದು ಕಿನಾನೆ ವೆಲ್ಸ್‌ಗೆ ಅಧಿಕಾರಿಗಳು ಹೇಳಿದ್ದಾರೆ
ಇಂತಹ ತುರ್ತು ಸಂದರ್ಭದಲ್ಲಿ ಏನು ಮಾಡುವುದು ಎಂದು ತಲೆಯೇ ಓಡುವುದಿಲ್ಲ, ಆದರೆ ಕಿನಾನೆ ವೆಲ್ಸ್ ಅವರು ಧೃಢವಾಗಿ ಧೈರ್ಯವಾಗಿ ನಿರ್ಧಾರ ತೆಗೆದುಕೊಂಡು ಬೇಕರ್ಸ್‌ಫೀಲ್ಡ್‌ನಲ್ಲಿರುವ ಮೆಡೋಸ್ ಫೀಲ್ಡ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದರು. ಈ ಮೂಲಕ ಕಠಿಣ ಸವಾಲಿನೊಂದಿಗೆ ತಮ್ಮ ಮೊದಲ ವಿಮಾನ ಇಳಿಸಿದ ಅನುಭವ ಪಡೆದರು.
ಇತ್ತ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಲ್ಲಿ ತುರ್ತು ರಕ್ಷಣಾ ಸಿಬ್ಬಂದಿ ಹಾಜರಿದ್ದರು. ಕಿಯಾನೆ ವೆಲ್ಸ್ ಅವರ ವಿಮಾನ ಲ್ಯಾಂಡ್ ಆಗಿ 11 ಅಡಿ ದೂರದವರೆಗೆ ರನ್‌ವೇಯಲ್ಲಿ ಓಡಿದೆ. ಅಲ್ಲದೇ ನಿಲ್ಲುವ ಮೊದಲು ರನ್‌ವೇಯಿಂದ ಸ್ವಲ್ಪ ದೂರ ತಿರುಗಿತು. ಇತ್ತ ವಿಮಾನ ಲ್ಯಾಂಡಿಂಗ್ ನಂತರ ಅವರ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ತಿಳಿದು ಬಂದಿದೆ. ಕಿಯಾನೆ ಅವರ ಪತಿಯ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ.