ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾಗೆ ಸಿಗುವ ಮೊತ್ತವೆಷ್ಟು? ಜೀವನ ಬದಲಿಸಲಿದೆ ಪ್ರೈಝ್ ಮೊತ್ತ. 338 ನಾಮಿನೇಶನ್ ಪೈಕಿ ಮರಿಯಾ ಕೊರಿನಾ ಮಚಾಡೋ ನೊಬೆಲ್ ಪ್ರಶಸ್ತಿ ಜೊತೆ ದುಬಾರಿ ಮೊತ್ತ ಪಡೆಯಲಿದ್ದಾರೆ.

ವಾಶಿಂಗ್ಟನ್ (ಅ.10) ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದ್ದು, ವೆನೆಜುವೆಲಾದ ವಿರೋಧ ಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೋಗೆ ಪ್ರಶಸ್ತಿ ಘೋಷಣೆಯಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದೆ. ನಾರ್ವೆ ನೊಬೆಲ್ ಕಮಿಟಿ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಮರಿಯಾ ಕೊರಿನಾಗೆ ಅಬಿನಂದನಗಳ ಮಹಾಪೂರವೇ ಹರಿದು ಬಂದಿದೆ. ಇದೇ ವೇಳೆ ನೊಬೆಲ್ ಪ್ರಶಸ್ತಿ ಜೊತೆ ಪಡೆಯುವ ಮೊತ್ತದ ಕುರಿತು ಹಲವು ಕೂತೂಹಲಗಳು ಹೆಚ್ಚಾಗುತ್ತಿದೆ. ಅಷ್ಟಕ್ಕು ಮರಿಯಾ ಕೊರಿನಾಗೆ ಬರುವ ಪ್ರಶಸ್ತಿ ಮೊತ್ತದ ಸಂಪೂರ್ಣ ಮಾಹಿತಿ ಇಲ್ಲಿದೆ.

ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ

ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ11 ಮಿಲಿಯನ್ ಸ್ವೀಡಿಶ್ ಕ್ರೊನೊರ್. ಸ್ವೀಡಿಶ್ ಕರೆನ್ಸಿಯಲ್ಲಿರುವ ಮೊತ್ತವನ್ನ ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿದರೆ ಸರಿಸುಮಾರು 1.17 ಮಿಲಿಯನ್ ಡಾಲರ್. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ 10.36 ಕೋಟಿ ರೂಪಾಯಿ. ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ ಬರೋಬ್ಬರಿ 10.36 ಕೋಟಿ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

ಸಂಪೂರ್ಣ ಮೊತ್ತ ಪಡೆಯಲಿರುವ ಮರಿಯಾ

ಬಹುತೇಕ ವರ್ಷಗಳಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಇಬ್ಬರು ಅಥವಾ ಮೂವರು ಹಂಚಿಕೊಂಡಿದ್ದೆ ಹೆಚ್ಚು. ಹೀಗಾಗಿ ಪ್ರಶಸ್ತಿ ಮೊತ್ತ ಕೂಡ ಹಂಚಿಕೆ ಮಾಡಲಾಗಿತ್ತು. ಈದರೆ ಈ ಬಾರಿ ವೆನೆಜುವೆಲಾಯದ ಮರಿಯಾ ಕೊರಿನಾ ಮಚಾಡೋ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಯಾರ ಜೊತೆಗೂ ಹಂಚಿಕೆಯಾಗಿಲ್ಲ. ಹೀಗಾಗಿ ಮರಿಯಾ ಕೊರಿನಾ ಮಚಾಡೋ ನೊಬೆಲ್ ಶಾಂತಿ ಮೊತ್ತದ ಸಂಪೂರ್ಣ ಹಣ ಅಂದರೆ 10.36 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಯಾರು ಈ ಮರಿಯಾ ಕೊರಿನಾ ಮಚಾಡೋ

ವೆನೆಜುವೆಲಾದ ಪರಿಸ್ಕಾದಲ್ಲಿ 1967ರಲ್ಲಿ ಹುಟ್ಟಿದ ಮರಿಯಾ, ವಿರೋಧ ಪಕ್ಷದ ನಾಯಕಿಯಾಗಿದ್ದಾರೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಚಳುವಳಿ ಆರಂಭಿಸಿ, ಜನಸಾಮಾನ್ಯರಿಗೆ ಹಕ್ಕುಗಳು ಸಿಗುವಂತೆ ಮಾಡಿದ ಕೀರ್ತಿ ಮರಿಯಾಗೆ ಸಲ್ಲಲಿದೆ. 2002ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮರಿಯಾ, ನಿರಂತರವಾಗಿ ಜನಪರ ಆಂದೋಲನದ ಮೂಲಕ ಜನನಾಯಕಿಯಾಗಿ ಬೆಳೆದಿದ್ದಾರೆ. ಮೂಲಭೂತ ಹಕ್ಕುಗಳು, ಜನಪರ ನಿಲುವುಗಳ ಮೂಲಕ ವೆನೆಜುವೆಲಾದಲ್ಲಿ ಕ್ರಾಂತಿ ಮಾಡಿದ್ದಾರೆ. ಭಾರಿ ಬೆದರಿಕೆ ಕಾರಣ ಕೆಲ ವರ್ಷ ರಹಸ್ಯವಾಗಿ ಜೀವನ ಸಾಗಿಸಿದ್ದಾರೆ.

ಟ್ರಂಪ್‌ಗೆ ಭಾರಿ ನಿರಾಸೆ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರಿ ಪ್ರಯತ್ನಿಸಿದ್ದರು. ಭಾರತ ಪಾಕಿಸ್ತಾನ ಸೇರಿದಂತೆ 7ಕ್ಕೂ ಹೆಚ್ಚು ಯುದ್ಧ ನಿಲ್ಲಿಸಿದ್ದೇನೆ. ಬರಾಕ್ ಒಬಾಮಗೆ ಶಾಂತಿ ಪ್ರಶಸ್ತಿ ನೀಡಲಾಗಿದೆ. ಕೇವಲ ರಾಜತಾಂತ್ರಿಕ ಮಾತುಕತೆಗೆ ಶಾಂತಿ ಪ್ರಶಸ್ತಿ ನೀಡಲಾಗಿದೆ. ಆದರೆ ಸಂಘರ್ಷವನ್ನೇ ನಿಲ್ಲಿಸಿದ ತಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದು ಹಲವು ವೇದಕೆಗಳಲ್ಲಿ ಹೇಳಿದ್ದರು. ಆದರೆ ಟ್ರಂಪ್ ಪ್ರಯತ್ನಗಳು ವಿಫಲವಾಗಿದೆ.