Asianet Suvarna News Asianet Suvarna News

ರಷ್ಯಾ ಎಷ್ಟು ವೇಗವಾಗಿ ಟ್ಯಾಂಕ್ ಪಡೆಗಳನ್ನು ಸಜ್ಜುಗೊಳಿಸಬಲ್ಲದು?

ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧದಲ್ಲಿ ರಷ್ಯಾ ಸಾಕಷ್ಟು ಟ್ಯಾಂಕ್‌ಗಳನ್ನು ಕಳೆದುಕೊಂಡಿದೆ. ಹಾಗಿದ್ದರೆ ರಷ್ಯಾದ ರಕ್ಷಣಾ ಸಾಮರ್ಥ್ಯವೇನು? ಏಕೆ ರಷ್ಯಾಗೆ ಸಣ್ಣ ದೇಶ ಉಕ್ರೇನ್ ಮುಂದೆ ಗೆಲ್ಲಲಾಗುತ್ತಿಲ್ಲ... ಇಲ್ಲಿದೆ ಒಂದು ವರದಿ

How fast can Russia mobilize tank forces akb
Author
First Published Mar 6, 2023, 12:54 PM IST

ಗಿರೀಶ್ ಲಿಂಗಣ್ಣ,  ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಜರ್ಮನ್ ಸೇನೆ ಅತ್ಯಂತ ವೇಗವಾಗಿ ಸೋವಿಯತ್ ಟ್ಯಾಂಕ್‌ಗಳನ್ನು ನಾಶಪಡಿಸುತ್ತಿತ್ತು. 80,000 ಟ್ಯಾಂಕ್‌ಗಳನ್ನು ಕಳೆದುಕೊಂಡರೂ, ಸೋವಿಯತ್ ಒಕ್ಕೂಟದ ರಕ್ಷಣಾ ಉದ್ಯಮ ಎಷ್ಟು ವೇಗವಾಗಿ ಟ್ಯಾಂಕ್‌ಗಳನ್ನು ಮರಳಿ ಉತ್ಪಾದಿಸುತ್ತಿತ್ತು ಎಂದರೆ, ಅದರ ಪರಿಣಾಮವಾಗಿ ರಷ್ಯಾದ ಕೆಂಪು ಸೇನೆ ವೇಗವಾಗಿ ಯುದ್ಧವನ್ನು ಮುಗಿಸಲು ಸಾಧ್ಯವಾಯಿತು. ಯುದ್ಧ ಮುಗಿದಾಗ ಸೋವಿಯತ್ ಒಕ್ಕೂಟದ ಬಳಿ ಯುದ್ಧ ಆರಂಭಕ್ಕೆ ಮೊದಲು ಇದ್ದುದಕ್ಕಿಂತ ಹೆಚ್ಚು ಟ್ಯಾಂಕ್‌ಗಳಿದ್ದವು.

ಇಂದಿನ ಟ್ಯಾಂಕ್‌ಗಳು ಹೆಚ್ಚು ಅತ್ಯಾಧುನಿಕವೂ, ವೆಚ್ಚದಾಯಕವೂ ಆಗಿದ್ದು, ಆದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಬಳಸಲ್ಪಡುತ್ತವೆ. ಆದರೂ, ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೋವಿಯತ್ ಒಕ್ಕೂಟದಂತೆಯೇ ಸಾಕಷ್ಟು ಟ್ಯಾಂಕ್‌ಗಳನ್ನು ಕಳೆದುಕೊಂಡಿದೆ. ಉಕ್ರೇನ್ ತಾನು 3,250ಕ್ಕೂ ಹೆಚ್ಚು ರಷ್ಯನ್ ಟ್ಯಾಂಕ್‌ಗಳನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿತ್ತು. ಒಂದು ಗುಪ್ತಚರ ಮಾಧ್ಯಮ ವರದಿಯ ಪ್ರಕಾರ, ರಷ್ಯಾ 1,700 ಟ್ಯಾಂಕ್‌ಗಳನ್ನು ಕಳೆದುಕೊಂಡಿದೆ. ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಎಂಬ ಸಂಸ್ಥೆಯ ಪ್ರಕಾರ, ಯುದ್ಧಕ್ಕೆ ಮೊದಲು ರಷ್ಯಾದ ಬಳಿ ಇದ್ದ ಅಂದಾಜು 2,000 ಟಿ-72 ಟ್ಯಾಂಕ್‌ಗಳಲ್ಲಿ ಅರ್ಧದಷ್ಟು ಭಾಗ ಯುದ್ಧದಲ್ಲಿ ನಾಶವಾಗಿ ಹೋಗಿದೆ.

ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ಕಂಡು ಹಿಡಿದಿದ್ದ ರಷ್ಯಾ ವಿಜ್ಞಾನಿ ಹತ್ಯೆ

ರಷ್ಯಾದ ಟ್ಯಾಂಕ್‌ಗಳು (Russia Tank) ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಮೇಲುಗೈ ಒದಗಿಸಲು ವಿಫಲವಾಗಿವೆ. ಅದರೊಡನೆ, ಸಾಕಷ್ಟು ಆಯುಧ ಬೆಂಬಲವಿಲ್ಲದ ಕಾರಣ, ರಷ್ಯಾದ ಸೇನಾಪಡೆಗಳಿಗೆ ಉಕ್ರೇನ್ ಮೇಲೆ ಇನ್ನೊಂದು ಪ್ರಬಲ ದಾಳಿ ಸಂಘಟಿಸಲು ಸಾಧ್ಯವಾಗಿಲ್ಲ. ಉಕ್ರೇನ್ ಈಗಾಗಲೇ ತನ್ನ ಪಾಶ್ಚಾತ್ಯ ಮಿತ್ರರಾಷ್ಟ್ರಗಳಿಂದ ಯುದ್ಧ ಟ್ಯಾಂಕ್‌ಗಳನ್ನು ಪಡೆದುಕೊಂಡಿದ್ದು, ಅವುಗಳನ್ನು ಬೇಸಿಗೆಯಲ್ಲಿ ರಷ್ಯಾದ ಮೇಲೆ ಮರುದಾಳಿ ನಡೆಸಲು ಬಳಸಿಕೊಳ್ಳುವ ಸಾಧ್ಯತೆಗಳಿವೆ. ರಷ್ಯಾಗೆ ಈಗಾಗಲೇ ತಾನು ಗಳಿಸಿಕೊಂಡಿರುವ ಪ್ರದೇಶಗಳನ್ನು ಉಳಿಸಿಕೊಳ್ಳಬೇಕಾದರೆ, ತನ್ನ ಸೇನಾಬಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದರೆ ಎರಡನೇ ಮಹಾಯುದ್ಧದ (2nd world war) ಸಂದರ್ಭದಲ್ಲಿ ನಡೆಸಿದಂತೆ, ಈಗಲೂ ರಷ್ಯಾಗೆ ತಾನು ಕಳೆದುಕೊಂಡಿರುವ ಟ್ಯಾಂಕ್‌ಗಳನ್ನು ಮರಳಿ ಸಂಪಾದಿಸಲು ಸಾಧ್ಯವೇ?

1940ರ ದಶಕದಲ್ಲಿ, ಸೋವಿಯತ್ ಒಕ್ಕೂಟದ ಕಾರ್ಖಾನೆಗಳು ತಿಂಗಳಲ್ಲಿ 1,000 ಟ್ಯಾಂಕ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದವು. ಟ್ರ್ಯಾಕ್ಟರ್‌ಗಳು ಹಾಗೂ ರೈಲ್ವೇ ಇಂಜಿನ್‌ಗಳನ್ನು ನಿರ್ಮಿಸುತ್ತಿದ್ದ ಕಾರ್ಖಾನೆಗಳಿಗೆ ಅದನ್ನು ಸ್ಥಗಿತಗೊಳಿಸಿ, ಟ್ಯಾಂಕ್‌ಗಳನ್ನು ನಿರ್ಮಿಸುವಂತೆ ಸೂಚಿಸಲಾಯಿತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಉತ್ಪಾದನೆ ಹೆಚ್ಚಿಸುವುದು ಕಷ್ಟಕರವಾಗಿದೆ. ಆಧುನಿಕ ಟ್ಯಾಂಕ್‌ಗಳಲ್ಲಿ ಬಳಸುವ ಇಲೆಕ್ಟ್ರಾನಿಕ್ ವ್ಯವಸ್ಥೆಗಳಾದ ರಾತ್ರಿಯ ನೋಟ, ಗುರಿಯಿಡುವ ಗನ್‌ಗಳು ಹಾಗೂ ಇತರ ವೈಶಿಷ್ಟ್ಯಗಳು ಅತ್ಯಾಧುನಿಕವಾಗಿವೆ. ಆದ್ದರಿಂದ ಅವುಗಳ ನಿರ್ಮಾಣ ಕಾರ್ಯ ನಿಧಾನವಾಗುವುದಲ್ಲದೆ, ಅಂತಹ ಟ್ಯಾಂಕ್‌ಗಳನ್ನು ಕ್ಷಿಪ್ರವಾಗಿ ನಿರ್ಮಿಸಲು ಸಾಧ್ಯವಾಗುವುದಿಲ್ಲ. ರಷ್ಯಾದ ಬಳಿ ಪ್ರಸ್ತುತ ಒಂದೇ ಟ್ಯಾಂಕ್ ಕಾರ್ಖಾನೆ ಇದೆ. 1930ರ ದಶಕದಲ್ಲಿ ನಿರ್ಮಿಸಿದ ಉರಾಲ್ ವ್ಯಾಗನ್ ಜಾ಼ವೋದ್ ಒಂದು ಬೃಹತ್ ಕಾರ್ಖಾನೆಯಾಗಿದೆ. ಆದರೆ ಅದರ ಹಣಕಾಸು(economic) ಅವ್ಯವಸ್ಥೆ ಹಾಗೂ ಅಪಾರ ಪ್ರಮಾಣದ ಸಾಲಗಳು ಕಾರ್ಖಾನೆಯ ಆಧುನೀಕರಣವನ್ನು (modernization) ನಿಧಾನಗೊಳಿಸಿವೆ. ಅಲ್ಲಿನ ಉದ್ಯೋಗಿಗಳು ತಮಾಷೆಯಾಗಿ ನಾವು ಟ್ಯಾಂಕ್‌ಗಳನ್ನು ಕೈಯಿಂದಲೇ ಜೋಡಿಸುತ್ತೇವೆ ಎನ್ನುತ್ತಾರೆ. ರಷ್ಯಾದ ಮಾಧ್ಯಮಗಳ ಪ್ರಕಾರ, ಈ ಕಾರ್ಖಾನೆ ತಿಂಗಳಿಗೆ ಕೇವಲ 20 ಟ್ಯಾಂಕ್‌ಗಳನ್ನು ನಿರ್ಮಿಸುತ್ತಿದೆ. ಒಟ್ಟಾರೆಯಾಗಿ ರಷ್ಯಾಗೆ ಈಗ ಅದು ಉತ್ಪಾದಿಸುತ್ತಿರುವ ಟ್ಯಾಂಕ್‌ಗಳ ಹತ್ತು ಪಟ್ಟು ಹೆಚ್ಚು ಟ್ಯಾಂಕ್‌ಗಳ ಅಗತ್ಯವಿದೆ.

982 ಕೋಟಿ ಮೌಲ್ಯದ ಬಂಗಲೆಯಲ್ಲಿ ಜಿಮ್ನಾಸ್ಟ್‌ ಪ್ರೇಯಸಿ ಜತೆ ಪುಟಿನ್‌ ವಾಸ!

ರಷ್ಯಾ ತನ್ನ ಹೆಚ್ಚುತ್ತಿರುವ ಟ್ಯಾಂಕ್‌ಗಳ ಬೇಡಿಕೆಯನ್ನು ಸರಿದೂಗಿಸಲು, ತನ್ನ ಸಂಗ್ರಹದಲ್ಲಿರುವ ಸಾವಿರಾರು ಹಳೆಯ ಯುದ್ಧ ಟ್ಯಾಂಕ್‌ಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಹೆಚ್ಚು ವೇಗವಾಗಿಸಿದೆ. ರಷ್ಯಾದ ಬಳಿ ಇರುವ ಆಧುನಿಕ ಟ್ಯಾಂಕ್‌ಗಳಾದ ಟಿ-90ಗಳು ಹೆಚ್ಚಿನ ಸಂಖ್ಯೆಯಲ್ಲಿ ದಶಕಗಳಷ್ಟು ಹಳೆಯದಾದ ಟಿ-72ಬಿ3 ಗಳೊಡನೆ ಯುದ್ಧದಲ್ಲಿ ಪಾಲ್ಗೊಳ್ಳಲಿವೆ. ಆದರೆ ಈ ಹಳೆಯ ಟ್ಯಾಂಕ್‌ಗಳಿಗೆ ಆಧುನಿಕ ಗನ್‌ಗಳು (Gun), ರಿಯಾಕ್ಟಿವ್ ಆರ್ಮರ್ (ಟ್ಯಾಂಕ್ ಮೇಲೆ ದಾಳಿಯಾದಾಗ ಅದರ ಪರಿಣಾಮವನ್ನು ಕಡಿಮೆಗೊಳಿಸುತ್ತದೆ), ಹಾಗೂ ಡಿಜಿಟಲ್ ಸಂವಹನ (Digital Comunication) ವ್ಯವಸ್ಥೆಗಳನ್ನು ರಷ್ಯಾ ಅಳವಡಿಸಿದೆ. ಈ ಆಧುನೀಕರಣ ಕೈಗೊಂಡರೂ, ಹಳೆಯ ಟ್ಯಾಂಕ್‌ಗಳು ನೂತನ ಟ್ಯಾಂಕ್‌ಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದುಳಿದಿದ್ದು, ಉಕ್ರೇನಿನ ದಾಳಿಯಲ್ಲಿ ಬಚಾವಾಗುವುದು ಕಷ್ಟಕರವಾಗಿದೆ. ರಷ್ಯನ್ ಮಾಧ್ಯಮಗಳ ಪ್ರಕಾರ, ಉರಾಲ್ ವ್ಯಾಗನ್ ಜಾ಼ವೋದ್ ಕಾರ್ಖಾನೆ ಪ್ರತಿ ತಿಂಗಳಿಗೆ ಎಂಟು ಟ್ಯಾಂಕ್‌ಗಳನ್ನು ಮರು ನಿರ್ಮಾಣಗೊಳಿಸುತ್ತದೆ. ಇನ್ನು ಮೂರು ಹಳೆಯ ಟ್ಯಾಂಕ್‌ಗಳ ಆಧುನೀಕರಿಸುವ ಘಟಕಗಳು ತಿಂಗಳಿಗೆ 17 ಟ್ಯಾಂಕ್‌ಗಳನ್ನು ಅಭಿವೃದ್ಧಿ ಪಡಿಸುತ್ತವೆ. ಮುಂದಿನ ಕೆಲ ತಿಂಗಳುಗಳ ಅವಧಿಯಲ್ಲಿ, ಇನ್ನೂ ಎರಡು ಕಾರ್ಖಾನೆಗಳು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಗಳಿವೆ.

ಅಂದರೆ, ಪ್ರಸ್ತುತ ಸನ್ನಿವೇಶದಲ್ಲಿ ರಷ್ಯಾ ಪ್ರತಿ ತಿಂಗಳು ಕೇವಲ 20 ನೂತನ ಟ್ಯಾಂಕ್‌ಗಳನ್ನು ನಿರ್ಮಿಸಬಲ್ಲದಾದರೂ, ಅದು ಶೀಘ್ರದಲ್ಲೇ ತನ್ನ ಹಳೆಯ ಸಂಗ್ರಹದಿಂದ ತಿಂಗಳಿಗೆ 90ಕ್ಕೂ ಹೆಚ್ಚು ಟ್ಯಾಂಕ್‌ಗಳನ್ನು ಅಭಿವೃದ್ಧಿ ಪಡಿಸಬಹುದು. ಆದರೂ, ಅದು ರಷ್ಯಾ ಪ್ರತಿ ತಿಂಗಳು ಕಳೆದುಕೊಳ್ಳಬಹುದಾದ 150 ಟ್ಯಾಂಕ್‌ಗಳಿಗೆ ಸರಿಸಮನಾಗಲು ಸಾಧ್ಯವಿಲ್ಲ. ಅದರೊಡನೆ, ಬಿಡಿಭಾಗಗಳ ಕೊರತೆಯೂ ಟ್ಯಾಂಕ್ ನಿರ್ಮಾಣವನ್ನು ಬಾಧಿಸಲಿದೆ. ಆಧುನಿಕ ಟ್ಯಾಂಕ್‌ಗಳಿಗೆ ಅಗತ್ಯವಾದ ಸೆಮಿಕಂಡಕ್ಟರ್‌ಗಳು, ಕಂಪ್ಯೂಟರ್ ಚಿಪ್‌ಗಳು ಅತ್ಯಂತ ವಿರಳವಾಗಿವೆ. ಯುರೋಪಿಯನ್ ಕಮಿಷನ್ ಪ್ರಕಾರ, ರಷ್ಯಾ ತಾನು ಆಮದು ಮಾಡಿಕೊಂಡ ಡಿಷ್ ವಾಷರ್‌ಗಳು ಹಾಗೂ ರೆಫ್ರಿಜರೇಟರ್‌ಗಳಲ್ಲಿರುವ ಚಿಪ್‌ಗಳನ್ನು ಸೇನೆಗೆ ಬಳಸಿಕೊಳ್ಳುತ್ತಿದೆ. ಇತ್ತೀಚೆಗೆ ಉಕ್ರೇನ್‌ನಲ್ಲಿ ಮರುನಿರ್ಮಾಣಗೊಂಡ ಟ್ಯಾಂಕ್‌ಗಳ ಹಾರ್ಡ್‌ವೇರ್‌ಗಳು ಒಂದಕ್ಕೊಂದು ಸಂಬಂಧ ಪಡೆದಂತೆ, ವಿವಿಧ ಮಾದರಿಗಳ ಉಪಕರಣಗಳನ್ನು ಹೊಂದಿದ್ದವು. ಅವುಗಳಲ್ಲಿ ನಿಖರ ದಾಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳಾದ ವಿಂಡ್ ಸ್ಪೀಡ್ ಸೆನ್ಸರ್‌ಗಳು, ಇತ್ಯಾದಿಗಳು ಇರಲಿಲ್ಲ.

ಹಾಗೆಂದು ಇಂತಹ ಸಮಸ್ಯೆಯನ್ನು ಕೇವಲ ರಷ್ಯಾ ಮಾತ್ರವೇ ಎದುರಿಸುತ್ತಿಲ್ಲ. ಉಕ್ರೇನ್ ಹಾಗೂ ಅದರ ಮಿತ್ರರಾಷ್ಟ್ರಗಳು ಸಹ ವೇಗವಾಗಿ ಟ್ಯಾಂಕ್ ನಿರ್ಮಿಸುವ ಸಾಮರ್ಥ್ಯ ಹೊಂದಿಲ್ಲ. ಖಾರ್ಕಿವ್ ಬಳಿ ಇರುವ ಉಕ್ರೇನ್‌ನ ಏಕೈಕ ಟ್ಯಾಂಕ್ ನಿರ್ಮಾಣ ಕಾರ್ಖಾನೆಯು ಯುದ್ಧದ ಆರಂಭದಲ್ಲೇ ನಾಶಗೊಂಡಿದೆ. ಉಕ್ರೇನಿಗೆ 31 ಎಂ1ಎ2 ಟ್ಯಾಂಕ್‌ಗಳನ್ನು ಪೂರೈಸುವುದಾಗಿ ವಾಗ್ದಾನ ಮಾಡಿದ ಅಮೆರಿಕಾದ ಬಳಿ ತಿಂಗಳಿಗೆ ಕೇವಲ 15 ಟ್ಯಾಂಕ್‌ಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ಇತರ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಉತ್ಪಾದನಾ ಸಾಮರ್ಥ್ಯ ಕಡಿಮೆಯಿದೆ. ಅವುಗಳು ಈಗ ಹಳೆಯ ಟ್ಯಾಂಕ್‌ಗಳನ್ನೇ ಹುಡುಕಿ, ಉಕ್ರೇನಿಗೆ ನೀಡುವ ಪರಿಸ್ಥಿತಿ ಎದುರಾಗಿದೆ. ಆದರೆ ದಾಳಿ ಮಾಡುವ ಪಡೆಗಳು ತಮ್ಮನ್ನು ತಾವು ಕಾಪಾಡಿಕೊಳ್ಳುವ ಪಡೆಗಳಿಗಿಂತ ಹೆಚ್ಚಿನ ಟ್ಯಾಂಕ್‌ಗಳನ್ನು ಹೊಂದಿರುತ್ತವೆ. ಈ ಯುದ್ಧ ಮುಂದುವರಿದಂತೆ ರಷ್ಯಾದ ಪಡೆಗಳು ಗುಣಮಟ್ಟ ಮತ್ತು ಪ್ರಮಾಣದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಈ ಸಲ ಉತ್ಪಾದನೆಯೂ ರಷ್ಯಾಗೆ ಪೂರಕವಾಗಿರುವ ಸಾಧ್ಯತೆಗಳು ಕಡಿಮೆಯಿದೆ.

Follow Us:
Download App:
  • android
  • ios