ಅಮೆರಿಕದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಪ್ರಶ್ನಿಸಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ. ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡು ಕುಟುಂಬ ಈಗ ಕಣ್ಣೀರಿಡುತ್ತಿದೆ
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ಕೊಲೆ
ಅಮೆರಿಕಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಭಾರತದ 26ರ ಹರೆಯದ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಕೊಲೆ ನಡೆದಿದೆ. ಮೃತ ಯುವಕನನ್ನು ಹರ್ಯಾಣದ ಜಿಂದ್ ಜಿಲ್ಲೆಯ ಕಪಿಲ್(26) ಎಂದು ಗುರುತಿಸಲಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ದುಷ್ಕರ್ಮಿ ಕಪಿಲ್ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಅಮೆರಿಕಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಪಿಲ್
ಮೃತ ಕಪಿಲ್ ಜಿಂದ್‌ನ ಬಾರಹ್ ಕಲ್ನಾ ಗ್ರಾಮದ ನಿವಾಸಿಯಾದ ಈಶ್ವರ್ ಎಂಬುವವರ ಪುತ್ರನಾಗಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಪಿಲ್ ಭದ್ರತೆಗೆ ನಿಯೋಜನೆಯಾಗಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮೂತ್ರ ಮಾಡುತ್ತಿದ್ದು, ಇದಕ್ಕೆ ಕಪಿಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕುಪಿತಗೊಂಡ ಆ ವ್ಯಕ್ತಿ ಗನ್ ಹೊರತೆಗೆದು ಕಪಿಲ್ ಮೇಲೆ ಗುಂಡಿಕ್ಕಿದ್ದಾನೆ. ಇದರಿಂದ ಸ್ಥಳದಲ್ಲೇ ಕಪಿಲ್ ಪ್ರಾಣ ಹೋಗಿದೆ. ಕಪಿಲ್ ನ ಗ್ರಾಮದ ಸರಪಂಚ್ ಸುರೇಶ್ ಕುಮಾರ್ ಗೌತಮ್ ಎಂಬುವವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕುಟುಂಬಕ್ಕೆ ಶ್ರೀಮಂತಿಕೆಯ ಜೀವನ ನೀಡುವ ಆಶಯದೊಂದಿಗೆ ಅಮೆರಿಕಾಗೆ ಹೋಗಿದ್ದ ರೈತನ ಪುತ್ರ
ಕಪಿಲ್ ಅವರ ಪೋಷಕರದ್ದು ರೈತ ಕುಟುಂಬವಾಗಿದ್ದು, ಅವರು ತಮ್ಮ ಪೋಷಕರಿಗೆ ಏಕೈಕ ಪುತ್ರರಾಗಿದ್ದರು. ವಿದೇಶದಲ್ಲಿ ದುಡಿಮೆ ಮಾಡಿ ಒಳ್ಳೆಯ ಬದುಕು ಕಾಣಬೇಕು ಎಂಬ ಉದ್ದೇಶದಿಂದ 2022ರಲ್ಲಿ ಕಪಿಲ್ ' ಡಾಂಕಿ ರೂಟ್' ಮೂಲಕ ಅಮೆರಿಕಾ ಪ್ರವೇಶಿಸಿದ್ದರು. ಈ ಪಯಣವು ಪನಾಮಾದ ದಟ್ಟವಾದ ಕಾಡುಗಳ ಮೂಲಕ ಸಾಗಿ, ಮೆಕ್ಸಿಕೋ ಗಡಿಯುದ್ದಕ್ಕೂ ಗಡಿ ಗೋಡೆಗಳನ್ನು ಹತ್ತಿ ಅಮೆರಿಕ ತಲುಪುವ ದುರ್ಗಮವಾದ ಮಾರ್ಗಗಳನ್ನು ಒಳಗೊಂಡಿತ್ತು. ಈ ಪ್ರಯಾಣಕ್ಕೆ ಅವರ ಕುಟುಂಬದವರಿಗೆ ಒಟ್ಟು 45 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಆದರೆ ಈತ ಅಮೆರಿಕಾವನ್ನು ಪ್ರವೇಶಿಸುವುದಕ್ಕೆ ಡಾಂಕಿ ರೂಟ್ ಹಾದಿ ಹಿಡಿದಿದ್ದರಿಂದ ಆತನ ಬಂಧನವಾಗಿತ್ತು. ಆದರೆ ನಂತರ ಕಾನೂನು ಪ್ರಕ್ರಿಯೆಗಳ ಮೂಲಕ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ಅವರು ಅಮೆರಿಕದಲ್ಲಿ ನೆಲೆಸುವಲ್ಲಿ ಯಶಸ್ವಿಯಾದರು.
ಕಪಿಲ್ ಮೃತದೇಹ ಭಾರತಕ್ಕೆ ತರಿಸಲು ಕುಟುಂಬದವರ ಮನವಿ:
ಕಪಿಲ್ ಅವರಿಗೆ ಇಬ್ಬರು ಸಹೋದರಿಯರು ಇದ್ದು, ಅವರಲ್ಲಿ ಒಬ್ಬರಿಗೆ ಮದುವೆಯಾಗಿದ್ದು, ಇನ್ನೊಬ್ಬಳು ಅವಿವಾಹಿತರಾಗಿದ್ದಾರೆ. ಆದರೆ ಕುಟುಂಬವನ್ನು ಸಂತೋಷವಾಗಿಡುವುದಕ್ಕಾಗಿ ಇಷ್ಟು ಕಷ್ಟಪಟ್ಟು ಹಲವು ಲಕ್ಷಗಳನ್ನು ವೆಚ್ಚ ಮಾಡಿ ಅಮೆರಿಕಾ ತಲುಪಿದ್ದ ಕಪಿಲ್ ಅವರು ಈಗ ಹಠಾತ್ ಜೀವವನ್ನೇ ಕಳೆದುಕೊಂಡಿರುವುದು ಅವರ ಕುಟುಂಬವನ್ನು ತೀವ್ರ ಶೋಕಕ್ಕೆ ತಳ್ಳಿದೆ. ಕಪಿಲ್ ಅವರ ಸಾವಿನಿಂದ ಇಡೀ ಗ್ರಾಮವೇ ಶೋಕತಪ್ತವಾಗಿದೆ ಎಂದು ಸರಪಂಚ್ ಗೌತಮ್ ಹೇಳಿದ್ದಾರೆ. ಈಗ ಕಪಿಲ್ ಅವರ ಮೃತದೇಹವನ್ನು ಭಾರತಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ಅವರ ಕುಟುಂಬವು ಉಪ ಆಯುಕ್ತರನ್ನು ಭೇಟಿ ಮಾಡಲು ಮುಂದಾಗಿದೆ ಎಂದು ಅವರು ಹೇಳಿದರು. ಈ ವಿಚಾರದಲ್ಲಿ ಸರ್ಕಾರದ ಸಂಪೂರ್ಣ ಬೆಂಬಲವನ್ನು ಬಯಸುತ್ತೇವೆ ಎಂದು ಅವರು ಹೇಳಿದರು.
ಡಾಂಕಿ ರೂಟ್ ಎಂದರೇನು?
'ಕತ್ತೆ ಮಾರ್ಗ' ಅಥವಾ 'ಡಾಂಕಿ ರೂಟ್' ಎಂದರೆ ಹತ್ತಾರು ಸಾವಿರ ಭಾರತೀಯರು ಅಮೆರಿಕವನ್ನು ತಲುಪಲು ಬಳಸುವ ಅಪಾಯಕಾರಿ ಅಕ್ರಮ ವಲಸೆ ಮಾರ್ಗವಾಗಿದೆ. ಈ ಮಾರ್ಗವು ಬಹು ದೇಶಗಳು, ಖಂಡಗಳು ಮತ್ತು ಗಡಿಗಳಲ್ಲಿ ಅಕ್ರಮವಾಗಿ ಸಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೆಲ ಹಾಗೂ ನೀರಿನ ಮೂಲಕ ಸಾಗುವ ಪಯಣವನ್ನು ಒಳಗೊಂಡಿದೆ. ಸಂಕೀರ್ಣ ಜಾಲವನ್ನು ಇದು ಒಳಗೊಂಡಿದ್ದು, ಈ ಜಾಲವೂ ವಲಸಿಗರಿಂದ ಲಕ್ಷಾಂತರ ಮೊತ್ತದ ಹಣವನ್ನು ವಸೂಲಿ ಮಾಡುತ್ತದೆ. ಅವರಿಂದ ದೊಡ್ಡ ಮೊತ್ತದ ಹಣವನ್ನು ಪಡೆದರೂ ಅವರಿಗೆ ಯಾವುದೇ ಸುರಕ್ಷತೆಯ ಭರವಸೆ ಈ ಪ್ರಯಾಣದಲ್ಲಿ ಇರುವುದಿಲ್ಲ. ಈ ಪ್ರಯಾಣವು ಅಪಾಯಕಾರಿ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುವುದು ಮತ್ತು ಸಂಭಾವ್ಯ ಗಡೀಪಾರು ಸೇರಿದಂತೆ ಅಪಾಯಗಳಿಂದ ತುಂಬಿರುತ್ತದೆ.
ಇದನ್ನೂ ಓದಿ: 45 ಲಕ್ಷ ರೂ. ವೆಚ್ಚ ಮಾಡಿ ಅಮೆರಿಕಾಗೆ ಹೋಗಿದ್ದ ರೈತನ ಏಕೈಕ ಪುತ್ರ ದುಷ್ಕರ್ಮಿಯ ಗುಂಡೇಟಿಗೆ ಬಲಿ
ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಕುಳಿತಿದ್ದವನ ಆ ಜಾಗಕ್ಕೆ ಕಚ್ಚಿದ ಹಾವು
