ಮೇ 9ರಂದು ಲಾಹೋರ್‌ನ ಕೋರ್‌ ಕಮಾಂಡರ್‌ ಮನೆಯ ಮೇಲೆ ದಾಳಿ ನಡೆಸಿದ 30 ರಿಂದ 40 ಮಂದಿ ಉಗ್ರರು, ಇಮ್ರಾನ್‌ ಅವರ ‘ಜಮಾನ್‌ ಪಾರ್ಕ್’ ನಿವಾಸದಲ್ಲಿ ಅಡಗಿಕೊಂಡಿದ್ದಾರೆ.

ಲಾಹೋರ್‌ (ಮೇ 18, 2023): ಪಾಕಿಸ್ತಾನದ ರಾಜಕೀಯ ಹೈಡ್ರಾಮಾ ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.‘ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿವಾಸದಲ್ಲಿ 30ರಿಂದ 40 ಮಂದಿ ಉಗ್ರರು ಅಡಗಿಕೊಂಡಿದ್ದಾರೆ’ ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪೊಲೀಸರು ಆರೋಪಿಸಿದ್ದಾರೆ. ಅಲ್ಲದೇ 24 ಗಂಟೆಗಳೊಳಗೆ (ಗುರುವಾರ ಮಧ್ಯಾಹ್ನ) ಅವರನ್ನು ಪೊಲೀಸರಿಗೆ ಒಪ್ಪಿಸದಿದ್ದರೆ ಕ್ರಮ ಎದುರಿಸಲು ಸಿದ್ಧವಾಗುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಮೇ 9ರಂದು ಲಾಹೋರ್‌ನ ಕೋರ್‌ ಕಮಾಂಡರ್‌ ಮನೆಯ ಮೇಲೆ ದಾಳಿ ನಡೆಸಿದ 30 ರಿಂದ 40 ಮಂದಿ ಉಗ್ರರು, ಇಮ್ರಾನ್‌ ಅವರ ‘ಜಮಾನ್‌ ಪಾರ್ಕ್’ ನಿವಾಸದಲ್ಲಿ ಅಡಗಿಕೊಂಡಿದ್ದಾರೆ. ಇವರನ್ನು ಪೊಲೀಸರಿಗೆ ಒಪ್ಪಿಸಲು ಇಮ್ರಾನ್‌ ಖಾನ್‌ಗೆ 24 ತಾಸುಗಳ ಅವಧಿಯನ್ನು ನೀಡುತ್ತೇವೆ. ಇದಾದ ಬಳಿಕ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ: Breaking ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ; ತಕ್ಷಣ ಬಿಡುಗಡೆ ಮಾಡಿ: ಪಾಕಿಸ್ತಾನ ಸುಪ್ರೀಂಕೋರ್ಟ್‌ ಆದೇಶ

ಇದು ನನ್ನ ಕೊನೇ ಟ್ವೀಟ್‌: ಇಮ್ರಾನ್‌
ತಮ್ಮ ಮನೆಯ ಸುತ್ತ ಪೊಲೀಸರು ಓಡಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಇಮ್ರಾನ್‌, ‘ನಾನು ಇನ್ನೊಮ್ಮೆ ಬಂಧನವಾಗುವ ಮೊದಲು ಇದು ನನ್ನ ಕೊನೆಯ ಟ್ವೀಟ್‌’ ಎಂದು ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಬಂಧನವಾಗಿದ್ದ ಇಮ್ರಾನ್‌ ತಮ್ಮ ಬಂಧನಕ್ಕೆ ಸೇನೆಯ ತಂತ್ರವೇ ಕಾರಣ ಎಂದು ಆರೋಪಿಸಿದ್ದರು.
ಈಗಾಗಲೇ ಭ್ರಷ್ಟಾಚಾರ ಕೇಸುಗಳಲ್ಲಿ ಇಮ್ರಾನ್‌ ಮೇ 31ರವರೆಗೆ ಜಾಮೀನು ಮೇಲಿದ್ದಾರೆ.

ಇಮ್ರಾನ್‌ ಖಾನ್‌ ಜಾಮೀನು ಮೇ 31ರವರೆಗೆ ವಿಸ್ತರಣೆ
ಇಸ್ಲಾಮಾಬಾದ್‌: ಭೂಹಗರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಆರೋಪ ಹೊತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ನೀಡಲಾಗಿದ್ದ ಜಾಮೀನನ್ನು ಮೇ 31ರವರೆಗೆ ವಿಸ್ತರಿಸಿ ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿದೆ. ಬುಧವಾರದ ವಿಚಾರಣೆ ವೇಳೆಗೆ ಸರ್ಕಾರದ ಪರ ವಕೀಲರಿಗೆ ಇಮ್ರಾನ್‌ ಖಾನ್‌ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ಮಾಹಿತಿ ನೀಡುವಂತೆ ಇತ್ತೀಚೆಗೆ ಕೋರ್ಟ್‌ ಆದೇಶಿಸಿತ್ತು. ಆದರೆ ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲರಾದ ಸರ್ಕಾರದ ವಕೀಲರು ಇನ್ನೂ 2 ವಾರ ಕಾಲಾವಕಾಶ ಕೋರಿದರು. ಇದನ್ನು ಮನ್ನಿಸಿದ ಕೋರ್ಚ್‌, ಮೇ 9 ರ ನಂತರ ದಾಖಲಾದ ಯಾವುದೇ ಪ್ರಕರಣಗಳಲ್ಲಿ ಇಮ್ರಾನ್‌ ಖಾನ್‌ರನ್ನು ಮೇ 31ರವರೆಗೆ ಬಂಧಿಸಕೂಡದು ಎಂದು ಹೇಳಿತು.

ಇದನ್ನೂ ಓದಿ: ನನಗೆ ಟಾಯ್ಲೆಟ್‌ಗೆ ಹೋಗಲೂ ಬಿಡ್ತಿಲ್ಲ; ತೀವ್ರ ಚಿತ್ರಹಿಂಸೆ ನೀಡ್ತಿದ್ದಾರೆ: ಇಮ್ರಾನ್‌ ಖಾನ್