ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಪತ್ನಿ ಸಮರ್ ಮುಹಮ್ಮದ್ ಅಬು ಝಮರ್ ನಕಲಿ ಪಾಸ್‌ಪೋರ್ಟ್ ಬಳಸಿ ಟರ್ಕಿಗೆ ಪರಾರಿಯಾಗಿ ಮರುವಿವಾಹವಾಗಿದ್ದಾರೆ. ಟರ್ಕಿಯಲ್ಲಿ ನಡೆದ ಮರು ಮದುವೆಯನ್ನು ಹಮಾಸ್‌ನ ರಾಜಕೀಯ ಬ್ಯೂರೋದ ಹಿರಿಯ ಅಧಿಕಾರಿ ಫಾತಿ ಹಮ್ಮದ್ ಏರ್ಪಡಿಸಿದ್ದರು ಎಂದು ವರದಿಯಾಗಿದೆ..

ಕಳೆದ ವರ್ಷ ಆಕ್ಟೋಬರ್‌ನಲ್ಲಿ ಇಸ್ರೇಲ್ ದಾಳಿಯಿಂದ ಹತ್ಯೆಯಾದ ಹಮಾಸ್‌ನ ಮಾಜಿ ನಾಯಕ ಯಹ್ಯಾ ಸಿನ್ವಾರ್‌ನ ವಿಧವೆ ಪತ್ನಿ ನಕಲಿ ಪಾಸ್‌ಪೋರ್ಟ್ ಬಳಸಿ ಗಾಜಾದಿಂದ ಟರ್ಕಿಗೆ ಪರಾರಿಯಾಗಿದ್ದು, ಅಲ್ಲಿ ಅವರು ಮರುಮದುವೆಯಾಗಿದ್ದಾರೆ ಎಂದು ಇಸ್ರೇಲಿ ಮಾಧ್ಯ ವೈನೆಟ್ ವರದಿ ಮಾಡಿದೆ. ಯಹ್ಯಾ ಸಿನ್ವಾರ್‌ನ ಪತ್ನಿ ಸಮರ್ ಮುಹಮ್ಮದ್ ಅಬು ಝಮರ್ ಅವರು 2011ರಲ್ಲಿ ಯಹ್ಯಾ ಸಿನ್ವಾರ್‌ನನ್ನು ಮದುವೆಯಾಗಿದ್ದರು. ಗಾಜಾದ ಇಸ್ಲಾಮಿಕ್ ಯುನಿವರ್ಸಿಟಿಯಲ್ಲಿ ಥಿಯೋಲಾಜಿ ಅಂದ್ರೆ ದೇವಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಈಕೆ ಈಗ ನಕಲಿ ಪಾಸ್‌ಪೋರ್ಟ್‌ ಬಳಸಿ ತನ್ನ ಮಕ್ಕಳೊಂದಿಗೆ ಟರ್ಕಿಗೆ ಪರಾರಿಯಾಗಿದ್ದಾಳೆ ಎಂದು ಇಟಲಿಯ ಮಾಧ್ಯಮವೊಂದು ವರದಿ ಮಾಡಿದೆ.

ಮತ್ತೊಬ್ಬ ಮಹಿಳೆಯ ಪಾಸ್‌ಪೋರ್ಟ್ ಬಳಸಿ ಗಾಜಾಗೆ ಎಸ್ಕೇಪ್

ಅವಳು ಈಗ ಇಲ್ಲಿಲ್ಲ, ಆಕೆ ತನ್ನ ಮಕ್ಕಳೊಂದಿಗೆ ಟರ್ಕಿಯಲ್ಲಿ ಇದ್ದಾಳೆ ಎಂದು ಗಾಜಾದ ಸುದ್ದಿ ಮೂಲವೊಂದು ಹೇಳಿದ್ದಾಗಿ ವೈನೆಟ್ ವರದಿ ಮಾಡಿದೆ. ಆಕೆ ಹೀಗೆ ತಪ್ಪಿಸಿಕೊಳ್ಳುವುದಕ್ಕೆ ಆಕೆಗೆ ಉನ್ನತ ಮಟ್ಟದ ಬೆಂಬಲ, ಲಾಜಿಸ್ಟಿಕ್ ನೆರವು ಹಾಗೆಯೇ ಸಾಮಾನ್ಯ ಗಾಜಾ ಪ್ರಜೆ ಬಳಿ ಇರದ ಹಣ ಆಕೆ ಬಳಿ ಇತ್ತು. ಆಕೆ ಗಾಜಾದ ಮತ್ತೊಬ್ಬ ಮಹಿಳೆಯ ಪಾಸ್‌ಪೋರ್ಟ್ ಬಳಸಿ ರಫಾ ಗಡಿ ದಾಟುವ ಮೂಲಕ ಗಾಜಾವನ್ನು ಬಿಟ್ಟು ಈಜಿಪ್ಟ್‌ಗೆ ತಲುಪಿದ್ದಾಳೆ ಎಂದು ಗಾಜಾದ ಸ್ಥಳೀಯ ಮೂಲವೊಂದು ಹೇಳಿದ್ದಾಗಿ ವೈನೆಟ್ ವರದಿ ಮಾಡಿದೆ.

ಟರ್ಕಿಯಲ್ಲಿ ಮರು ಮದುವೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯಾಹ್ಯಾ ಸಿನ್ವಾರ್ ನಿಧನರಾದ ನಂತರ ಆಕೆ ಮರು ಮದುವೆಯಾಗಿದ್ದಾಳೆ. ಟರ್ಕಿಯಲ್ಲಿ ನಡೆದ ಮರು ಮದುವೆಯನ್ನು ಹಮಾಸ್‌ನ ರಾಜಕೀಯ ಬ್ಯೂರೋದ ಹಿರಿಯ ಅಧಿಕಾರಿ ಫಾತಿ ಹಮ್ಮದ್ ಏರ್ಪಡಿಸಿದ್ದರು. ಹಮಾಸ್ ಕಾರ್ಯಕರ್ತರು ಮತ್ತು ಅವರ ಕುಟುಂಬಗಳನ್ನು ಸಂಘರ್ಷ ವಲಯದಿಂದ ಹೊರಗೆ ಸ್ಥಳಾಂತರಿಸುವ ಪ್ರಯತ್ನಗಳ ಮೂಲಕ ಹಮ್ಮದ್ ಈ ಹಿಂದೆಯೂ ಸುದ್ದಿಯಾಗಿದ್ದರು.

ಗಾಜಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದ ಆರಂಭಿಕ ತಿಂಗಳುಗಳಲ್ಲೇ ಹಮಾಸ್, ನಕಲಿ ದಾಖಲೆಗಳು, ಕಾಲ್ಪನಿಕ ವೈದ್ಯಕೀಯ ದಾಖಲೆಗಳು ಇತ್ಯಾದಿಗಳನ್ನು ಬಳಸಿ ಹಮಾಸ್‌ನ ಹಿರಿಯ ಸದಸ್ಯರ ಕುಟುಂಬಗಳನ್ನು ಗಾಜಾದಿಂದ ಹೊರಗೆ ಸ್ಥಳಾಂತರಿಸಲು ಒಂದು ವ್ಯವಸ್ಥೆಯನ್ನು ಸ್ಥಾಪಿಸಿತ್ತು.

ಯಹ್ಯಾ ಸಿನ್ವಾರ್ ಅವರ ಮರಣದ ನಂತರ ಗುಂಪಿನ ನಾಯಕತ್ವವನ್ನು ವಹಿಸಿಕೊಂಡಿದ್ದ ಯಾಹ್ಯಾ ಸಿನ್ವಾರ್ ಅವರ ಸಹೋದರ ಮೊಹಮ್ಮದ್‌ನ ವಿಧವೆ ಪತ್ನಿ ನಜ್ವಾ ಕೂಡ ಅದೇ ಜಾಲದ ಮೂಲಕ ಗಾಜಾವನ್ನು ತೊರೆದಿದ್ದಾರೆ ಅಂದಿನಿಂದ ಇವರಿಬ್ಬರು ಎಲ್ಲೂ ಕಂಡುಬಂದಿಲ್ಲ. ತಮ್ಮ ಗಂಡಂದಿರ ಸಾವಿಗೂ ಮೊದಲೇ ಈ ಇಬ್ಬರೂ ಮಹಿಳೆಯರು ರಫಾ ಮೂಲಕ ಗಾಜಾವನ್ನು ತೊರೆದಿದ್ದಾರೆ ಎಂದು ಇಸ್ರೇಲಿ ಭದ್ರತಾ ಮೂಲವು ದೃಢಪಡಿಸಿದೆ.

2024 ರ ಅಕ್ಟೋಬರ್ 16ರಂದು ರಫಾದ ತಾಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಹೊರಗೆ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಇಸ್ರೇಲಿ ಪಡೆಗಳು ಯಾಹ್ಯಾ ಸಿನ್ವಾರ್ ಅವರನ್ನು ಹತ್ಯೆ ಮಾಡಿದ್ದವು. ಡ್ರೋನೊಂದು ಅವರು ಕಟ್ಟಡದೊಳಗೆ ಇರುವುದನ್ನು ಪತ್ತೆ ಮಾಡಿತ್ತು. ಇದಾದ ನಂತರ ಇಸ್ರೇಲ್ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿತ್ತು. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲ್‌ನ ಗಾಜಾ ನಡುವಣ ಯುದ್ಧ 21 ನೇ ತಿಂಗಳು ಪ್ರವೇಶಿಸಿದ್ದು, ಇದುವರೆಗೆ 59,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ.

ಇಸ್ರೇಲ್ ಯುದ್ಧದಿಂದಾಗಿ ಗಾಜಾ ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಆರೋಗ್ಯ ಗುಂಪುಗಳು ಎಚ್ಚರಿಸಿವೆ. ಮಾರ್ಚ್ 2 ರಿಂದ, ಇಸ್ರೇಲ್‌ ಹೇರಿರುವ ದಿಗ್ಬಂಧನದಿಂದ ಆಹಾರ, ಔಷಧ, ನೀರು ಮತ್ತು ಇಂಧನ ಗಾಜಾಗೆ ಪ್ರವೇಶಿಸುವುದು ಸೀಮಿತವಾಗಿದ್ದು, ಈ ಪ್ರದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಹೆಚ್ಚಳವಾಗಿದೆ.

ಇತ್ತೀಚಿನ ವಾರಗಳಲ್ಲಿ ಶಿಶುಗಳು ಸೇರಿದಂತೆ ಕನಿಷ್ಠ 111 ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 100,000 ಮಹಿಳೆಯರು ಮತ್ತು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲೇ ಸಹಾಯ ವಿತರಣಾ ಕೇಂದ್ರಗಳ ಬಳಿ, ಆಹಾರವನ್ನು ಪಡೆಯಲು ಪ್ರಯತ್ನಿಸುವಾಗ 1,060 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 7,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ಬೆಂಬಲಿತ ಐಪಿಸಿ ವರದಿಯ ಪ್ರಕಾರ, ಗಾಜಾದ ಸುಮಾರು 2.1 ಮಿಲಿಯನ್ ನಿವಾಸಿಗಳು ತೀವ್ರ ಆಹಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸುಮಾರು 470,000 ಜನರು ಅತ್ಯುನ್ನತ ಮಟ್ಟದ ದುರಂತ ಹಸಿವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಹೆಚ್ಚು ಬಾಧಿತರಾದವರಲ್ಲಿ ಐದು ವರ್ಷದೊಳಗಿನ 71,000 ಮಕ್ಕಳು ಮತ್ತು ತುರ್ತು ಆರೈಕೆಯ ಅಗತ್ಯವಿರುವ 17,000 ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಸೇರಿದ್ದಾರೆ. ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ತೀವ್ರ ಆಹಾರದ ಅಭಾವದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.