Asianet Suvarna News Asianet Suvarna News

ಅಫ್ಘಾನಿಸ್ತಾನದ ಅರ್ಧ ಜನತೆಗೆ ಹಸಿವಿನ ಭೀತಿ : ವಿಶ್ವಸಂಸ್ಥೆ ವರದಿ

*ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಫ್ಘಾನಿಸ್ತಾನದಲ್ಲಿ ಭೀಕರ ಬರ 
*2 ಕೋಟಿ 28 ಲಕ್ಷ ಜನರಿಗೆ ಹಸಿವಿನ ಭೀತಿ : ಕೂಲಿಗಾಗಿ ಕಾಳು  ಯೋಜನೆ ಜಾರಿ
*ಎಲ್ಲಾ ಆತಂಕಗಳನ್ನು ಪರಿಹರಿಸಲಾಗುವುದು" ಎಂದು ತಾಲಿಬಾನ್‌ ಸರ್ಕಾರ

half of Afghans will face food crisis during this winter says United Nations
Author
Bengaluru, First Published Oct 26, 2021, 12:19 PM IST
  • Facebook
  • Twitter
  • Whatsapp

ಕಾಬೂಲ್‌ (ಅ. 26 ):  ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಫ್ಘಾನಿಸ್ತಾನ (Afghanistan) ಭೀಕರ ಬರ ಎದುರಿಸುತ್ತಿದ್ದು, ದೇಶದ 4 ಕೋಟಿ ಜನಸಂಖ್ಯೆಯ ಪೈಕಿ 2 ಕೋಟಿ 28 ಲಕ್ಷ ಜನ ಹಸಿವಿನ ಭೀತಿಗೆ ತುತ್ತಾಗಿದ್ದಾರೆ. ಅದರಲ್ಲೂ ಕೃಷಿಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಮೇಲೆ ಬರ ಭೀಕರ ಪರಿಣಾಮ ಬೀರಿದ್ದು, 73 ಲಕ್ಷ ಜನ ಮತ್ತು ಜಾನುವಾರುಗಳು ಅತಂತ್ರರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.  

ಕೂಲಿಗಾಗಿ ಕಾಳು ಎಂಬ ಯೋಜನೆ ಜಾರಿ!

ಈ ನಡುವೆ ನಿರುದ್ಯೋಗ, ಬಡತನದಿಂದ ತತ್ತರಿಸಿರುವ ಜನತೆಗೆ ಆಹಾರ ಪೂರೈಸಲು ತಾಲಿಬಾನ್‌ ಸರ್ಕಾರ (Taliban Government), ಭಾರತದ ಉದ್ಯೋಗ ಖಾತ್ರಿ ಯೋಜನೆಯಂತೆ ಕೂಲಿಗಾಗಿ ಕಾಳು ಎಂಬ ಯೋಜನೆ ಜಾರಿಗೊಳಿಸಿದೆ. ಭಾನುವಾರ ಈ ಯೋಜನೆಗೆ ಚಾಲನೆ ನೀಡಿರುವ ತಾಲಿಬಾನಿ ಆಡಳಿತ ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. ಅಫ್ಘಾನಿಸ್ತಾನದಾದ್ಯಂತ ಈ ಯೋಜನೆ ಜಾರಿ ಮಾಡಿದ್ದು, ರಾಜಧಾನಿ ಕಾಬೂಲ್‌ (Kabul) ಒಂದರಲ್ಲೇ 40,000 ಜನಕ್ಕೆ ಕಾಲುವೆ ತೋಡುವ ಕಾಮಗಾರಿ ನೀಡಿ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. ಅಲ್ಲದೇ ಇಲ್ಲೂ ಕೂಡ ತಾಲಿಬಾನಿಗಳು ಕಾರ್ಮಿಕರನ್ನು ಹಿಂಸಿಸುತ್ತಿದ್ದು, ಹೆಚ್ಚು ಕೆಲಸ ತೆಗೆದುಕೊಳ್ಳುತ್ತಿದ್ದಾರೆ.

ವಿಶ್ವ ಸಂಸ್ಥೆಯ ಸಹಾಯದ ನಿರಿಕ್ಷೇಯಲ್ಲಿ ಅಫ್ಘಾನ್!

ಈ ಚಳಿಗಾಲದಲ್ಲಿ 22 ಮಿಲಿಯನ್‌ಗಿಂತಲೂ ಹೆಚ್ಚು ಆಫ್ಘನ್ನರು ಆಹಾರದ ಅಭದ್ರತೆಯನ್ನ ಅನುಭವಿಸುತ್ತಾರೆ.  ತಾಲಿಬಾನಿಗಳ ಆಕ್ರಮಣದಿಂದಾದ ಸಮಸ್ಯೆಗಳು ಒಂದೆಡೆಯಾದರೆ  ಹವಾಮಾನ ಬದಲಾವಣೆಯಿಂದ ಉಂಟಾದ ಬರಗಾಲವು ದೇಶದವನ್ನು ಇನ್ನಷ್ಟು ಇಕ್ಕಟ್ಟಿಗೆ ನೂಕಲಿದೆ. "ಈ ಚಳಿಗಾಲದಲ್ಲಿ, ಲಕ್ಷಾಂತರ ಆಫ್ಘನ್ನರು ನಾವು ಸಹಾಯ ಮಾಡುವವರೆಗೂ ತಮ್ಮ ಜೀವ ಉಳಿಸಲು ವಲಸೆ ಹೋಗಬೇಕು ಅಥವಾ ಹಸಿವಿನಿಂದ ಅಲ್ಲಿಯೇ ಉಳಿಯಬೇಕು, " ಎಂದು ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯ ನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲಿ (David Beasley)ಹೇಳಿದ್ದಾರೆ.

ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!

ಯುದ್ಧ-ಹಾನಿಗೊಳಗಾದ ಯೆಮೆನ್ ಅಥವಾ ಸಿರಿಯಾ ಎದುರಿಸುತ್ತಿರುವ ಕೊರತೆಗಿಂತ ಬಿಕ್ಕಟ್ಟು ಈಗಾಗಲೇ ದೊಡ್ಡದಾಗಿದೆ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಹೊರತುಪಡಿಸಿ ಇತರ ಯಾವುದೇ ದೇಶದ ಆಹಾರ ಅಭದ್ರತೆಯ ಸ್ಥಿತಿಗಿಂತ ಅಫ್ಘಾನಿಸ್ತಾನ ಸ್ಥಿತಿ ಕೆಟ್ಟದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವ ಆಹಾರ ಕಾರ್ಯಕ್ರಮ ಮತ್ತು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ನೀಡಿದ ಹೇಳಿಕೆಯ ಪ್ರಕಾರ, ಎರಡು ಆಫ್ಘನ್ನರಲ್ಲಿ ಒಬ್ಬರು ಹಂತ 3 "ಬಿಕ್ಕಟ್ಟು" ಅಥವಾ ಹಂತ 4 "ತುರ್ತು" ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. 

ಪಾಕ್‌ ನೆಲೆ ಬಳಸಿ ಅಫ್ಘಾನಿಸ್ತಾನ ಮೇಲೆ ಮತ್ತೆ ಅಮೆರಿಕ ದಾಳಿ?

"ಅಫ್ಘಾನಿಸ್ತಾನದಲ್ಲಿ ರೈತರು, ಮಹಿಳೆಯರು, ಚಿಕ್ಕ ಮಕ್ಕಳು ಮತ್ತು ಹಿರಿಯರು ಸೇರಿದಂತೆ  ಲಕ್ಷಾಂತರ ಜನರ ಮೇಲೆ ಚಳಿಗಾಲವು ಪ್ರಭಾವ ಬೀರುವ ಮುಂಚೆಯೇ ಆಹಾರ ಸರಬರಾಜು ವೇಗ ಹೆಚ್ಚಿಸಬೇಕು ಮತ್ತು ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಕಾರ್ಯ ನಿರ್ವಹಿಸಬೇಕು" ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ನಿರ್ದೇಶಕರಾದ (Food and Agriculture Organization ಕ್ಯು ಡೊಂಗ್ಯು (Qu Dongyu) ಹೇಳಿದ್ದಾರೆ.‌

ಸಮಸ್ಯೆ ಬಗೆಹರಿಸಲಿದ್ದೇವೆ : ತಾಲಿಬಾನ್!

ತಾಲಿಬಾನಿಗಳ ಆಕ್ರಮಣದಿಂದ ಕಂಗಾಲಾಗಿದ್ದ ಆಫ್ಘನ್‌ ಜನತೆಗೆ ವಿಶ್ವ ಸಂಸ್ಥೆಯ ವರದಿ ಇನ್ನಷ್ಷು ಆತಂಕಕ್ಕೆ ಒಳಪಡಿಸಿದೆ. ತಾಲಿಬಾನಿಗಳ ಉಪಟಳ ತಾಳಲಾರದೇ ಈಗಾಗಲೆ ಹಲವು ಕುಟುಂಬಗಳು ತಮ್ಮ ಮನೆ ಮಠಗಳನ್ನು ಮಾರಿ ಬೇರೆ ಪ್ರದೇಶಗಳಿಗೆ ಸ್ಥಳಾಂತರ ಆಗಿದ್ದಾರೆ. ಈ ಮಧ್ಯೆ ಹವಾಮಾನ ಬದಲಾವಣೆಯ ಬಿಸಿ ಅಫ್ಘನ್ನರಿಗೆ ಜೋರಾಗಿಯೇ ತಟ್ಟಲಿದೆ. ಈ  ಬಿಕ್ಕಟ್ಟಿನ ಬಗ್ಗೆ ಕೇಳಿದಾಗ,  "ನಾವು ನಮ್ಮ ಜನರನ್ನು ಪ್ರಸ್ತುತ ಪರಿಸ್ಥಿತಿಯಿಂದ ಹೊರತರಲು ಮತ್ತು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಜಾಗತಿಕ ಮಟ್ಟದಿಂದ ನೆರವು ಕೂಡ ಬಂದಿದೆ. ನಾವು ಆಹಾರ ಮತ್ತು ಬಟ್ಟೆ ಸೇರಿದಂತೆ  ಇತರ ವ್ಯವಸ್ಥೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ, ಎಲ್ಲಾ ಆತಂಕಗಳನ್ನು ಪರಿಹರಿಸಲಾಗುವುದು" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ (Zabihullah Mujahid) ಹೇಳಿದ್ದಾರೆ..

Follow Us:
Download App:
  • android
  • ios