ಸರ್ಕಾರ ವಿರುದ್ಧ ಜಾಗತಿಕ ಸಂಚಿನ ಮಾಹಿತಿ ಬಯಲು| ಕೃಷಿ ಕಾಯ್ದೆ ವಿರುದ್ಧ ವಿಶ್ವವ್ಯಾಪಿ ಆಂದೋಲನಕ್ಕೆ ಕರೆ| ಗ್ರೆಟಾ ಟ್ವೀಟರ್‌ ಖಾತೆಯಲ್ಲಿ ದಾಖಲೆ ಪ್ರತ್ಯಕ್ಷ

ನವದೆಹಲಿ(ಫೆ.04): ಕೃಷಿ ಕಾಯ್ದೆಯು ಭಾರತದ ಆಂತರಿಕ ವಿಷಯ. ಆದರೂ ಇದರ ವಿರುದ್ಧದ ರೈತರ ಹೋರಾಟವನ್ನೇ ಬಳಸಿಕೊಂಡು ವಿದೇಶೀ ಶಕ್ತಿಗಳು, ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿರುವೆ ಎಂಬ ದಾಖಲೆಗಳು ಲಭ್ಯವಾಗಿವೆ.

ಭಾರತದ ವಿರುದ್ಧ ವಿದೇಶಿ ಸೆಲೆಬ್ರಿಟಿಗಳ ಅಪಪ್ರಚಾರ!

ಕಾಯ್ದೆ ವಿರುದ್ಧ ದನಿ ಎತ್ತಿರುವ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ‘ಗ್ಲೋಬಲ್‌ ಫಾರ್ಮರ್‌ ಸ್ಟೆ್ರೖಕ್‌- ಫಸ್ಟ್‌ ವೇವ್‌’ ಹೆಸರಿನ ದಾಖಲೆ ಲಗತ್ತಿಸಿದ್ದಾರೆ. ಜನವರಿ 26ರಂದು ರೈತರು ದಿಲ್ಲಿಯಲ್ಲಿ ಟ್ರಾಕ್ಟರ್‌ ಪರೇಡ್‌ ನಡೆಸುವ ಮುನ್ನವೇ ಈ ಆಂದೋಲನ ಆರಂಭವಾಗಿತ್ತು ಎಂಬುದು ದಾಖಲೆಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ಅದರಲ್ಲಿ, ‘ವಿಶ್ವದ ಯಾವುದೇ ಭಾಗದಲ್ಲಿ ಇದ್ದರೂ ಭಾರತದ ರೈತ ಕಾಯ್ದೆ ವಿರುದ್ಧ ದನಿ ಎತ್ತಿ. ನಿಮ್ಮಲ್ಲಿನ ಭಾರತದ ದೂತಾವಾಸದ ಸನಿಹ ಪ್ರತಿಭಟನೆ ಮಾಡಿ. ಆನ್‌ಲೈನ್‌ನಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಫೆಬ್ರವರಿ 4 ಹಾಗೂ 6ರಂದು ಆಂದೋಲನ ಮಾಡಿ’ ಎಂದು ಕರೆ ನೀಡಲಾಗಿದೆ. ಅಲ್ಲದೆ, ಬಿಜೆಪಿ ಹಾಗೂ ಆರೆಸ್ಸೆಸ್‌ಗಳನ್ನು ಫ್ಯಾಸಿಸ್ಟ್‌ ಎಂದೂ ಟೀಕಿಸಲಾಗಿದೆ.

ಈ ದಾಖಲೆಯನ್ನು ಗ್ರೆಟಾ ಲಗತ್ತಿಸಿದ ಬಳಿಕ ‘ವಿದೇಶಿ ಹಸ್ತಕ್ಷೇಪ’ ಸಾಬೀತಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಗ್ರೆಟಾ ಅವರು ದಾಖಲೆಯನ್ನು ತಡರಾತ್ರಿ ಟ್ವೀಟರ್‌ನಿಂದ ಅಳಿಸಿಹಾಕಿದ್ದಾರೆ.