ನವದೆಹಲಿ(ಫೆ.04): ಭಾರತ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧ ಪಾಪ್‌ ಗಾಯಕಿ ರಿಹಾನಾ ದನಿ ಎತ್ತುತ್ತಿದ್ದಂತೆಯೇ ಇನ್ನಷ್ಟುಹಾಲಿವುಡ್‌ ನಟರು, ಗಣ್ಯರು ಹಾಗೂ ಸೆಲೆಬ್ರಿಟಿಗಳು ಬುಧವಾರ ಗಂಟಲೇರಿಸಿದ್ದಾರೆ. ಯುವ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌, ನೀಲಿ ಚಿತ್ರಗಳ ನಟಿ ಮಿಯಾ ಖಲೀಫಾ, ಗಾಯಕರಾದ ಜಯ್‌ ಶಾನ್‌, ಡಾ| ಝೇಯಸ್‌, ಮೊದಲಾದವರು ಕೃಷಿ ಕಾಯ್ದೆಗಳ ವಿರುದ್ಧ ನಡೆದಿರುವ ಪ್ರತಿಭಟನೆಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದರೆ ಆಂತರಿಕ ವಿಷಯದ ಬಗ್ಗೆ ವಿದೇಶಿಯರ ಮಧ್ಯಪ್ರವೇಶವನ್ನು ಬಾಲಿವುಡ್‌ ಚಿತ್ರೋದ್ಯಮ ಕಟುವಾಗಿ ವಿರೋಧಿಸಿದೆ. ಬಾಲಿವುಡ್‌ನ ಈ ನಿರ್ಧಾರಕ್ಕೆ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಕೂಡಾ ಧ್ವನಿಗೂಡಿಸಿದ್ದಾರೆ. ಇದರೊಂದಿಗೆ ರೈತ ಹೋರಾಟ ಇದೀಗ ವಿದೇಶಿ ಮತ್ತು ದೇಶಿ ಸೆಲೆಬ್ರಿಟಿ ಸಮರವಾಗಿ ಪರಿವರ್ತನೆಗೊಂಡಿದೆ.

ಬೇಜವಾಬ್ದಾರಿ ಆರೋಪ: ವಿದೇಶಾಂಗ ಸಚಿವಾಲಯ

ಈ ನಡುವೆ ವಿದೇಶಿ ಗಣ್ಯರ ಟೀಕೆ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ. ‘ಸೆಲೆಬ್ರಿಟಿಗಳು ಮಾಡುತ್ತಿರುವ ಪ್ರಚೋದಕ ಹ್ಯಾಷ್‌ಟ್ಯಾಗ್‌ಗಳ ಟ್ವೀಟ್‌ಗಳು ಸರಿಯಿಲ್ಲ. ಅವು ಬೇಜವಾಬ್ದಾರಿತನದ ಆರೋಪಗಳು. ಕೆಲವು ಪಟ್ಟಭದ್ರರು ತಮ್ಮ ಅಜೆಂಡಾಗಳನ್ನು ಪ್ರತಿಭಟನೆಯ ಮೇಲೆ ಹೇರುತ್ತಿದ್ದಾರೆ. ದೇಶದ ಕೆಲವೇ ಕೆಲವು ರೈತರಿಗೆ ಕಾಯ್ದೆಗಳ ಬಗ್ಗೆ ಆಕ್ಷೇಪವಿದೆ. ಈ ಬಗ್ಗೆ ಟೀಕೆ ಮಾಡುವ ಮುನ್ನ ಸಾಧಕ ಬಾಧಕ ನೋಡಬೇಕು. ಸರ್ಕಾರವು ರೈತರ ಜತೆ ಮಾತುಕತೆ ನಡೆಸಿ ಸಂಯಮ ಪ್ರದರ್ಶಿಸಿದೆ. ಕಾಯ್ದೆ ತಡೆಹಿಡಿಯುವ ಆಫರ್‌ ಅನ್ನೂ ರೈತರಿಗೆ ನೀಡಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ವಿದೇಶಿ ಸೆಲೆಬ್ರಿಟಿಗಳು ಹೇಳಿದ್ದೇನು?

ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಭಾರೀ ಪ್ರತಿಭಟನೆಗಳಿಗೆ ಮಂಗಳವಾರ ಬೆಂಬಲ ನೀಡಿದ್ದ ವಿಶ್ವದ ಟಾಪ್‌ ಪಾಪ್‌ ಗಾಯಕಿ ರಿಹಾನಾ, ‘ರೈತರ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿ ಗಡಿ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನಾವೇಕೆ ನಮ್ಮ ಧ್ವನಿಯೆತ್ತುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಮತ್ತಷ್ಟು ಸೆಲೆಬ್ರಿಟಿಗಳು, ಗಣ್ಯರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

9 ವರ್ಷದ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಾಂಗುಜಾಂ ಅವರು, ‘ಗ್ರೇಟಾ ಥನ್‌ಬರ್ಗ್‌ ಅವರು ರೈತರ ಹೋರಾಟ ಬೆಂಬಲಿಸಬೇಕು’ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಓಗೊಟ್ಟಿರುವ ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್‌, ‘ಭಾರತದ ಬಡ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ.

ಇನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಬಂಧು ಮೀನಾ ಹ್ಯಾರಿಸ್‌ ಟ್ವೀಟ್‌ ಮಾಡಿ, ‘ದಿಲ್ಲಿಯಲ್ಲಿ ರೈತರ ವಿರುದ್ಧ ಅರೆಸೇನಾ ಪಡೆಗಳ ಬಲಪ್ರಯೋಗ ಮಾಡುವುದು ಹಾಗೂ ಇಂಟರ್ನೆಟ್‌ ಸ್ಥಗಿತ ಮಾಡಲಾಗುತ್ತದೆ ಎಂದರೆ, ಇದು ಸಿಟ್ಟು ತರಿಸುವಂಥ ಕೆಲಸವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಇನ್ನು ನೀಲಿ ಚಿತ್ರಗಳ ನಟಿ ಮಿಯಾ ಖಲೀಫಾ ‘ದಿಲ್ಲಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇಂಟರ್ನೆಟ್‌ ಸ್ತಬ್ಧಗೊಳಿಸಲಾಗುತ್ತಿದೆ. ರೈತರನ್ನು ‘ಪೇಡ್‌ ನಟರು’ ಎಂದು ಟೀಕಿಸುತ್ತಿರುವುದು ಸಲ್ಲದರು. ನಾನು ರೈತರ ಜತೆಗಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ, ಹಾಲಿವುಡ್‌ ಸ್ಟಾರ್‌ ಜಾನ್‌ ಕುಸ್ಯಾಕ್‌, ಉಗಾಂಡಾ ಪರಿಸರ ಕಾರ್ಯಕರ್ತೆ ವೆನೆಸ್ಸಾ ನಕಾಟೆ, ಜಯ್‌ ಶಾನ್‌ ಎಂದೇ ಖ್ಯಾತರಾದ ಕಮಲ್‌ಜಜಿತ್‌ ಸಿಂಗ್‌ ಝೂಟಿ, ಢಾ

ಝೇಡಸ್‌ ಎಂದೇ ಪ್ರಸಿದ್ಧರಾಗಿರುವ ರಾರ‍ಯಪ್‌ ಗಾಯಕ ಬಲ್ಜೀತ್‌ ಸಿಂಗ್‌ ಪದಂ, ಕೆನಡಾ ಯೂಟ್ಯೂಬ್‌ ಸ್ಟಾರ್‌ ಲಿಲ್ಲಿ ಸಿಂಗ್‌, ಭಾರತ ಮೂಲದ ಅಮೆರಿಕ ಚಿತ್ರನಿರ್ಮಾಣಕಾರ ರಾಕೇಶ್‌ ಬಾತ್ರಾ- ಮೊದಲಾದವರು ಕೂಡ ರೈತರ ಪರ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ ತಿರುಗೇಟು

ಈ ನಡುವೆ ಹಲವು ಬಾಲಿವುಡ್‌ ನಟರು ಸರ್ಕಾರದ ಪರ ದನಿ ಎತ್ತಿದ್ದಾರೆ. ‘ಭಾರತದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಖೆಡ್ಡಾಗೆ ಯಾರೂ ಬೀಳಬಾರದು. ಯಾವುದೇ ಆಂತರಿಕ ಸಂಘರ್ಷವಿಲ್ಲದೇ ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ನಟ ಅಜಯ್‌ ದೇವಗನ್‌ ಹೇಳಿದ್ದಾರೆ.

ಇನ್ನು ನಟ ಅಕ್ಷಯ ಕುಮಾರ್‌ ಕೂಡ ಪ್ರತಿಕ್ರಿಯಿಸಿ, ‘ರೈತರು ದೇಶದ ಮಹತ್ವದ ಭಾಗ. ವಿವಾದಗ್ಳ ಇತ್ಯರ್ಥಕ್ಕೆ ಯತನ ನಡೆದಿವೆ. ಭಿನ್ನಾಭಿಪ್ರಾಯ ಸೃಷ್ಟಿಸಿಕೊಳ್ಳುವುದಕ್ಕಿಂತ ಸರ್ವಸಮ್ಮತ ಸಂಧಾನ ಸೂತ್ರವನ್ನು ಬೆಂಬಲಿಸೋಣ’ ಎಂದಿದ್ದಾರೆ.

ನಿರ್ದೇಶಕ ಕರಣ್‌ ಜೋಹರ್‌ ಕೂಡ ಸಂಧಾನದ ಮಾತು ಆಡಿದ್ದು, ‘ಈ ಕ್ಲಿಷ್ಟಕರ ಸಮಯದಲ್ಲಿ ತಾಳ್ಮೆ ಇರಿಸಿಕೊಳ್ಳಬೇಕು. ಎಲ್ಲರೂ ಸರಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಯತ್ನಿಸಬೇಕು ರೈತರು ನಮ್ಮ ಬೆನ್ನೆಲುಬು. ನಮ್ಮನ್ನು ವಿಭಜಿಸಲು ಯಾರಿಗೂ ಅವಕಾಶ ನೀಡಬಾರದು’ ಎಂದಿದ್ದಾರೆ. ‘ಅರ್ಧಸತ್ಯಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ. ಎಲ್ಲವನ್ನೂ ಪರಿಶೀಲಿಸಿ ಅಭಿಪ್ರಾಯ ಹೊರಹಾಕಬೇಕು’ ಎಂದು ನಟ ಸುನೀಲ್‌ ಶೆಟ್ಟಿಹೇಳಿದ್ದು, ಪ್ರತಿಭಟನೆಗಳನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ.

ಆದರೆ ಬಾಲಿವುಡ್‌ನ ಬೆರಳೆಣಿಕೆಯಷ್ಟು ನಟರು ರೈತರ ಪರ ದನಿ ಎತ್ತಿದ್ದಾರೆ. ಅವರೆಂದರೆ ರಿಚಾ ಚಡ್ಢಾ, ಸ್ವರಾ ಭಾಸ್ಕರ್‌, ಸೋನು ಸೂದ್‌, ತಾಪ್ಸಿ ಪನ್ನು, ದಿವ್ಯಾ ದತ್ತಾ ಹಾಗೂ ಇತರ ಕೆಲವರು.

ತೆಂಡೂಲ್ಕರ್‌ ಕಿಡಿನುಡಿ:

ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಪ್ರತಿಕ್ರಿಯಿಸಿ, ‘ಭಾರತದ ಏಕತೆ ವಿಷಯದಲ್ಲಿ ರಾಜಿ ಇಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಾ ಭಾಗೀದಾರ ಆಗಲು ಸಾಧ್ಯವಿಲ್ಲ. ಭಾರತವೇ ಭಾರತದ ಒಳಿತಿಗೆ ನಿರ್ಣಯಿಸಬೇಕು ಎಂಬುದು ಭಾರತೀಯರಿಗೂ ಗೊತ್ತು. ಒಗ್ಗಟ್ಟಾಗಿರೋಣ’ ಎಂದು ಟ್ವೀಟ್‌ ಮಾಡಿದ್ದಾರೆ.