ಭೀಕರ ಕಾಡ್ಗಿಚ್ಚು ನಿಯಂತ್ರಸಲು ಹೆಲಿಕಾಪ್ಟರ್ ಮೂಲಕ ನೀರು ಹಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದು ಹೆಲಿಕಾಪ್ಟರ್ ಸಂಪೂರ್ಣ ಪತನಗೊಂಡಿದೆ. ರಕ್ಷಣಾ ತಂಡಗಳು ಕ್ಯಾಪ್ಟನ್ ಹುಡುಕಾಟದಲ್ಲಿ ನಿರತವಾಗಿದೆ.
ಗ್ರೀಸ್ (ಆ.02) ಐರೋಪ್ಯ ರಾಷ್ಟ್ರದಲ್ಲಿ ಕಾಡ್ಗಿಚ್ಚು ತೀವ್ರವಾಗಿ ಹರಡುತ್ತಿದೆ. ಗ್ರೀಸ್ ರಾಜಧಾನಿಯಾಗಿರುವ ಅಥೆನ್ಸ್‌ನ ಪಶ್ಚಿಮ ಭಾಗದಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಹಲವು ಹೆಲಿಕಾಪ್ಟರ್ ಮೂಲಕ ನೀರು ಹರಿಸಲಾಗುತ್ತಿದೆ. ಹಲವು ಅಗ್ನಿಶಾಮಕ ದಳದ ಹೆಲಿಕಾಪ್ಟರ್ ಕಾಡ್ಗಿಚ್ಚು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಕಾರ್ಯಾಚರಣೆ ನಡುವೆ ಎರಡು ಹೆಲಿಕಾಪ್ಟರ್ ಆಗಸದಲ್ಲಿ ಡಿಕ್ಕಿಯಾಗಿದೆ. ಈ ಪೈಕಿ ಒಂದು ಹೆಲಿಕಾಪ್ಟರ್ ಕಾಡ್ಗಿಚ್ಚು ಪ್ರದೇಶದಲ್ಲೇ ಪತನಗೊಂಡಿದೆ. ಈ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಹೆಲಿಕಾಪ್ಟರ್ ಸಿಬ್ಬಂದಿಗಳಿಗಾಗಿ ಹುಡುಕಾಟ
ಸಥಾ ಹಾಗೂ ಪೋರ್ಟೊ ಜರ್ಮನೋ ಕಾಡು ಪ್ರದೇಶದಲ್ಲಿ ತೀವ್ರವಾಗಿ ಬೆಂಕಿ ಹರಡುತ್ತಿದೆ. ಕಾಡ್ಗಿಚ್ಚಿನಿಂದ ಈಗಾಗಲೇ ಲಕ್ಷಾಂತರ ಮರ ಗಿಡಗಳು, ಸಾವಿರಾರು ಪ್ರಾಣಿ ಪಕ್ಷಿಗಳು ನಾಶವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಲವು ಹೆಲಿಕಾಪ್ಟರ್ ಬಳಸಿದೆ. ತುರ್ತು ಕಾರ್ಯಾಚರಣೆ ವೇಳೆ ಆಗಸದಲ್ಲಿ ಎರಡು ಹೆಲಿಕಾಪ್ಟರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಒಂದು ಹೆಲಿಕಾಪ್ಟರ್ ಪತನಗೊಂಡರೆ, ಮತ್ತೊಂದು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಈ ಪೈಕಿ ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಕ್ಯಾಪ್ಟನ್ ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಓರ್ವ ಕ್ಯಾಪ್ಟನ್ ಸುರಕ್ಷಿತವಾಗಿದ್ದರೆ, ಮತ್ತೊರ್ವ ಕ್ಯಾಪ್ಟನ್‌ಗೆ ಹುಡುಕಾಟ ತೀವ್ರಗೊಳಿಸಲಾಗಿದೆ .
ಹೆಲಿಕಾಪ್ಟರ್ ಡಿಕ್ಕಿಯಾಗುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ. ಓರ್ವ ಕ್ಯಾಪ್ಟನ್ ರಕ್ಷಣೆ ಮಾಡಲಾಗಿದೆ. ಮತ್ತೊರ್ವ ಕ್ಯಾಪ್ಟನ್‌ಗಾಗಿ ಹುಡುಕಾಟ ತೀವ್ರಗೊಂಡಿದೆ. ಡಿಕ್ಕಿಯಾದ ರಭಸಕ್ಕೆ ಹೆಲಿಕಾಪ್ಟರ್ ಹೊತ್ತಿ ಉರಿದಿದೆ. ಇಷ್ಟೇ ಅಲ್ಲ ಛಿದ್ರಗೊಂಡ ನೆಲಕ್ಕೆ ಅಪ್ಪಳಿಸಿದೆ. ಹೆಲಿಕಾಪ್ಟರ್‌ಗಳು ಎಲಿಫಿನ್ಸಿನಾ ವಾಯುನೆಲೆಯಿಂದ ಕಾರ್ಯಾಚರಣೆ ಆರಂಭಿಸಿತ್ತು. ಕಾಡ್ಗಿಚ್ಚು ಅತೀ ವೇಗವಾಗಿ ಹರಡುತ್ತಿರುವ ಕಾರಣ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ. ತುರ್ತು ಹಾಗೂ ಅತೀ ವೇಗದ ಕಾರ್ಯಾಚರಣೆ ವೇಳೆ ಈ ದುರಂತ ಸಂಭವಿಸಿದೆ.
ಯೂರೋಪ್‌ನಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಎಲ್ಲೆಡೆ ಬಿಸಿಗಾಳಿ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕಾಡ್ಗಿಚ್ಚು ಅತೀ ವೇಗವಾಗಿ ಹರಡುತ್ತಿದೆ. ತೀವ್ರ ತಾಪಮಾನ ಏರಿಕೆಯಿಂದ ಕಾಡಿನ ಬೆಂಕಿ ನಂದಿಸುವುದು ಅಗ್ನಿಶಾಮಕ ದಳಕ್ಕೆ ಸವಾಲಾಗಿದೆ. ಈಗಾಗಲೇ ಕಾಡ್ಗಿಚ್ಚು ಹರಡು ಪ್ರದೇಶಗಳ ಸುತ್ತ ಮುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದೆ.


