ಜರ್ಮನಿಯ ನ್ಯೂರೆನ್‌ಬರ್ಗ್ ಮೃಗಾಲಯದಲ್ಲಿ ಜಾಗದ ಕೊರತೆಯಿಂದಾಗಿ 12 ಆರೋಗ್ಯವಂತ ಗಿನಿ ಬಬೂನ್‌ಗಳನ್ನು ಹತ್ಯೆ ಮಾಡಲಾಗಿದೆ. ಈ ಕ್ರಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರ್ಲಿನ್: ಝೂ ಅಥವಾ ಮೃಗಾಲಯದಲ್ಲಿ ಜಾಗ ಇಲ್ಲ ಎಂದು 12 ಆರೋಗ್ಯವಂತ ಗಿನಿ ಬಬೂನ್‌ಗಳು ಎಂದರೆ ಕೋತಿಗಳನ್ನೇ ಬಹುತೇಕ ಹೋಲುವ ಕೋತಿ ಜಾತಿಯ ಪ್ರಾಣಿಗಳನ್ನು ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ಜರ್ಮನಿಯಲ್ಲಿ ನಡೆದಿದೆ. ಘಟನೆಗೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
12 ಆರೋಗ್ಯವಂತ ಗಿನಿ ಬಬೂನ್‌ಗಳ ಹತ್ಯೆ:
ದಕ್ಷಿಣ ಜರ್ಮನಿಯ ನ್ಯೂರೆನ್‌ಬರ್ಗ್ ಪ್ರಾಣಿ ಸಂಗ್ರಹಾಲಯದಲ್ಲಿ ಈ ಘಟನೆ ನಡೆದಿದ್ದು, 12 ಆರೋಗ್ಯವಂತ ಗಿನಿ ಬಬೂನ್‌ಗಳನ್ನು ಹತ್ಯೆ ಮಾಡಿದ್ದಾಗಿ ಮೃಗಾಲಯ ಖಚಿತಪಡಿಸಿದೆ. ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಮೃಗಾಲಯ ಹೇಳಿಕೆ ನೀಡಿದ್ದಾಗಿ ಅಲ್ಲಿನ ಡಿಡ್ಬ್ಯು ನ್ಯೂಸ್ ವರದಿ ಮಾಡಿದ್ದು, ಇದು ಜಗತ್ತಿನ್ನೆಲ್ಲೆಡೆ ಇರುವ ಪ್ರಾಣಿ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
ಜಾಗ ಇಲ್ಲದ ಕಾರಣಕ್ಕೆ ಪ್ರಾಣಿಗಳ ಹತ್ಯೆ:
ಈ ಬಗ್ಗೆ ನ್ಯೂರೆನ್‌ಬರ್ಗ್ ಮೃಗಾಲಯವೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಹಲವು ಬಾರಿ ಪ್ರಾಣಿಗಳನ್ನು ಇತರ ಕೇಂದ್ರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ವಿಫಲಗೊಂಡ ಹಿನ್ನೆಲೆ ಹಾಗೂ ಅವಿಗಳ ಸಂತತಿಯನ್ನು ನಿಯಂತ್ರಿಸುವುದು ವಿಫಲವಾದ ಹಿನ್ನೆಲೆ ಬೇರೆ ದಾರಿ ಕಾಣದೇ ಈ ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಇಲ್ಲಿ 40 ಗಿನಿ ಬಬೂನ್‌ಗಳಿದ್ದವು. ಆದರೆ ಕೇವಲ 25 ಗಿನಿ ಬಬೂನ್‌ಗಳು ಇರುವುದಕ್ಕೆ ವಾಸಕ್ಕೆ ಸಾಕಾಗುವಷ್ಟು ಮಾತ್ರ ಇಲ್ಲಿ ಜಾಗ ಇತ್ತು ಎಂದು ನ್ಯೂರೆನ್‌ಬರ್ಗ್ ಮೃಗಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲಿನ ಕೆಲ ಮಾಧ್ಯಮಗಳ ಪ್ರಕಾರ, ಮೃಗಾಲಯವು ಫೆಬ್ರವರಿ 2024ರಲ್ಲಿಯೇ ತನ್ನ ನಿರ್ಧಾರದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಮಿತಿಮೀರಿದ ಪ್ರಾಣಿಗಳ ದಟ್ಟಣೆಯು ಪ್ರಾಣಿಗಳ ನಡುವೆ ಆಗಾಗ್ಗೆ ಸಂಘರ್ಷ ಮತ್ತು ಹೆಚ್ಚುತ್ತಿರುವ ಆಕ್ರಮಣಶೀಲತೆಗೆ ಕಾರಣವಾಗಿದೆ, ಗಾಯಗಳಿಗೆ ಕಾರಣವಾಗಿದೆ ಮತ್ತು ಗುಂಪಿನ ಚಲನಶೀಲತೆಯನ್ನು ಅಡ್ಡಿಪಡಿಸುತ್ತದೆ ಎಂದು ಹೇಳಿಕೆ ನೀಡಿತ್ತು.
ಪ್ರಾಣಿಪ್ರಿಯರಿಂದ ತೀವ್ರ ಆಕ್ರೋಶ:
ಇದಾದ ನಂತರ ಕೆಲ ದಿನಗಳ ಹಿಂದೆ ಇಲ್ಲಿ ಪ್ರಾಣಿಗಳ ಸಂದರ್ಶಕರರಿಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿಯೇ ಈ ನಿಷೇಧವನ್ನು ಹೇರಲಾಗಿತ್ತು ಎಂದು ಈಗ ಪ್ರಾಣಿಪ್ರಿಯರು ಅಪಾದಿಸುತ್ತಿದ್ದಾರೆ. ಹಾಗೂ ಘಟನೆಯ ಬಗ್ಗೆ ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅನಗತ್ಯ ಮತ್ತು ಅಮಾನವೀಯ ಘಟನೆ ಎಂದು ಕರೆದಿದ್ದಾರೆ.
ಪ್ರಾಣಿಗಳ ಹಕ್ಕುಗಳ ಗುಂಪುಗಳು ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದು, ಮೃಗಾಲಯದ ಆಡಳಿತ ಮಂಡಳಿಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿವೆ. ಈ ಸಮಸ್ಯೆ ಮೃಗಾಲಯದ ಆಡಳಿತ ಮಂಡಳಿಯದ್ದೇ ಸೃಷ್ಟಿ ಎಂದು ಪ್ರಾಣಿಪ್ರಿಯರು ಆರೋಪಿಸಿದ್ದಾರೆ.
ನಾವು ಏನನ್ನು ನಿರೀಕ್ಷಿಸುತ್ತಿದ್ದೆವೋ ಅದು ಸಂಭವಿಸಿದೆ. ದಶಕಗಳಿಂದ ಮೃಗಾಲಯವು ಬೇಜವಾಬ್ದಾರಿ ಮತ್ತು ಸಮರ್ಥನೀಯವಲ್ಲದ ಸಂತಾನೋತ್ಪತ್ತಿ ನೀತಿಗಳನ್ನು ನಿರ್ವಹಿಸಿದ್ದರಿಂದ ಆರೋಗ್ಯಕರ ಪ್ರಾಣಿಗಳನ್ನು ಕೊಲ್ಲಬೇಕಾಯಿತು ಎಂದು ಪ್ರೊ ವೈಲ್ಡ್‌ಲೈಫ್ ಗುಂಪು ಅಲ್ಲಿನ ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೃಗಾಲಯದ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದ್ದು, ಪ್ರೊ ವೈಲ್ಡ್‌ಲೈಫ್ ಕೂಡ ಕೇಸ್ ದಾಖಲಿಸಿದೆ.
