ಆರ್‌ಎಸ್‌ಎಸ್ ವಿಚಾರಗಳನ್ನು ಜಾಗತಿಕವಾಗಿ ಪಸರಿಸಲು 'ಆರ್‌ಎಸ್‌ಎಸ್ ಫ್ರೆಂಡ್ಸ್' ಎಂಬ ಸಂಸ್ಥೆಯು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ಇದು ದೆಹಲಿಯ ಕೇಶವಕುಂಜ ಕಚೇರಿಯನ್ನು ತನ್ನ 'ಫಾರಿನ್ ಪ್ರಿನ್ಸಿಪಾಲ್' ಎಂದು ನಮೂದಿಸಿದ್ದು, ಮಾಹಿತಿ ವಿನಿಮಯ ಮತ್ತು ಸಾರ್ವಜನಿಕ ಸಂಪರ್ಕದ ಉದ್ದೇಶ ಹೊಂದಿದೆ.
ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್‌ಎಸ್) ನೋಂದಣಿಯಾಗಬೇಕು ಎಂದು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಆಗ್ರಹಿಸುತ್ತಿರುವ ನಡುವೆಯೇ, ಆರ್‌ಎಸ್‌ಎಸ್ ಅಭಿಮಾನಿಗಳು ಹಾಗೂ ಹಿತೈಷಿಗಳ ಪಡೆ ‘ಆರ್‌ಎಸ್‌ಎಸ್ ಫ್ರೆಂಡ್ಸ್’ ಎಂಬ ಹೆಸರಿನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ಅಮೆರಿಕದಲ್ಲಿ ಸಂಘದ ವಿಚಾರಗಳನ್ನು ವ್ಯಾಪಕವಾಗಿ ಪಸರಿಸುವುದು ಮತ್ತು ಜಾಗೃತಿ ಮೂಡಿಸುವುದು ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ.
ದೆಹಲಿ ಕಚೇರಿ ‘ಫಾರಿನ್ ಪ್ರಿನ್ಸಿಪಾಲ್’:
ಅಮೆರಿಕದ ವಿದೇಶಿ ಏಜೆಂಟ್‌ಗಳ ನೋಂದಣಿ ಕಾಯ್ದೆಯಡಿ ‘ಆರ್‌ಎಸ್‌ಎಸ್ ಫ್ರೆಂಡ್ಸ್’ ಸಂಘಟನೆಯು ಆ.27ರಂದು ತನ್ನ ಹೆಸರನ್ನು ನೋಂದಾಯಿಸಿಕೊಂಡಿದೆ. ಜಾರ್ಜಿಯಾ ವಿಳಾಸವನ್ನು ನೀಡಿರುವ ಸಂಸ್ಥೆಯು, ದೆಹಲಿಯ ಆರ್‌ಎಸ್‌ಎಸ್ ಕಚೇರಿ ಕೇಶವಕುಂಜವನ್ನು ತನ್ನ ‘ಫಾರಿನ್ ಪ್ರಿನ್ಸಿಪಾಲ್’ (ವಿದೇಶಿ ಸಂಸ್ಥೆ) ಎಂದು ನಮೂದಿಸಿದೆ. ತನ್ನ ನಿರ್ದೇಶಕರ ಮಂಡಳಿಯಲ್ಲಿ ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ದೇವಾನಂದ ಗದ್ದಮ್ ಅವರನ್ನು ಹೆಸರಿಸಿದೆ.
ಈ ನೋಂದಣಿ ಪ್ರಕ್ರಿಯೆಯು, ಆ.29ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್’ ಕಾರ್ಯಕ್ರಮಕ್ಕಿಂತ 2 ದಿನಗಳ ಮುಂಚಿತವಾಗಿ ನಡೆದಿತ್ತು ಎಂಬುದು ವಿಶೇಷ.
ಲಿಖಿತ ಒಪ್ಪಂದವಿಲ್ಲ:
ನೋಂದಣಿ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯು, ‘ಆರ್‌ಎಸ್‌ಎಸ್ ಜತೆಗೆ ಯಾವುದೇ ಲಿಖಿತ ದೃಢೀಕೃತ ಉದ್ಯೋಗ, ಸಲಹಾ, ಸಾರ್ವಜನಿಕ ಸಂಪರ್ಕ ಅಥವಾ ಏಜೆನ್ಸಿ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಲಿಖಿತ ಒಪ್ಪಂದವಿಲ್ಲ ಎಂದಮಾತ್ರಕ್ಕೆ ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಪರ್ಕ, ಸಮನ್ವಯ ಅಥವಾ ಆಡಳಿತಾತ್ಮಕ ಸಹಕಾರವೇ ಇಲ್ಲ ಎಂದು ಅರ್ಥೈಸಬಾರದು’ ಎಂದು ಸ್ಪಷ್ಟಪಡಿಸಿದೆ. ತನ್ನ ಕಾರ್ಯಚಟುವಟಿಕೆಗಳ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸುವುದಾಗಿ ತಿಳಿಸಿದೆ.
ಕಾರ್ಯಚಟುವಟಿಕೆಗಳು:
ಈ ಸಂಘಟನೆಯು ತನ್ನ ಕಾರ್ಯಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ವಿನಿಮಯ, ಶಿಕ್ಷಣ, ಸಾರ್ವಜನಿಕ ಸಂಪರ್ಕ ಹಾಗೂ ಸಮುದಾಯ ಸಹಭಾಗಿತ್ವಕ್ಕೆ ಸೀಮಿತವಾಗಿರಲಿವೆ ಎಂದು ತಿಳಿಸಿದೆ. ಆರ್‌ಎಸ್‌ಎಸ್ ಅಥವಾ ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಸಂಶೋಧಕರು, ಶೈಕ್ಷಣಿಕ ಸಂಸ್ಥೆಗಳು, ನಾಗರಿಕ ಸಮಾಜ ಸಂಘಟನೆಗಳು ಮತ್ತು ಅಗತ್ಯಬಿದ್ದಲ್ಲಿ ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳೊಂದಿಗೆ ಸಂವಾದ ನಡೆಸುವುದಾಗಿ ತಿಳಿಸಿದೆ. ಇದೇ ವೇಳೆ, ಆರ್‌ಎಸ್‌ಎಸ್ ಅನ್ನು ಭಾರತ ಮೂಲದ ಸ್ವಯಂಸೇವಾ ಹಾಗೂ ಸಾಂಸ್ಕೃತಿಕ ಸಂಘಟನೆ ಎಂದು ಅಮೆರಿಕದ ಇಲಾಖೆಗೆ ಪರಿಚಯಿಸಲಾಗಿದೆ.






