ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಸದ್ಯದ ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಭಾರತ ಇಂದು ಚಂದ್ರನಲ್ಲಿಗೆ ಹೋಗಿದೆ. ಆದರೆ, ನಾವು ಮಾತ್ರ ಪೈಸೆ ಪೈಸೆಗೂ ವಿದೇಶಗಳತ್ತ ಭಿಕ್ಷೆ ಬೇಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 

ನವದೆಹಲಿ (ಸೆ.19): ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬೇರೆ ಯಾರೂ ಅಲ್ಲ, ಸ್ವತಃ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮಾತನಾಡಿದ್ದಾರೆ. ಇಂದು ಭಾರತ ಚಂದ್ರನ ಅಂಗಳಕ್ಕೆ ತಲುಪಿದೆ. ಜಿ20 ಶೃಂಗಸಭೆಯಲ್ಲಿ ಬಹಳ ಯಶಸ್ವಿಯಾಗಿ ಮಾಡಿದೆ. ಇಡೀ ದೇಶ 600 ಬಿಲಿಯನ್‌ ಡಾಲರ್‌ಗಳ ದೊಡ್ಡ ಖಜಾನೆಯನ್ನು ಹೊಂದಿದೆ. ಆದರೆ, ಪಾಕಿಸ್ತಾನ ಮಾತ್ರ ಚೀನಾ ಹಾಗೂ ಅರಬ್‌ ದೇಶಗಳು ಸೇರಿದಂತೆ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಒಂದೊಂದು ಪೈಸೆ ಡಾಲರ್‌ಗಳನ್ನು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದೇವೆ. ಹೀಗಿರುವಾಗ ಅವರ ಮುಂದೆ ನಮಗೆ ಯಾವ ಗೌರವ ಸಿಗುತ್ತದೆ. ನಾವು ಸಂಪೂರ್ಣವಾಗಿ ಬಡವರಾಗುವ ಸನಿಹದಲ್ಲಿದ್ದೇವೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಈ ಸ್ಥಿತಿಗೆ ಕಾರಣರಾದವರು ದೇಶದ ದೊಡ್ಡ ಅಪರಾಧಿಗಳು. ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಸರ್ಕಾರವು ದೇಶವನ್ನು ಡೀಫಾಲ್ಟ್‌ನಿಂದ ರಕ್ಷಿಸಿದೆ, ಇಲ್ಲದಿದ್ದರೆ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 1,000 ರೂಪಾಯಿಗೆ ಏರಿಕೆ ಆಗುತ್ತಿತ್ತು ಎಂದು ಹೇಳಿದ್ದಾರೆ. ನವಾಜ್ ಷರೀಫ್ ಅವರು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಅವರು ದೇಶದ ಸ್ಥಿತಿಗೆ ಕಾರಣ ಎಂದು ದೂರಿದ್ದಾರೆ.

ಇಂದು ದೇಶದ ಬಡವರು ರೊಟ್ಟಿಗಾಗಿ ಬೇರೆ ದೇಶದ ನೆರವನ್ನು ನೋಡುತ್ತಿದ್ದಾರೆ. ದೇಶವನ್ನು ಈ ಸ್ಥಿತಿಗೆ ತಂದವರು ಯಾರು? 2017 ರಲ್ಲಿ ಪಾಕಿಸ್ತಾನದಲ್ಲಿ ಈ ದೃಶ್ಯ ಇರಲಿಲ್ಲ. ಆ ಸಮಯದಲ್ಲಿ ಹಿಟ್ಟು, ತುಪ್ಪ ಮತ್ತು ಸಕ್ಕರೆ ಎಲ್ಲಾ ಅಗ್ಗವಾಗಿ ದೊರೆಯುತ್ತಿತ್ತು. ಜನರ ಜೇಬಿಗೆ ತಕ್ಕಂತೆ ವಿದ್ಯುತ್ ಬಿಲ್ ಬರುತ್ತಿತ್ತು. ಇಂದು ಜನರು 30 ಸಾವಿರ ರೂ.ವರೆಗೆ ವಿದ್ಯುತ್ ಬಿಲ್ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ಹಾಕಲು ಅವರ ಬಳಿ ಹಣವಿಲ್ಲ ಎಂದು ನವಾಜ್‌ ಷರೀಪ್‌ ಹೇಳಿದ್ದಾರೆ.

ನನ್ನ ಆಳ್ವಿಕೆಯಲ್ಲಿ ದೇಶ ಪ್ರಗತಿಯಲ್ಲಿತ್ತು. ಇದರ ಹೊರತಾಗಿಯೂ, ನ್ಯಾಯಾಲಯದಲ್ಲಿ ನನಗೆ 27 ವರ್ಷಗಳ ಶಿಕ್ಷೆ ವಿಧಿಸಲಾಯಿತು. ನಾನು ವರ್ಷಗಳ ಕಾಲ ದೇಶದಿಂದ ಹೊರಗುಳಿಯಬೇಕಾಯಿತು. ಇದೆಲ್ಲದರ ಹಿಂದೆ ಜನರಲ್ ಬಜ್ವಾ ಮತ್ತು ಜನರಲ್ ಫೈಜ್ ಇದ್ದರು.

1990 ರಲ್ಲಿ, ಭಾರತವು ನಮ್ಮನ್ನು ಕಂಡು, ತನ್ನ ದೇಶದಲ್ಲಿ ಆರ್ಥಿಕ ಸುಧಾರಣಾ ಆದೇಶವನ್ನು ಜಾರಿಗೆ ತಂದಿತು. ಅವರ ದೇಶ ಇಂದು ಎಲ್ಲಿಗೆ ತಲುಪಿದೆ ನೋಡಿ. ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ದೇಶದಲ್ಲಿ 1 ಬಿಲಿಯನ್ ಡಾಲರ್ ಕೂಡ ವಿದೇಶಿ ಮೀಸಲು ಇದ್ದಿರಲಿಲ್ಲ. ಮತ್ತು ಇಂದು ಅದು 600 ಬಿಲಿಯನ್ ಡಾಲರ್‌ಗಳ ವಿದೇಶಿ ಮೀಸಲು ಹೊಂದಿದೆ. ಹೊಂದಿದೆ.

ಪಾಕಿಸ್ತಾನ ಇಂದು ಭಿಕಾರಿಯಾಗಿದೆ: ಪಿಎಂಎಲ್-ಎನ್ ಪಕ್ಷದ ಉಪಾಧ್ಯಕ್ಷ ಹಮ್ಜಾ ಶಹಬಾಜ್ ಮಾತನಾಡಿ, ನವಾಜ್‌ ಷರೀಫ್‌ ಪಾಕಿಸ್ತಾನವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಮಾಡಿದ್ದರು, ಆದರೆ ಇಂದು ನಾವು ಭಿಕ್ಷುಕ ದೇಶವಾಗಿ ಮಾರ್ಪಟ್ಟಿದ್ದೇವೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಈಗ ಪಾಕಿಸ್ತಾನದ ಜನರು ನವಾಜ್ ಷರೀಫ್ ಅವರನ್ನು ಪ್ರಧಾನಿ ಮಾಡುವ ಮೂಲಕ ದೇಶದ ಭವಿಷ್ಯವನ್ನು ಭದ್ರಪಡಿಸಲಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ನವಾಜ್ ಷರೀಫ್ ಅವರ ಕಿರಿಯ ಸಹೋದರ ಶಹಬಾಜ್ ಷರೀಫ್ ಅವರು ಅಕ್ಟೋಬರ್ 21 ರಂದು ನವಾಜ್ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದು ವಾರದ ಹಿಂದೆ ಘೋಷಿಸಿದ್ದರು. ಅವರನ್ನು ಸ್ವಾಗತಿಸಲು ಪಾಕಿಸ್ತಾನದಲ್ಲೂ ಸಿದ್ಧತೆಗಳು ಪ್ರಾರಂಭವಾಗಿವೆ. ಲಂಡನ್‌ನಲ್ಲಿ ನಡೆದ ಪಿಎಂಎಲ್‌-ಎನ್‌ ಉನ್ನತ ನಾಯಕತ್ವದ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮತ್ತೆ ಬಾಲ ಬಿಚ್ಚಿದ ಶತ್ರು ರಾಷ್ಟ್ರ, ಭಾರತೀಯ ಸೇನೆಯ ದಾರಿ ತಪ್ಪಿಸಲು ಉಗ್ರರ ಶಿಬಿರ ಸ್ಥಳಾಂತರಿಸಿದ ಪಾಕ್!

3 ತಿಂಗಳ ಹಿಂದೆ, ಪಾಕಿಸ್ತಾನದ ಶಹಬಾಜ್ ಸರ್ಕಾರವು ಸಂಸತ್ತಿನಲ್ಲಿ 'ಜೀವಮಾನ ಅನರ್ಹತೆ'ಯನ್ನು ರದ್ದುಗೊಳಿಸಿತ್ತು. ಹೊಸ ಕಾನೂನಿನ ಪ್ರಕಾರ, ಈಗ ಯಾವುದೇ ಸಂಸದರನ್ನು 5 ವರ್ಷಗಳಿಗಿಂತ ಹೆಚ್ಚು ಕಾಲ ಅನರ್ಹಗೊಳಿಸಲಾಗುವುದಿಲ್ಲ. ಈ ನಿರ್ಧಾರದಿಂದ ನವಾಜ್ ಷರೀಫ್ ನೇರವಾಗಿ ಲಾಭ ಪಡೆಯಲಿದ್ದಾರೆ. ವಾಸ್ತವವಾಗಿ, ಪಾಕಿಸ್ತಾನದ ಸುಪ್ರೀಂ ಕೋರ್ಟ್ 2017 ರಲ್ಲಿ ಪನಾಮ ಪೇಪರ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿತ್ತು, ನಂತರ ಅವರು ಯಾವುದೇ ಪಕ್ಷಕ್ಕೆ ಸೇರದಂತೆ ನಿರ್ಬಂಧಿಸಲಾಯಿತು. 2019 ರಲ್ಲಿ, ಲಾಹೋರ್ ಹೈಕೋರ್ಟ್ ನವಾಜ್ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಹೋಗಲು ಅನುಮತಿ ನೀಡಿತ್ತು. ನವಾಜ್ 2019ರ ನವೆಂಬರ್ 19 ರಂದು ಲಂಡನ್‌ಗೆ ಹೋಗಿದ್ದರು ಮತ್ತು ಅಂದಿನಿಂದ ದೇಶಕ್ಕೆ ಹಿಂತಿರುಗಿಲ್ಲ.

ಜಗತ್ತಿಗೆ ಈಗ ಭಾರತ ಬೇಕು, ನಾವು ಬೇಡ; ಜಿ20 ಶೃಂಗಸಭೆ ಯಶಸ್ಸಿಗೆ ಭಾರತವನ್ನು ಶ್ಲಾಘಿಸಿದ ಪಾಕಿಸ್ತಾನದ ನಾಗರಿಕರು