ಎಲ್ಲಾ ದಾನ ಮಾಡಿ ಡಿ.25ಕ್ಕೆ ಜಗತ್ತು ಅಂತ್ಯ, ಪುಂಗಿ ಬಿಟ್ಟು ₹80 ಲಕ್ಷ ಕಾರು ಖರೀದಿಸಿದ ಘಾನಾ ಪ್ರವಾದಿ, ತಾನು ಹೇಳಿದ್ದು ಸುಳ್ಳಾದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆ ನೀಡಿದ್ದಾನೆ. ಪ್ರವಾಹ ರದ್ದಾಗಿಲ್ಲ, ವಿಳಂಬವಾಗಿದೆ.ನನಗೆ ಇನ್ನೊಂದು ಸಂದೇಶ ಬಂದಿದೆ ಎಂದಿದ್ದಾನೆ.
ಘಾನ(ಡಿ.26) ಘಾನಾ ದೇಶದಲ್ಲಿನ ಸ್ವಯಂ ಘೋಷಿತ ಪ್ರವಾದಿ ಎಬೋ ಎನೊಚ್ ಅತ್ಯಂತ ಜನಪ್ರಿಯ. ಕ್ರಿಶ್ಚಿಯನ್ ಪ್ರವಾದಿ ಎಂದು ಹೇಳಿಕೊಳ್ಳುವ ಈ ಎಬೋ ಎನೊಚ್ ತನಗೆ ನೇರವಾಗಿ ದೇವರ ಸಂಪರ್ಕವಿದೆ ಎಂದಿದ್ದಾನೆ. ವಿಶೇಷ ಅಂದರೆ ಈತನ ಅನುಯಾಯಿಗಳು ಕೇವಲ ಘಾನಾದಲ್ಲಿ ಮಾತ್ರವಲ್ಲ, ಸುತ್ತ ಮುತ್ತಲಿನ ದೇಶದಲ್ಲೂ ಇದ್ದಾರೆ. ಈತ ಹೇಳಿದಂತೆ ಕೇಳುವ ಅದೆಷ್ಟೋ ಅನುಯಾಯಿಗಳು ಇದೀಗ ಕಣ್ಣೀರಿಡುತ್ತಿದ್ದಾರೆ. ಕಾರಣ ಆಗಸ್ಟ್ ತಿಂಗಳಲ್ಲಿ ಈತ ನೀಡಿದ ಸಂದೇಶ ಕೋಲಾಹಲಕ್ಕೆ ಕಾರಣವಾಗಿತ್ತು. ಡಿಸೆಂಬರ್ 25ಕ್ಕೆ ಪ್ರವಾಹದಿಂದ ಜಗತ್ತು ಅಂತ್ಯವಾಗಲಿದೆ. ಹೀಗಾಗಿ ನಿಮ್ಮಲ್ಲಿರುವ ವಸ್ತುಗಳು ದಾನ ಮಾಡಿ, ಮಾರಾಟ ಮಾಡಿ ಅಲ್ಲೀವರೆಗೂ ಖುಷಿಯಿಂದ ಇರಿ ಎಂದಿದ್ದಾನೆ. ಪ್ರವಾಹದಲ್ಲಿ ನಿಮ್ಮಲ್ಲೆ ಜೀವ ಉಳಿಸುವ ಜವಾಬ್ದಾರಿಯನ್ನು ನನಗೆ ದೇವರು ನೀಡಿದ್ದಾನೆ. ಇದಕ್ಕಾಗಿ ಅತೀ ದೊಡ್ಡ ಹಡಗು ನಿರ್ಮಿಸುತ್ತಿದ್ದೇನೆ. ನಿಮ್ಮಲ್ಲರ ಕಾಪಾಡುವ ಹೊಣೆ ನನ್ನದು ಎಂದಿದ್ದ. ಆದರೆ ಡಿಸೆಂಬರ್ 25 ಮುಗಿದಿದೆ. ಪ್ರವಾಹ, ಪ್ರಳಯ ಮಾತ್ರ ಕಾಣುತ್ತಿಲ್ಲ. ಜಗತ್ತು ಹಾಗೇ ಇದೆ. ಈತನ ಮಾತು ನಂಬಿ ಬೀದಿಗೆ ಬಿದ್ದವರು ಹಿಡಿ ಶಾಪ ಹಾಕುತ್ತಿದ್ದರೆ, ಇದೀಗ ಹೊಸ ವರಸೆ ಮುಂದಿಟ್ಟಿದ್ದಾನೆ. ಇಷ್ಟೇ ಅಲ್ಲ ಪ್ರಳಯ ಎಂದು ಇದ್ದದ್ದನ್ನು ಈತನಿಗೆ ದೇಣಿಗೆ ನೀಡಿದ್ದಾರೆ. ಈ ಹಣದಲ್ಲಿ ಈತ ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿದ್ದಾನೆ.
ಪ್ರವಾಹ ರದ್ದಾಗಿಲ್ಲ ಮುಂದೂಡಲಾಗಿದೆ
ಡಿ.25ಕ್ಕೆ ಪ್ರವಾಹ ಬಂದಿಲ್ಲ, ಜಗತ್ತು ಅಂತ್ಯವಾಗಿಲ್ಲ. ಈತನಿಂದ ಹಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇವರು ಹಿಡಿ ಶಾಪ ಹಾಕುತ್ತಿದ್ದಂತೆ ಹೊಸ ಸಂದೇಶ ನೀಡಿದ್ದಾನೆ. ಈ ಸ್ವಯಂ ಘೋಷಿತ ಎಬೋ ಎನೊಚ್, ದೇವರು ನನಗೆ ನೀಡಿದ ಸಮಯ ವಿಸ್ತರಿಸಿದ್ದಾನರೆ. ಎಲ್ಲರನ್ನು ರಕ್ಷಿಸಲು ಅತ್ಯಲ್ಪ ಕಾಲದಲ್ಲಿ ನನಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ದೇವರು ಮತ್ತಷ್ಟು ಕಾಲಾವಕಾಶ ನೀಡಿದ್ದಾನೆ. 10 ಹಡಗು ನಿರ್ಮಿಸುತ್ತಿದ್ದೇನೆ. ನೀವೆಲ್ಲರು ಈ ಹಡಗು ಸೇರಿಕೊಂಡರೆ ಎಲ್ಲರು ಸುರಕ್ಷಿತ ಎಂದಿದ್ದಾನೆ. ಕಾರಣ ಪ್ರವಾಹ ರದ್ದಾಗಿಲ್ಲ, ಮುಂದೂಡಲಾಗಿದೆ ಎಂದು ಎಬೋ ಮತ್ತೊಂದು ಪುಂಗಿ ಬಿಟ್ಟಿದ್ದಾನೆ. ಈತನ ಮಾತನ್ನು ಹಲವರು ನಂಬಿದ್ದಾರೆ.
ಆಗಸ್ಟ್‌ನಲ್ಲಿ ಪುಂಗಿ ಬಿಟ್ಟಿದ್ದ ಎಬೋ
ಈ ಪ್ರವಾದಿ ಆಗಸ್ಟ್ ತಿಂಗಳಲ್ಲಿ ಪುಂಗಿ ಬಿಟ್ಟಿದ್ದ. ಜಗತ್ತು ಅಂತ್ಯದ ಕುರಿತು ಭವಿಷ್ಯ ನುಡಿದಿದ್ದ. ಇದೇ ವೇಳೆ ನಿಮ್ಮ ಮನೆ, ವಸ್ತುಗಳು, ಕಾರು ಅಂತಸ್ತು ಎಲ್ಲವನ್ನು ಅನುಭವಿಸಿ, ಮಾರಾಟ ಮಾಡಿ, ದಾನ ಮಾಡಿ ಎಂದಿದ್ದ. ಈ ಕಷ್ಟಕಾಲದಲ್ಲಿ ನಮ್ಮನ್ನು ರಕ್ಷಿಸಲು ಬಂದ ದೇವಧೂತ ಎಂದು ಹಲವರು ತಮ್ಮ ಉಳಿತಾಯ, ಆಸ್ತಿ ಎಲ್ಲವನ್ನೂ ಇದೇ ಎಬೋ ಎನೊಚ್‌ಗೆ ದಾನ ಮಾಡಿದ್ದಾರೆ. ಆದರೆ ದಾನ,ದೇಣಿಗೆಯಿಂದ ಬಂದ ಹಣದಲ್ಲಿ ಇದೇ ಎಬೋ ಎನೋಚ್ 80 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿದ್ದಾನೆ. ಇನ್ನು ಪ್ರಳಯದಿಂದ ಜನರನ್ನು ಕಾಪಾಡಲು ಮರದ ಹಲಗೆಯಿಂದ ದೋಣಿ ನಿರ್ಮಿಸುತ್ತಿದ್ದೇನೆ ಎಂದಿದ್ದಾನೆ.
ಎಲ್ಲಾ ಮಾರಾಟ ಮಾಡಿ ಬಿದಿ ಬಿದ್ದಿ ಲಿಬಿರಿಯಾ ವ್ಯಕ್ತಿ
ಘಾನಾದ ಎಬೋ ಎನಾಚ್ ಅನುಯಾಯಿಯಾಗಿರುವ ಲಿಬಿರಿಯಾ ವ್ಯಕ್ತಿ, ಡಿಸೆಂಬರ್ 23ಕ್ಕೆ ತನ್ನ ಮನೆ ಮಾರಾಟ ಮಾಡಿದ್ದಾರೆ. ಇರುವ ಹಣವನ್ನು ಲಿಬಿರಿಯಾದ ಅನಾಥಾಶ್ರಮಕ್ಕೆ ನೀಡಿದ್ದಾರೆ. ಡಿಸೆಂಬರ್ 24ರಂದು ಘಾನಾಗೆ ಪ್ರಯಾಣ ಬೆಳೆಸಿದ್ದಾರೆ. ಕಾರಣ ಡಿಸೆಂಬರ 25ರಂದು ಎಬೋ ಹೇಳಿದಂತೆ ಪ್ರಳಯ ಆಗಲಿದೆ.ಇದಕ್ಕೂ ಮೊದಲು ಎಬೋ ನಿರ್ಮಿಸಿರುವ ಬೃಹತ್ ರಕ್ಷಣಾ ಹಡಗು ಹತ್ತಲು ಧಾವಿಸಿ ಬಂದಿದ್ದಾರೆ. ಇಲ್ಲಿ ನೋಡಿದರೆ ಹಡುಗು ಇಲ್ಲ, ಪ್ರವಾಹ, ಪ್ರಳಯವೂ ಬಂದಿಲ್ಲ. ಅತ್ತ ತನ್ನ ಮನೆ ಮಠವೂ ಮಾರಾಟವಾಗಿ ಕೈಯಲ್ಲಿರುವ ದುಡ್ಡು ಹಂಚಿದ ವ್ಯಕ್ತಿ ಇದೀಗ ಬೀದಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದಾನೆ.


