ವಿಶ್ವದ ಅತೀದೊಡ್ಡ ಸೇನಾ ಮೈತ್ರಿಕೂಟ ನ್ಯಾಟೋ (ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಜೇಷನ್‌) 31ನೇ ಸದಸ್ಯ ರಾಷ್ಟ್ರವಾಗಿ ಫಿನ್ಲೆಂಡ್‌ ಸೇರ್ಪಡೆಗೊಂಡಿದೆ. ಉಕ್ರೇನ್‌ ದೇಶ ನ್ಯಾಟೋ ಪಡೆಗೆ ಸೇರುವ ಕಾರಣಕ್ಕಾಗಿಯೇ ರಷ್ಯಾ ಯುದ್ಧ ಸಾರಿತ್ತು. 

ನವದೆಹಲಿ (ಏ.4): ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧಕ್ಕೆ ಮೂಲ ಕಾರಣವಾಗಿದ್ದ ವಿಚಾರದಲ್ಲಿ ಫಿನ್ಲೆಂಡ್‌ ಮಹತ್ವದ ಹೆಜ್ಜೆ ಹಾಕಿದೆ. ಉಕ್ರೇನ್‌ ದೇಶ ನ್ಯಾಟೋಗೆ ಸೇರುವ ಇಚ್ಛೆಯಲ್ಲಿದೆ ಎನ್ನುವ ಕಾರಣಕ್ಕಾಗಿಯೇ ರಷ್ಯಾ ಯುದ್ಧ ಸಾರಿತ್ತು. ಇದರ ನಡುವೆ ಮಂಗಳವಾರ ಫಿನ್ಲೆಂಡ್‌, ವಿಶ್ವದ ಅತೀದೊಡ್ಡ ಸೇನಾ ಒಕ್ಕೂಟ ನ್ಯಾಟೋದ 31ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ. ಇದು ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟ, ರಷ್ಯಾದ ಜೊತೆಗಿನ ಗಡಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಂತಾಗಿದೆ. ಕಳೆದ ವರ್ಷ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಯುರೋಪ್‌ನ ಭದ್ರತಾ ದೃಷ್ಟಿಯಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಮುಂಬರುವ ಅಪಾಯವನ್ನು ಮನಗಂಡ ಫಿನ್ಲೆಂಡ್‌ ಹಾಗೂ ಸ್ವೀಡನ್‌ ದೇಶಗಳು ದಶಕಗಳ ಕಾಲ ಅಸ್ತಿತ್ವದಲ್ಲಿರಿಸಿಕೊಂಡಿದ್ದ ಸೇನಾ ಆಲಿಪ್ತ ನೀತಿಯನ್ನು ಕೈಬಿಟ್ಟು, ನ್ಯಾಟೋ ಪಡೆಗೆ ಸೇರಲು ಸಜ್ಜಾಗಿದ್ದವು.

ಏನಿದು ನ್ಯಾಟೋ: ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಜೇಷನ್‌ ಅಸ್ವಿತ್ವಕ್ಕೆ ಬಂದಿದ್ದು 1949ರಲ್ಲಿ. 2ನೇ ಮಹಾಯುದ್ಧ ಅಂತ್ಯಕಂಡ ಬಳಿಕ ಅದರ ಅಗತ್ಯ ಹೆಚ್ಚಾಯಿತು. ವಿಶ್ವಯುದ್ಧ ಮುಗಿದ ಬಳಿಕ ಸೋವಿಯತ್‌ ಒಕ್ಕೂಟ ಪೂರ್ವ ಯುರೋಪ್‌ನಿಂದ ತನ್ನ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದು ಮಾತ್ರವಲ್ಲದೆ 1948ರಲ್ಲಿ ಬರ್ಲಿನ್‌ ನಗರವನ್ನು ಸುತ್ತುವರಿದಿತ್ತು. ಈ ಹಂತದಲ್ಲಿ ನ್ಯಾಟೋದಂಥ ಪಡೆಯ ಅಗತ್ಯವನ್ನು ಅಮೆರಿಕ ಮೊದಲು ಅಂದಾಜು ಮಾಡಿತ್ತು. 1949ರಲ್ಲಿ ನ್ಯಾಟೋ ಮೂಲಕ ಸೋವಿಯತನ್‌ ಆಕ್ರಮಣವನ್ನು ಎದುರಿಸಲು ಅಮೆರಿಕ ಸಜ್ಜಾಯಿತು. ಮೂಲ ರಾಷ್ಟ್ರವಾಗಿ ಈ ಸೇನಾ ಒಕ್ಕೂಟಕ್ಕೆ ಸೇರಿದ್ದು 12 ರಾಷ್ಟ್ರಗಳು. ಅಮೆರಿಕ ಅಲ್ಲದೆ, ಬ್ರಿಟನ್‌, ಫ್ರಾನ್ಸ್‌, ಕೆನಡಾ, ಇಟಲಿ, ನೆದರ್ಲೆಂಡ್‌, ಐಸ್ಲೆಂಡ್‌, ಬೆಲ್ಜಿಯಂ, ಲಕ್ಸಂಬರ್ಗ್‌, ನಾರ್ವೆ, ಪೋರ್ಚುಗಲ್‌ ಮತ್ತು ಡೆನ್ಮಾರ್ಕ್‌ ದೇಶ ಒಳಗೊಂಡಿತ್ತು.

ಉಕ್ರೇನ್‌ NATO ಜೊತೆ ಸೇರಿದರೆ ಮೂರನೇ ಮಹಾಯುದ್ಧ: ರಷ್ಯಾ ಅಧಿಕಾರಿಗಳಿಂದ ಎಚ್ಚರಿಕೆ

ಇಂದು ಫಿನ್ಲೆಂಡ್‌ ಸೇರ್ಪಡೆಯೊಂದಿಗೆ ಇದರಲ್ಲಿ ಒಟ್ಟು31 ರಾಷ್ಟ್ರಗಳಿವೆ. ಇನ್ನು ಈ ಸೇನಾಪಡೆಗೆ ಸಾನಾಮ್ಯ ಭದ್ರತಾ ನೀತಿಗಳಿವೆ. ಅದರ ಮೇಲೆಯೇ ನಾರ್ಯನಿರ್ವಹಿಸುವಂಥ ಮೈತ್ರಿಕೂಟ ಇದಾಗಿದೆ. 31 ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರದ ಮೇಲೆ ನ್ಯಾಟೋ ಪಡೆಯಲ್ಲಿ ಇಲ್ಲದ ರಾಷ್ಟ್ರಗಳು ದಾಳಿ ಮಾಡಿದ್ದಲ್ಲಿ ಅದನ್ನು ನ್ಯಾಟೋದ 31 ರಾಷ್ಟ್ರಗಳ ಮೇಲೆ ಮಾಡಿದ ಆಕ್ರಮಣ ಎಂದು ಪರಿಗಣನೆ ಮಾಡಲಾಗುತ್ತದೆ. ಇದರ ವಿರುದ್ಧ ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗೂಡಿ ಹೋರಾಟ ಮಾಡುತ್ತದೆ.

400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

ಇಡೀ ಯುರೋಪ್‌ ರಾಷ್ಟ್ರಗಳಿಗೆ ಅತಿಯಾದ ಬೆದರಿಕೆ ಇರುವುದು ರಷ್ಯಾ ದೇಶದಿಂದ. ಆದರೆ, ನ್ಯಾಟೋ ಬಲ ಇರುವ ಕಾರಣ ರಷ್ಯಾ ಕೂಡ ಈ ದೇಶಗಳನ್ನು ಎದುರುಹಾಕಿಕೊಳ್ಳೋದಕ್ಕೆ ಭಯಪಡುತ್ತದೆ. ಮಿಲಿಟರಿ ಸಾಮರ್ಥ್ಯವಾಗಲಿ, ರಕ್ಷಣೆಗೆ ಮಾಡುವ ವೆಚ್ಚವಾಗಲಿ, ರಷ್ಯಾ ಹಾಗೂ ನ್ಯಾಟೋ ನಡುವೆ ಯಾವುದೇ ಹೋಲಿಕೆ ಕೂಡ ಸಾಧ್ಯವಿಲ್ಲ. 2021ರಲ್ಲಿ ನ್ಯಾಟೋದ ಎಲ್ಲಾ 30 ಸದಸ್ಯ ರಾಷ್ಟ್ರಗಳ ಒಟ್ಟು ರಕ್ಷಣಾ ವೆಚ್ಚ 1174 ಬಿಲಿಯನ್‌ ಡಾಲರ್‌ ಆಗಿದ್ದರೆ, 2020ರಲ್ಲಿ 1106 ಶತಕೋಟಿ ಡಾಲರ್‌ ಖರ್ಚು ಮಾಡಿದೆ. ಆದರೆ, ರಷ್ಯಾ 2020ರಲ್ಲಿ 61.7 ಶತಕಕೋಟಿ ಡಾಲರ್‌ಅನ್ನು ರಕ್ಷಣೆಗಾಗಿ ವ್ಯಯ ಮಾಡಿದೆ. ಇನ್ನು ನ್ಯಾಟೋ ನೇರವಾಗಿ ಯುದ್ಧದಲ್ಲಿ ಭಾಗಿಯಾದರೆ, 33 ಲಕ್ಷಕ್ಕೂ ಅಧಿಕ ಸೈನಿಕರ ಬಲ ಈ ಸೇನಾ ಒಕ್ಕೂಟಕ್ಕೆ ಇದೆ. ಇನ್ನು ರಷ್ಯಾದಲ್ಲಿ 8 ಲಕ್ಷ ಸಕ್ರಿಯ ಸೈನಿರು ಹಾಗೂ 12 ಲಕ್ಷ ಇತರ ಸೈನಿಕರನ್ನು ಹೊಂದಿದೆ.