ಅಮೆರಿಕದಲ್ಲಿ ಜನಿಸುವ ವಲಸಿಗರ ಮಕ್ಕಳು ಸ್ವಾಭಾವಿಕವಾಗಿ ಅಲ್ಲಿನ ಪ್ರಜೆಯಾಗುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸುವ ಅಧ್ಯಕ್ಷ ಟ್ರಂಪ್ ಅವರ ಆದೇಶಕ್ಕೆ ಅಲ್ಲಿನ ಫೆಡೆರಲ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಸಿಯಾಟಲ್ (ಜ.24): ಅಮೆರಿಕದಲ್ಲಿ ಜನಿಸುವ ವಲಸಿಗರ ಮಕ್ಕಳು ಸ್ವಾಭಾವಿಕವಾಗಿ ಅಲ್ಲಿನ ಪ್ರಜೆಯಾಗುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸುವ ಅಧ್ಯಕ್ಷ ಟ್ರಂಪ್ ಅವರ ಆದೇಶಕ್ಕೆ ಅಲ್ಲಿನ ಫೆಡೆರಲ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಕಾನೂನು ಹಾಗೂ 14ನೇ ಸಾಂವಿಧಾನಿಕ ತಿದ್ದುಪಡಿಗಳು ಜನ್ಮಸಿದ್ಧ ಪೌರತ್ವ ಹಕ್ಕನ್ನು ದೃಢಪಡಿಸುತ್ತದೆ ಎಂದು ವಾದಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾ| ಜಾನ್ ಸಿ. ಕಾಫೆನೋರ್ ಈ ಆದೇಶ ಹೊರಡಿಸಿದ್ದಾರೆ. ಇದರಿಂದ ಭಾರತೀಯರು ಸೇರಿದಂತೆ ಎಚ್-1ಬಿ ವೀಸಾ ಪಡೆದು ತಾತ್ಕಾಲಿಕವಾಗಿ ಅಮೆರಿಕದಲ್ಲಿ ನೆಲೆಸಿರುವವರು ನಿಟ್ಟುಸಿರು ಬಿಡುವಂತಾಗಿದೆ.
ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಟ್ರಂಪ್ ಅಧ್ಯಕ್ಷ ಹುದ್ದೆಗೆ ಏರುತ್ತಿದ್ದಂತೆ ಜನ್ಮಸಿದ್ಧ ಪೌರತ್ವ ರದ್ದು ಪಡಿಸುವ ಆದೇಶಕ್ಕೆ ಸಹಿ ಹಾಕಿದ್ದರು. ಇದು ಫೆ.19 ರಂದು ಜಾರಿಯಾಗಲಿದ್ದು, ಬಳಿಕ ಜನಿಸುವ ಮಕ್ಕಳು ಜನ್ಮತಃ ಅಮೆರಿಕದ ಪ್ರಜೆ ಎನಿಸಿಕೊಳ್ಳುವುದಿಲ್ಲ. ಟ್ರಂಪ್ ಈ ನಿರ್ಣಯವನ್ನು ವಿರೋಧಿಸಿವಾಷಿಂಗ್ಟನ್, ಅರಿಜೋನಾ, ಇಲಿನಾಯ್ಸ್, ಒರೆಗಾನ್ ಸೇರಿದಂತೆ 22 ರಾಜ್ಯಗಳು ಹಾಗೂ ವಲಸಿಗರ ಹಕ್ಕು ಗುಂಪುಗಳು ಕೋರ್ಟ್ ಮೊರೆ ಹೋಗಿದ್ದವು. ಇದೀಗ ಅವುಗಳಿಗೆ ತಾತ್ಕಾಲಿಕ ಜಯ ಸಿಕ್ಕಿದೆ.
ಸಿಸೇರಿಯನ್ ಮೊರೆಹೋದ ಭಾರತೀಯರು: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ರ ಜನ್ಮಸಿದ್ಧ ಪೌರತ್ವ ಹಕ್ಕು ರದ್ದತಿ ನಿರ್ಧಾರ! ಹೌದು ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕದ ಪೌರತ್ವವನ್ನು ರದ್ದುಪಡಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದು, ಇದು ಫೆ.20ರಿಂದ ಜಾರಿಗೆ ಬರಲಿದೆ. ಆದ್ದರಿಂದ ಫೆ.19ಕ್ಕೂ ಮೊದಲೇ ಮಕ್ಕಳನ್ನು ಹೆತ್ತರೆ ಅವರು ಅಮೆರಿಕದ ಪ್ರಜೆಯಾಗುತ್ತಾರೆ ಎಂದ ಆಸೆಯೊಂದಿಗೆ ದಂಪತಿಗಳು ಸಿಸೇರಿಯನ್ ಮೂಲಕ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ. ಈ ಕುರಿತು ಮಾತನಾಡಿದ ನ್ಯೂ ಜೆರ್ಸಿಯಲ್ಲಿರುವ ಭಾರತ ಮೂದಲ ವೈದ್ಯೆ ರಮಾ, ‘ಅನೇಕ ಗರ್ಭಿಣಿಯರು 9 ತಿಂಗಳು ತುಂಬುವ ಮೊದಲೇ ಸಿಸೇರಿಯನ್ ಮಾಡಿಸಲು ಬಯಸಿದ್ದಾರೆ.
ಮೇಕ್ ಇನ್ ಅಮೆರಿಕ ಪಾಲಿಸಿ, ಇಲ್ಲವೇ ಸುಂಕ ಎದುರಿಸಿ: ಡೊನಾಲ್ಡ್ ಟ್ರಂಪ್
ತಾಯಿ- ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅರಿವಿದ್ದರೂ ಈ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದರು. ಅತ್ತ ಬಾರತ ಮೂಲದ ಗರ್ಭಿಣಿಯೊಬ್ಬರು ಮಾತನಾಡಿ, ‘ನಾವು ಕಳೆದ 6 ವರ್ಷಗಳಿಂದ ಅಮೆರಿಕದ ಶಾಶ್ವತ ಪೌರತ್ವ ನೀಡುವ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದೇವೆ. ಈಗ ಮಗುವಿಗೆ ಅಮೆರಿಕದಲ್ಲಿ ಜನ್ಮ ನೀಡುವ ಮೂಲಕ ಅದನ್ನು ಸಾಧಿಸಲು ಯೋಚಿಸುತ್ತಿದ್ದೇವೆ. ಆದರೆ ಈಗ ಆಗುತ್ತಿರುವ ಬೆಳವಣಿಗೆಯಿಂದ ಭಯವಾಗುತ್ತಿದೆ’ ಎಂದರು. ಈಗಾಗಲೇ ಅಮೆರಿಕದಲ್ಲಿ ಭಾರತ ಮೂಲದವ 54 ಲಕ್ಷ ಜನರಿದ್ದಾರೆ. ಆದರೆ ಇವರಲ್ಲಿ ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಉಳಿದಗ ಶೇ.66 ಜನರು ಭಾರತೀಯ ನಾಗರಿಕರಾಗಿದ್ದು, ಅಮೆರಿಕ ಪೌರರಲ್ಲ. ಕೆಲಸದ ಮೇಲೆ ಅಮೆರಿಕದಲ್ಲಿದ್ದಾರೆ. ಇವರಿಗೆ ಮಕ್ಕಳಾದರೆ, ಆ ಮಕ್ಕಳು ಅಮೆರಿಕ ಪೌರತ್ವದಿಂದ ವಂಚಿತರಾಗುವ ಭೀತಿ ಇದೆ.
