ಶವಪೆಟ್ಟಿಗೆಯಿಂದ ಎದ್ದು ಕುಳಿತ ಮೃತ ಮಹಿಳೆ : ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸ್ತಿದ್ದವರು ಶಾಕ್
76 ವರ್ಷದ ವೃದ್ಧ ಮಹಿಳೆಯೊಬ್ಬರು ಶವಪೆಟ್ಟಿಗೆಯಿಂದ ಎದ್ದು ಕುಳಿತ ಆಘಾತಕಾರಿ ಘಟನೆ ಇಕ್ವೇಡಾರ್‌ನಲ್ಲಿ ನಡೆದಿದೆ. ಇಕ್ವೇಡಾರ್‌ನ (Ecuador)ಬಬಹೋಯೊ ನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಇಕ್ವೇಡಾರ್: 76 ವರ್ಷದ ವೃದ್ಧ ಮಹಿಳೆಯೊಬ್ಬರು ಶವಪೆಟ್ಟಿಗೆಯಿಂದ ಎದ್ದು ಕುಳಿತ ಆಘಾತಕಾರಿ ಘಟನೆ ಇಕ್ವೇಡಾರ್‌ನಲ್ಲಿ ನಡೆದಿದೆ. ಇಕ್ವೇಡಾರ್‌ನ (Ecuador)ಬಬಹೋಯೊ ನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 76 ವರ್ಷದ ವೃದ್ಧರೊಬ್ಬರನ್ನು ವೈದ್ಯರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಇದಾದ ಬಳಿಕ ಶವವನ್ನು ಮನೆಗೆ ತಂದ ಕುಟುಂಬಸ್ಥರು ಶವ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು. ಶವಪೆಟ್ಟಿಗೆ ಸಿದ್ಧಪಡಿಸಿ ಅದರೊಳಗೆ ಮಹಿಳೆಯನ್ನು ಮಲಗಿಸಿ ಹೂತು ಹಾಕಲು ಮುಂದಾಗಿದ್ದರು. ಅಷ್ಟರಲ್ಲೇ ಶವಪೆಟ್ಟಿಗೆಯಿಂದ ಕುಟ್ಟುವ ಸದ್ದು ಕೇಳಿ ಬಂದಿದ್ದು, ಪೆಟ್ಟಿಗೆಯ ಮುಚ್ಚಳ ತೆರೆದಾಗ ವೃದ್ಧೆ ಉಸಿರಾಡುತ್ತಿದ್ದಿದ್ದು ಗಮನಕ್ಕೆ ಬಂದಿದೆ. ಕೂಡಲೇ ಆಂಬುಲೆನ್ಸ್ ಕರೆಸಿ ವೃದ್ಧೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆದರೆ ಪ್ರಸ್ತುತ ಆಕೆ ಹೇಗಿದ್ದಾಳೆ ಎಂಬ ಬಗ್ಗೆ ವರದಿಯಾಗಿಲ್ಲ.
ಬೆಲ್ಲಾ ಯೊಲಾಂಡಾ ಮೊಂಟೊಯಾ ಕ್ಯಾಸ್ಟ್ರೊ ಎಂಬುವವರೇ ಹೀಗೆ ಸತ್ತು ಬದುಕಿ ಬಂದ ಮಹಿಳೆ, ಪಾರ್ಶ್ವವಾಯು ಹಾಗೂ ಹೃದಯಾಘಾತದ ಕಾರಣಕ್ಕೆ ಜೂನ್9 ರಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಬಾಹೋಯೊದಲ್ಲಿನ ಮಾರ್ಟಿನ್ ಇಕಾಜಾ ಆಸ್ಪತ್ರೆಯ (hospital) ತೀವ್ರ ನಿಗಾ ಘಟಕದಲ್ಲಿ ಬೆಲ್ಲಾ ಯೊಲಾಂಡಾ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ಆಕೆಯನ್ನು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದರು ಎಂದು ಸಿಎನ್‌ಎನ್ ನ್ಯೂಸ್ ವರದಿ ಮಾಡಿದೆ.
ಪುಟ್ಟ ಬಾಲಕನ ಅಂತ್ಯಸಂಸ್ಕಾರದ ವೇಳೆ ನಡೆಯಿತು ಪವಾಡ!
ಶವಪೆಟ್ಟಿಗೆಯಲ್ಲಿ ಸದ್ದುಕೇಳಿ ಪೆಟ್ಟಿಗೆ ಮುಚ್ಚಳವನ್ನು ತೆರೆದಾಗ ಆಕೆ ಉಸಿರಾಡುತ್ತಿದ್ದಳು, ಎದೆಬಡಿತ ಕೇಳಿಸುತ್ತಿತ್ತು. ಆಕೆಯ ಎಡಗೈ ಶವಪೆಟ್ಟಿಗೆಯನ್ನು ಬಡಿಯುತ್ತಿತ್ತು. ನಂತರ ನಾವು ತುರ್ತು ಸಹಾಯವಾಣಿ 911ಗೆ ಕರೆ ಮಾಡಿ ಆಂಬುಲೆನ್ಸ್ ಮೂಲಕ ಇಲ್ಲಿಗೆ ಕರೆತಂದಿದ್ದೇವೆ ಎಂದು ವೃದ್ಧೆಯ ಪುತ್ರ ಗಿಲ್ಬರ್ಟೊ ಬಾರ್ಬೆರಾ (Gilberto Barbera) ಅವರು ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಜೀವಂತವಿರುವುದನ್ನು ತಿಳಿದ ವೃದ್ದೆಯ ಕುಟುಂಬಸ್ಥರು ಕೂಡಲೇ ಆಕೆಯನ್ನು ಶವಪೆಟ್ಟಿಗೆಯಿಂದ ತೆಗೆದು ಸ್ಟ್ರೆಚರ್‌ಗೆ ಮೇಲೆ ಮಲಗಿಸುತ್ತಾರೆ. ಈ ವೇಳೆ ಆಕೆ ಸ್ಪಷ್ಟವಾಗಿ ಉಸಿರಾಡುತ್ತಿರುವುದು ಕಾಣಿಸುತ್ತಿದೆ.
ತುರ್ತು ಸಹಾಯ ವಾಹನವೊಂದು ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿದ್ದ ಜನ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯವೂ ತನಿಖೆಗೆ ಆದೇಶಿಸಿದೆ. ಶವ ಪೆಟ್ಟಿಗೆಯಿಂದ (coffin) ಎದ್ದು ಬಂದ ಮೊಂಟೊಯಾ ಬಬಾಹೋಯೊದಲ್ಲಿನ (Babahoyo) ಮಾರ್ಟಿನ್ ಇಕಾಜಾ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿದ್ದಾರೆ ಎಂದು ವರದಿ ಆಗಿದೆ. ಅದೇ ಆಸ್ಪತ್ರೆ ಅವರನ್ನು ಸತ್ತಿದೆ ಎಂದು ಘೋಷಣೆ ಮಾಡಿತ್ತು.
ಧಾರವಾಡ: ಸತ್ತ ವ್ಯಕ್ತಿ ನೀರು ಕುಡಿದನೆಂದು ಆಸ್ಪತ್ರೆಗೆ ಓಡೋಡಿ ಬಂದ ಜನರು..!
ಆಕೆ ಸಾವಿಗೀಡಾಗಿದ್ದಾರೆ ಎಂದು ಘೋಷಣೆ ಮಾಡಿದ 4 ಗಂಟೆಯ ನಂತರ ನಾವು ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆವು. ಅಲ್ಲದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರು ಮರಣ ಪ್ರಮಾಣಪತ್ರವನ್ನು ಕೂಡ ನೀಡಿದ್ದರು ಎಂದು ವೃದ್ಧೆಯ ಪುತ್ರ ಹೇಳಿದ್ದಾರೆ. ನನ್ನ ತಾಯಿಗೆ ಆಮ್ಲಜನಕ ನೀಡಲಾಗಿದ್ದು, ಅವರ ಹೃದಯ ಸ್ಥಿರವಾಗಿದೆ. ವೈದ್ಯರು ಆಕೆಯ ಕೈಯನ್ನು ಚಿವುಟಿದ್ದು, ಆಕೆ ಅದಕ್ಕೆ ಸ್ಪಂದಿಸಿದ್ದಾಳೆ. ಇದು ಒಳ್ಳೆಯ ಮುನ್ಸೂಚನೆ ಎಂದು ಅವರು ಹೇಳಿದ್ದಾರೆ. ಈಗ ನಾನು ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಆಕೆ ಗುಣಮುಖಳಾಗಿ ನನ್ನ ಜೊತೆ ಇರಬೇಕು ಎಂಬುದೇ ನನ್ನ ಆಸೆ ಎಂದು ಪುತ್ರ ಗಿಲ್ಬರ್ಟ್ ಹೇಳಿದ್ದಾರೆ.