ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ವಾಷಿಂಗ್ಟನ್: ಇರಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರಪ್ರಸಾರದ ಮೂಲಕ ಮಾಹಿತಿ ನೀಡಿದ್ದಾರೆ. ಇರಾನ್‌ನ ಪರಮಾಣು ಸಾಮರ್ಥ್ಯ ಮತ್ತು ಆ ದೇಶ ಹಾಕುವ ಬೆದರಿಕೆಯನ್ನು ಶಾಶ್ವತವಾಗಿ ಕೊನೆ ಮಾಡೋದು ನಮ್ಮ ದಾಳಿಯ ಉದ್ದೇಶವಾಗಿತ್ತು. ನಾವು ಇರಾನ್‌ಗೆ ಶಾಂತಿ ಮಾರ್ಗ ಅನುಸರಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಅವರು ನಮಗೆ ಎಚ್ಚರಿಕೆಯನ್ನು ನೀಡಿದರು. ಇರಾನ್ ಶಾಂತಿ ಮಾರ್ಗ ಪಾಲನೆ ಮಾಡದಿದ್ದರೆ ಅಮೆರಿಕ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಇನ್ನಷ್ಟು ಗಂಭೀರ ಮತ್ತು ದೊಡ್ಡದಾಗಿರುತ್ತವೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇರಾನ್‌ನ ಪರಮಾಣು ಕೇಂದ್ರಗಳನ್ನು ನಾಶಗೊಳಿಸುವ ಕಾರ್ಯಾಚರಣೆ ಸಂಪೂರ್ಣವಾಗಿ ಯಶಸ್ವಿಯಾಗಿವೆ. ಗುರಿಯಾಗಿಸಿಕೊಂಡಿದ್ದ ಪರಮಾಣು ತಾಣಗಳು ಈಗ ಸಂಪೂರ್ಣವಾಗಿ ನಾಶವಾಗಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಿಷ್ಠ ಮತ್ತು ಸಮರ್ಥ ತಂಡಗಳ ಜೊತೆ ಈ ಆಪರೇಷನ್ ನಡೆದಿದೆ. ಇಸ್ರೇಲ್ ಮತ್ತು ಅಮೆರಿಕ ದೇಶಗಳ ನಡುವಿನ ಜಂಟಿ ಕಾರ್ಯಾಚರಣೆಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ಸೂಚಿಸಿದರು. ನಾನು ಪ್ರಧಾನಿ ನೆತನ್ಯಾಹು ಅವರಿಗೆ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಬಹುಶಃ ಹಿಂದೆಂದೂ ನೋಡಿರದ ರೀತಿಯಲ್ಲಿ. ಇಸ್ರೇಲ್‌ಗೆ ಇರುವ ಭಯಾನಕ ಬೆದರಿಕೆಯನ್ನು ತೊಡೆದುಹಾಕುವತ್ತ ನಾವು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ
ಇರಾನ್-ಇಸ್ರೇಲ್ ಸಂಘರ್ಷ ಆರಂಭವಾಗಿ ಹತ್ತನೇ ದಿನದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಅನಿರೀಕ್ಷಿತ ನಡೆಯಿಂದಾಗಿ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಫೋರ್ಡೊ, ನತಾನ್ಸ್ ಮತ್ತು ಇಸ್ಫಹಾನ್ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ದಾಳಿ ಪೂರ್ಣಗೊಳಿಸಿ ಯುದ್ಧ ವಿಮಾನಗಳು ಸುರಕ್ಷಿತವಾಗಿ ಹಿಂದಿರುಗಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬೆಂಜಮಿನ್ ನೆತನ್ಯಾಹು ಧನ್ಯವಾದ
ಯಾವ ಆಯುಧ ಬಳಸಲಾಗಿದೆ ಅಥವಾ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫೋರ್ಡೊದಂತಹ ಬೆಟ್ಟಗುಡ್ಡಗಳ ನಡುವೆ ನಿರ್ಮಿಸಲಾದ ಕೇಂದ್ರಗಳನ್ನು ಗುರಿಯಾಗಿಸಲು ಬಂಕರ್ ಬಸ್ಟ್ ಬಾಂಬ್‌ಗಳೇ ಬೇಕಾಗುತ್ತವೆ. ದಾಳಿಯಲ್ಲಿ ಭಾಗವಹಿಸಿದ ಅಮೆರಿಕಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧನ್ಯವಾದಗಳನ್ನು ತಿಳಿಸಿದ್ದಾರೆ. ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಬೇಕೆ ಎಂದು ಎರಡು ವಾರಗಳಲ್ಲಿ ನಿರ್ಧರಿಸುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು. ಈ ನಡುವೆಯೇ ಅನಿರೀಕ್ಷಿತ ದಾಳಿ ನಡೆದಿದೆ.
ಹೌತಿ ಸಶಸ್ತ್ರ ಪಡೆಗಳಿಂದ ಅಮೆರಿಕಾಗೆ ಎಚ್ಚರಿಕೆ
ಇದೇ ವೇಳೆ, ಇರಾನ್ ವಿರುದ್ಧದ ದಾಳಿಯಲ್ಲಿ ಅಮೆರಿಕ ಇಸ್ರೇಲ್ ಜೊತೆ ಸೇರಿದರೆ ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳನ್ನು ಗುರಿಯಾಗಿಸುವುದಾಗಿ ಹೌತಿಗಳು ಬೆದರಿಕೆ ಹಾಕಿದ್ದರು. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹತ್ತನೇ ದಿನಕ್ಕೆ ಕಾಲಿಟ್ಟರೂ ಅಂತ್ಯವಾಗುವ ಯಾವುದೇ ಸೂಚನೆಗಳಿಲ್ಲ. ಇದರ ಬೆನ್ನಲ್ಲೇ ಹೌತಿ ಸಶಸ್ತ್ರ ಪಡೆಗಳು ಅಮೆರಿಕಕ್ಕೆ ಎಚ್ಚರಿಕೆ ನೀಡಿವೆ.
'ಇರಾನ್ ವಿರುದ್ಧದ ದಾಳಿಯಲ್ಲಿ ಇಸ್ರೇಲ್ ಜೊತೆ ಅಮೆರಿಕ ಪಾಲುದಾರನಾದರೆ, ಸಶಸ್ತ್ರ ಪಡೆಗಳು ಕೆಂಪು ಸಮುದ್ರದಲ್ಲಿ ಅವರ ಹಡಗುಗಳು ಮತ್ತು ಯುದ್ಧನೌಕೆಗಳನ್ನು ಗುರಿಯಾಗಿಸುತ್ತವೆ. ಗಾಜಾ, ಲೆಬನಾನ್, ಸಿರಿಯಾ ಮತ್ತು ಇರಾನ್‌ನಲ್ಲಿ ದಾಳಿ ನಡೆಸಿ ಪಶ್ಚಿಮ ಏಷ್ಯಾದಲ್ಲಿ ಪ್ರಾಬಲ್ಯ ಸ್ಥಾಪಿಸಲು ಝಿಯೋನಿಸ್ಟ್-ಅಮೆರಿಕನ್ ನಡೆಗೆ ಹಿನ್ನಡೆಯಾಗಲಿದೆ. ನಡೆಗಳನ್ನು ಗಮನಿಸಲಾಗುತ್ತಿದೆ' ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ದಾಳಿ ಖಚಿತಪಡಿಸಿರುವ ಇರಾನ್
ಮೂರು ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ದೃಢಪಡಿಸಿದೆ. ಮೂರು ಪರಮಾಣು ವಿದ್ಯುತ್ ಸ್ಥಾವರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಮೂರು ಸ್ಥಾವರಗಳಲ್ಲಿ ಯಾವುದೇ ವಿಕಿರಣಶೀಲ ವಸ್ತುಗಳು ಇಲ್ಲ ಎಂದು ಇರಾನಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ನಡುವೆ ಫೋರ್ಡೋ ಪರಮಾಣು ಸ್ಥಾವರ ಪೂರ್ಣಗೊಂಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
