Asianet Suvarna News Asianet Suvarna News

ನೂಪುರ್‌ ಶರ್ಮಗೆ ಬೆಂಬಲ ನೀಡಿದ್ದ ಗೀರ್ಟ್ ವೈಲ್ಡರ್ಸ್‌ಗೆ ನೆದರ್ಲೆಂಡ್ಸ್‌ ಚುನಾವಣೆಯಲ್ಲಿ ಗೆಲುವು ಸನ್ನಿಹಿತ!

ಇಸ್ಲಾಂ-ವಿರೋಧಿ ದೃಷ್ಟಿಕೋನಗಳಿಗೆ ಹೆಸರುವಾಸಿಯಾದ ಡಚ್ ಬಲಪಂಥೀಯ ನಾಯಕ ಗೀರ್ಟ್‌ ವೈಲ್ಡರ್ಸ್ ಅವರ ಫ್ರೀಡಂ ಪಾರ್ಟಿ (ಪಿವಿವಿ) 150 ರಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್‌ಗಳ ಪ್ರಕಾರ ಅಂದಾಜಿಸಲಾಗಿದೆ.

Dutch leader Geert Wilders who backed Nupur Sharma over Prophet remark wins polls san
Author
First Published Nov 23, 2023, 4:04 PM IST


ನವದೆಹಲಿ (ನ.23): ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ ಡಚ್ ಬಲಪಂಥೀಯ ಜನಪ್ರಿಯ ನಾಯಕ ಗೀರ್ಟ್ ವೈಲ್ಡರ್ಸ್ ಅವರು ನೆದರ್ಲೆಂಡ್ಸ್ ಸಂಸತ್ ಚುನಾವಣೆಯಲ್ಲಿ ಬೃಹತ್‌ ಗೆಲುವಿಗೆ ಸನಿಹರಾಗಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ತೋರಿಸಿವೆ. ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿರುವ ವೈಲ್ಡರ್ಸ್, ನೆದರ್ಲ್ಯಾಂಡ್ಸ್‌ಗೆ ವಲಸೆಯನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಚುನಾವಣೆಯಲ್ಲಿ ಎಲ್ಲಾ ಭವಿಷ್ಯವಾಣಿಗಳನ್ನು ಹುಸಿ ಮಾಡಿರುವ ವೈಲ್ಡರ್ಸ್‌ ಹಾಗೂ ಅವರ ಫ್ರೀಡಮ್‌ ಪಾರ್ಟಿ (ಪಿವಿವಿ) ಚುನಾವಣೆಯಲ್ಲಿ 150 ರಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಹೊರಹೋಗುವ ಹಾದಿಯಲ್ಲಿರುವ ಪ್ರಧಾನಿ ಮಾರ್ಕ್ ರುಟ್ಟೆ ಅವರ ಸಮ್ಮಿಶ್ರ ಸರ್ಕಾರವು ಜುಲೈನಲ್ಲಿ ಪತನಗೊಂಡು ಕ್ಷಿಪ್ರ ಚುನಾವಣೆಗೆ ಕಾರಣವಾಯಿತು, ಎಕ್ಸಿಟ್ ಪೋಲ್‌ಗಳ ಪ್ರಕಾರ 23 ಸ್ಥಾನಗಳೊಂದಿಗೆ ಈ ಪಕ್ಷ ಮೂರನೇ ಸ್ಥಾನ್ಲ್ಲಿದೆ. ಎಲ್ಲಾ ಮತಗಳನ್ನು ಎಣಿಸಿದಾಗ, ಇದು ಅಧಿಕೃತವಾಗಿ ರುಟ್ಟೆ ಅವರ 13 ವರ್ಷಗಳ ಆಡಳಿತದ ಅಂತ್ಯವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

ನೆದರ್ಲೆಂಡ್ಸ್‌ ಚುನಾವಣೆಯ ಎಕ್ಸಿಟ್‌ ಪೂಲ್‌ಗಳು ಭಾರತದ ರೀತಿ ಇರೋದಿಲ್ಲ. ಅಲ್ಲಿನ ಎಕ್ಸಿಟ್‌ ಪೂಲ್‌ಗಳು ಬಹಳ ವಿಶ್ವಾಸಾರ್ಹವಾಗಿದ್ದು ಹೆಚ್ಚೆಂದರೆ ಎರಡು ಸೀಟು ಆಕಡೆ-ಈಕಡೆ ವತ್ಯಾಸವಾಗಬಹುದು. ಕಳೆದ ವರ್ಷ ಟಿವಿ ಚರ್ಚೆ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಕಾಮೆಂಟ್‌ಗಳಿಗಾಗಿ ವೈಲ್ಡರ್ಸ್, ನೂಪುರ್‌ ಶರ್ಮಾ ಅವರನ್ನು ಸಮರ್ಥಿಸಿಕೊಂಡಿದ್ದರು. ಇದು ಗಲ್ಫ್ ದೇಶಗಳಿಂದ ಖಂಡನೆಗೆ ಒಳಗಾಯಿತು. ಇದೇ ಪ್ರಕರಣದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳಿಂದ ಟೈಲರ್ ಒಬ್ಬರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಕೂಡ ನಡೆಯಿತು. ಪ್ರವಾದಿ ಕುರಿತಾಗಿ ಮಾತನಾಡಿದ್ದ ಕಾರಣಕ್ಕೆ ನೂಪುರ್‌ ಶರ್ಮ ಹಾಗೂ ಭಾರತವನ್ನು ಖಂಡಿಸಿದ್ದ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಹೇಳಿಕೆಯನ್ನೂ ವೈಲ್ಡರ್ಸ್  ಟೀಕೆ ಮಾಡಿದ್ದರು.

"ಭಾರತ ಅಥವಾ ಇತರ ಯಾವುದೇ ದೇಶದ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂಬುದನ್ನು ನಿರ್ಧರಿಸುವ ಮೊದಲು ಕನ್ನಡಿಯಲ್ಲಿ ನಿಮ್ಮನ್ನು ನೋಡಿ ಎಂದು ನಾನು ಹೇಳುತ್ತೇನೆ. ಓಐಸಿ ಮಾನವ ಹಕ್ಕುಗಳ ಬಗ್ಗೆ ಘೋಷಣೆಯನ್ನು ಬಿಡುಗಡೆ ಮಾಡಿತು ಮತ್ತು ಈ ಎಲ್ಲಾ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡುತ್ತಿವೆ. ಅವರು ಶರಿಯಾ ಕಾನೂನನ್ನು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮೇಲೆ ಇರಿಸಿದ್ದಾರೆ." ಎಂದು ವೈಲ್ಡರ್ಸ್‌ ಮಾತನಾಡಿದ್ದರು.

ಒಐಸಿ ದೇಶಗಳು ಮಾನವ ಹಕ್ಕುಗಳ ಬಗ್ಗೆ ಅತ್ಯಂತ ಕೆಟ್ಟ ದಾಖಲೆಗಳನ್ನು ಹೊಂದಿರುವ ಅತ್ಯಂತ ಅಸಹಿಷ್ಣು ರಾಷ್ಟ್ರಗಳಾಗಿವೆ ಎಂದು ಅವರು ಹೇಳಿದ್ದರು. "ನೀವು ಆ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದರೆ, ನಿಮ್ಮನ್ನು ಕಿರುಕುಳಕ್ಕೆ ಒಳಪಡಿಸಲಾಗುತ್ತದೆ ಮತ್ತು ಜೈಲಿಗೆ ಕರೆದೊಯ್ಯಲಾಗುತ್ತದೆ. ನೀವು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೀರಿ. ಭಾರತವು ಸಾರ್ವಭೌಮ ರಾಷ್ಟ್ರವಾಗಿದೆ. ನಾವು ಅವರಿಂದ ಉಪನ್ಯಾಸ ನೀಡಲು ಅವಕಾಶ ನೀಡಬಾರದು" ಎಂದು ಅವರು ಹೇಳಿದ್ದರು.

'ಹಿಂದುಗಳೇ, ಅದು ನಿಮ್ಮ ದೇಶ, ನಿಮ್ಮ ತಾಯ್ನೆಲ' ಉದಯಪುರ ಹತ್ಯೆಯನ್ನು ಖಂಡಿಸಿದ ಡಚ್ ಸಂಸದ!

ವೈಲ್ಡರ್ಸ್‌ನ ಇಸ್ಲಾಂ ವಿರೋಧಿ ದೃಷ್ಟಿಕೋನಗಳು ಜೀವ ಬೆದರಿಕೆಗಳಿಗೆ ಕಾರಣವಾಗಿವೆ ಮತ್ತು ಅವರು ಕಳೆದ ಎರಡು ವರ್ಷಗಳಿಂದ ಭಾರೀ ಪೊಲೀಸ್ ರಕ್ಷಣೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಈ ಹಿಂದೆ ಪ್ರವಾದಿ ಮೊಹಮ್ಮದ್ ಅವರನ್ನು "ಶಿಶುಕಾಮಿ" ಎಂದು ಕರೆದಿದ್ದು ಮಾತ್ರವಲ್ಲದೆ, ಇಸ್ಲಾಂ ಅನ್ನು "ಫ್ಯಾಸಿಸ್ಟ್ ಸಿದ್ಧಾಂತ" ಮತ್ತು "ಹಿಂದುಳಿದ ಧರ್ಮ" ಎಂದು ಹೇಳಿದ್ದರು. ಅವರು ನೆದರ್ಲ್ಯಾಂಡ್ಸ್ನಲ್ಲಿ ಮಸೀದಿಗಳು ಮತ್ತು ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ನಿಷೇಧಿಸುವ ಪರ ಧೋರಣೆ ಹೊಂದಿದ್ದಾರೆ.

Nupur Sharma ಉಗ್ರರಿಗೆ ತಲೆಬಾಗಬೇಡಿ, ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಡಚ್ ಸಂಸದ!

 

Follow Us:
Download App:
  • android
  • ios