ದುಬೈ(ಜು.16):  ಕೊರೋನಾ ವೈರಸ್ ಭಾರತದಲ್ಲಿ ಸೃಷ್ಟಿಸುತ್ತಿರುವ ಆತಂಕ ಒಂದೆರಡಲ್ಲ. ಇದರ ಜೊತೆಗೆ ಅವ್ಯವಸ್ಥೆಗಳ ಆಗರವಾಗಿ ಮಾರ್ಪಡುತ್ತಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಚಿಕಿತ್ಸೆ ಪಡೆದವರಿಗೆ ದುಬಾರಿ ಬಿಲ್ ಸೇರಿದಂತೆ ಹಲವು ಘಟನೆಗಳು ವರದಿಯಾಗುತ್ತಿದೆ. ಇದರ ನಡುವೆ ದುಬೈ ಆಸ್ಪತ್ರೆ ಕಾರ್ಯಕ್ಕೆ ವಿಶ್ವವೇ ಭೇಷ್ ಎಂದಿದೆ. ಕೊರೋನಾ ಸೋಂಕಿತ ಭಾರತದ ಕೂಲಿ ಕಾರ್ಮಿಕನ ಬರೋಬ್ಬರಿ 1.52 ಕೋಟಿ ರೂಪಾಯಿ ಆಸ್ಪತ್ರೆ ಬಿಲ್ ಮನ್ನಾ ಮಾಡಿದೆ.

ತೆಲಂಗಾಣದ ವೇಣುಗುಮಟಲ ಗ್ರಾಮದ ಒಡ್ನಾಲ ರಾಜೇಶ್( 42 ವರ್ಷ) ದುಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಎಪ್ರಿಲ್ 23 ರಂದು ತೀವ್ರ ಅನಾರೋಗ್ಯದ ಕಾರಣ ದುಬೈ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ವೇಳೆ ರಾಜೇಶ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸತತ 80 ದಿನಗಳ ಚಿಕಿತ್ಸೆಯಲ್ಲಿ ರಾಜೇಶ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಹಿಡ್ಕೊಂಡೇ ವಿಮಾನದಲ್ಲಿ ದೆಹಲಿಯಿಂದ ಕೊಲ್ಕತ್ತಾಗೆ ಬಂದ..!.

ತೀವ್ರ ಹದಗೆಟ್ಟಿದ್ದ ಆರೋಗ್ಯವನ್ನು ದುಬೈ ವೈದ್ಯರು ನಿರಂತರ ಚಿಕಿತ್ಸೆಯಿಂದ ಗುಣಪಡಿಸಿದ್ದಾರೆ. ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ರಾಜೇಶ್ ಅವರ ಬಿಲ್ 7,62,555 ಧಿರಾಮ್ಸ್( ಭಾರತೀಯ ರೂಪಾಯಿಗಳಲ್ಲಿ 1.52 ಕೋಟಿ ರೂಪಾಯಿ) ಆಗಿದೆ. ಗಲ್ಫ್ ವರ್ಕರ್ ಪ್ರೊಟೆಕ್ಷನ್ ಸೊಸೈಟಿ ಅಧ್ಯಕ್ಷ ಗುಂಡೆಲ್ಲಿ ನರಸಿಂಹ ಅವರು ಈ ಕೂಲಿ ಕಾರ್ಮಿಕ ರಾಜೇಶ್ ಅವರನ್ನು ಆಸ್ಪತ್ರೆ ದಾಖಲಿಸಿದ್ದರು. ಬಳಿಕ ಪ್ರತಿ ದಿನ ಆರೋಗ್ಯ ವಿಚಾರಿಸುತ್ತಿದ್ದರು.

ಕೊರೋನಾ ಔಷಧಿ ಸಂಶೋಧಿಸುತ್ತಿರುವ ಆಕ್ಸ್‌ಫರ್ಡ್‌ನಿಂದ ಸಿಹಿ ಸುದ್ದಿ; ಇಂದು ಘೋಷಣೆ!

ಬಡ ಕೂಲಿ ಕಾರ್ಮಿಕ ರಾಜೇಶ್ ಅವರಿಗೆ ನೆರವು ನೀಡಬೇಕು ಎಂದು ನರಸಿಂಹ ಅವರು ದುಬೈನಲ್ಲಿರುವ ಇಂಡಿಯನ್ ಕನ್ಸೊಲೆಟ್ ಸುಮಾ ರೆಡ್ಡಿ ಅವರ ಗಮನಕ್ಕೆ ತರಲಾಗಿತ್ತು. ಈ ವಿಚಾರ ತಿಳಿದ ಭಾರತೀಯ ಕಾರ್ಮಿಕರ ಕನ್ಸೊಲೆಟ್ ದುಬೈ ಮುಖ್ಯಸ್ಥ ಹರ್ಜೀತ್ ಸಿಂಗ್, ಕಾರ್ಮಿಕ ರಾಜೇಶ್ ದಾಖಲಾಗಿದ್ದ ಆಸ್ಪತ್ರೆಗೆ ಪತ್ರ ಬರೆದಿದ್ದಾರೆ. ಬಡ ಕೂಲಿ ಕಾರ್ಮಿಕ ಆಗಿರುವ ಕಾರಣ ಮಾನವೀಯತೆಯ ದೃಷ್ಟಿಯಲ್ಲಿ ರಾಜೇಶ್ ಅವರ ಆಸ್ಪತ್ರೆ ವೆಚ್ಚ ಮನ್ನ ಮಾಡುವಂತೆ ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ದುಬೈ ಆಸ್ಪತ್ರೆ ರಾಜೇಶ ಅವರ 1.52 ಕೋಟಿ ರೂಪಾಯಿ ಬಿಲ್ ಮನ್ನ ಮಾಡಿದೆ. ಇದೇ ವೇಳು ದುಬೈನಲ್ಲಿ ಕೆಲಸ ಮಾಡುತ್ತಿರುವ ಭಾರತದ ಮೂಲದ ಅಶೋಕ್ ಕೋಟೆಟಾ ಅವರು ರಾಜೇಶ್ ಅವರಿಗೆ ತವರಿಗೆ ತೆರಳಲು ಉಚಿತವಾಗಿ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಮತ್ತೊರ್ವ ದ್ಯಾವರ ಕಾನಿಕಯ್ಯ ಅವರು ಖರ್ಚಿಗೆ 10,000 ರೂಪಾಯಿ ನೀಡಿ ರಾಜೇಶ್ ಅವರನ್ನು ತವರಿಗೆ ಕಳುಹಿಸಿಕೊಟ್ಟಿದ್ದಾರೆ.