ವಾಷಿಂಗ್ಟನ್‌(ಜ.21): ತಮ್ಮದೇ ಆದ ಪಕ್ಷ ಸ್ಥಾಪಿಸಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತಮ್ಮ ಪಕ್ಷಕ್ಕೆ ‘ಪೇಟ್ರಿಯಟ್‌ ಪಾರ್ಟಿ’ (ದೇಶಪ್ರೇಮಿ ಪಕ್ಷ) ಎಂದು ಹೆಸರಿಡಲು ಅವರು ಇಚ್ಛಿಸಿದ್ದಾರೆ. ಇತ್ತೀಚೆಗೆ ತಮ್ಮದೇ ಆದ ರಿಪಬ್ಲಿಕನ್‌ ಪಕ್ಷದ ಸಂಸದರು ತಮ್ಮನ್ನು ಟೀಕಿಸಿದ್ದರಿಂದ ಟ್ರಂಪ್‌ ಬೇಸರಗೊಂಡಿದ್ದಾರೆ. ಹೀಗಾಗಿ ಹೊಸ ಪಕ್ಷಕ್ಕೆ ಚಿಂತನೆ ನಡೆಸಿದ್ದಾರೆ. ಅಮರಿಕದಲ್ಲಿ ಮೇಲ್ನೋಟಕ್ಕೆ ಡೆಮಾಕ್ರೆಟಿಕ್‌ ಹಾಗೂ ರಿಪಬ್ಲಿಕನ್‌ ಪಕ್ಷ ಮಾತ್ರ ಇವೆ ಎನ್ನಿಸಿದರೂ, ಇತರ ಸಣ್ಣಪುಟ್ಟಪಕ್ಷಗಳೂ ಇವೆ.

ಟ್ರಂಪ್ ಗೋಡೆಗೆ ತಡೆ, ಮುಸ್ಲಿಂ ಆದೇಶ ತೆರವು: ಬೈಡೆನ್ 15 ಆದೇಶ!

ಕೊನೇ ದಿನ ಶ್ವೇತಭವನದಲ್ಲೇ ಪುತ್ರಿ ನಿಶ್ಚಿತಾರ್ಥ!

ಬುಧವಾರ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲಿ ತಮ್ಮ ಕೊನೆಯ ದಿನ ಕಳೆಯುವ ಕೊರಗಿನಲ್ಲಿರುವ ವೇಳೆಯೇ ಇದೇ ಭವ್ಯ ನಿವಾಸದಲ್ಲಿ ಟ್ರಂಪ್‌ ಅವರ ಪುತ್ರಿ ಟಿಫಾನಿ (27) ಟ್ರಂಪ್‌, ಶತಕೋಟ್ಯಧೀಶ ಮೈಕೆಲ್‌ ಬೌಲೋಸ್‌ (24) ಎಂಬುವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಟಿಫಾನಿ ಅವರು ಟ್ರಂಪ್‌ರ ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್‌ ಅವರ ಪುತ್ರಿ.

ಇನ್ನು ದ್ವೀಪದ ಎಸ್ಟೇಟ್‌ನಲ್ಲಿ ಟ್ರಂಪ್‌ ವಾಸ

ಅಧ್ಯಕ್ಷಗಿರಿ ಮುಗಿದ ಬೆನ್ನಲ್ಲೇ ಟ್ರಂಪ್‌ ಬುಧವಾರ ಶ್ವೇತಭವನ ತೊರೆದರು. ಫೆä್ಲೕರಿಡಾ ಸಮೀಪ ಇರುವ ಪಾಲಂ ಬೀಚ್‌ ಆಚೆಯ ದ್ವೀಪವೊಂದರಲ್ಲಿನ ಮಾರ್‌-ಎ-ಲಾಗೋ ಎಸ್ಟೇಟ್‌ನಲ್ಲಿ ಇನ್ನು ಅವರು ನೆಲೆಸಲಿದ್ದು, ಪತ್ನಿ ಮೆಲಾನಿಯಾ ಟ್ರಂಪ್‌ ಅವರ ಜತೆ ಅಧ್ಯಕ್ಷರ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ಇನ್ನು ಇದೇ ಎಸ್ಟೇಟ್‌ನಲ್ಲಿ ಅವರು ಕಾಯಂ ಆಗಿ ವಾಸಿಸುವರು.

ಬೈಡೆನ್‌ ಪ್ರಮಾಣವಚನಕ್ಕೆ ಟ್ರಂಪ್‌ ಬಹಿಷ್ಕಾರ

ಚುನಾವಣೆಯಲ್ಲಿ ಉಂಟಾದ ಸೋಲು ಸಹಿಸಿಕೊಳ್ಳದ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡೆನ್‌ ಅವರ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದರು. ಉತ್ತರಾಧಿಕಾರಿಯ ಪ್ರಮಾಣವಚನ ಸ್ವೀಕಾರ ಬಹಿಷ್ಕರಿಸಿದ 1869ರ ನಂತರದ ಮೊದಲ ಅಮೆರಿಕ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’ಗೆ ಅವರು ಭಾಜನರಾದರು. ಟ್ರಂಪ್‌ ಬದಲು ನಿರ್ಗಮಿತ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು ಸಮಾರಂಭದಲ್ಲಿ ಭಾಗಿಯಾದರು.

ಅಮೆರಿಕ ಅಧ್ಯಕ್ಷರ ಶಪಥ ಸ್ವೀಕಾರ ಸಮಾರಂಭಕ್ಕೆ 25000 ಜನರ ಭದ್ರತೆ!

140 ಜನರಿಗೆ ಟ್ರಂಪ್‌ ಕ್ಷಮೆ; ಆದರೆ ತಮ್ಮನ್ನು ಕ್ಷಮಿಸಿಕೊಳ್ಳಲಿಲ್ಲ

 ತಮ್ಮ ಅಮೆರಿಕ ಅಧ್ಯಕ್ಷಾವಧಿಯ ಕೊನೆಯ ದಿವಸ ಡೊನಾಲ್ಡ್‌ ಟ್ರಂಪ್‌, ವಿವಿಧ ಆರೋಪ ಎದುರಿಸುತ್ತಿದ್ದ 140 ಮಂದಿಯನ್ನು ಕ್ಷಮಿಸಿದ್ದಾರೆ. ಆದರೆ ಬೈಡೆನ್‌ ಗೆದ್ದ ವೇಳೆ ತಮ್ಮ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸಿದ ಹಾಗೂ ಚುನಾವಣಾ ಅಕ್ರಮ ಎಸಗಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಟ್ರಂಪ್‌ ಅವರು ತಮಗೆ ತಾವೇ ಕ್ಷಮಾದಾನ ಕೊಟ್ಟುಕೊಂಡು ನುಣುಚಿಕೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ ಅವರು ಹಾಗೆ ಮಾಡಿಲ್ಲ.

ಬೈಡೆನ್‌ ಸರ್ಕಾರಕ್ಕೆ ಶುಭಕೋರಿದ ಟ್ರಂಪ್‌

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೋ ಬೈಡೆನ್‌ ಅವರ ನೂತನ ಸರ್ಕಾರಕ್ಕೆ ಶುಭಾಶಯ ಕೋರಿದ್ದಾರೆ. ಬೀಳ್ಕೊಡುಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಟ್ರಂಪ್‌, ‘ನೂತನ ಸರ್ಕಾರ ಅಮೆರಿಕನ್ನರ ಸುರಕ್ಷತೆ, ಸಮೃದ್ಧಿಯನ್ನು ಗಮನದಲ್ಲಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ನಾನು ಶುಭ ಕೋರುತ್ತಿದ್ದೇನೆ. ಅಮೆರಿಕನ್ನರು ಸಮಾನ ಮೌಲ್ಯಗಳನ್ನು ಒಟ್ಟುಗೂಡಿಸಿಕೊಂಡು, ಪಕ್ಷಭೇದ ಮರೆತು ಮುಂದೆ ಸಾಗಬೇಕಿದೆ’ ಎಂದು ಹೇಳಿದ್ದಾರೆ. ಆದರೆ, ತಮ್ಮ ಬೀಳ್ಕೊಡುಗೆ ಸಂದೇಶದಲ್ಲಿ ಅಧ್ಯಕ್ಷ ಬೈಡೆನ್‌ ಹೆಸರನ್ನು ಉಲ್ಲೇಖಿಸಿಲ್ಲ.

ಸುಳ್ಳು ಸುದ್ದಿ ವಿರುದ್ಧ ಟ್ವಿಟರ್ ಸಮರ: ಟ್ರಂಪ್ ಬೆನ್ನಲ್ಲೇ ಮತ್ತೊಬ್ಬ ನಾಯಕಿಗೆ ನಿಷೇಧ!

ಬೈಡೆನ್‌ ಭಾಷಣ ಬರೆದಿದ್ದು ವಿನಯ್‌ ರೆಡ್ಡಿ

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಮಾಡಿದ ಮೊದಲ ಭಾಷಣ ಬರೆದಿದ್ದು ಭಾರತೀಯ ಮೂಲದ ವಿನಯ್‌ ರೆಡ್ಡಿ. ಈ ಮೂಲಕ ಅಮೆರಿಕ ಅಧ್ಯಕ್ಷರ ಭಾಷಣ ಬರಹಗಾರರಾಗಿ ನೇಮಕಗೊಂಡ ಮೊದಲ ಭಾರತೀಯ ಅಮೆರಿಕನ್‌ ಎನ್ನಿಸಿಕೊಂಡಿದ್ದಾರೆ. ರೆಡ್ಡಿ ಅವರು ಬೈಡೆನ್‌ರ ಆಪ್ತ ಬಳಗದಲ್ಲಿದ್ದು, ಒಹಾಯೋದ ಡೈಟನ್‌ನಲ್ಲಿ ಹುಟ್ಟಿಬೆಳೆದವರು. ಬೈಡೆನ್‌ 2013ರಿಂದ 2017ರವರೆಗೆ ಅಮೆರಿಕ ಉಪಾಧ್ಯಕ್ಷರಾಗಿದ್ದಾಗಲೂ ರೆಡ್ಡಿ ಅವರು, ಬೈಡೆನ್‌ನ ಮುಖ್ಯ ಭಾಷಣ ಬರಹಗಾರರಾಗಿದ್ದರು.ಇತ್ತೀಚಿನ ಚುನಾವಣಾ ಪ್ರಚಾರದ ವೇಳೆಯೂ ಭಾಷಣ ಬರೆದುಕೊಟ್ಟಿದ್ದರು.