ಜ.20ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ|  ಹಿಂಸಾಚಾರದ ಹಿನ್ನೆಲೆಯಲ್ಲಿ 25,000 ಮಂದಿ ನ್ಯಾಷನಲ್‌ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜನೆ

ವಾಷಿಂಗ್ಟನ್(ಜ.19‌: ಜ.20ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಇತ್ತೀಚೆಗೆ ಸಂಸತ್‌ ಭವನದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ 25,000 ಮಂದಿ ನ್ಯಾಷನಲ್‌ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಂಸತ್‌ ಭವನದ ಸುತ್ತಮುತ್ತಲಿನ ಪ್ರದೇಶ, ಪೆನ್ಸಿಲ್ವೇನಿಯಾ ರಸ್ತೆ ಮತ್ತು ಹಾಗೂ ಶ್ವೇತಭವನದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರಾಕರಿಸಲಾಗಿದ್ದು, 8 ಅಡಿ ಎತ್ತರದ ಕಬ್ಬಿಣದ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇದೇ ವೇಳೆ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಭದ್ರತೆ ನೋಡಿಕೊಳ್ಳಲು 4000 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಬೃಹತ್‌ ನ್ಯಾಷನಲ್‌ ಮಾಲ್‌ ಅನ್ನು ಬಂದ್‌ ಮಾಡಲಾಗಿದೆ.

ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಅದ್ಧೂರಿ ಸಮಾರಂಭದ ಬದಲು ವರ್ಚುವಲ್‌ ಆಗಿ ಸಮಾರಂಭವನ್ನು ಆಯೋಜಿಸಲಾಗುತ್ತಿದ್ದು, ಜೋ ಬೈಡೆನ್‌ ಅಧ್ಯಕ್ಷರಾಗಿ ಹಾಗೂ ಕಮಲಾ ಹ್ಯಾರಿಸ್‌ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.