ವಾಷಿಂಗ್ಟನ್(ಜ.21)‌: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ ಅಧಿಕಾರ ವಹಿಸಕೊಂಡ ಮೊದಲ ದಿನದಂದು 15 ಮಹತ್ವದ ಆದೇಶಗಳಿಗೆ ಸಹಿ ಮಾಡಿದ್ದಾರೆ.

ಮೆಕ್ಸಿಕೋ ಗೋಡೆಗೆ ತಡೆ:

ಮೆಕ್ಸಿಕೋದಿಂದ ಬರುವ ವಲಸಿಗರ ತಡೆಗೆ ಗಡಿಯಲ್ಲಿ ಬೃಹತ್‌ ಉಕ್ಕಿನ ಗೋಡೆ ನಿರ್ಮಿಸುವ ಕಾರ್ಯವನ್ನು ಮಾಜಿ ಅಧ್ಯಕ್ಷ ಟ್ರಂಪ್‌ ಆರಂಭಿಸಿದ್ದರು. ಯೋಜನೆಗೆ ತಡೆ.

ಮುಸ್ಲಿಂ ವಲಸೆ ನಿಷೇಧಕ್ಕೆ ಬ್ರೇಕ್‌:

ಮುಸ್ಲಿಂ ಪ್ರಧಾನ ರಾಷ್ಟ್ರಗಳು, ಕೇಂದ್ರ ಏಷ್ಯಾ ಹಾಗೂ ಆಫ್ರಿಕಾದ ಕೆಲವು ದೇಶಗಳ ಮೇಲೆ ಟ್ರಂಪ್‌ ಪ್ರಯಾಣ ನಿಷೇಧ ಹೇರಿದ್ದರು. ಈ ಆದೇಶಕ್ಕೆ ತಡೆ.

ಕೊರೋನಾ ನಿರ್ವಹಣೆ ಕ್ರಮ:

ಕೈಮೀರಿ ಹೋಗಿರುವ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಕ್ಷಿಪ್ರವಾಗಿ ಕೈಗೊಳ್ಳಬೇಕಿರುವ ಕ್ರಮಗಳು, ನಿರ್ದೇಶನಗಳಿಗೆ ಅನುಮೋದನೆ ನೀಡುವ ಆದೇಶಕ್ಕೆ ಬೈಡೆನ್‌ ಸಹಿ.

ಪ್ಯಾರಿಸ್‌ ಒಪ್ಪಂದ:

ತಾಪಮಾನ ಏರಿಕೆ ತಡೆಗೆ 2016ರಲ್ಲಿ ಜಾಗತಿಕ ರಾಷ್ಟ್ರಗಳು ಮಾಡಿಕೊಂಡ ಒಪ್ಪಂದವನ್ನು ಟ್ರಂಪ್‌ ತಿರಸ್ಕರಿಸಿದ್ದರು. ಈ ಒಪ್ಪಂದಕ್ಕೆ ಮರು ಸೇರ್ಪಡೆ

ಡಬ್ಲ್ಯು ಎಚ್‌ಒಗೆ ನೆರವು ಮುಂದುವರಿಕೆ:

ಡಬ್ಲ್ಯು ಎಚ್‌ಒಗೆ ನೀಡುತ್ತಿದ್ದ ನೆರವನ್ನು ಟ್ರಂಪ್‌ ತಡೆ ಹಿಡಿದಿದ್ದರು. ಅದನ್ನು ಮುಂದವರೆಸಲು ನಿರ್ಧಾರ.

100 ದಿನ ಮಾಸ್ಕ್‌ ಚಾಲೆಂಜ್‌:

ಅಮೆರಿಕನ್ನರು 100 ದಿನಗಳ ಕಾಲ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ಮಾಸ್ಕ್‌ ಚಾಲೆಂಜ್‌ಗೆ ಚಾಲನೆ.

ನಾಗರಿಕರಲ್ಲದವರನ್ನೂ ಜನಗಣತಿಗೆ ಸೇರ್ಪಡೆ:

ಅಮೆರಿಕದ ನಾಗರಿಕರಲ್ಲದವರನ್ನು ಜನಗಣತಿಯಿಂದ ಹೊರಗಿಡುವುದಕ್ಕೆ ಟ್ರಂಪ್‌ ಆದೇಶ ಹೊರಡಿಸಿದ್ದರು. ಆದರೆ, ಅಮೆರಿಕದಲ್ಲಿ ನೆಲೆದಿರುವ ಎಲ್ಲರನ್ನೂ ಜನಗಣತಿಗೆ ಸೇರಿಸುವ ಆದೇಶಕ್ಕೆ ಬೈಡೆನ್‌ ಸಹಿ ಹಾಕಿದ್ದಾರೆ.

ನೂತನ ವಲಸೆ ನೀತಿಗೆ ಅನುಮೋದನೆ

ಅಮೆರಿಕಕ್ಕೆ ಬಾಲ್ಯದಲ್ಲೇ ಬಂದವರು ಹಾಗೂ ಯಾವುದೇ ದಾಖಲೆಗಳು ಇಲ್ಲದೇ ಅಮೆರಿಕದಲ್ಲಿ ನೆಲೆಸಿದವರನ್ನು ದೇಶದಿಂದ ಹೊರಹಾಕುವ ವಲಸೆ ನೀತಿಗೆ ಮಾರ್ಪಡು ಮಾಡಿ ಬೈಡೆನ್‌ ಆದೇಶ ಹೊರಡಿಸಿದ್ದಾರೆ.