ವಾಷಿಂಗ್ಟನ್‌(ಜ.15): ನಾಲ್ಕು ವರ್ಷಗಳ ಅವಧಿಯನ್ನು ಇನ್ನು 5 ದಿನದಲ್ಲಿ ಪೂರ್ಣಗೊಳಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಘೋರ ಮುಖಭಂಗವಾಗಿದೆ. ಸಂಸತ್‌ ಭವನದಲ್ಲಿ ಹಿಂಸಾಚಾರ ನಡೆಸಲು ಕುಮ್ಮಕ್ಕು ನೀಡಿದ ಆಪಾದನೆ ಮೇರೆಗೆ ಅಮೆರಿಕ ಸಂಸತ್ತಿನ ಕೆಳಮನೆಯಾಗಿರುವ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಿದೆ.

435 ಸದಸ್ಯ ಬಲದ ಕೆಳಮನೆಯಲ್ಲಿ 232-197 ಮತಗಳೊಂದಿಗೆ ಟ್ರಂಪ್‌ ಪದಚ್ಯುತಿ ನಿರ್ಣಯ ಅಂಗೀಕಾರಗೊಂಡಿದೆ. ವಿಶೇಷ ಎಂದರೆ, ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ 10 ಸದಸ್ಯರು ಕೂಡ ವಿರೋಧ ಪಕ್ಷ ಡೆಮೊಕ್ರಟಿಕ್‌ ಸದಸ್ಯರು ಮಂಡಿಸಿದ ವಾಗ್ದಂಡನೆ ನಿರ್ಣಯ ಬೆಂಬಲಿಸಿ ಮತ ಹಾಕಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರ ವಿರುದ್ಧ ಎರಡು ಬಾರಿ ವಾಗ್ದಂಡನೆ ನಿರ್ಣಯ ಅಂಗೀಕಾರವಾಗುತ್ತಿರುವುದು ಇದೇ ಮೊದಲು.

ಭಾರತೀಯರಿಗೆ ಮತ್ತೆ ಎಚ್‌1 ಬಿ ಶಾಕ್‌!

ಅಮೆರಿಕ ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್‌ನಲ್ಲೂ ಈ ನಿರ್ಣಯ ಅಂಗೀಕಾರವಾದರೆ ಅಧ್ಯಕ್ಷ ಅವಧಿ ಪೂರ್ಣಗೊಳ್ಳುವ ಮುನ್ನವೇ ಟ್ರಂಪ್‌ ಪದಚ್ಯುತಿಯಾಗಲಿದ್ದಾರೆ. ಅಧಿಕಾರಾವಧಿ ಮುಗಿಯಲು ಕೆಲವೇ ದಿನಗಳು ಬಾಕಿ ಇರುವಾಗ ಹೊರದಬ್ಬಿಸಿಕೊಂಡ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್‌ ಪಾತ್ರರಾಗಲಿದ್ದಾರೆ. ಆದರೆ ಒಂದು ಸಮಸ್ಯೆಯಿದೆ. ಸೆನೆಟ್‌ನ ಅಧಿವೇಶನ ಜ.19ರಂದು ನಿಗದಿಯಾಗಿದೆ. ಅಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಸರಳ ಬಹುಮತವಿದೆ. ಜ.20ರಂದು ಜೋ ಬೈಡೆನ್‌ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆಗ ಟ್ರಂಪ್‌ ತನ್ನಿಂತಾನೆ ಮಾಜಿಯಾಗಲಿದ್ದಾರೆ. ಆದರೆ ಅಷ್ಟರೊಳಗೆ ಸೆನೆಟ್‌ ತುರ್ತು ಸಮಾವೇಶ ಸೇರುತ್ತಾ ಎಂಬ ಕುತೂಹಲವಿದೆ.

ಅಮೆರಿಕ ಸಂಸತ್ತಿನ 25ನೇ ತಿದ್ದುಪಡಿಯ ಪ್ರಕಾರ, ಉಪಾಧ್ಯಕ್ಷರಿಗೆ ಅಧ್ಯಕ್ಷರನ್ನು ಕೆಳಗಿಳಿಸುವ ಅಧಿಕಾರವಿದೆ. ಆ ಅಧಿಕಾರ ಬಳಸುವಂತೆ ಒತ್ತಾಯಿಸಿ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌್ಸ ಸದಸ್ಯರು 223-205 ಮತಗಳ ಬಹುಮತದೊಂದಿಗೆ ನಿರ್ಣಯ ಅಂಗೀಕರಿಸಿದ್ದರು. ಆದರೆ ಅದಕ್ಕೆ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಒಪ್ಪದ ಹಿನ್ನೆಲೆಯಲ್ಲಿ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮಂಡಿಸಲಾಯಿತು.

ಟ್ರಂಪ್‌ ಪದಚ್ಯುತಿಗೆ ಇನ್ನೆರಡೇ ಹೆಜ್ಜೆ ಬಾಕಿ!

1868ರಲ್ಲಿ ಆ್ಯಂಡ್ರೂ ಜಾನ್ಸನ್‌, 1998ರಲ್ಲಿ ಬಿಲ್‌ ಕ್ಲಿಂಟನ್‌ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕಾರವಾಗಿತ್ತು. ಆದರೆ ಎರಡೂ ಸದನಗಳಲ್ಲೂ ಅದಕ್ಕೆ ಒಪ್ಪಿಗೆ ಸಿಗದ ಕಾರಣ ಅವರು ಬಚಾವಾಗಿದ್ದರು. ತಮ್ಮ ರಾಜಕೀಯ ವಿರೋಧಿ ಜೋ ಬೈಡೆನ್‌ ಅವರನ್ನು ಸಂಕಷ್ಟದಲ್ಲಿ ಸಿಲುಕಿಸಲು ಬೈಡೆನ್‌ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್‌ ಮೇಲೆ ಒತ್ತಡ ಹೇರಿದ ಆರೋಪ ಟ್ರಂಪ್‌ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ವಿರುದ್ಧ 2019ರ ಡಿಸೆಂಬರ್‌ನಲ್ಲಿ ವಾಗ್ದಂಡನೆ ಮಂಡಿಸಲಾಗಿತ್ತು. ಆದರೆ ಅದಕ್ಕೆ ಸೆನೆಟ್‌ನ ಒಪ್ಪಿಗೆ ಸಿಕ್ಕಿರಲಿಲ್ಲ.

ಟ್ರಂಪ್‌ ಈಗ ಏಕಾಂಗಿ

ಕಳೆದ 4 ವರ್ಷಗಳಿಂದ ವಿವಾದಾತ್ಮಕ ಹೇಳಿಕೆ, ವರ್ತನೆಯಿಂದ ಗಮನಸೆಳೆದಿದ್ದ ಡೊನಾಲ್ಡ್‌ ಟ್ರಂಪ್‌ ಇದೀಗ ತಮ್ಮ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕಾರವಾಗಿದ್ದರೂ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟರ್‌ ಟ್ರಂಪ್‌ ಅವರಿಗೆ ನಿಷೇಧ ಹೇರಿರುವುದರಿಂದ ಅವರಿಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲೂ ಆಗುತ್ತಿಲ್ಲ. ಅಲ್ಲದೆ ಆತ್ಮೀಯರು ಟ್ರಂಪ್‌ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಟ್ರಂಪ್‌ ಏಕಾಂಗಿಯಾಗಿದ್ದಾರೆ ಎನ್ನಲಾಗಿದೆ.