ನವದೆಹಲಿ(ಜ.14): ಎಚ್‌1 ಬಿ ವೀಸಾದಡಿ ಅಮೆರಿಕಕ್ಕೆ ತೆರಳ ಬಯಸುವ ಭಾರತೀಯರ ಹಾದಿಯನ್ನು ಮತ್ತಷ್ಟುಕಠಿಣಗೊಳಿಸುವ ನಿಯಮಗಳನ್ನು ಅಮೆರಿಕ ಸರ್ಕಾರ ಮಂಗಳವಾರ ಹೊಸದಾಗಿ ಜಾರಿಗೊಳಿಸಿದೆ. ಸ್ಥಳೀಯರ ಉದ್ಯೋಗ ಕಾಪಾಡುವ ನಿಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಜಾರಿಗೊಳಿಸಿರುವ ಹೊಸ ನೀತಿಯಿಂದಾಗಿ ಹೆಚ್ಚಿನ ವೇತನ ಇರುವವರಿಗೆ ಸುಲಭವಾಗಿ ಎಚ್‌1 ಬಿ ವೀಸಾ ಸಿಗಲಿದ್ದರೆ, ಸಣ್ಣ ವೇತನದ ನೌಕರರರಿಗೆ ಇಂಥ ವೀಸಾ ಪಡೆಯುವುದು ಕಷ್ಟವಾಗಲಿದೆ. ಅದರಲ್ಲೂ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗವನ್ನೂ ಮಾಡುತ್ತಿದ್ದ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ನೀತಿ ಮಾರಕವಾಗಿ ಪರಿಣಮಿಸಲಿದೆ. ಹಾಲಿ ಜಾರಿಯಲ್ಲಿದ್ದ ಲಾಟರಿ ವ್ಯವಸ್ಥೆಯ ಬದಲಾಗಿ ಈ ಹೊಸ ನೀತಿ ಜಾರಿಗೊಳಿಸಲಾಗಿದೆ.

ಅಮೆರಿಕ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ನೀತಿ ಅನ್ವಯ ಹೆಚ್ಚಿನ ವೇತನ ಮತ್ತು ಕೌಶಲ್ಯ ಹೊಂದಿದವರಿಗೆ ಎಚ್‌1 ಬಿ ವೀಸಾ ವಿತರಣೆಯಲ್ಲಿ ಆದ್ಯತೆ ನೀಡಲಾಗುವುದು. ಜೊತೆಗೆ ಇಂಥ ವೀಸಾದಡಿ ಕೆಲಸ ಮಾಡುತ್ತಿರುವವರಿಗೆ ಅಥವಾ ಉದ್ಯೋಗ ಆಧರಿತ ಗ್ರೀನ್‌ಕಾರ್ಡ್‌ ಹೊಂದಿರುವವರಿಗೆ ವೇತನದ ಮಿತಿ ಹೆಚ್ಚಿಸಲಾಗಿದೆ. ಈ ಮೂಲಕ ಕಡಿಮೆ ವೇತನದ ಉದ್ಯೋಗವನ್ನು ಅಮೆರಿಕನ್ನರಿಗೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ.

ಉದ್ಯೋಗಕ್ಕೆ ನೇಮಕಾತಿ ನಡೆಯುವ ಪ್ರದೇಶದಲ್ಲಿನ ಸರಾಸರಿ ವೇತನಕ್ಕಿಂತ ಹೆಚ್ಚಿನ ವೇತನ ನೀಡುವ ಕಂಪನಿಗಳಿಗೆ ಹೊಸ ವೀಸಾ ನೀಡಿಕೆಯಲ್ಲಿ ಸರ್ಕಾರ ಆದ್ಯತೆ ನೀಡಲಿದೆ. ಅಲ್ಲದೆ ಹೊಸ ನೀತಿಯಲ್ಲಿ ಎಚ್‌1 ಬಿ ವೀಸಾ ವಿತರಿಸುವ ಕಂಪನಿಗಳು, ಕೆಳ ಹಂತದ ನೌಕರರಿಗೆ ಈ ಹಿಂದಿನ ವೇತನಕ್ಕಿಂತ ಕನಿಷ್ಠ 35ರಷ್ಟುಹೆಚ್ಚು ವೇತನ ನೀಡುವುದು ಕಡ್ಡಾಯವಾಗಲಿದೆ. ಹಿಂದೆ ಈ ಪ್ರಮಾಣ ಶೇ.17ರಷ್ಟಿತ್ತು. ಇನ್ನು ಉನ್ನತ ವಲಯದ ಉದ್ಯೋಗಿಗಳಿಗೆ ಹಿಂದಿನದ್ದಕ್ಕಿಂತ ಶೇ.90ರಷ್ಟುಹೆಚ್ಚು ವೇತನ ನೀಡುವುದು ಕಡ್ಡಾಯ.