ವಾಷಿಂಗ್ಟನ್‌(ಜ.14): ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರಾವಧಿ ಮುಗಿಯಲು ಇನ್ನು ಆರು ದಿನ ಮಾತ್ರ ಬಾಕಿಯಿರುವಾಗ ಅವರನ್ನು ಪದಚ್ಯುತಗೊಳಿಸುವಂತೆ ಉಪಾಧ್ಯಕ್ಷರಿಗೆ ಶಿಫಾರಸು ಮಾಡುವ ನಿಲುವಳಿಯನ್ನು ಸಂಸತ್ತಿನ ಕೆಳಮನೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ ಮಂಗಳವಾರ ಅಂಗೀಕರಿಸಿದೆ. ಬುಧವಾರ ಕೆಳಮನೆಯಲ್ಲಿ ವಾಗ್ದಂಡನೆ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

ಅಮೆರಿಕದ ಸಂವಿಧಾನದಲ್ಲಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಸಂಸತ್ತಿನ ಕೋರಿಕೆಯ ಮೇಲೆ 25ನೇ ವಿಧಿ ಜಾರಿಗೊಳಿಸಿ ತಾವೇ ಅಧಿಕಾರ ವಹಿಸಿಕೊಳ್ಳುವ ಅಧಿಕಾರ ಉಪಾಧ್ಯಕ್ಷರಿಗಿದೆ. ಜ.6ರಂದು ಸಂಸತ್ತಿನಲ್ಲಿ ಟ್ರಂಪ್‌ ಅವರು ಹಿಂದೆಂದೂ ಕೇಳರಿಯದ ದಾಂಧಲೆಗೆ ಕಾರಣವಾದ ನಂತರ ಅವರನ್ನು ಪದಚ್ಯುತಗೊಳಿಸುವಂತೆ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರಿಗೆ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಕೋರಿದ್ದರು. ಆದರೆ, ರಿಪಬ್ಲಿಕನ್‌ ಪಕ್ಷದವರಾದ ಉಪಾಧ್ಯಕ್ಷ ಪೆನ್ಸ್‌ ಅದಕ್ಕೆ ನಿರಾಕರಿಸಿದ್ದರು. ಈಗ ಕೆಳಮನೆಯಲ್ಲಿ ನಿಲುವಳಿ ಮಂಡಿಸಿ, ಅದನ್ನು 223:205 ಮತಗಳಿಂದ ಅಂಗೀಕರಿಸಿ ಸಂವಿಧಾನದ 25ನೇ ವಿಧಿ ಜಾರಿಗೆ ಉಪಾಧ್ಯಕ್ಷರಿಗೆ ಮತ್ತೊಮ್ಮೆ ಶಿಫಾರಸು ಮಾಡಲಾಗಿದೆ.

ಇಂದು ವಾಗ್ದಂಡನೆ ಮಸೂದೆ ಮಂಡನೆ:

ಈ ನಿಲುವಳಿಯನ್ನು ಉಪಾಧ್ಯಕ್ಷರು ಒಪ್ಪಿಕೊಳ್ಳದಿದ್ದರೆ ಕೆಳಮನೆಯಲ್ಲಿ ಅಧ್ಯಕ್ಷರ ವಾಗ್ದಂಡನೆಗೆ ‘ಆರ್ಟಿಕಲ್‌ ಆಫ್‌ ಇಂಪೀಚ್‌ಮೆಂಟ್‌’ ಮಂಡಿಸಲು ಸಾಧ್ಯವಿದೆ. ಅದನ್ನು ಬುಧವಾರ ಮಂಡಿಸುವ ಸಾಧ್ಯತೆಯಿದ್ದು, ಅದು ಅಂಗೀಕಾರವಾದರೆ ಟ್ರಂಪ್‌ ವಾಗ್ದಂಡನೆಗೆ ಗುರಿಯಾಗುತ್ತಾರೆ. ನಂತರ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲೂ ಮಸೂದೆ ಅಂಗೀಕಾರವಾದರೆ ಟ್ರಂಪ್‌ ಅಧಿಕಾರ ಕಳೆದುಕೊಳ್ಳುತ್ತಾರೆ. ಆದರೆ ಸೆನೆಟ್‌ನಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷಕ್ಕೇ ಬಹುಮತವಿರುವುದರಿಂದ ಅಲ್ಲಿ ಮೂರನೇ ಎರಡರ ಬಹುಮತದಿಂದ ಟ್ರಂಪ್‌ ವಿರುದ್ಧ ವಾಗ್ದಂಡನೆ ಮಸೂದೆ ಪಾಸಾಗುವುದು ಅನುಮಾನವಿದೆ.

2ನೇ ಬಾರಿ ವಾಗ್ದಂಡನೆ

ಈ ಹಿಂದೆ 2018ರಲ್ಲಿ ಜೋ ಬೈಡನ್‌ ವಿರುದ್ಧ ಉಕ್ರೇನ್‌ನಲ್ಲಿ ಮಾನಹಾನಿಕರ ಆಂದೋಲನ ನಡೆಸುವಂತೆ ಒತ್ತಡ ಹೇರಿದ್ದಕ್ಕಾಗಿ ಟ್ರಂಪ್‌ ವಿರುದ್ಧ ಕೆಳಮನೆಯಲ್ಲಿ ವಾಗ್ದಂಡನೆ ಮಸೂದೆ ಅಂಗೀಕರಿಸಲಾಗಿತ್ತು. ಆದರೆ ಅದು ಸೆನೆಟ್‌ನಲ್ಲಿ ಅಂಗೀಕಾರವಾಗಿರಲಿಲ್ಲ.

ಹಿಂದೆಂದೂ ಕೇಳರಿಯದ ರೀತಿಯಲ್ಲಿ ಅಮೆರಿಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಕಷ್ಟಕ್ಕೆ ಸಿಲುಕಿದೆ. ವಾಗ್ದಂಡನೆ ಪ್ರಯತ್ನಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಅಮೆರಿಕಕ್ಕೆ ಅಪಾಯಕಾರಿ.

- ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ