ವಾಷಿಂಗ್ಟನ್‌(ಏ.16): ಕೊರೋನಾ ಸೋಂಕಿನ ವಿಷಯದಲ್ಲಿ ‘ವಿಶ್ವ ಆರೋಗ್ಯ ಸಂಸ್ಥೆ’ ಚೀನಾ ಪರವಾಗಿ ನಿಂತಿದೆ ಎಂದು ದೂಷಿಸುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಅಮೆರಿಕದ ವಾರ್ಷಿಕ 3800 ಕೋಟಿ ರು. (50 ಶತಕೋಟಿ ಡಾಲರ್‌) ನೆರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಕೊರೋನಾ ನಿಗ್ರಹಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೋರಾಡುತ್ತಿರುವ ಡಬ್ಲ್ಯುಎಚ್‌ಒ ವಿರುದ್ಧ ಅಮೆರಿಕ ಕೈಗೊಂಡಿರುವ ಈ ಪ್ರತಿಕಾರದ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಕೊರೋನಾ ಮರಣ ಮೃದಂಗ ಭವಿಷ್ಯ ನುಡಿದಿದ್ದ ನೊಬೆಲ್ ಪುರಸ್ಕೃತನಿಂದ ಮತ್ತೊಂದು ಪ್ರಿಡಿಕ್ಷನ್!

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಡಬ್ಲ್ಯುಎಚ್‌ಒದ ಅತಿದೊಡ್ಡ ದೇಣಿಗೆದಾರರಲ್ಲಿ ಒಬ್ಬನಾದ ಅಮೆರಿಕ ತಾನು ನೀಡುವ ಹಣಕ್ಕೆ ಹೊಣೆಗಾರಿಕೆ ಕೇಳುವ ಎಲ್ಲಾ ಅಧಿಕಾರ ಹೊಂದಿದೆ. ಕೋವಿಡ್‌ ವಿಷಯದಲ್ಲಿ ತನ್ನ ಮೂಲ ಕರ್ತವ್ಯಗಳನ್ನು ನಿಭಾಯಿಸಲು ಡಬ್ಲ್ಯೂಎಚ್‌ಒ ವಿಫಲವಾಗಿದೆ. ಹಾಗಾಗಿ ಈಗಿನ ವಿಶ್ವದ ಪರಿಸ್ಥಿತಿಗೆ ಅದೇ ನೇರ ಹೊಣೆ. ಕೊರೋನಾ ತೀವ್ರಗೊಂಡ ಹೊರತಾಗಿಯೂ ಚೀನಾದಿಂದ ಇತರೆ ದೇಶಗಳಿಗೆ ಪ್ರಯಾಣ ನಿರ್ಬಂಧಿಸುವ ವಿಷಯವನ್ನು ವಿರೋಧಿಸುವ ಮೂಲಕ ಡಬ್ಲ್ಯುಎಚ್‌ಒ ಅತ್ಯಂತ ಅಪಾಯಕಾರಿ ನಿರ್ಧಾರ ಕೈಗೊಂಡಿತು. ಹೀಗಾಗಿ ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಅತೀ ಕೆಟ್ಟದಾಗಿ ನಿಭಾಯಿಸಿದ್ದರಿಂದ, ಡಬ್ಲ್ಯೂಎಚ್‌ಒಗೆ ನೀಡಲಾಗುತ್ತಿದ್ದ ಹಣ ಕಾಸಿನ ನೆರವನ್ನು ಸ್ಥಗಿತಗೊಳಿಸಲು ಆಡಳಿತಕ್ಕೆ ನಾನು ನಿರ್ದೇಶಿಸುತ್ತಿದ್ದೇನೆ. ಜೊತೆಗೆ ಈ ವಿಷಯದಲ್ಲಿ ಡಬ್ಲ್ಯುಎಚ್‌ಒ ವಹಿಸಿದ ಪಾತ್ರದ ಬಗ್ಗೆಯೂ ನಾವು ಪರಿಶೀಲನೆ ನಡೆಸಲಿದ್ದೇವೆ’ ಎಂದು ಘೋಷಿಸಿದರು.

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಕೊರೋನಾ ಹುಟ್ಟಿದ್ದೇ ಚೀನಾದಲ್ಲಿ. ಚೀನಾ ಆರಂಭದಿಂದಲೂ ಸೋಂಕಿನ ವಿಷಯದಲ್ಲಿ ಜಗತ್ತನ್ನು ಕತ್ತಲಲ್ಲಿ ಇಟ್ಟಿತ್ತು ಎಂದು ಆರಂಭದಿಂದಲೂ ಟ್ರಂಪ್‌ ಆರೋಪಿಸುತ್ತಲೇ ಬಂದಿದ್ದರು. ಜೊತೆಗೆ ಕೊರೋನಾವನ್ನು ಚೀನಾ ವೈರಸ್‌ ಎಂದೇ ಕರೆಯುತ್ತಿದ್ದರು. ಜೊತೆಗೆ ಈ ವಿಷಯದಲ್ಲಿ ಚೀನಾ ವಿರುದ್ಧ ಯಾವುದೇ ಕ್ರಮಕ್ಕೆ ಡಬ್ಲ್ಯುಎಚ್‌ಒ ಮುಂದಾಗುತ್ತಿಲ್ಲ ಎಂದು ಕಿಡಿಕಾರುತ್ತಲೇ ಇದ್ದರು.