ಜಿ7 ಶೃಂಗದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು 'ಕಟ್ಟುಕತೆ' ಎಂದು ತಳ್ಳಿಹಾಕಿದ ಮೆಲೋನಿ, ಇಟಲಿ ಯಾರನ್ನೂ ಬೇಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ವಾಷಿಂಗ್ಟನ್‌/ರೋಮ್‌ (ಜೂ.20): ‘ಜಿ7 ಶೃಂಗದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನನ್ನೊಂದಿಗೆ ಫೋಟೊ ಬೇಕೆಂದು ಬೇಡಿಕೊಂಡಳು. ಮನಸ್ಸಿಲ್ಲದಿದ್ದರೂ ಹೋಗಲಿ ಅಯ್ಯೋಪಾಪ ಎಂದು ತೆಗೆಸಿಕೊಂಡೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಮೆಲೋನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಟ್ರಂಪ್‌ ಹೇಳಿಕೆ ಸಂಪೂರ್ಣವಾಗಿ ಕಟ್ಟುಕತೆ. ನಾನು ಮತ್ತು ಇಟಲಿ ಎಂದಿಗೂ ಯಾರನ್ನೂ ಬೇಡಿಕೊಳ್ಳುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಟಲಿ ಮಾಧ್ಯಮವೊಂದಕ್ಕೆ ದೂರವಾಣಿ ಸಂದರ್ಶನ ನೀಡಿದ ಟ್ರಂಪ್, ‘ನಾನು ಮೆಲೋನಿ ಜೊತೆ ಮಾತನಾಡಿದಾಗ ಆಕೆಗೆ ಬಹುಶಃ ಸಂತೋಷವಾಗಿರಬಹುದು. ನಾನು ಆಕೆಯ ಜೊತೆ ಮಾತನಾಡಬೇಕಿರಲಿಲ್ಲ. ತನ್ನ ಜೊತೆ ಒಂದು ಫೋಟೋ ಬೇಕೆಂದು ಬೇಡಿಕೊಂಡಳು. ನನ್ನ ಜೊತೆ ಫೋಟೋಗಾಗಿ ಆಕೆಗೆ ತುಂಬಾ ಆಸೆಯಿತ್ತು. ನನಗೆ ಆಕೆಯ ಬಗ್ಗೆ ಅಯ್ಯೋಪಾಪ ಎನ್ನಿಸಿತು’ ಎಂದಿದ್ದಾರೆ.

ಈ ಬೆನ್ನಲ್ಲೇ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮೆಲೋನಿ, ‘ಟ್ರಂಪ್ ಹೇಳಿಕೆ ಸಂಪೂರ್ಣವಾಗಿ ಕಟ್ಟುಕತೆ. ಇದು ನನಗೆ ದಿಗಿಲು ಹುಟ್ಟಿಸಿದೆ. ಅಮೆರಿಕದ ಅಧ್ಯಕ್ಷರು ತಮ್ಮದೇ ಆದ ಮಿತ್ರರಾಷ್ಟ್ರಗಳೊಂದಿಗೆ ಏಕೆ ಈ ರೀತಿ ವರ್ತಿಸುತ್ತಾರೆಂದು ನನಗೆ ತಿಳಿದಿಲ್ಲ. ಇದು ಮೊದಲ ಬಾರಿಯೇನೂ ಸಂಭವಿಸಿಲ್ಲ. ಅವರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಮತ್ತು ಇಟಲಿ ಎಂದಿಗೂ ಬೇಡಿಕೊಳ್ಳುವುದಿಲ್ಲ’ ಎಂದು ಖಡಕ್‌ ಸಂದೇಶ ರವಾನಿಸಿದ್ದಾರೆ.

ಇಟಲಿ ಉಪಪ್ರಧಾನಿ ಅಮೆರಿಕ ಪ್ರವಾಸ ರದ್ದು

ಟ್ರಂಪ್ ಹೇಳಿಕೆಗೆ ಇಟಲಿಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಉಪಪ್ರಧಾನಿ ಆಂಟೋನಿಯೊ ತಜಾನಿ ಅಮೆರಿಕ ಭೇಟಿಯನ್ನು ದಿಢೀರ್‌ ರದ್ದುಗೊಳಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಪ್ರಧಾನಿ ಮೆಲೋನಿ ಬಗ್ಗೆ ಟ್ರಂಪ್ ಅವರ ಗಂಭೀರ ಮತ್ತು ಆಕ್ಷೇಪಾರ್ಹ ಹೇಳಿಕೆಗಳು ಇಡೀ ಇಟಲಿಯನ್ನು ಕೆರಳಿಸಿವೆ. ಈ ಕಾರಣಕ್ಕಾಗಿ, ಜೂ.21 ಮತ್ತು 22ರಂದು ನಿಗದಿಯಾಗಿದ್ದ ನನ್ನ ಅಮೆರಿಕ ಭೇಟಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.