ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಸ್ವಾಧೀನ ಯೋಜನೆಯನ್ನು ಸಮರ್ಥಿಸಿಕೊಂಡರು. ಗ್ರೀನ್‌ಲ್ಯಾಂಡ್‌ನ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದ್ದಾರೆ.

ದಾವೋಸ್‌, ಸ್ವಿಜರ್ಲೆಂಡ್‌ (ಜ.21): ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಬುಧವಾರಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶವು ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತವಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಈ ಆರ್ಕ್ಟಿಕ್ ಪ್ರದೇಶ ಕಾರ್ಯತಂತ್ರದ ಕಾರಣಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ದೇಶದ ಭದ್ರತೆಗೆ ಇದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಗ್ರೀನ್‌ಲ್ಯಾಂಡ್ ಅನ್ನು ಸೇರಿಸಿಕೊಳ್ಳುವ ತಮ್ಮ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಭಾಷಣದಲ್ಲಿ ಟ್ರಂಪ್, ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಅಮೆರಿಕ ಬಲಪ್ರಯೋಗ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸಂಜೆಯ ಅತಿದೊಡ್ಡ ಘೋಷಣೆ ಎನಿಸಿಕೊಂಡಿದೆ. ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿದ್ದಕ್ಕಾಗಿ ಡೆನ್ಮಾರ್ಕ್ ಕೃತಜ್ಞತೆಯಿಲ್ಲ ಎಂದು ಅವರು ಟೀಕಿಸಿದರು.

WEF ನಲ್ಲಿ ತಮ್ಮ ಭಾಷಣದ ಆರಂಭದಲ್ಲಿ ಟ್ರಂಪ್, "ಸುಂದರವಾದ ದಾವೋಸ್‌ಗೆ ಹಿಂತಿರುಗಿರುವುದು ಸಂತೋಷ ತಂದಿದೆ. ಇಲ್ಲಿ ಅನೇಕ ವ್ಯಾಪಾರ ಮುಖಂಡರು, ಅನೇಕ ಸ್ನೇಹಿತರು, ಕೆಲವು ಶತ್ರುಗಳು ಮತ್ತು ವಿಶೇಷ ಅತಿಥಿಗಳು ಇದ್ದಾರೆ" ಎಂದು ಹೇಳಿದರು. ಯುರೋಪ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದೂ ಅವರು ಹೇಳಿದರು.

ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಹಿಂದೆ ಗ್ರೀನ್‌ಲ್ಯಾಂಡ್ ಅನ್ನು ಬಿಟ್ಟುಕೊಟ್ಟಿದ್ದೇ ಅತಿದೊಡ್ಡ "ಮೂರ್ಖತನ" ಎಂದಿದ್ದಲ್ಲದೆ, ಡೆನ್ಮಾರ್ಕ್ ತನ್ನದೇ ಆದ ದ್ವೀಪವನ್ನು ರಕ್ಷಿಸಲು ಅಸಮರ್ಥವಾಗಿದೆ ಎಂದು ಹೇಳಿಕೊಂಡರು. ಗುತ್ತಿಗೆ ಆಧಾರದ ಮೇಲೆ ಗ್ರೀನ್‌ಲ್ಯಾಂಡ್ ಅನ್ನು ರಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಗ್ರೀನ್‌ಲ್ಯಾಂಡ್‌ ಒಂದು ಮಂಜುಗಡ್ಡೆಯ ತುಂಡು

ಗ್ರೀನ್‌ಲ್ಯಾಂಡ್ ಅನ್ನು "ಒಂದು ಮಂಜುಗಡ್ಡೆಯ ತುಂಡು" ಎಂದು ಕರೆದ ಟ್ರಂಪ್, ಅದರ ಕಾರ್ಯತಂತ್ರದ ಪ್ರಾಮುಖ್ಯತೆಗೆ ಹೋಲಿಸಿದರೆ ಪ್ರದೇಶದ ಮೇಲೆ ನಿಯಂತ್ರಣದ ಬೇಡಿಕೆ ಕಡಿಮೆ ಎಂದು ವಾದಿಸಿದರು. "ಆದರೆ ಈಗ ನಾನು ಕೇಳುತ್ತಿರುವುದು ವಿಶ್ವ ಶಾಂತಿ ಮತ್ತು ವಿಶ್ವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಶೀತಲವಾಗಿರುವ ಮತ್ತು ಕಳಪೆಯಾಗಿ ನೆಲೆಗೊಂಡಿರುವ ಒಂದು ಸಣ್ಣ ಭಾಗವನ್ನು. ನಾವು ಹಲವು ದಶಕಗಳಿಂದ ಅವರಿಗೆ ನೀಡುತ್ತಿರುವುದಕ್ಕೆ ಹೋಲಿಸಿದರೆ ಇದು ತುಂಬಾ ಚಿಕ್ಕದಾಗಿದೆ" ಎಂದು ಅವರು ಹೇಳಿದರು.

ಗ್ರೀನ್‌ಲ್ಯಾಂಡ್‌ ಭದ್ರತೆಯನ್ನು ಅಮೆರಿಕ ಮಾತ್ರ ಮಾಡಲು ಸಾಧ್ಯ

ಗ್ರೀನ್‌ಲ್ಯಾಂಡ್‌ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಮಿಲಿಟರಿ ಮತ್ತು ಲಾಜಿಸ್ಟಿಕ್ ಸಾಮರ್ಥ್ಯವನ್ನು ಯುನೈಟೆಡ್ ಸ್ಟೇಟ್ಸ್ ಮಾತ್ರ ಹೊಂದಿದೆ ಎಂದರು. ಗ್ರೀನ್‌ಲ್ಯಾಂಡ್ ಅನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಬಲಪ್ರಯೋಗ ಮಾಡೋದಿಲ್ಲ ಎಂದ ಟ್ರಂಪ್‌, ಆದರೆ ದಾವೋಸ್‌ನಲ್ಲಿ ಮಾಡಿದ ಭಾಷಣದಲ್ಲಿ ಬೇರೆ ಯಾವುದೇ ದೇಶವು ಡ್ಯಾನಿಶ್ ಪ್ರದೇಶವನ್ನು ಸುರಕ್ಷಿತವಾಗಿರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

"ನಾನು ಬಲಪ್ರಯೋಗ ಮಾಡುತ್ತೇನೆ ಎಂದು ಜನರು ಭಾವಿಸಿದ್ದರು, ಆದರೆ ನಾನು ಬಲಪ್ರಯೋಗ ಮಾಡಬೇಕಾಗಿಲ್ಲ" ಎಂದು ಟ್ರಂಪ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಹೇಳಿದರು. "ನಾನು ಬಲಪ್ರಯೋಗ ಮಾಡಲು ಬಯಸುವುದಿಲ್ಲ. ನಾನು ಬಲಪ್ರಯೋಗ ಮಾಡುವುದಿಲ್ಲ' ಎಂದು ಹೇಳಿದರು.

ಗ್ರೀನ್‌ಲ್ಯಾಂಡ್‌ ವಶಕ್ಕೆ 'ಇಲ್ಲ' ಎಂದು ಹೇಳಿದವರನ್ನು ತಾವು ಎಂದಿಗೂ ಮರೆಯುವುದಿಲ್ಲ ಎಂದು ಟ್ರಂಪ್ ಹೇಳಿದರು. 'ನೀವು ಹೌದು ಎಂದು ಹೇಳಬಹುದು, ಅಥವಾ ನೀವು ಇಲ್ಲ ಎಂದು ಹೇಳಬಹುದು. ನಾನು ಅದನ್ನು ನೆನಪಿಟ್ಟುಕೊಳ್ಳುತ್ತೇನೆ' ಎಂದು ಅವರು ಹೇಳಿದರು. ಟ್ರಂಪ್‌ರ ಹೇಳಿಕೆಗಳು ಮತ್ತೊಮ್ಮೆ ಗ್ರೀನ್‌ಲ್ಯಾಂಡ್‌ನ ಭೌಗೋಳಿಕ ರಾಜಕೀಯ ಮಹತ್ವದ ಬಗ್ಗೆ ಅಂತರರಾಷ್ಟ್ರೀಯ ಗಮನ ಸೆಳೆದವು, ವಿಶೇಷವಾಗಿ ಆರ್ಕ್ಟಿಕ್ ಭದ್ರತೆ ಮತ್ತು ಜಾಗತಿಕ ಶಕ್ತಿ ಸ್ಪರ್ಧೆಯ ಸಂದರ್ಭದಲ್ಲಿ ಇದು ಪ್ರಮುಖವಾಗಿದೆ.

ಟ್ರಂಪ್‌ರ ಗ್ರೀನ್‌ಲ್ಯಾಂಡ್ ಕಾರ್ಯತಂತ್ರವು ಮೈತ್ರಿಕೂಟವನ್ನು ಶಾಶ್ವತವಾಗಿ ನಿರ್ನಾಮ ಮಾಡಬಹುದು ಎಂದು NATO ನಾಯಕರು ಎಚ್ಚರಿಸಿದ್ದರು. ಆದರೆ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ನಾಯಕರು 57,000 ಜನರ ಆಯಕಟ್ಟಿನ ದ್ವೀಪ ಪ್ರದೇಶದಲ್ಲಿ ಹೆಚ್ಚಿನ ಯುಎಸ್ ಉಪಸ್ಥಿತಿಗಾಗಿ ವ್ಯಾಪಕವಾದ ಮಾರ್ಗಗಳನ್ನು ನೀಡಿದ್ದಾರೆ.