ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದ ಹಂತಕ; ಪ್ರತ್ಯಕ್ಷದರ್ಶಿಗಳಿಂದ ಸ್ಫೋಟಕ ಮಾಹಿತಿ
ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದನು. ಅಷ್ಟು ಮಾತ್ರವಲ್ಲದೇ ದಾಳಿಕೋರ ಭದ್ರತಾ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ್ದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಪ್ರಚಾರದ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ ಗನ್ ಹಿಡಿದ ಯುವಕ ಥಾಮಸ್ ಮ್ಯಾಥ್ಯೂ ಕ್ರುಕ್ಸ್ ಆ ಸ್ಥಳಕ್ಕೆ ಹೇಗೆ ಬಂದ ಎಂಬುದೇ ತಿಳಿಯುತ್ತಿಲ್ಲ ಎಂದು ಭದ್ರತಾ ಪಡೆಗಳು ಹೇಳಿವೆ. ಆದರೆ, ಇಬ್ಬರು ಪ್ರತ್ಯಕ್ಷದರ್ಶಿಗಳು ತಾವು ಹಂತಕನನ್ನು ನೋಡಿದ್ದಾಗಿ ಹೇಳಿದ್ದು, ಅವರಲ್ಲಿ ಒಬ್ಬರು, ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಯುವಕ ಬಂದಿದ್ದನ್ನು ನೋಡಿದೆ ಎಂದಿದ್ದಾರೆ.
ಟೆರೇಸ್ ಮೇಲೆ ಜಿಗಿಯುತ್ತಾ ಬಂದ ಯುವಕ, ಟ್ರಂಪ್ ಭಾಷಣ ಮಾಡುತ್ತಿದ್ದ ಸ್ಥಳದಿಂದ 200ರಿಂದ 250 ಅಡಿ ದೂರದಲ್ಲಿರುವ ಉತ್ಪಾದನಾ ಘಟಕದ ಟೆರೇಸ್ ಮೇಲೆ ಮಲಗಿಕೊಂಡು ಶೂಟ್ ಮಾಡಿದ್ದಾನೆ. ಆತ ಟೆರೇಸ್ ಮೇಲೆ ಬೂದು ಬಣ್ಣದ ಜಾಕೆಟ್ ಧರಿಸಿ ಗನ್ ಹಿಡಿದು ಮಲಗಿರುವುದು ಸೋಷಿಯಲ್ ಮೀಡಿಯಾದಲ್ಲಿರುವ ವಿಡಿಯೋ ಒಂದರಲ್ಲಿ ಕಾಣಿಸುತ್ತದೆ.
ಟ್ರಂಪ್ ಯೋಗಕ್ಷೇಮ ವಿಚಾರಿಸಿದ ಬೈಡನ್
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ತಮ್ಮ ಎದುರಾಳಿ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಟ್ರಂಪ್ ಜತೆ ಖುದ್ದು ಫೋನ್‌ನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಟ್ರಂಪ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬೈಡೆನ್, ‘ಇಂಥ ಹಿಂಸೆಗೆ ಅಮೆರಿಕದಲ್ಲಿ ಅಸ್ಪದವಿಲ್ಲ. ಇದೊಂದು ರೋಗಪೀಡಿತ ಮನಸ್ಥಿತಿ ಮತ್ತು ಈ ಕಾರಣಕ್ಕಾಗಿಯೇ ನಾವು ಈ ದೇಶವನ್ನು ಒಗ್ಗೂಡಿಸಬೇಕಿದೆ. ಇಂಥದ್ದಕ್ಕೆ ದೇಶದಲ್ಲಿ ನಾವು ಅವಕಾಶ ನೀಡಲಾಗದು. ನಾವು ಈ ರೀತಿ ಇರಲು ಸಾಧ್ಯವಿಲ್ಲ, ಇಂಥದ್ದನ್ನೆಲ್ಲಾ ನಾವು ಅನುಮೋದಿಸುವುದಿಲ್ಲ’ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ..! ಅಮೆರಿಕವನ್ನೇ ನಡುಗಿಸಿದ್ದವು ಆ 5 ಹತ್ಯೆಗಳು..
ಟ್ರಂಪ್ ಸುರಕ್ಷಿತ
ಜೊತೆಗೆ, ‘ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಸಮಾಧಾನ ತಂದಿದೆ. ಟ್ರಂಪ್, ಅವರ ಕುಟುಂಬ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರ ಸುರಕ್ಷತೆಗೆ ನಾನು ಪ್ರಾರ್ಥಿಸುತ್ತೇನೆ. ಟ್ರಂಪ್‌ರನ್ನು ರಕ್ಷಿಸಿದ್ದಕ್ಕಾಗಿ ಸೀಕ್ರೆಟ್ ಸರ್ವೀಸ್‌ಗೆ ನಾನು ಮತ್ತು ಜಿಲ್ ಕೃತಜ್ಞರಾಗಿದ್ದೇವೆ’ ಎಂದು ಬೈಡೆನ್ ಪ್ರತಿಕ್ರಿಯಿಸಿದ್ದಾರೆ. ಇದಾದ ಬಳಿಕ ಬೈಡೆನ್, ಟ್ರಂಪ್ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ ಕ್ಷೇಮ ವಿಚಾರಿಸಿದರು.
ರಾಜಕೀಯ ನಾಯಕರಿಂದ ಖಂಡನೆ
ಡೋನಾಲ್ಡ್ ಟ್ರಂಪ್ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನ ಪ್ರಧಾನಿ ಮೋದಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ನಾಯಕರು ಘಟನೆಯನ್ನು ಖಂಡಿಸಿದ್ದಾರೆ.
ಟ್ರಂಪ್ ಹತ್ಯೆಗೆ ಯತ್ನಿಸಿದ್ಯಾಕೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಥಾಮಸ್? ಯಾರು ಈ ಶೂಟರ್?
ಟ್ರಂಪ್ ಹತ್ಯೆ ಯತ್ನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತ ಪಡಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ‘ನನ್ನ ಸ್ನೇಹಿತ, ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಹಿಂಸೆಗೆ ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಅವರು ಶೀಘ್ರ ಚೇತರಿಕೆಗೆ ಆಶಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಈ ಘಟನೆಗೆ ಖಂಡಿಸಿ, ‘ಟ್ರಂಪ್ ಮೇಲೆ ನಡೆದಿರುವ ಹಲ್ಲೆಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇಂತಹ ಕೃತ್ಯಗಳನ್ನು ಸಾಧ್ಯವಾದಷ್ಟು ಪ್ರಬಲವಾಗಿ ಖಂಡಿಸಬೇಕು’ ಎಂದಿದ್ದಾರೆ.