Nuclear Football: ಅಮೆರಿಕಾ ಅಧ್ಯಕ್ಷರ ಬಳಿ ಯಾವಾಗಲೂ ಇರುತ್ತದೆ ಪ್ರಪಂಚದ ಅತ್ಯಂತ ಶಕ್ತಿಶಾಲಿ ಫುಟ್‌ಬಾಲ್‌. ಇದರಿಂದ ಇಡೀ ಜಗತ್ತನ್ನೇ ಧ್ವಂಸ ಮಾಡಬಹುದು. ಫುಟ್‌ಬಾಲ್‌ನಿಂದ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಈ ಸ್ಟೋರಿ ಓದಿ. 

ನ್ಯೂಯಾರ್ಕ್‌: "ಫುಟ್‌ಬಾಲ್‌" ಅಮೆರಿಕಾ ಅಧ್ಯಕ್ಷರ ಜೊತೆಯೇ ಇರುತ್ತದೆ. ಇದು ಸಾಮಾನ್ಯ ಫುಟ್‌ಬಾಲ್‌ ಅಲ್ಲ, ಇಡೀ ಜಗತ್ತನ್ನೇ ನಾಶಮಾಡಬಲ್ಲ ವಿಧ್ವಂಸಕ ಫುಟ್‌ಬಾಲ್‌. ಏನಿದು, ಜಗತ್ತನ್ನೇ ಧ್ವಂಸ ಮಾಡಬಲ್ಲ ಫುಟ್‌ಬಾಲ್‌. ತಮಾಷೆ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ಫುಟ್‌ಬಾಲ್‌ ಎಂದರೆ ಅದು ನ್ಯೂಕ್ಲಿಯಾರ್‌ ನ್ಯೂಕ್‌ಗೆ (Nuclear Nuke) ಇರುವ ಕೋಡ್‌ ನೇಮ್‌. ಅಮೆರಿಕಾ ಅಧ್ಯಕ್ಷರು ಯಾವುದಾದೂ ದೇಶ ಅಥವಾ ದೇಶಗಳ ಮೇಲೆ ಅಣ್ವಸ್ತ್ರ ದಾಳಿಗೆ ನಿರ್ಧಾರ ಮಾಡಿದರೆ ಅವರು ಎಲ್ಲಿ ಕುಳಿತಿರುತ್ತಾರೋ ಅಲ್ಲಿಂದಲೇ ದಾಳಿಗೆ ಆಜ್ಞೆ ಮಾಡಬಹುದು. ಅದಕ್ಕಾಗಿಯೇಈ ಫುಟ್‌ಬಾಲ್‌ ಎಂಬ ಸ್ಯೂಟ್‌ಕೇಸನ್ನು ಅಮೆರಿಕಾ ಅಧ್ಯಕ್ಷರು ಯಾವಾಗಲೂ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಜತೆಗೆ ಅದನ್ನು ಅಧ್ಯಕ್ಷರಾದವರು ಜೊತೆಗೇ ಇಟ್ಟುಕೊಂಡಿರಬೇಕು ಎಂಬುದು ಕಡ್ಡಾಯ ನಿಯಮ. ಅಧ್ಯಕ್ಷರ ಜೊತೆ ಯಾವಾಗಲೂ ಸೇನೆಯ ಸಿಬ್ಬಂದಿಯೊಬ್ಬರು ಇದನ್ನು ಹಿಡಿದು ನಡೆಯುತ್ತಾರೆ. 

ಅಧ್ಯಕ್ಷರ ಬಳಿ ನ್ಯೂಕ್ಲಿಯಾರ್‌ ನ್ಯೂಕ್‌ ಅಥವಾ ಫುಟ್‌ಬಾಲ್‌ ಆಕ್ಟಿವೇಟ್‌ ಮಾಡಲು ಪ್ರತ್ಯೇಕ ಕೋಡ್‌ ಇರುತ್ತದೆ. ಅದಕ್ಕೆ ಬಿಸ್ಕೆಟ್‌ ಎನ್ನುತ್ತಾರೆ. ಗೋಲ್ಡನ್‌ ಬಿಸ್ಕೆಟ್‌ನ ಕೋಡ್‌ ಕೇವಲ ಅಧ್ಯಕ್ಷರಿಗೆ ಮಾತ್ರ ತಿಳಿದಿರುತ್ತದೆ. ಅವರು ಇದನ್ನು ಸದಾ ನೆನಪಿಟ್ಟುಕೊಳ್ಳಬೇಕು. ಸೈನ್ಯಕ್ಕೆ ಅಣ್ವಸ್ತ್ರ ಪ್ರಯೋಗಕ್ಕೆ ಅಧ್ಯಕ್ಷರು ಆದೇಶ ನೀಡಬೇಕೆಂದರೆ ಮೊದಲು ಕೋಡ್‌ ನೀಡಿ ಫುಟ್‌ಬಾಲ್‌ ಆಕ್ಟಿವೇಟ್‌ ಮಾಡಬೇಕು. ಫುಟ್‌ಬಾಲ್‌ ಆಕ್ಟಿವೇಟ್‌ ಆದರೆ, ಅದು ಅಧ್ಯಕ್ಷರೇ ಮಾಡಿರುವ ಆದೇಶ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಾರೆ. ಅದಾದ ನಂತರ ಕೆಲ ನಿಯಮಾವಳಿಗಳನ್ನು ಪಾಲಿಸಿ, ಅಧ್ಯಕ್ಷರು ನೀಡಿದ ಆದೇಶ ನ್ಯಾಯಸಮ್ಮತವಾಗಿದ್ದರೆ ಅಣ್ವಸ್ತ್ರ ಪ್ರಯೋಗ ಮಾಡುತ್ತಾರೆ. 

ಇದನ್ನೂ ಓದಿ: Vladimir Putin ಬೆದರಿಕೆ ಬಳಿಕ ರಷ್ಯಾದಿಂದ ಜಾಗ ಖಾಲಿಮಾಡುತ್ತಿರುವ ಜನತೆ: Flight ಟಿಕೆಟ್‌ ಬೆಲೆ ಗಗನಕ್ಕೆ

ಒಂದು ವೇಳೆ ಅಧ್ಯಕ್ಷರು ಮಾಡಿದ ಆದೇಶ ಕಾನೂನಿಗೆ ಮತ್ತು ಅಣ್ವಸ್ತ್ರ ನೀತಿಗೆ ವಿರುದ್ಧವಾಗಿದ್ದರೆ, ಸೇನಾ ಮುಖ್ಯಸ್ಥರು ಆದೇಶವನ್ನು ಧಿಕ್ಕರಿಸಬಹುದು. ಅಧ್ಯಕ್ಷರೇ ನಿಮ್ಮ ಆದೇಶ ನಮ್ಮ ನೀತಿಗೆ ವಿರುದ್ಧವಾಗಿದೆ ಎಂದು ನೇರವಾಗಿ ಆದೇಶವನ್ನು ತಿರಸ್ಕರಿಸಬಹುದು. ಆಗ ಅಧ್ಯಕ್ಷರು ಹಾಗಾದರೆ ಯಾವುದು ನ್ಯಾಯ ಸಮ್ಮತ ಎಂದು ಸೇನಾ ಮುಖ್ಯಸ್ಥರಿಗೆ ಕೇಳಬೇಕು. ಆಗ ಸೇನೆಯ ಹಿರಿಯ ಅಧಿಕಾರಿಗಳು ಒಂದಿಷ್ಟು ಚರ್ಚೆ ನಡೆಸುತ್ತಾರೆ. ನಂತರ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಸಲಹೆ ನೀಡುತ್ತಾರೆ. ಅದರಂತೆ ಅಧ್ಯಕ್ಷರು ಅದನ್ನು ಒಪ್ಪಿದರೆ ಕಾರ್ಯ ರೂಪಕ್ಕೆ ತರಲಾಗುತ್ತದೆ. 

ಇತ್ತೀಚೆಗೆ ವ್ಲಾಡಿಮಿರ್‌ ಪುಟಿನ್‌ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ನಂತರ ಈ ಫುಟ್‌ಬಾಲ್‌ನ ಪ್ರಾಮುಖ್ಯತೆ ಹೆಚ್ಚಾಗಿದೆ. ಒಂದು ವೇಳೆ ರಷ್ಯಾ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾದರೆ, ಅರೆ ಕ್ಷಣದಲ್ಲಿ ಅಮೆರಿಕಾ ಅದ್ಯಕ್ಷ ಜೋ ಬೈಡನ್‌ ಅಣ್ವಸ್ತ್ರ ಪ್ರಯೋಗವನ್ನು ಜಗತ್ತಿನ ಯಾವ ಮೂಲೆಯಿಂದ ಬೇಕಾದರೂ ಮಾಡಬಹುದು. ಆಕಾಶದಲ್ಲಿ ಏರ್‌ಫೋರ್ಸ್‌ ಒನ್‌ನಲ್ಲಿ ಹಾರುತ್ತಿದ್ದಾಗಲೂ ಫುಟ್‌ಬಾಲ್‌ ಬಳಸಬಹುದು. ಇದು ಅಂತಾ ಅತ್ಯಾಧುನಿಕ ಮತ್ತು ಸುಸಜ್ಜಿತ ತಂತ್ರಜ್ಞಾನ ಬಳಸಿ ಮಾಡಲಾದ ಅಸ್ತ್ರ. 

ಇದನ್ನೂ ಓದಿ: Nuclear War ಆದಲ್ಲಿ ತಲೆಗೆ ಕಂಡೀಷನರ್‌ ಹಾಕಬೇಡಿ: ವಿಚಿತ್ರ ವಾರ್ನಿಂಗ್‌ ನೀಡಿದ ಅಮೆರಿಕಾ ಸರ್ಕಾರ

ಕಮಲಾ ಹ್ಯಾರಿಸ್‌ ಬಳಿಯಿತ್ತು ಫುಟ್‌ಬಾಲ್‌:
ಅಮೆರಿಕಾ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಫುಟ್‌ಬಾಲ್‌ ಮೊದಲ ಮಹಿಳೆಯ ಕೈಸೇರಿದ್ದು ಜೋ ಬೈಡನ್‌ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ. ಜೋ ಬೈಡನ್‌ ಅನಸ್ತೇಶಿಯಾ ಪಡೆದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ವೇಳೆ 85 ನಿಮಿಷಗಳ ಕಾಲ ಕಮಲಾ ಹ್ಯಾರಿಸ್‌ ಫುಟ್‌ಬಾಲ್‌ ಹೊಂದಿದ್ದರು. ಚಿಕಿತ್ಸೆ ಮುಗಿಯುವವರೆಗೂ ಕಮಲಾ ಹ್ಯಾರಿಸ್‌ ಫುಟ್‌ಬಾಲ್‌ನ ಕಮ್ಯಾಂಡರ್‌ ಇನ್‌ ಚೀಫ್‌ ಆಗಿದ್ದರು.